ಕೆ.ಬಿ.ರಮೇಶನಾಯಕ
ಕೆಎಸ್‌ಆರ್‌ಟಿಸಿ ಬಸ್ಗಳಲ್ಲೂ ಬಿಎಂಟಿಸಿ ಮಾದರಿ ತಂತ್ರಾಂಶ ಅಳವಡಿಕೆ
೨೦ ನುರಿತ ತಂತ್ರಜ್ಞರಿಂದ ನಗರದಲ್ಲಿ ಸರ್ವೆ ಕಾರ್ಯ ಪ್ರಾರಂಭ
೮,೦೦೦ ಬಸ್‌ಗಳಿಗೆ ನೂತನ ವ್ಯವಸ್ಥೆ ಅಳವಡಿಕೆ
ಮೈಸೂರು: ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುವ ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆಯಲ್ಲಿ ಜಾರಿಗೆ ತಂದಿರುವ ವಿಟಿಎಂಎಸ್ (ವೆಹಿಕಲ್ ಟ್ರ್ಯಾಕಿಂಗ್ ಮಾನಿಟರಿಂಗ್ ಸಿಸ್ಟಂ) ವ್ಯವಸ್ಥೆಯನ್ನು ಮೈಸೂರು ನಗರ ಸಾರಿಗೆ ವಿಭಾಗದಲ್ಲೂ ಅಳವಡಿಸಿಕೊಳ್ಳಲು ಮುಂದಾಗಿದ್ದು, ವರ್ಷಾಂತ್ಯಕ್ಕೆ ಜಾರಿಯಾಗುವ ಸಾಧ್ಯತೆ ಇದೆ. ಈಗಾಗಲೇ ಕೆಎಸ್‌ಆರ್ ಟಿಸಿಯ ೨೦ ಮಂದಿ ನುರಿತ ತಂತ್ರಜ್ಞರ ತಂಡ ಮೈಸೂರಿನಲ್ಲಿ ಸರ್ವೆ ಕಾರ್ಯ ನಡೆಸುತ್ತಿದ್ದು, ವರದಿ ಸಲ್ಲಿಕೆಯಾದ ಬಳಿಕ ವಿಟಿಎಂಎಸ್ ವ್ಯವಸ್ಥೆಯನ್ನು ಪ್ರಯಾಣಿಕರಿಗೆ ಪರಿಚಯಿಸಿ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ.
ಬಿಎಂಟಿಸಿಯಲ್ಲಿ ಪ್ರಯಾಣಿಕರಿಗೆ ಸೇವೆ ಒದಗಿಸಲು ಅತಿ ಹೆಚ್ಚು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಈಗಾಗಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ೮,೦೦೦ ಬಸ್‌ಗಳಿಗೆ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಹೀಗಾಗಿ, ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಹಾಗೂ ಎರಡನೇ ಸ್ತರದ ನಗರಗಳಲ್ಲಿ ಅತಿ ದೊಡ್ಡ ವಿಭಾಗವನ್ನು ಹೊಂದಿರುವ ಮೈಸೂರು ನಗರ ಸಾರಿಗೆ ವಿಭಾಗದಲ್ಲೂ ಈ ವ್ಯವಸ್ಥೆಯನ್ನು ಜಾರಿಗೆ ತರಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನಗರದಲ್ಲಿ ಸರ್ವೆ ಕಾರ್ಯ ಆರಂಭ: ಮೈಸೂರು ನಗರ ಸಾರಿಗೆ ವಿಭಾಗವು ದೊಡ್ಡ ವಿಭಾಗವಾಗಿದ್ದು, ನಂಜನಗೂಡು, ತಿ.ನರಸೀಪುರ ಘಟಕಗಳು ಕೂಡ ಇದೇ ವಿಭಾಗಕ್ಕೆ ಸೇರಿರುವುದರಿಂದ ಯಾವ ರೀತಿಯಲ್ಲಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂಬುದರ ಬಗ್ಗೆ ಸರ್ವೆ ಕಾರ್ಯ ಆರಂಭಿಸಲಾಗುತ್ತದೆ.
ಮೈಸೂರು ನಗರ ಬಸ್ ನಿಲ್ದಾಣದಿಂದ ಹೊರಡುವ ಬಸ್‌ಗಳು ಇಲವಾಲ, ಬಿಳಿಕೆರೆ, ಎಚ್.ಡಿ.ಕೋಟೆ, ನಂಜನಗೂಡು, ಶ್ರೀರಂಗಪಟ್ಟಣ, ತಿ.ನರಸೀಪುರ, ಸಿದ್ದರಾಮನಹುಂಡಿ, ಜಯಪುರ ಸೇರಿದಂತೆ ಅನೇಕ ಮಾರ್ಗಗಳು ಮತ್ತು ನಿಲ್ದಾಣಗಳಿಗೆ ತೆರಳುತ್ತವೆ. ನಗರ ಬಸ್ ನಿಲ್ದಾಣದಿಂದ ಆರಂಭವಾಗಿ ಕೊನೆಯ ನಿಲ್ದಾಣದವರೆಗೆ ಎಷ್ಟು ನಿಲುಗಡೆಗಳಿವೆ ಮತ್ತು ಬರುವಾಗ ಎಷ್ಟು ನಿಲುಗಡೆಗಳು ಸಿಗುತ್ತವೆ. ಎಂಬ ನಿಖರವಾದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಒಂದು ಬಸ್ ದಿನಕ್ಕೆ ಎಷ್ಟು ರೂಟ್ ಸಂಚಾರ ಮಾಡಲಿದೆ ಎನ್ನುವುದನ್ನು ಗಮನಿಸುವ ಜತೆಗೆ, ನಗರದಲ್ಲಿ ಬಸ್ ತಂಗುದಾಣಗಳು, ನಿಲ್ದಾಣಗಳು, ಅಘೋಷಿತ ನಿಲುಗಡೆ ಸ್ಥಳಗಳು, ಡಿಪೋಗಳಲ್ಲಿ ನಿಲುಗಡೆ ಅಂಶವನ್ನು ಪರಿಗಣಿಸಲು ಸರ್ವೆ ನಡೆಯುತ್ತಿದೆ.
ಏನೇನು ಅನುಕೂಲಗಳು?: ವಿಟಿಎಂಎಸ್ ವ್ಯವಸ್ಥೆಯಲ್ಲಿ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿ, ಚಾಲಕರು ಮತ್ತು ನಿರ್ವಾಹಕರಿಗೆ ಪ್ರಯಾಣಿಕರು ಕೇಳುವ ಪ್ರಶ್ನೆಗೆ ನಿರಂತರವಾಗಿ ಉತ್ತರ ಕೊಡುವುದು ತಪ್ಪುವುದಲ್ಲದೆ, ಪ್ರಯಾಣಿಕರಿಗೂ ಕೂಡ ತಮ್ಮ ಮಾರ್ಗದ ಬಸ್ ಯಾವ ಸಮಯಕ್ಕೆ ಬರಲಿದೆ ಎನ್ನುವ ಮಾಹಿತಿ ದೊರೆಯುವುದರಿಂದ ಕಾಯುವುದು ತಪ್ಪಲಿದೆ. ಪ್ರಯಾಣಿಕರು ಮೀಸಲಾದ ಮೊಬೈಲ್ ಅಪ್ಲಿಕೇಷನ್ ಮತ್ತು ವೆಬ್ ಇಂಟರ್‌ಫೇಸ್ ಮೂಲಕ ನಿಖರವಾದ ಬಸ್ ಸ್ಥಳಗಳು, ಮಾರ್ಗಗಳು ಹಾಗೂ ಚಲನೆಯನ್ನು ಮೇಲ್ವಿಚಾರಣೆ ಮಾಡಬಹುದು.
ಮೈಸೂರು ನಗರ ಸಾರಿಗೆ ವಿಭಾಗದಲ್ಲಿ ೩೮೦ ಬಸ್ಗಳು ಕಾರ್ಯಾಚರಣೆ ಮಾಡುತ್ತಿದ್ದು, ಅಧಿಕೃತವಾಗಿ ೮೦೦ ರೂಟ್‌ಗಳಿವೆ. ಸರ್ವೆ ಕಾರ್ಯ ಮುಗಿದ ಬಳಿಕ ನಿಲ್ದಾಣ ಹಾಗೂ ಬಸ್‌ಗಳಿಗೆ ವಿಟಿಎಂಎಸ್ ತಂತ್ರಜ್ಞಾನ ವನ್ನು ಅಳವಡಿಸಲಾಗುತ್ತದೆ. ನಂತರ ಪ್ರಯಾಣಿಕರಿಗೆ ಈ ವ್ಯವಸ್ಥೆಯ ಪ್ರಯೋಜನ ದೊರೆಯುವಂತೆ ಮೊಬೈಲ್ ಆಪ್‌ಗೆ ಲಿಂಕ್ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.
ಈಗಾಗಲೇ ಬಸ್‌ಗಳಿಗೆ ವಿದ್ಯುನ್ಮಾನ ಟಿಕೆಟ್ ಯಂತ್ರ (ಇಟಿಎಂ) ಕೊಡಲಾಗಿದ್ದು, ವಿಟಿಎಂಎಸ್ ಪದ್ಧತಿ ಜಾರಿಯಾದ ಮೇಲೆ ಇಟಿಎಂಗಳನ್ನು ಮೇಲ್ದರ್ಜೆಗೇರಿಸಿ ನೂತನ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಎಂದು ಸಾರಿಗೆ ನಿಗಮದ ಅಧಿಕಾರಿಗಳು ಹೇಳಿದರು
” ನಗರದಲ್ಲಿ ಸುಧಾರಿತ ವಾಹನ ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆ ಈಗಾಗಲೇ ಸರ್ವೆ ಕಾರ್ಯ ನಡೆಯುತ್ತಿದೆ. ೨೦ ಮಂದಿ ಅಧಿಕಾರಿಗಳ ತಂಡ ಸರ್ವೆ ಕಾರ್ಯ ನಡೆ ಸುತ್ತಿದ್ದು, ವರ್ಷಾಂತ್ಯ ದೊಳಗೆ ಜಾರಿ ಮಾಡುತ್ತೇವೆ.”
-ಜಗದೀಶ್ ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ, ಮೈಸೂರು ನಗರ ಸಾರಿಗೆ




