Mysore
23
scattered clouds

Social Media

ಶುಕ್ರವಾರ, 09 ಅಕ್ಟೋಬರ್ 2026
Light
Dark

ಮಹೇಂದ್ರನ ಸುತ್ತ ಅನುಮಾನದ ಹುತ್ತ!

ಚಿರಂಜೀವಿ ಸಿ.ಹುಲ್ಲಹಳ್ಳಿ

ಕಬಿನಿ ಕಿಂಗ್ ಮಹೇಂದ್ರ ತಾಲೀಮು ಅರ್ಧಕ್ಕೆ ಮೊಟಕು

ಆತಂಕದಲ್ಲಿ ದಸರಾ ಗಜಪಡೆಯ ಅಭಿಮಾನಿಗಳು

ಮೈಸೂರು: ಮಹಾಭಾರತದ ಭೀಮನ ಬಲ, ಅರ್ಜುನನ ವೇಗ ಹಾಗೂ ಕರ್ಣನ ಸಾಮರ್ಥ್ಯ… ಈ ಎಲ್ಲ ಗುಣಗಳನ್ನೂ ಮೈಗೂಡಿಸಿಕೊಂಡಿರುವ ಆನೆ ಎಂದೇ ದಸರಾ ವಲಯದಲ್ಲಿ ಗುರುತಿಸಿಕೊಂಡಿದ್ದ ‘ಕಬಿನಿ ಕಿಂಗ್’ ಮಹೇಂದ್ರನ ವಿಚಾರದಲ್ಲಿ ಇದೀಗ ಹಲವು ಪ್ರಶ್ನೆಗಳು ಎದ್ದಿವೆ.

ಭವಿಷ್ಯದ ಅಂಬಾರಿ ಆನೆ ಎಂದೇ ಗುರುತಿಸಿಕೊಂಡಿದ್ದ ಈ ಬಲಿಷ್ಠ ಆನೆ, ಮರದ ಅಂಬಾರಿ ಹೊರುವ ತಾಲೀಮಿನ ವೇಳೆ ತಾಲೀಮನ್ನು ಅರ್ಧಕ್ಕೆ ಮೊಟಕುಗೊಳಿಸಿರುವುದು ಆನೆ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದೆ.

ಜೂನಿಯರ್ ಅರ್ಜುನ ಎಂದೇ ಕರೆಯಲ್ಪಡುತ್ತಿದ್ದ ಈ ಆನೆ, ಭವಿಷ್ಯದಲ್ಲಿ ಅಂಬಾರಿ ಹೊರುವ ಆನೆಯಾಗಿ ರೂಪುಗೊಳ್ಳಲಿದೆ ಎಂಬ ನಿರೀಕ್ಷೆ ಮೂಡಿಸಿತ್ತು. ಅದಕ್ಕೆ ಪೂರಕವಾಗಿ ಶ್ರೀರಂಗಪಟ್ಟಣ ದಸರಾದಲ್ಲಿ ನಾಲ್ಕು ಬಾರಿ ಅಂಬಾರಿ ಹೊತ್ತ ಅನುಭವವೂ ಮಹೇಂದ್ರನಿಗೆ ಇತ್ತು.

ಅಂಬಾರಿ ಹೊರುವ ನಿರೀಕ್ಷೆ: ಕ್ಯಾಪ್ಟನ್ ಅಭಿಮನ್ಯು ನಿವೃತ್ತಿಯಿಂದ ತೆರವಾದ ಅಂಬಾರಿ ಆನೆಯ ಸ್ಥಾನಕ್ಕೆ ಈ ಬಾರಿ ಮಹೇಂದ್ರ ಪ್ರಬಲ ಆಕಾಂಕ್ಷಿಯಾಗಿದ್ದನು. ಸುದೀರ್ಘ ತರಬೇತಿ, ಅಂಬಾರಿ ಹೊರುವ ಹಿಂದಿನ ಅನುಭವ ಹಾಗೂ ದೈಹಿಕ ಸಾಮರ್ಥ್ಯವನ್ನು ಗಮನಿಸಿದರೆ, ಈ ಬಾರಿ ಮೈಸೂರು ದಸರಾದಲ್ಲಿ ಮಹೇಂದ್ರನಿಗೆ ಅಂಬಾರಿ ಹೊರುವ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ದಸರಾ ವಲಯದಲ್ಲಿತ್ತು. ಅಷ್ಟೇ ಅಲ್ಲ, ಗಜಪಡೆಯ ಕ್ಯಾಪ್ಟನ್ ಪಟ್ಟವೂ ಮಹೇಂದ್ರನ ಪಾಲಾಗಬಹುದು ಎಂಬ ಮಾತುಗಳು ಕೇಳಿಬಂದಿದ್ದವು.

ಮರದ ಅಂಬಾರಿ ಹೊರುವ ತಾಲೀಮಿನ ವೇಳೆ ಮಹೇಂದ್ರ ಹಿಂದೇಟು ಹಾಕಿ ತಾಲೀಮನ್ನು ಅರ್ಧಕ್ಕೆ ನಿಲ್ಲಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಸಾಮರ್ಥ್ಯ ಪ್ರದರ್ಶಿಸಬೇಕಿದ್ದ ನಿರ್ಣಾಯಕ ಹಂತದಲ್ಲೇ ತಾಲೀಮಿನಿಂದ ಹಿಂದೆ ಸರಿದಿರುವುದು ಆನೆಯ ಪ್ರಸ್ತುತ ದೈಹಿಕ ಸ್ಥಿತಿಯ ಬಗ್ಗೆಯೂ ಪ್ರಶ್ನೆ ಮೂಡಿಸಿದೆ. ಬಲಿಷ್ಠ ಆನೆಗೆ ಏನಾಯಿತು: ೪೨ ವರ್ಷದ ಮಹೇಂದ್ರನನ್ನು ಒಂದು ವರ್ಷದ ಹಿಂದೆ ಮತ್ತಿಗೋಡು ಸಾಕಾನೆ ಶಿಬಿರದಿಂದ ನಾಗರಹೊಳೆ ವ್ಯಾಪ್ತಿಯ ಬಳ್ಳೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. ಬಲಿಷ್ಠ ದೇಹ, ಧೈರ್ಯ ಹಾಗೂ ತರಬೇತಿಗೆ ಸ್ಪಂದಿಸುವ ಗುಣದಿಂದಲೇ ಈ ಆನೆಗೆ ಅಂಬಾರಿ ಹೊರುವ ಸಾಮರ್ಥ್ಯವಿದೆ ಎಂದು ಗುರುತಿಸಲಾಗಿತ್ತು. ಆದರೆ, ಇದೀಗ ಮರದ ಅಂಬಾರಿ ತಾಲೀಮಿನ ಅರ್ಧಕ್ಕೆ ನಿಂತುಕೊಂಡಿರುವುದು ‘ಬಲಿಷ್ಠ ಮಹೇಂದ್ರನಿಗೆ ಏನಾಯಿತು?’ ಎಂಬ ಪ್ರಶ್ನೆ ಮೂಡಿಸಿದೆ.

‘ಮಹೇಂದ್ರ ಶಕ್ತಿಹೀನನಾಗಲು ನಿಖರ ಕಾರಣವೇನು?:  ತಾಲೀಮಿನ ವೇಳೆ ಆತನ ಆರೋಗ್ಯದಲ್ಲಿ ಏನು ಸಮಸ್ಯೆ ಉಂಟಾಯಿತು? ಈ ಹಿಂದೆ ಅಂಬಾರಿ ಹೊತ್ತಿದ್ದ ಆನೆಗೆ ಈ ಬಾರಿ ತಾಲೀಮಿನಲ್ಲಿ ಏಕೆ ಹಿನ್ನಡೆಯಾಯಿತು? ಆತನಿಗೆ ಮತ್ತೆ ತಾಲೀಮು ಮುಂದುವರಿಸುವ ಅವಕಾಶವಿದೆಯೇ? ಎಂಬ ಪ್ರಶ್ನೆಗಳಿಗೆ ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸ್ಪಷ್ಟ ಮಾಹಿತಿ ಅಗತ್ಯವಾಗಿದೆ.

ಮಹೇಂದ್ರ ಅರ್ಧಕ್ಕೆ ತಾಲೀಮು ನಿಲ್ಲಿಸಲು ನಿಖರ ಕಾರಣವೇನು? ತಾಲೀಮಿನ ವೇಳೆ ಆತನ ಆರೋಗ್ಯದಲ್ಲಿ ಏನು ಸಮಸ್ಯೆ ಉಂಟಾಯಿತೇ? ಆತನಿಗೆ ಮತ್ತೆ ತಾಲೀಮು ಮುಂದುವರಿಸುವ ಅವಕಾಶವಿದೆಯೇ? ಎಂಬ ಪ್ರಶ್ನೆಗಳಿಗಾಗಿ ಸ್ಪಷ್ಟನೆ ಪಡೆಯಲು ಡಿಸಿಎಫ್ ಪ್ರಭುಗೌಡ ಅವರಿಗೆ ಕರೆ ಮಾಡಿದಾಗ ಅವರು ಪ್ರತಿಕ್ರಿಯಿಸಲಿಲ್ಲ.

” ಮಹೇಂದ್ರ ಆನೆ ಸಾಮರ್ಥ್ಯವನ್ನು ಇದೊಂದು ಘಟನೆಗೆ ಅಳೆಯಲಾಗದು. ಬೇರೆ ರೀತಿಯ ಆರೋಪಗಳು ಬಂದಿರಬಹುದು. ಅದನ್ನು ಅಧ್ಯಯನ ಮಾಡದೆ ಅಥವಾ ಆನೆ ಆರೋಗ್ಯದ ಏರುಪೇರುಗಳನ್ನು ಪರೀಕ್ಷೆಗೆ ಒಳಪಡಿಸದೆ, ಗಮನಿಸದೆ ಹೇಳಲಾಗದು.”

-ಡಾ.ನಾಗರಾಜು, ಹಿರಿಯ ಆನೆ ವೈದ್ಯ 

 

 

Tags:
error: Content is protected !!