Mysore
21
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ರೈತರ ಪಾಲಿಗೆ ಕಹಿಯಾದ ಸಿಹಿಗುಂಬಳ

ದಾ.ರಾ.ಮಹೇಶ್

ಹನಗೋಡು ಹೋಬಳಿ ರೈತರು ಬೆಳೆದ ಸಿಹಿಗುಂಬಳಕ್ಕೆ ದೊರೆಯದ ಮಾರುಕಟ್ಟೆ 

ವೀರನಹೊಸಹಳ್ಳಿ: ಜೋಳ, ಶುಂಠಿ, ಮತ್ತಿತರ ಸಾಂಪ್ರದಾಯಿಕ ಕೃಷಿ ಬಿಟ್ಟು ಹೊಸದಾಗಿ ಸಿಹಿ ಕುಂಬಳ ಬೆಳೆಯುವ ಪ್ರಯತ್ನ ಮಾಡಲು ಹೋಗಿ ಹೋಬಳಿಯ ಕೆಲ ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ಅಲ್ಪಾವಧಿ ಬೆಳೆ, ಕೆಲಸ ಕಡಿಮೆ, ಹೆಚ್ಚು ಗೊಬ್ಬರ-ಕೀಟನಾಶಕದ ಅಗತ್ಯ ಇಲ್ಲ, ಲಾಭ ಹೆಚ್ಚು ಎನ್ನುವ ಕೆಲವರ ಮಾತನ್ನು ನಂಬಿ ಹೊಲದಲ್ಲಿ ಪ್ರಯೋಗಕ್ಕೆ ಮುಂದಾದ ಅನ್ನದಾತರು ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಕೇರಳ ಒಡಿಶಾ, ಪಶ್ಚಿಮ ಬಂಗಾಳ ಭಾಗದಲ್ಲಿ ಜನಸಾಮಾನ್ಯರು ಇಷ್ಟಪಟ್ಟು ತಿನ್ನುತ್ತಾರೆ ಎನ್ನುವ ಕಾರಣಕ್ಕೆ ಅಲ್ಲಿಗೆ ಸಿಹಿಗುಂಬಳ ಪೂರೈಸುವ ಉದ್ದೇಶದಿಂದ ಹುಣಸೂರು ತಾಲ್ಲೂಕಿನ ಕೆಲ ಭಾಗಗಳಲ್ಲಿ ಈಚಿನ ವರ್ಷಗಳಲ್ಲಿ ಸಿಹಿಗುಂಬಳವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಇದನ್ನು ಗಮನಿಸಿದ ರೈತರು ತಮ್ಮ ಜಮೀನಿನಲ್ಲೂ ಈ ಬಾರಿ ಸಿಹಿಕುಂಬಳ ಬೆಳೆಯುವ ಧೈರ್ಯ ಮಾಡಿ ೩ ತಿಂಗಳ ಹಿಂದೆ ಬಿತ್ತನೆ ಮಾಡಿದ್ದರು.

ಇದೀಗ ಫಸಲು ಬಂದಿದೆ. ಆದರೆ, ಸಿಹಿಗುಂಬಳಕ್ಕೆ ಮಾರುಕಟ್ಟೆ ದೊರೆಯದೆ ಕಂಗಾಲಾಗಿದ್ದಾರೆ. ಬೆಂಗಳೂರು ಭಾಗದ ವ್ಯಾಪಾರಿಗಳ ಸಂಪರ್ಕ ಬೆಳೆಸಲಾಗಿದ್ದು, ಎಕರೆಗಟ್ಟಲೆ ಬೆಳೆದಿರುವ ಬೆಳೆ ಖರೀದಿಗೆ ಮನವೊಲಿಸಲಾಗಿದೆ. ಆದರೆ ನಿರೀಕ್ಷಿತ ದರ ದೊರೆಯದೇ ಖರ್ಚು ಮಾಡಿದ ಹಣವೂ ಸಿಗುವ ಲಕ್ಷಣ ಕಾಣದೆ ಹೊಲದಿಂದ ಹೇಗಾದರೂ ಫಸಲು ಸಾಗಣೆ ಆದರೆ ಸಾಕು ಎನ್ನುವ ದೃಷ್ಟಿಯಿಂದ ಸಿಕ್ಕಿದ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.

೨೫,೦೦೦ ರೂ. ಖರ್ಚು: ಒಂದು ಎಕರೆಯಲ್ಲಿ ಸಿಹಿಕುಂಬಳ ಬೆಳೆಯಲು ಅಂದಾಜು ೨೫ ಸಾವಿರ ರೂ. ಖರ್ಚು ಬರುತ್ತದೆ. ಬೀಜಕ್ಕೆ ಮಾಡುವ ವೆಚ್ಚವೇ ಇದರಲ್ಲಿ ಸಿಂಹಪಾಲು ಕಬಳಿಸುತ್ತದೆ. ಕೆಜಿಗೆ ಕನಿಷ್ಠ ೧೦ ರೂ. ಆದರೂ ಸಿಕ್ಕಿದರೆ ಶ್ರಮ ಸಾರ್ಥಕ ಎನ್ನುವುದು ರೈತರ ಮಾತು. ಆದರೆ, ರೈತರು ಈಗ ತಾವು ಬೆಳೆದ ಸಿಹಿ ಕುಂಬಳವನ್ನು ಕೆಜಿಗೆ ೪ರಿಂದ ೫ ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಕಾಯಿ ಸ್ವಲ್ಪ ಬಲಿತರೂ ವ್ಯಾಪಾರಿಗಳು ಖರೀದಿಸುವುದಿಲ್ಲ. ಹಾಗಾಗಿ ಹೊಲದಲ್ಲಿ ಇಟ್ಟುಕೊಳ್ಳದೆ ಮಾರುವುದು ಅನಿವಾರ್ಯ.

” ನಾವು ಪ್ರತಿ ವರ್ಷ ತಂಬಾಕು ಬೆಳೆಯುತ್ತಿದ್ದೆವು. ನಂತರ ಶುಂಠಿ ಕೂಡ ಬೆಳೆದಿದ್ದೆವು. ಈ ವರ್ಷ ಸಿಹಿ ಕುಂಬಳ ಬೆಳೆದಿದ್ದೇವೆ. ಕೆಜಿಗೆ ಕನಿಷ್ಠ ೧೦ ರೂ. ಸಿಕ್ಕಿದರೂ ಸಾಕು. ಕೇವಲ ಮೂರು ತಿಂಗಳಲ್ಲಿ ಫಸಲು ಕೈ ಸೇರುತ್ತದೆ. ಉತ್ತರದ ರಾಜ್ಯಗಳಲ್ಲಿ ಉತ್ತಮ ಬೇಡಿಕೆ ಇದೆ ಎನ್ನುವ ಮಾಹಿತಿ ಇದೆ. ಆದರೆ ಇಲ್ಲಿ ರೈತರನ್ನು ವ್ಯಾಪಾರಿಗಳು ವಂಚಿಸುತ್ತಿದ್ದಾರೆ. ಖರ್ಚು ಮಾಡಿದ ಹಣವೂ ಬಾರದೆ, ಮೊದಲ ಪ್ರಯೋಗದಲ್ಲಿ ನಮಗೆ ನಷ್ಟವಾಗಿದೆ.”

-ಶಿವಣ್ಣ, ರೈತ, ಹನಗೋಡು

 

 

Tags:
error: Content is protected !!