Mysore
21
overcast clouds
Light
Dark

ಓದುಗರ ಪತ್ರ: ಆತ್ಮೀಯ ‘ಆಂದೋಲನʼ ದಿನಪತ್ರಿಕೆಗೆ ಧನ್ಯವಾದಗಳು

ದಟ್ಟಕಾಡಿನ ನಡುವೆ ಗೂಡುಗಳಂತಹ ಮನೆಯಲ್ಲಿ ಉಸಿರು ಕೈಯಲ್ಲಿ ಹಿಡಿದು ದಿನ ಕಳೆಯುತ್ತಿದ್ದ ಇಂಡಿಗನತ್ತ ಗ್ರಾಮದ ಜನರ ಪಾಡುಗಳನ್ನು ಮಾನವೀಯತೆಯ ಅಂತರಂಗದ ಕಣ್ಣಿನಿಂದ ನೋಡಿ, ಸವಿಸ್ತಾರವಾದ ವರದಿ (ಮೇ 13ರ ಸಂಚಿಕೆ) ಮಾಡಿದ್ದಕ್ಕೆ ‘ಆಂದೋಲನ’ ದಿನಪತ್ರಿಕೆಗೆ ಧನ್ಯ ವಾದಗಳು. ಈ ವರದಿಯ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ತೆರಳಿ ಮೂರ್ನಾಲ್ಕು ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿ, ನೊಂದವರ ಧ್ವನಿಗೆ ಕಿವಿಯಾದ ಚಾಮರಾಜನಗರ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರ ಕಾರ್ಯದಕ್ಷತೆ ಪ್ರಶಂಸಾರ್ಹ.

ಏ.26ರಂದು ಲೋಕಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ಇಂಡಿಗನತ್ತ ಗ್ರಾಮದಲ್ಲಿ ನಡೆದ ಮತಗಟ್ಟೆ ಧ್ವಂಸ ಪ್ರಕರಣಕ್ಕೆ ಕಾರಣಗಳೇನಾದರೂ ಆಗಿರಲಿ, ತಪ್ಪು ಮಾಡಿದವರಿಗೆ ಶಿಕ್ಷೆಯೂ ಆಗಬೇಕು. ಆದರೆ, ಕಾನೂನು ಅರಿವಿಲ್ಲದ ನಿಷ್ಪಾಪಿ ಜನರು ಅನುಭವಿಸುತ್ತಿರುವ ಯಾತನೆಗಳನ್ನು ಕಣ್ಣಿಗೆ ಕಟ್ಟುವಂತೆ ಸಮಗ್ರವಾಗಿ ನೀಡಿದ್ದು, ಕೇವಲ ಜನರಲ್ಲದೆ, ಅಲ್ಲಿನ ಜಾನುವಾರುಗಳೂ ಮೇವು, ನೀರು ಇಲ್ಲದೆ ಅಸು ನೀಗುವಂತಹ ಸ್ಥಿತಿಗೆ ತಲುಪಿದ್ದ ವರದಿಗಾರಿಕೆ ಓದುಗರನ್ನು ಚಿಂತನೆಗೆ ಹಚ್ಚಿದೆ ಎಂದರೆ ಅತಿಶಯೋಕ್ತಿ ಅಲ್ಲ. ‘ಆಂದೋಲನ’ದ ಇಂತಹ ಮಾನವೀಯ ವರದಿಗಳ ಜೈತ್ರಯಾತ್ರೆ ನಿರಂತರವಾಗಿ ಮುಂದುವರಿಯಲಿ.

-ಎಂ.ಜಿ.ರಂಗಸ್ವಾಮಯ್ಯ, ಭೀಮನಗರ, ಚಾಮರಾಜನಗರ.