ಸುಭಾಷ್ ವಿದ್ಯುತ್ ಘಟಕದಲ್ಲಿ ದುರಸ್ತಿ ಹಿನ್ನೆಲೆಯಲ್ಲಿ ಕ್ರಮ; ಕುಡಿಯುವ ನೀರು ಪೂರೈಕೆಯ ಉದ್ದೇಶ
ಮಂಜು ಕೋಟೆ
ಎಚ್. ಡಿ. ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯದ ಪ್ರಮುಖ ನಾಲ್ಕು ಗೇಟುಗಳ ಮೂಲಕ ೩ ತಿಂಗಳ ನಂತರ ಮತ್ತೆ ನದಿಗೆ ನೀರು ಬಿಡಲಾಗಿದೆ.
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಕಬಿನಿ ಜಲಾಶಯದಿಂದ ೩ ತಿಂಗಳ ನಂತರ ಮತ್ತೆ ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ೧,೦೦೦ ಕ್ಯೂಸೆಕ್ಸ್ ನೀರನ್ನು ಹರಿಯಬಿಡಲಾಗಿದೆ.
ಮೈಸೂರು, ಮಂಡ್ಯ, ಬೆಂಗಳೂರು, ಇನ್ನಿತರ ಪ್ರದೇಶಗಳ ಜನರಿಗೆ ಕುಡಿಯುವ ನೀರಿಗಾಗಿ ಜಲಾಶಯ ದಿಂದ ನೀರು ಬಿಡಲಾಗುತ್ತಿದೆ. ಪ್ರತಿ ಸಾಲಿನಲ್ಲೂ ಜಲಾಶಯದಿಂದ ಕುಡಿಯುವ ನೀರನ್ನು ಜಲಾಶಯದ ಪಕ್ಕದಲ್ಲಿರುವ ಸುಭಾಷ್ ವಿದ್ಯುತ್ ಘಟಕದ ಮೂಲಕ ಹರಿಸಲಾಗುತ್ತಿತ್ತು. ಆದರೆ ಒಂದು ತಿಂಗಳಿನಿಂದ ಸುಭಾಷ್ ವಿದ್ಯುತ್ ಘಟಕದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಘಟಕದ ವರಿಗೆ ನೀರಿನ ಅಗತ್ಯವಿಲ್ಲದ್ದರಿಂದ ನೀರಾವರಿ ಇಲಾಖೆಯ ಅಧಿಕಾರಿಗಳು ೪ ಗೇಟ್‌ಗಳ ಮೂಲಕ ಕುಡಿಯುವ ನೀರಿಗಾಗಿ ನದಿಗೆ ನೀರು ಹರಿಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃ ತ್ವದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗಿತ್ತು. ನಂತರ ಅಕ್ಟೋಬರ್ ತಿಂಗಳಿನಲ್ಲಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದು, ಜಲಾಶಯದ ನಾಲ್ಕು ಗೇಟ್‌ಗಳ ಮುಖಾಂತರ ಹರಿಯುತ್ತಿದ್ದ ನೀರನ್ನು ಸ್ಥಗಿತಗೊಳಿ ಸಲಾಗಿತ್ತು. ಮತ್ತೆ ಈಗ ಜಲಾಶಯದಿಂದ ನಾಲ್ಕು ಗೇಟ್‌ಗಳ ಮೂಲಕ ನದಿಗೆ ನೀರು ಬಿಡಲಾಗುತ್ತಿದೆ.
ಬೇಸಿಗೆ ಸಂದರ್ಭದಲ್ಲಿ ಜಲಾಶಯದ ಸುಭಾಷ್ ಘಟಕದಿಂದ ಕುಡಿಯಲು ನೀರು ಬಿಟ್ಟರೂ ನದಿಯಲ್ಲಿ ನೀರು ಹೋಗುತ್ತಿರುವುದೇ ಗೊತ್ತಾಗುತ್ತಿರಲಿಲ್ಲ. ಆದರೆ ಈಗ ಜಲಾಶಯದ ಗೇಟ್‌ಗಳ ಮೂಲಕ ನೀರು ಹೋಗುತ್ತಿರುವುದರಿಂದ ಪ್ರವಾಸಿಗರಿಗೆ, ಜನಸಾಮಾನ್ಯರಿಗೆ ಆಕರ್ಷಕವಾಗಿ ಕಾಣುತ್ತಿದೆ. ಹೀಗಾಗಿ ಗೇಟಿನಿಂದ ಧುಮ್ಮಿಕ್ಕುವ ನೀರನ್ನು ವೀಕ್ಷಿಸಲು ಜನರು ಆಗಮಿಸುತ್ತಿದ್ದಾರೆ.
ನಾಲ್ಕು ಗೇಟ್‌ಗಳ ಮೂಲಕ ತಲಾ ಒಂದು ಗೇಟಿನಲ್ಲಿ ೨೫೦ ಕ್ಯೂಸೆಕ್ಸ್‌ನಂತೆ ೪ ಗೇಟ್‌ಗಳಲ್ಲಿ ಒಂದು ಸಾವಿರ ಕ್ಯೂಸೆಕ್ಸ್ ನೀರು ಹರಿದುಹೋಗುತ್ತಿದೆ.
ಜಲಾಶಯದ ಗರಿಷ್ಟ ಮಟ್ಟ ೮೪ ಅಡಿಗಳಿದ್ದು, ಈಗ ಜಲಾಶಯದಲ್ಲಿ ನೀರಿನ ಮಟ್ಟ ೭೯ ಅಡಿಗಳಷ್ಟು ಸಂಗ್ರಹವಾಗಿದೆ. ಮಳೆ ಇಲ್ಲದ ಕಾರಣ ಒಳಹರಿವು ಬರುತ್ತಿಲ್ಲ. ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ ಜಲಾಶಯದಲ್ಲಿ ೭೨ ಅಡಿಗಳಷ್ಟು ನೀರಿತ್ತು.
ಬೆಂಗಳೂರು, ಮಂಡ್ಯ, ಮೈಸೂರು ಭಾಗಗಳ ಜನರಿಗೆ ಕುಡಿಯುವ ನೀರಿಗಾಗಿ ಜಲಾಶಯದ ನಾಲ್ಕು ಗೇಟ್‌ಗಳ ಮೂಲಕ ನದಿಗೆ ನೀರನ್ನು ಬಿಡಲಾಗುತ್ತಿದೆ. ಜಲಾಶಯ ಸಮೀಪದ ವಿದ್ಯುತ್ ಘಟಕದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಗೇಟ್‌ಗಳ ಮೂಲಕ ನದಿಗೆ ನೀರು ಬಿಡಲಾಗುತ್ತಿದೆ -ಚಂದ್ರಶೇಖರ್, ಕಾರ್ಯಪಾಲಕ ಅಭಿಯಂತ, ಕಬಿನಿ ಜಲಾಶಯ