ಕೆ.ಬಿ.ರಮೇಶನಾಯಕ
ಮೈಸೂರು: ಜನಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಗಳ ಅಧಿಕಾರದಲ್ಲೇ ಮುಂದಿನ ಏಪ್ರಿಲ್ ತಿಂಗಳಲ್ಲಿ ಐದು ವರ್ಷಗಳನ್ನು ಪೂರೈಸುತ್ತಿರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಕೊನೆಗೂ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮೀಸಲಾತಿ ಪ್ರಕಟವಾಗುವುದರ ಕಡೆಗೆ ಆಕಾಂಕ್ಷಿಗಳ ಚಿತ್ತ ನೆಟ್ಟಿದೆ.
ಇದರ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ ತನ್ನ ಚಟುವಟಿಕೆಗಳನ್ನು ಬಿರುಸುಗೊಳಿಸಿದ್ದು, ಶೀಘ್ರದಲ್ಲೇ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಪಂ, ತಾಪಂ ಕ್ಷೇತ್ರಗಳ ಮೀಸಲಾತಿಯನ್ನು ಪ್ರಕಟಿಸುವ ಸಾಧ್ಯತೆ ಇದೆ. ಮೀಸಲಾತಿ ಹೊರ ಬೀಳುತ್ತಿದ್ದಂತೆ ಹಳ್ಳಿ ಕುಸ್ತಿಗೆ ಅಖಾಡ ಸಜ್ಜಾಗುವುದು ಖಚಿತವಾಗಿದೆ.
ರಾಜ್ಯದಲ್ಲಿ ಅವಧಿ ಪೂರ್ಣಗೊಂಡ ಜಿಪಂ, ತಾಪಂ ಕ್ಷೇತ್ರಗಳಿಗೆ ಚುನಾವಣೆ ನಡೆಸಲು ಮುಂದಾಗದ ಹಿಂದಿನ ಬಿಜೆಪಿ ಸರ್ಕಾರ ಕ್ಷೇತ್ರಗಳನ್ನು ಹೆಚ್ಚಿಸುವ ಭರದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವನ್ನು ರಚನೆ ಮಾಡಿತ್ತು.
ಈ ಆಯೋಗವು ತನ್ನ ಕಚೇರಿ ತೆರೆದು ಕಾರ್ಯ ಶುರು ಮಾಡಿ ಚುನಾವಣಾ ಕ್ಷೇತ್ರಗಳನ್ನು ವಿಂಗಡಿಸಿ, ರಚನೆ ಮಾಡುವ ಹೊತ್ತಿಗೆ ಅಧಿಕಾರಾವಧಿ ಮುಗಿದಿದ್ದರಿಂದ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು.
೨೦೨೧ರ ಏಪ್ರಿಲ್ ತಿಂಗಳಲ್ಲಿ ಎಲ್ಲಾ ಜಿಪಂಗಳಿಗೂ ಆಡಳಿತಾಧಿಕಾರಿಗಳನ್ನು ನಿಯೋಜಿಸಿ ಫೆ.೨೧ಕ್ಕೆ ಐದು ವರ್ಷಗಳು ತುಂಬುತ್ತಿವೆ. ಈ ಅವಧಿಯಲ್ಲಿ ಚುನಾವಣೆ ನಡೆಸಬೇಕೆಂದು ರಾಜ್ಯಚುನಾವಣಾ ಆಯೋಗವು, ಹೈಕೋರ್ಟ್, ಸುಪ್ರೀಂ ಕೋರ್ಟ್ ಮೊರೆ ಹೋದರೂ ಸರ್ಕಾರ ಒಂದಲ್ಲಾ ಒಂದು ಆಕ್ಷೇಪಣೆಯನ್ನು ಸಲ್ಲಿಸುತ್ತಾ ಬಂದಿತ್ತು. ಇದೀಗ ಗ್ರಾಪಂ ಸದಸ್ಯರ ಅವಧಿ ಮುಗಿದಿರುವ ಕಾರಣ ಜಿಪಂ,ತಾಪಂ ಹಾಗೂ ಗ್ರಾಪಂ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ. ಇದರಿಂದಾಗಿ ಆಯೋಗವು ಶೀಘ್ರದಲ್ಲೇ ಮೀಸಲಾತಿ ಪ್ರಕಟಿಸುವ ಕಾರಣ ಆಕಾಂಕ್ಷಿಗಳು ಕುತೂಹಲದಿಂದ ಕಾದು ಕುಳಿತಿದ್ದಾರೆ.
ಆಕಾಂಕ್ಷಿಗಳ ಮುಖದಲ್ಲಿ ಮಂದಹಾಸ: ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಆಕಾಂಕ್ಷಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಐದು ವರ್ಷಗಳಿಂದ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಒಂದಿಷ್ಟು ನೆರವಾಗುತ್ತಲೇ ಬಂದಿದ್ದರು.
ಗೌರಿ-ಗಣೇಶ ಹಬ್ಬ,ಕನ್ನಡ ರಾಜ್ಯೋತ್ಸವ, ಗ್ರಾಮದೇವತೆಗಳ ಹಬ್ಬ ಹರಿದಿನಗಳಲ್ಲಿ ತಮ್ಮ ತಮ್ಮ ಬೆಂಬಲಿಗ ಪಡೆಗೆ ಕಾರ್ಯಕ್ರಮಗಳನ್ನು ನಡೆಸಲು ಸಹಾಯ ಮಾಡುತ್ತಾ ಬಂದಿದ್ದ ಮುಖಂಡರು ಈಗ ಮತ್ತೊಂದು ಸುತ್ತು ಹಾಕಲು ಅಣಿಯಾಗಿದ್ದಾರೆ.
ಮೀಸಲಾತಿ ನಿಗದಿಯತ್ತ ಕಣ್ಣು... ಜಿಪಂ,ತಾಪಂ ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವ ಆಕಾಂಕ್ಷಿಗಳು ತಮ್ಮ ಪರವಾಗಿ ಮೀಸಲಾತಿ ನಿಗದಿಪಡಿಸುವಂತೆ ಶಾಸಕರು, ಸಚಿವರ ಮೇಲೆ ಒತ್ತಡ ಹಾಕುವುದಕ್ಕೆ ಸಜ್ಜಾಗಿದ್ದಾರೆ.ರಾಜ್ಯ ಚುನಾವಣಾ ಆಯೋಗವು ಮೀಸಲಾತಿ ಪ್ರಕಟಿಸಿದರೂ ಮೀಸಲಾತಿ ನಿಗದಿಪಡಿಸಲು ಸರ್ಕಾರ ಪಟ್ಟಿಯನ್ನು ಕಳುಹಿಸುವ ಸಾಧ್ಯತೆ ಇದೆ. ಹೀಗಾಗಿ, ಕೆಲವರು ಶಾಸಕರು,ಸಚಿವರ ಮುಂದೆ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಗದಿಪಡಿಸುವಂತೆ ಮನವೊಲಿಕೆಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಒಲವು ತೋರಿದ್ದ ಮುಖಂಡರಿಬ್ಬರು ಈಗ ಜಿಪಂ ಚುನಾವಣೆಗೆ ಕಣಕ್ಕಿಳಿಯಲು ಮುಂದಾಗಿರುವ ಮಾಹಿತಿ ಲಭ್ಯವಾಗಿದ್ದು, ಅದೇ ರೀತಿ ತಿ.ನರಸೀಪುರ ಕ್ಷೇತ್ರದಲ್ಲೂ ಮುಖಂಡರೊಬ್ಬರು ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಮೀಸಲಿಡುವಂತೆ ಕೋರಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ಎಷ್ಟೆಷ್ಟು ಕ್ಷೇತ್ರಗಳು?:
ಜಿಲ್ಲೆಯಲ್ಲಿ ೪೬ ಜಿಪಂ ಕ್ಷೇತ್ರಗಳಿದ್ದು, ಸರಗೂರು-೨, ಕೃಷ್ಣರಾಜನಗರ-೩, ಸಾಲಿಗ್ರಾಮ-೪, ಹೆಗ್ಗಡದೇವನಕೋಟೆ-೪, ಪಿರಿಯಾಪಟ್ಟಣ-೬, ಹುಣಸೂರು-೬, ಮೈಸೂರು-೬, ತಿ.ನರಸೀಪುರ-೬, ನಂಜನಗೂಡು ತಾಲ್ಲೂಕಿನಲ್ಲಿ ೯ ಜಿಪಂ ಕ್ಷೇತ್ರಗಳನ್ನು ರಚನೆ ಮಾಡಲಾಗಿದೆ. ಅದೇ ರೀತಿ ತಾಪಂನಲ್ಲಿ ಸರಗೂರು-೯, ಕೃಷ್ಣರಾಜನಗರ-೯, ಸಾಲಿಗ್ರಾಮ-೧೩, ಹೆಗ್ಗಡದೇವನಕೋಟೆ-೧೬, ಪಿರಿಯಾಪಟ್ಟಣ-೨೨, ಹುಣಸೂರು-೨೩, ಮೈಸೂರು-೨೦, ತಿ.ನರಸೀಪುರ-೨೦, ನಂಜನಗೂಡು ತಾಲ್ಲೂಕಿನಲ್ಲಿ ೨೮ ತಾಪಂ ಏಕ ಸದಸ್ಯ ಸ್ಥಾನಗಳ ಕ್ಷೇತ್ರಗಳನ್ನು ರಚಿಸಲಾಗಿದೆ. ೨೦೧೬ರಲ್ಲಿ ಚುನಾವಣೆ ನಡೆದಾಗ ಮೈಸೂರು ತಾಲ್ಲೂಕಿನಲ್ಲಿ ೯ ಜಿಪಂ, ೨೯ ತಾಪಂ ಕ್ಷೇತ್ರಗಳಿದ್ದು, ಈಗ ಹೊಸದಾಗಿ ರಚನೆಯಾಗಿರುವ ಪ್ರಕಾರ ಮೂರು ಜಿಪಂ, ೯ ತಾಪಂ ಕ್ಷೇತ್ರಗಳು ಇಳಿಕೆಯಾಗಿವೆ. ಈಗ ಬೃಹತ್ ಮೈಸೂರು ಮಹಾನಗರಪಾಲಿಕೆಗೆ ಚಾಮುಂಡಿಬೆಟ್ಟ ತಾಪಂ ಕ್ಷೇತ್ರ, ಇಲವಾಲ ಹೋಬಳಿ ಕೇಂದ್ರವೂ ಸೇರಿರುವ ಕಾರಣ ಮತ್ತೊಮ್ಮೆ ಪರಿಷ್ಕರಿಸಿ ಕ್ಷೇತ್ರದ ಗಡಿರೇಖೆಯನ್ನು ನಿಗದಿಪಡಿಸಬೇಕಿದೆ.





