Mysore
23
overcast clouds
Light
Dark

ಬಹುರೂಪಿ ನಾಟಕೋತ್ಸವಕ್ಕೆ ವರ್ಣರಂಜಿತ ತೆರೆ

ಮೈಸೂರು: ‘ಇವ ನಮ್ಮವ… ಇವ ನಮ್ಮವ…’ ಬಸವಣ್ಣನವರ ವಚನದ ಸಾಲಿನ ಆಶಯವನ್ನು ಹೊತ್ತು ಕಳೆದ ಆರು ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿಗೆ ರಂಗರಸದೌತಣವನ್ನು ಉಣ ಬಡಿಸಿದ 24ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಸೋಮವಾರ ವರ್ಣರಂಜಿತ ತೆರೆ ಬಿತ್ತು.

ಆರು ವೇದಿಕೆಗಳಲ್ಲಿ ನಿತ್ಯ ನಾನಾ ಭಾಷೆಗಳ ನಾಟಕಗಳು, ವೈವಿಧ್ಯಮಯ ಜನಪದ ಕಾರ್ಯಕ್ರಮ, ಚಲನಚಿತ್ರೋತ್ಸವ, ಕರಕುಶಲ ಹಾಗೂ ಪುಸ್ತಕ ಪ್ರದರ್ಶನ, ಬಸವಣ್ಣನವರ ವಚನದ ಛಾಯಾಚಿತ್ರಗಳ 3ಡಿ ಪ್ರದರ್ಶನ, ವಚನ ವಾಚನದ ಮೂಲಕ ಪ್ರೇಕ್ಷಕ ವರ್ಗಕ್ಕೆ ರಸದೌತಣ ಉಣಬಡಿಸಿತು.

ಪುಸ್ತಕ ಮೇಳ, ದೇಶಿ ತಿನಿಸು ಮೇಳ, ಕರಕುಶಲ ಮೇಳ ಹೀಗೆ ನಾನಾ ಕಾರ್ಯಕ್ರಮಗಳ ಮೂಲಕ ಎಲ್ಲಾ ವಯೋಮಾನದ ಮತ್ತು ವರ್ಗದ ಜನರನು ಬೆಸೆಯಿತು.

ನಾಟಕೋತ್ಸವಕ್ಕಾಗಿ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು 300ಕ್ಕೂ ಹೆಚ್ಚಿನ ಕಲಾವಿದರು ತಮ್ಮ ಕಲಾ ಪ್ರದರ್ಶಿಸಿದರು. ರಂಗಾಯಣದ ಭೂಮಿಗೀತ, ವನರಂಗ, ಕಲಾಮಂದಿರ, ಕಿರುರಂಗಮಂದಿರ ವೇದಿಕೆಗಳಲ್ಲಿ ಕನ್ನಡದ 12 ಹಾಗೂ ತುಳು ಭಾಷೆಯ ಒಂದು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕೋಲ್ಕತ್ತಾ ಮಣಿಪುರ, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳ 6 ನಾಟಕಗಳೂ ಸೇರಿದಂತೆ ಒಟ್ಟು 19 ನಾಟಕಗಳು ಮತ್ತು ಮಹಿಳಾ ಆಶಯವುಳ್ಳ ಒಂದು ಯಕ್ಷಗಾನ ಪ್ರದರ್ಶನಗೊಂಡವು.

ಜನಪದೋತ್ಸವದಲ್ಲಿ ಚಂದದ ದೃಶ್ಯಾವಳಿ

ಮೈಸೂರು: ತುಳುನಾಡಿನ ಕಂಗೀಲು ನೃತ್ಯದ ವೈಭೋಗ, ಉಡುಪಿಯ ಕರಗ ಕೋಲಾಟದ ಸೊಗಡು..! ಇದು 24ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಕೊನೆಯ ದಿನವಾದ ಸೋಮವಾರದ ಜನಪದೊತ್ಸವದಲ್ಲಿ ಕಂಡು ಬಂದ ಚಂದದ ದೃಶ್ಯಾವಳಿಗಳು.

ಕಿಂದರಿಜೋಗಿ ಆವರಣದಲ್ಲಿ ಸುಳ್ಯದ ಬಂಗ್ಲೆ ಗುಡ್ಡೆಯ ಸುಗಿಪು ಜಾನಪದ ಕಲಾ ತಂಡದ ಕಂಗೀಲು ಪಾತ್ರಧಾರಿಗಳು ತೆಂಗಿನ ತಿಲಂಗ ಧರಿಸಿ ಕುಣಿಯುತ್ತಿದ್ದ ಬಗೆ ನೋಡುಗರನ್ನು ಒಂದು ಕ್ಷಣ ಅವಕ್ಕಾಗಿಸಿತು. ಕಂಗೀಲು ಒಂದು ಜಾನಪದ ಕುಣಿತವೂ ಹೌದು, ಆಚರಣೆಯೂ ಹೌದು. ಊರಿಗೆ ಬಂದ ಮಾರಿಯನ್ನು ಓಡಿಸುವ ಆಶಯವಿರುವ ಈ ಜನಪದ ಕುಣಿತ ತುಳುನಾಡಿನ ಪ್ರಮುಖ ಪ್ರದರ್ಶಕ ಕಲೆ ಆಗಿದ್ದು, ಸಾಂಸ್ಕೃತಿಕ ನಗರಿಯ ರಂಗಾಸಕ್ತರು ಈ ಕಲೆಯ ಸವಿ ಸವಿದರು.

ಉಡುಪಿಯ ಉದ್ಯಾವರದ ಪುನೀತ್ ತಂಡದ ಕಲಾವಿದರು ನಡೆಸಿಕೊಟ್ಟ ಕರಗ ಕೋಲಾಟ ಅದ್ಭುತವಾಗಿ ಮೂಡಿಬಂತು. ತಮಟೆ ಮತ್ತು ನಾದಸ್ವರದ ನಾದಕ್ಕೆ ತಲೆ ಮೇಲೆ ಅಲಂಕೃತಗೊಂಡ ಕರಗ ಹೊತ್ತು ಕೈಯಲ್ಲಿ ಬಣ್ಣ ಬಳಿದ ಕೋಲುಗಳನ್ನು ಹಿಡಿದು ಕಲಾವಿದರು ಪ್ರದರ್ಶಿಸಿದ ನೃತ್ಯ ಬಹರೂಪಿಗೆ ಮೆರುಗು ತಂದಿತು.

ಕೊನೆಯ ದಿನ ಮೇಳೈಸಿದ ರಂಗಕಲೆ

ಮೈಸೂರು: ಕೊನೆಯ ದಿನದ ಬಹುರೂಪಿಯಲ್ಲಿ ರಂಗಾಯಣದ ಅಂಗಳದಲ್ಲಿ ರಂಗ ಕಲೆ ಮೇಳೈಸಿತು. ಮಧ್ಯಾಹ್ನದವರೆಗೂ ರಂಗಾಯಣದ ಆವರಣ ಭಣಗುಟ್ಟುತ್ತಿತ್ತು. ಸಂಜೆಯಾಗುತ್ತಲೇ ರಂಗಾಯಣದತ್ತ ಆಗಮಿಸಿದ ನೂರಾರು ಸಾರ್ವಜನಿಕರು ನಾಟಕೋತ್ಸವದ ಸಂಭ್ರಮದಲ್ಲಿ ಭಾಗಿಯಾದರು.

ಅಂತಿಮ ದಿನದಂದು ಪ್ರದರ್ಶನಗೊಂಡ ಪ್ರಶಾಂತ್ ಹಿರೇಮಠ ನಿರ್ದೆಶನದ ಕನ್ನಡ ಭಾಷೆಯ ‘ಪಾರ್ಶ್ವಸಂಗೀತ’, ಹೌದಮ್ ವಿಕ್ಟರ್‌ ಸಿಂಗ್ ನಿರ್ದೆಶನದ ಸಂಭಾಷಣಾ ‘ಅಬೊರಿಜಿನಲ್ ಕೈ’, ದಿನೇಶ್ ಚಮಾಳಿಗೆ ನಿರ್ದೇಶನದ ಕನ್ನಡ ಭಾಷೆಯ ‘ಬೆರಳೆ ಕೊರಳ್’, ಜೆ.ಪಿ.ತೂಮಿನಾಡು ನಿರ್ದೆಶನದ ತುಳು ಭಾಷೆಯ ಕಥೆ ಎಡೇಂಡು’ ನಾಟಕಗಳು ಪ್ರಮುಖ ಆಕರ್ಷಣೆಯಾಗಿದ್ದವು.