Mysore
22
overcast clouds

Social Media

ಗುರುವಾರ, 03 ಸೆಪ್ಟೆಂಬರ್ 2026
Light
Dark

ಬೈಕ್ ನಿಲ್ದಾಣವಾಗಿ ಮಾರ್ಪಟ್ಟ ಬಸ್ ನಿಲ್ದಾಣ!  

ಮಂಜು ಕೋಟೆ

ಕೋಟೆ: ಬಸ್ ನಿಲ್ದಾಣದಲ್ಲಿ ದೊರೆಯದ ಶುದ್ಧ ಕುಡಿಯುವ ನೀರು, ಪ್ರಯಾಣಿಕರಿಗೆ ಸಮಸ್ಯೆ 

ಎಚ್.ಡಿ.ಕೋಟೆ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪ್ರಯಾಣಿಕರ ಅನುಕೂಲಕ್ಕಿಂತ ಖಾಸಗಿ ವಾಹನಗಳ ನಿಲ್ದಾಣವಾಗಿ ಮಾರ್ಪಾಡಾಗಿ, ಮೂಲಸೌಕರ್ಯಗಳಿಂದಲೂ ವಂಚಿತವಾಗಿ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ತಾಲ್ಲೂಕಿನ ಹಳ್ಳಿಗಳು ಮತ್ತು ಮೈಸೂರು ನಗರ, ಇತರ ತಾಲ್ಲೂಕುಗಳಿಗೆ ಪ್ರತಿನಿತ್ಯ ಸಾವಿರಾರು ಜನರು ನೂರಾರು ಬಸ್ಸುಗಳಲ್ಲಿ ಪ್ರಯಾಣ ಮಾಡಲು ಈ ಬಸ್ ನಿಲ್ದಾಣವನ್ನೇ ಅವಲಂಬಿಸಿದ್ದಾರೆ.

ಬಸ್ ನಿಲ್ದಾಣದ ಒಳಗೆ ಬೆಳಿಗ್ಗೆ ೯ರಿಂದ ಸಂಜೆ ೭ ಗಂಟೆಯ ತನಕವೂ ಅನೇಕರು ಖಾಸಗಿ ವಾಹನಗಳು, ಬೈಕ್‌ಗಳನ್ನು ನಿಲ್ಲಿಸಿ, ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ನಿಲ್ದಾಣಕ್ಕೆ ಆಗಮಿಸುವ ಬಸ್‌ಗಳು ಬೈಕ್‌ಗಳ ನಿಲುಗಡೆಯಿಂದಾಗಿ ಸುಗಮವಾಗಿ ಸಂಚರಿಸಲು ತೊಂದರೆಯಾಗುತ್ತಿದೆ. ಜೊತೆಗೆ ಪ್ರಯಾಣಿಕರು ಕೂಡ ಬಸ್ಸುಗಳಿಂದ ಇಳಿದು ಬರಲು ಕಷ್ಟವಾಗುತ್ತಿದೆ.

ಒಂದು ವೇಳೆ ಬಸ್‌ಗಳು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಅಪಘಾತವಾದರೆ ಪ್ರಾಣಾಪಾಯವೂ ಆಗಬಹುದು. ಬೈಕ್ ಸವಾರರೂ ತಮ್ಮ ವಾಹನಗಳನ್ನು ನಿಲ್ದಾಣದಲ್ಲಿ ಓಡಿಸುವುದರಿಂದ ಅಪಘಾತ ಸಾಧ್ಯತೆ ಹೆಚ್ಚಾಗಿದೆ.

ಬಸ್ ನಿಲ್ದಾಣ ಹೈಟೆಕ್ ಆಗಿ ನಿರ್ಮಾಣಗೊಂಡಿದ್ದರೂ ಶುದ್ಧ ಕುಡಿಯುವ ಬಾರದೆ ಇರುವುದರಿಂದ ಪ್ರಯಾಣಿಕರು, ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಶುದ್ಧ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಜತೆಗೆ ಬಸ್ ನಿಲ್ದಾಣದಲ್ಲಿ ಪಾರಿವಾಳಗಳ ಹಾವಳಿ ಹೆಚ್ಚಾಗಿದ್ದು, ಪ್ರಯಾಣಿಕರ ಮೇಲೆ, ವಾಹನಗಳ ಮೇಲೆ ಎಲ್ಲೆಂದರಲ್ಲಿ ಹಿಕ್ಕೆ ಹಾಕುವುದರಿಂದ ಕಿರಿಕಿರಿಯಾಗುತ್ತಿದೆ. ಇದನ್ನು ನಿಯಂತ್ರಿಸಲು ಬಲೆಯನ್ನು ಅಳವಡಿಸಬೇಕಿದೆ.

ಶುದ್ಧ ಕುಡಿಯುವ ನೀರು ಸರಬರಾಜು ದೊರೆಯುವಂತೆ ಕ್ರಮ ಕೈಗೊಳ್ಳಬೇಕಿದೆ. ಖಾಸಗಿ ವಾಹನಗಳನ್ನು ಬಸ್ ನಿಲ್ದಾಣದೊಳಗೆ ನಿಲ್ಲಿಸದಂತೆ ಕ್ರಮ ಜರುಗಿಸಬೇಕಿದೆ. ನಿಲ್ದಾಣದ ಕಾಂಪೌಂಡ್ ಕೆಲವೊಂದು ಭಾಗದಲ್ಲಿ ಕುಸಿದು ಬಿದ್ದು ವರ್ಷಗಳೇ ಕಳೆದರೂ ಅದನ್ನು ದುರಸ್ತಿ ಮಾಡಿಸಿಲ್ಲ. ಈಗಲಾದರೂ ಅದರ ದುರಸ್ತಿಗೆ ಮುಂದಾಗಬೇಕಿದೆ. ಆಗ ಮಾತ್ರ ಹೈಟೆಕ್ ಬಸ್ ನಿರ್ಮಾಣವಾಗಿರುವುದಕ್ಕೂ ಸಾರ್ಥಕವಾಗಲಿದೆ.

ಈ ಬಗ್ಗೆ ಕೆಎಸ್‌ಆರ್‌ಟಿಸಿ ಜಿಲ್ಲಾ ಅಧಿಕಾರಿಗಳು, ತಾಲ್ಲೂಕು ಅಧಿಕಾರಿಗಳು ಗಮನ ಹರಿಸಿ, ಬಸ್ ನಿಲ್ದಾಣ ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ಸದುಪಯೋಗವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

” ಬಸ್ ನಿಲ್ದಾಣದಲ್ಲಿ ಹೇಳುವವರಿಲ್ಲ, ಕೇಳುವವರಿಲ್ಲದಂತಾಗಿದೆ. ಬೈಕ್‌ಗಳ ನಿಲುಗಡೆಯ ತಾಣವಾಗಿ, ಶುದ್ಧ ಕುಡಿಯುವ ನೀರು ದೊರೆಯದಂತಾಗಿದೆ. ಬಿದ್ದುಹೋಗಿರುವ ಕಾಂಪೌಂಡ್ ದುರಸ್ತಿಪಡಿಸಬೇಕಿದೆ. ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಸಾರ್ವಜನಿಕರು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದ್ದು, ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು.”

-ಪೇಂಟ್ ನಾಗೇಗೌಡ, ಪ್ರಯಾಣಿಕರು

” ಬಸ್ ನಿಲ್ದಾಣದಲ್ಲಿ ಉದ್ಭವಿಸಿರುವ ಕೆಲವು ಸಮಸ್ಯೆಗಳ ಮಾಹಿತಿಯಿದ್ದು, ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮತ್ತು ನಮ್ಮ ಇಲಾಖೆಗೆ ಪತ್ರ ಬರೆಯಲಾಗಿದೆ. ಇತ್ತೀಚೆಗಷ್ಟೇ ನಾನು ಇಲ್ಲಿಗೆ ಅಧಿಕಾರಿಯಾಗಿ ಬಂದಿದ್ದು, ಎಲ್ಲವನ್ನೂ ಬಗೆಹರಿಸಲು ಮುಂದಾಗಿದ್ದೇನೆ.”

-ತ್ಯಾಗರಾಜ್, ಡಿಪೋ ಮ್ಯಾನೇಜರ್

 

 

Tags:
error: Content is protected !!