Light
Dark

ಜನಾಂದೋಲನಗಳೇ ಆಂದೋಲನವಾದಾಗ…

ಹತ್ತು ಹಲವು ಜನಪರ ಹೋರಾಟಗಳಿಗೆ ವೇದಿಕೆಯಾದ ‘ಆಂದೋಲನ’

-ಜಿ.ಶಿವಪ್ರಸಾದ್

೫೦ ವರ್ಷಗಳ ಯಾನದಲ್ಲಿ ‘ಆಂದೋಲನ’ ಅದೆಷ್ಟು ಚಳವಳಿಗಳಿಗೆ ಕೆಂಪುಹಾಸು ಆಯಿತು ಎಂಬುದರ ಲೆಕ್ಕ ಕಷ್ಟಸಾಧ್ಯ. ೧೯೮೦ರ ದಶಕದ ಜೆ.ಪಿ.ಚಳವಳಿ, ದಲಿತ, ರೈತ, ಕಾರ್ಮಿಕ ಚಳವಳಿಗಳು ತಾರ್ಕಿಕ ಅಂತ್ಯ ಕಾಣಲೇಬೇಕೆಂಬ ಒತ್ತಾಸೆಯಲ್ಲಿ ‘ಆಂದೋಲನ’ ಸುದ್ದಿಗಳನ್ನು ಆದ್ಯತೆಯಾಗಿ ಪ್ರಕಟಿಸುತ್ತಿತ್ತು. ಆ ಸುದ್ದಿಗಳು ಅಷ್ಟೇ ಪ್ರಬಲವಾಗಿ ಪರಿಣಾಮಕಾರಿಯಾಗಿ ಓದುಗರನ್ನು ತಲುಪುತ್ತಿದ್ದವು. ಆ ಮೂಲಕ ಓದುಗರನ್ನು ಚಳವಳಿಗಳ ಅಂಗಳಕ್ಕೆ ಬಂದು ನಿಲ್ಲುವಂತೆ ಮಾಡುತ್ತಿದ್ದವು ಎಂದರೆ ಅತಿಶಯವಾಗದು. ಒಂದು ರೀತಿಯಲ್ಲಿ ‘ಆಂದೋಲನ’ ಮತ್ತು ‘ಜನಾಂದೋಲನ’ಗಳು ಪರಸ್ಪರ ಬೆಸುಗೆಯಾಗಿದ್ದವು. ಆಂದೋಲನ ಹುಟ್ಟು ಹಾಕಿದ, ಒತ್ತಾಸೆಯಾದ ನೂರಾರು ಚಳವಳಿಗಳ ಪೈಕಿ ನೆನಪಿನ ಬುತ್ತಿಯಿಂದ ಹೆಕ್ಕಿದ ಒಂದಷ್ಟು ಹೋರಾಟ, ಚಳವಳಿಗಳ ವಿವರ ಇಲ್ಲಿದೆ.

ಜೆಪಿ ಚಳವಳಿಗೆ ತನ್ನದೇ ಕೊಡುಗೆ ನೀಡಿದ್ದ ‘ಆಂದೋಲನ’

೧೯೭೦- ೭೫ರ ಅವಧಿಯಲ್ಲಿ ಜೆಪಿ ಚಳವಳಿ ಸಂದರ್ಭದಲ್ಲಿ ‘ಆಂದೋಲನ’ ವಾರಪತ್ರಿಕೆಯಾಗಿತ್ತು. ಈ ಚಳವಳಿಗೆ ಪೂರಕವಾಗಿ ಮೈಸೂರಿನಲ್ಲಿ ನವ ನಿರ್ಮಾಣ ವೇದಿಕೆ ಸ್ಥಾಪಿಸಲಾಗಿತ್ತು. ಪ.ಮಲ್ಲೇಶ್, ದೇವನೂರ ಮಹಾದೇವ, ಪ್ರೊ.ಕೆ.ರಾಮದಾಸ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಪ್ರೊ.ಚಂದ್ರಶೇಖರ ಪಾಟೀಲ, ವೈ.ಮಹೇಶ್ ಮತ್ತಿತರರು ಸಕ್ರಿಯರಾಗಿದ್ದರು. ಬೆಂಗಳೂರಿಗೆ ಒಮ್ಮೆ ಜೆಪಿ ಚಳವಳಿ ನೇತಾರ ಜಯಪ್ರಕಾಶ್ ನಾರಾಯಣ ಅವರು ಆಗಮಿಸಿದ್ದಾಗ, ವಾರಪತ್ರಿಕೆಯಾಗಿದ್ದ ‘ಆಂದೋಲನ’ದಿಂದ ವಿಶೇಷ ಸಂಚಿಕೆ ಹೊರತರಲಾಗಿತ್ತು. ಅಷ್ಟೇ ಅಲ್ಲದೆ, ಪ.ಮಲ್ಲೇಶ್ ಮತ್ತಿತರರು ಬೆಂಗಳೂರಿಗೇ ವಿಶೇಷ ಸಂಚಿಕೆಯನ್ನು ಹೊತ್ತೊಯ್ದು ಮಾರಾಟ ಮಾಡಿದ್ದರು.

ನಂತರ ಸಮಾಜವಾದಿ ಯುವಜನ ಸಭಾ ವತಿಯಿಂದ ಜಾತಿ ವಿನಾಶ ಚಳವಳಿ ಆರಂಭಿಸಲಾಯಿತು. ಆ ಸಂದರ್ಭದಲ್ಲಿ ‘ಪತ್ರಿಕೆ’ ಈ ಚಳವಳಿಯ ಪ್ರತಿ ಸಂಗತಿಯನ್ನು ಸಾದ್ಯಂತವಾಗಿ ಪ್ರಕಟಿಸುವ ಮೂಲಕ ಕೈಜೋಡಿಸಿತ್ತು. ಮಠ-ಮಾನ್ಯಗಳಲ್ಲಿ ಜಾತಿ ವಿರುದ್ಧ ಧ್ವನಿ ಎತ್ತಿದಾಗಲೂ ಆಂದೋಲನ ಇದಕ್ಕೆ ಸಂಪೂರ್ಣ ಸಹಕಾರ ನೀಡಿತ್ತು. ಮೈಸೂರು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಜಾತಿ ವಿನಾಶ ಸಮ್ಮೇಳನ ಆಯೋಜನೆ ಮಾಡಲಾಗಿತ್ತು. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಆ ಹೊತ್ತಿಗೆ ದಿನಪತ್ರಿಕೆಯಾಗಿದ್ದ ‘ಆಂದೋಲನ’ ಸವಿಸ್ತಾರವಾಗಿ ವರದಿಯನ್ನು ಮಾಡಿತ್ತು. ಆ ಕಾಲದಿಂದಲೇ ‘ಆಂದೋಲನ’ ಜನಪರವಾಗಿ, ನ್ಯಾಯಯುತವಾದ ಸುದ್ದಿಗಳಿಗೆ ಆದ್ಯತೆ ನೀಡುತ್ತಾ, ತನ್ನದೇ ಛಾಪು ಮೂಡಿಸುವ ನಿಟ್ಟಿನಲ್ಲಿ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ಅರ್ಹನಿಶಿ ಶ್ರಮವಹಿಸಿದ್ದರು. ಇದು ಅವರನ್ನು ಹತ್ತಿರದಿಂದ ನೋಡಿರುವ ಹಾಗೂ ಅವರು ಮೈಸೂರಿಗೆ ಬರುವುದಕ್ಕೆ ಕಾರಣವಾದ ಎಲ್ಲರಿಗೂ ಗೊತ್ತಿದೆ ಎಂಬುದು ಹಿರಿಯ ಸಮಾಜವಾದಿ ಪ.ಮಲ್ಲೇಶ್ ಅವರ ಮಾತು.

 

ದಲಿತ ಚಳವಳಿಗಳಿಗೆ ಹೆಗಲು

‘ಆಂದೋಲನ’ ದಿನಪತ್ರಿಕೆಗೂ, ದಲಿತ ಚಳವಳಿಗಳಿಗೂ ಅವಿನಾಭಾವ ಸಂಬಂಧ. ನೊಂದವರು, ಶೋಷಿತರ ಮೇಲಿನ ದೌರ್ಜನ್ಯಗಳ ವಿರುದ್ಧ ದಲಿತ ಸಂಘರ್ಷ ಸಮಿತಿಯ ಗರ್ಜನೆ, ಮನೆ ಮನೆಗೂ ಮುಖ್ಯವಾಗಿ ನೊಂದವರ ತಾಣಗಳಿಗೂ ತಲುಪುತ್ತಿದ್ದುದು ‘ಪತ್ರಿಕೆ’ಯ ಮೂಲಕ ಎಂಬುದು ನಿಜ. ೧೯೮೦ರ ದಶಕದಲ್ಲಿ ದೃಶ್ಯ ಮಾಧ್ಯಮಗಳು ಇರಲಿಲ್ಲ. ಮುದ್ರಣ ಮಾಧ್ಯಮ ಇದ್ದರೂ ಈಗಿನಷ್ಟು ಸೌಲಭ್ಯಗಳಿರಲಿಲ್ಲ. ಅಂತಹ ಕಷ್ಟದಲ್ಲೂ ‘ಆಂದೋಲನ’ ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ಅವರು ದಲಿತರ ಹೋರಾಟಗಳಿಗೆ ಮುಖವಾಣಿಯಾಗಿ, ಪ್ರತಿಭಟನೆಗಳ ಸುದ್ದಿಗಳನ್ನು ಚಾಚೂತಪ್ಪದೆ ಪ್ರಕಟಿಸುತ್ತಿದ್ದರು, ಓದುಗರ ಮನೆ-ಮನೆಗಳಿಗೆ ತಲುಪಿಸುತ್ತಿದ್ದರು. ತಬ್ಬಲಿಯಾಗಿ, ಅಬ್ಬೇಪಾರಿಯಂತೆ ಶುರುವಾಗಿದ್ದ ದಲಿತ ಚಳವಳಿಯನ್ನು ಆಳುವವರ ಎದೆ ನಡುಗಿಸುವ ಅಸ್ತ್ರವಾಗಿ ರೂಪುಗೊಳಿಸಲು ಸಂಪೂರ್ಣ ಸಹಕಾರ ನೀಡುತ್ತಿದ್ದುದು ‘ಆಂದೋಲನ’ ಮತ್ತು ಅದರ ರೂವಾರಿ ‘ರಾಜಶೇಖರ ಕೋಟಿ’ ಅವರು ಎಂದು ಹೋರಾಟಗಾರ ಲಕ್ಷ್ಮಣ ಹೊಸಕೋಟೆ ಆರ್ದ್ರತೆಯಿಂದ ಸ್ಮರಿಸುತ್ತಾರೆ.

ದಲಿತ ಸಾಹಿತ್ಯ ಸೃಷ್ಟಿ ಮತ್ತು ಭೋರ್ಗರೆತಕ್ಕೆ ಕಾರಣವಾದ ಬಿ.ಬಸವಲಿಂಗಪ್ಪ ಅವರ ‘ಕನ್ನಡ ಸಾಹಿತ್ಯದಲ್ಲೇನಿದೆ? ಅದು ಬರಿ ಬೂಸಾ ಸಾಹಿತ್ಯ’ ಎಂಬ ಹೇಳಿಕೆ ಧಾತುವಾಗಿ ರೂಪಗೊಂಡ ಚಳವಳಿಯಲ್ಲಿ ‘ಪತ್ರಿಕೆ’ ಕೊಡುಗೆ ಅಪಾರವಾಗಿದೆ. ಮಾನಸಂಗೋತ್ರಿ ವಿದ್ಯಾರ್ಥಿನಿಲಯದಲ್ಲಿ ೧೯೮೦ರ ದಶಕದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳು ರಾಗಿ ಮುದ್ದೆ ಮತ್ತು ಸೊಪ್ಪಿನ ಸಾರು ಕೊಟ್ಟರೂ ಸಾಕು ಎಂದು ಆಗ್ರಹಿಸಿ ನಡೆಸಿದ ಹೋರಾಟ, ಹುಣಸೂರು ತಾಲ್ಲೂಕು ಚಿಲ್ಕುಂದ, ಎಚ್.ಡಿ.ಕೋಟೆ ತಾಲ್ಲೂಕು ಚಿಕ್ಕ ಚೀಚನಹಳ್ಳಿಯಲ್ಲಿ ಕ್ರಮವಾಗಿ ದಲಿತ ಯುವಕ ಮತ್ತು ಬಾಲಕನ ಕೊಲೆ ಪ್ರಕರಣಗಳಲ್ಲೂ ‘ಪತ್ರಿಕೆ’ ಇತ್ಯಾತ್ಮಕ ಹೋರಾಟಕ್ಕೆ ಪ್ರೇರಣೆಯಾಗಿತ್ತು.

ರೈತ ಚಳವಳಿಯೊಂದಿಗೆ ‘ಆಂದೋಲನ’ ಬೆಸುಗೆ

ರೈತ ಚಳವಳಿಯ ರೂವಾರಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರಿಗೂ ‘ಆಂದೋಲನ’ ದಿನಪತ್ರಿಕೆಗೂ ಚಳವಳಿಯ ಬೆಸುಗೆ ಇತ್ತು ೧೯೮೦-೯೦ರ ದಶಕದಲ್ಲಿ ನಂಜುಂಡಸ್ವಾಮಿ ಅವರು ರೈತರ ಪರವಾಗಿ ನಡೆಸಿದ ಪ್ರತಿ ಚಳವಳಿಗೂ ‘ಆಂದೋಲನ’ದಲ್ಲಿ ವಿಶೇಷ ಮಹತ್ವ ಇತ್ತು. ೧೯೯೦ರ ದಶಕದಲ್ಲಿ ರೈತ ವಿರೋಧಿ ಗ್ಯಾಟ್ ಒಪ್ಪಂದ ಜಾರಿಯಾದಾಗ ನಂಜುಂಡಸ್ವಾಮಿ ಅವರು ಬೃಹತ ಮಟ್ಟದಲ್ಲಿ ಚಳವಳಿ ರೂಪಿಸಿದ್ದರು. ಅದು ಸಹಜವಾಗಿ ‘ಪತ್ರಿಕೆ’ಯ ಮುಖಪುಟದಲ್ಲಿ ದಾಖಲಾಗಿತ್ತು. ಅದಲ್ಲದೆ, ರೈತರ ಜಮೀನಿಗೆ ವಿದ್ಯುತ್ ಪೂರೈಸಲು ಸರ್ಕಾರಗಳ ತಕರಾರು ಅಂತಹ ಸಂದರ್ಭಗಳಲ್ಲಿ ನಡೆದ ರೈತ ಚಳವಳಿಗೆ ಆಂದೋಲನ ಪ್ರಾಶಸ್ತತ್ಯೃ ನೀಡಿತ್ತು. ಅದರಲ್ಲಿಯೂ ಸಾಲಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗಳಲ್ಲಿ ರೈತ ವಿರೋಧಿ ನೀತಿಗಳನ್ನು ಜಾರಿಗೊಳಿಸಲಾಗಿದೆ ಎಂದು ಆರೋಪಿಸಿ ನಂಜುಂಡಸ್ವಾಮಿ ಅವರು ನಡೆಸಿದ ಬಾರುಕೋಲು ಚಳವಳಿಯೂ ‘ಆಂದೋಲನ’ದಲ್ಲಿ ದಾಖಲಾಗಿದ್ದು ವಿಶೇಷ.
೨೦೦೨ರಲ್ಲಿ ಕೆಆರ್‌ಎಸ್ ಜಲಾಶಯದಿಂದ ವರುಣ ನಾಲೆಗೆ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯ ರೈತ ಸಂಘದ ಅಧ್ಯಕ್ಷರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ನಡೆದ ಹೋರಾಟದ ಪ್ರತಿ ಹಂತದ ಬೆಳವಣಿಗೆಯನ್ನೂ ‘ಆಂದೋಲನ’ ಪ್ರಕಟಿಸುವ ಮೂಲಕ ರೈತರ ಬೆನ್ನಿಗೆ ನಿಂತಿತ್ತು.

ಕಾರ್ಮಿಕರ ಪರ ಹೋರಾಟ

‘ಆಂದೋಲನ’ ದಿನಪತ್ರಿಕೆ ಮತ್ತು ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರಿಗೆ ಕಾರ್ಮಿಕರ ಮೇಲಿನ ದೌರ್ಜನ್ಯ, ಕಾರ್ಖಾನೆ ಮಾಲೀಕರ ವಂಚನೆ ಇತ್ಯಾದಿ ವಿರುದ್ಧ ಸುದ್ದಿ ಮೂಲಕ ಹೋರಾಡುವುದು ಬದ್ಧತೆಯ ವಿಷಯವಾಗಿತ್ತು. ಮೈಸೂರು ಭಾಗದ ಯಾವುದೇ ಕಾರ್ಮಿಕರಿಗೆ ಕಾರ್ಖಾನೆಯ ಆಡಳಿತ ಮಂಡಳಿಯಿಂದ ತೊಂದರೆಯಾದರೆ, ‘ಆಂದೋಲನ’ ಯಾವುದೇ ಮುಲಾಜಿಲ್ಲದೆ ಸುದ್ದಿ ಪ್ರಕಟಿಸುತ್ತಿತ್ತು. ಕಾರ್ಮಿಕರ ಹೋರಾಟಗಳಿಗೆ ಕೋಟಿ ಅವರು ಬೆನ್ನೆಲುಬಾಗಿದ್ದರು.

ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿ ಫಾಲ್ಕನ್ ಟೈರ್ಸ್‌ ಸಂಸ್ಥೆ ಇತ್ತು. ಲಾಭದಾಯಕವಾಗಿೆುೀಂ ನಡೆಯುತ್ತಿದ್ದ ಕಾರ್ಖಾನೆಯನ್ನು ಮಾಲೀಕರು ನಷ್ಟದಲ್ಲಿದೆ ಎಂದು ಬಂದ್ ಮಾಡಿಬಿಟ್ಟರು. ಸುಮಾರು ೪೦೦ಕ್ಕೂ ಹೆಚ್ಚು ಕಾರ್ಮಿಕರು ಪ್ರತಿಭಟನೆಯ ಹಾದಿ ಹಿಡಿದರು. ಮಾಲೀಕರ ಸ್ಪಂದನೆ ಸಿಗದ್ದರಿಂದ ಹರತಾಳವನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗಕ್ಕೆ ಸ್ಥಳಾಂತರಿಸಿದರು. ಕಾರ್ಮಿಕರ ಕುಟುಂಬಗಳಲ್ಲದೆ, ಹೋರಾಟಗಾರರು, ಪ್ರಗತಿಪರರು ಕಾರ್ಮಿಕರ ಬೆಂಬಲಕ್ಕೆ ನಿಂತರು. ‘ಆಂದೋಲನ’ ದಿನಪತ್ರಿಕೆಯು ನಿರಂತರವಾಗಿ ಕಾರ್ಮಿಕರಿಗಾಗಿರುವ ಅನ್ಯಾಯದ ಬಗೆಗಿನ ಸುದ್ದಿಗಳನ್ನು ಪ್ರಕಟಿಸಿತು.
ನೂರಕ್ಕೂ ಹೆಚ್ಚು ದಿನಗಳ ಕಾಲ ನಡೆದ ಪ್ರತಿಭಟನೆಯ ಕಾವು, ಅದಕ್ಕೆ ‘ಪತ್ರಿಕೆ’ ಸೇರಿದಂತೆ ಸಾರ್ವಜನಿಕರ ಬೆಂಬಲ ಸಿಕ್ಕಿದ ಪರಿಗೆ, ಮಾಲೀಕರು ಮಣಿದರು. ಷರತ್ತುಗಳೊಂದಿಗೆ ಕಾರ್ಖಾನೆಯನ್ನು ಪುನಾರಂಭಿಸಿದರು. ಆದರೆ, ಕೆಲ ತಿಂಗಳುಗಳ ಕಾಲ ಮಾತ್ರ ನಡೆದ ಕಾರ್ಖಾನೆ ನಂತರ ಶಾಶ್ವತವಾಗಿ ಬಂದ್ ಆಯಿತು.

ಕಾವೇರಿ ಚಳವಳಿಯಲ್ಲಿ ‘ಆಂದೋಲನ’ದ ಸಹಭಾಗಿತ್ವ

ಕನ್ನಡ ನೆಲ, ಜಲ, ಭಾಷೆಗೆ ತೊಂದರೆ ಎದುರಾದ ಸಂದರ್ಭಗಳಲ್ಲಿ ನಡೆದ ಪ್ರತಿೊಂಂದು ಚಳವಳಿಗೂ ‘ಆಂದೋಲನ’ ತನ್ನದೇ ಆದ ರೀತಿಯಲ್ಲಿ ಕೈಜೋಡಿಸುತ್ತಿತ್ತು. ೧೯೯೨ರಲ್ಲಿ ತಮಿಳುನಾಡಿಗೆ ನೀರು ಹರಿಸಬೇಕು ಎಂದು ಕಾವೇರಿ ನ್ಯಾಯ ಮಂಡಳಿ ತೀರ್ಪು ನೀಡಿತ್ತು. ಇಡೀ ರಾಜ್ಯವೇ ತೀರ್ಪಿನ ವಿರುದ್ಧ ಸೆಟೆದು ನಿಂತಿತ್ತು. ಅದರಲ್ಲಿಯೂ ವಿಶೇಷವಾಗಿ ಮೈಸೂರು ಭಾಗದಲ್ಲಿ ರೈತರ ಆಕ್ರೋಶ ಭುಗಿಲೆದ್ದಿತು. ಕಾವೇರಿ ಪರ ಚಳವಳಿಗಾರರು, ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯನ್ನು ದಾಖಲಿಸಿದವು.

ಗಲಾಟೆ ವ್ಯಾಪಕವಾಗಿದ್ದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು. ಇಂತಹ ಸಂದರ್ಭದಲ್ಲಿ ನಂಜನಗೂಡು ಸೇತುವೆ ಬಳಿ ನಿಲ್ಲಿಸಲಾಗಿದ್ದ ತಮಿಳುನಾಡಿನ ೧೮ ಲಾರಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಅಲ್ಲದೆ, ಹಲವೆಡೆ ತಮಿಳಿಗರ ಅಂಗಡಿ- ಮುಂಗಟ್ಟಗಳ ಮೇಲೆ ದಾಳಿ ನಡೆದಿತ್ತು. ಇಂತಹ ಅಮಾನವೀಯ ಘಟನೆಗಳನ್ನು ‘ಆಂದೋಲನ’ ಯಾವುದೇ ಮುಲಾಜಿಲ್ಲದೆ ವರದಿ ಮಾಡುವ ಮೂಲಕ ವೃತ್ತಿಪರತೆಯನ್ನು ಸಾಬೀತುಪಡಿಸಿತ್ತು.

ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಟದಲ್ಲಿ ‘ಆಂದೋಲನ’ದ ಗುರುತು

‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ಬಹುಶಃ ‘ಆಂದೋಲನ ಸ್ಪಂದಿಸದ ಚಳವಳಿಗಳೇ ಇಲ್ಲ’ ಎನ್ನಬಹುದು. ನಗರ ಪ್ರದೇಶದಿಂದ ದೂರವಾಗಿ ಕಾಡನ್ನೇ ನಂಬಿಕೊಂಡಿರುವ ಆದಿವಾಸಿಗಳ ಹಕ್ಕುಗಳ ಹೋರಾಟಕ್ಕೂ ‘ಪತ್ರಿಕೆ’ ಕೈಜೋಡಿಸಿದೆ. ಅವರಿಗೆ ಮೂಲ ಸೌಕರ್ಯಗಳಿರಬಹುದು, ಶಿಕ್ಷಣ, ಪುನರ್ವಸತಿ ೋಂಜನೆಗಳು ಇತ್ಯಾದಿಯಲ್ಲಿ ಅನ್ಯಾಯವಾದಾಗ ‘ಪತ್ರಿಕೆ’ ಅವರ ಸುದ್ದಿಗಳನ್ನು ಆಮೂಲಾಗ್ರವಾಗಿ ಪ್ರಕಟಿಸುವ ಮೂಲಕ ಬದ್ಧತೆಯನ್ನು ಪ್ರದರ್ಶಿಸಿದೆ.
ನಾಗರಹೊಳೆ ಅಭಯಾರಣ್ಯದಲ್ಲಿ ತಲೆೆುಂತ್ತಿದ ತಾಜ್ ಹೋಟೆಲ್ ವಿರುದ್ಧದ ಹೋರಾಟ, ಕಾಡಿನ ಹಕ್ಕಿಗಾಗಿ ಹೋರಾಟಗಳಲ್ಲಿ ಗಿರಿಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ‘ಆಂದೋಲನ’ ಸುದ್ದಿಗಳನ್ನು ಪ್ರಕಟಿಸಿತ್ತು. ೧೯೯೫ರ ನವೆಂಬರ್ ೧೮ರಿಂದ ೨೨ರ ಮಧ್ಯೆ ಗಿರಿಜನರು ತಮ್ಮ ಹಕ್ಕುಗಳಿಗಾಗಿ ಕಾಡಿಗೆ ನುಗ್ಗಿ ಹೋರಾಟ ಆರಂಭಿಸಿದ್ದರು. ಈ ಸಂಬಂಧ ಸುದ್ದಿಯನ್ನು ‘ಆಂದೋಲನ’ ಮುಖಪುಟದಲ್ಲಿ ಅಗ್ರ ಸುದ್ದಿಯಾಗಿ ಪ್ರಕಟಿಸಿತ್ತು. ೧೯೮೭ರಲ್ಲಿ ಹನುಗೋಡಿನಿಂದ ಪ್ರಾರಂಭವಾದ ‘ಸಾಲುಮರ ಉಳಿಸಿ’ ಹೋರಾಟಗಳಲ್ಲೂ ‘ಪತ್ರಿಕೆ’ಯಿಂದ ದೊಡ್ಡಮಟ್ಟದ ಸಹಕಾರ ದೊರೆತಿತ್ತು.

‘ಮಾನಿನಿ’ಯರ ಹೋರಾಟಕ್ಕೆ ‘ಆಂದೋಲನ’ದ ಆಯುಧ

೧೯೮೦ ದಶಕದಲ್ಲಿ ದಲಿತ ಚಳವಳಿ, ರೈತ ಚಳವಳಿ ಉತ್ತುಂಗದಲ್ಲಿದ್ದಾಗಲೇ ಮಹಿಳಾ ಚಳವಳಿಯೂ ಹೆಚ್ಚು ಸಕ್ರಿಯವಾಗಿತ್ತು. ಮೈಸೂರಿನಲ್ಲಿ ಸಮತಾ ವೇದಿಕೆ ನಡೆಸುತ್ತಿದ್ದ ಪ್ರತಿಯೊಂದು ಮಹಿಳಾ ಪರ ಹೋರಾಟಕ್ಕೂ ‘ಆಂದೋಲನ’ ದಿನಪತ್ರಿಕೆ, ಸುದ್ದಿಗಳು, ಲೇಖನಗಳು ಮತ್ತು ಸಂಪಾದಕೀಯದ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುತ್ತಿತ್ತು.

ಡಾ.ವಿಜಯಾ ದಬ್ಬೆ ಅವರು ಬರೆಯುತ್ತಿದ್ದ ‘ನಿಲ್ಲು ನಿಲ್ಲಲೇ ನೋಟ’ ಅಂಕಣದ ಮೂಲಕ ‘ಆಂದೋಲನ’ ಮಹಿಳಾ ಪರ ಸಂವೇದನೆಯನ್ನು ಸ್ಛುರಿಸುತ್ತಿತ್ತು. ಹಾಲತಿ ಸೋಮಶೇಖರ್ ಅವರು ಬರೆಯುತ್ತಿದ್ದ ಮಹಿಳಾ ಪರ ಸರಣಿ ಲೇಖನಗಳು ದೌರ್ಜನ್ಯ, ಕಿರುಕುಳಗಳಿಂದ ಸಂತ್ರಸ್ತರಾದ ಮಹಿಳೆಯರಿಗೆ ಮಾನಸಿಕ ಧೈರ್ಯ ತುಂಬುತ್ತಿದ್ದವು. ವಿಶ್ವ ಮಹಿಳಾ ದಿನಾಚರಣೆ ಕುರಿತು, ಸಮತಾ ವೇದಿಕೆ ಹಮ್ಮಿಕೊಳ್ಳುತ್ತಿದ್ದ ಮಹಿಳಾ ಪರ ಕಾರ್ಯಕ್ರಮಗಳ ಬಗ್ಗೆ ‘ಆಂದೋಲನ’ದಲ್ಲಿ ವಿಶೇಷವಾಗಿ ಲೇಖನ ಅಥವಾ ಸುದ್ದಿಗಳು ಪ್ರಕಟವಾಗುತ್ತಿದ್ದವು. ಇದೊಂದು ರೀತಿಯಲ್ಲಿ ಮಹಿಳೆಯರು ಸಂಘಟಿತರಾಗಲು, ತಮ್ಮ ಹಕ್ಕುಗಳಿಗಾಗಿ ಹೋರಾಡಲು ಪ್ರೇರಣಾ ಶಕ್ತಿಯಾಗಿತ್ತು.

ಇನ್ನು ಮಾನವ ಸಾಗಾಣಿಕೆಗೆ ಸಿಲುಕಿದ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪುನರ್ವಸತಿ ಕೇಂದ್ರವಾದ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಹುಟ್ಟು, ಬೆಳವಣಿಗೆ, ನೋವು- ನಲಿವು ಎಲ್ಲದರಲ್ಲೂ ‘ಆಂದೋಲನ’ದ ಸ್ಪರ್ಶ ಇದೆ ಎಂದರೆ ತಪ್ಪಾಗದು. ಒಡನಾಡಿಯ ಕಾರ್ಯಕ್ರಮಗಳು, ಅದಕ್ಕಿಂತ ಮುಖ್ಯವಾಗಿ ವೇಶ್ಯಾವಾಟಿಕೆ ಮೇಲೆ ಸಂಸ್ಥೆ ನಡೆಸುತ್ತಿದ್ದ ದಾಳಿ, ಸಂತ್ರಸ್ತ ಮಹಿಳೆಯರ ರಕ್ಷಣೆ ಅಂತಹ ವಿಷಯಗಳು ‘ಪತ್ರಿಕೆ’ಯಲ್ಲಿ ಇತರ ಎಲ್ಲ ಪತ್ರಿಕೆಗಳಿಗಿಂತ ಹೆಚ್ಚು ಆದ್ಯತೆ ಇರುತ್ತಿತ್ತು. ಒಡನಾಡಿಯಲ್ಲಿ ಸರಳ ವಿವಾಹ, ಅಂತರ್ಜಾತಿ ಮದುವೆ ಇತ್ಯಾದಿ ಎಲ್ಲಕ್ಕೂ ‘ಆಂದೋಲನ’ದಲ್ಲಿ ಆದ್ಯತೆ ಮೇರೆಗೆ ಜಾಗ ಕೊಡುವುದು ನಿಯಮವೆಂಬಂತೆ ಆಗಿತ್ತು.

ಒಡನಾಡಿಯಂತಹ ಮಾನವೀಯ ಸಂಸ್ಥೆಯ ಆರಂಭಕ್ಕೆ ಹೇತುವಾದದ್ದು ಕೂಡ ‘ಆಂದೋಲನ’ ಎಂಬುದು ಗಮನಾರ್ಹ. ಸುಮಾರು ೩೦ ವರ್ಷಗಳ ಹಿಂದೆ ‘ಆಂದೋಲನ’ದ ಹಾಡುಪಾಡು ಜವಾಬ್ದಾರಿ ನಿರ್ವಹಿಸುತ್ತಿದ್ದ ರಾಮಸ್ವಾಮಿ (ರಾಮು) ಸರ್, ಒಡನಾಡಿಯ ಸ್ಥಾಪಕರಾದ ಸ್ಟ್ಯಾನ್ಲಿ ಪರಶು ಅವರಿಗೆ ಮೈಸೂರಿನ ಜಟಕಾಗಾಡಿಗಳ ಬಗ್ಗೆ ಲೇಖನ ಬರೆದುಕೊಡಿ ಎಂದು ಒತ್ತಾಯಿಸಿದ್ದರಂತೆ, ಹಾಗಾಗಿ ಕುದುರೆಗಾಡಿಗಳ ಬೆನ್ನುಬಿದ್ದ ಇವರಿಗೆ, ಅನಿರೀಕ್ಷಿತವಾಗಿ ‘ಕೆಂಪುದೀಪ’ದಡಿ ಮೈಮಾರಿಕೊಂಡು ಪುರುಷರ ಲೈಂಗಿಕ ದಾಹ ನೀಗಿಸುವ ‘ಮಾನಿನಿ’ಯರ ಕರಾಳ ಬದುಕಿನ ಪರಿಚಯವಾಯಿತು. ಅದನ್ನು ‘ಆಂದೋಲನ’ದಲ್ಲಿ ಈ ಬಗ್ಗೆ ಸುದ್ದಿ ಪ್ರಕಟವಾಗಿದ್ದೇ, ಒಡನಾಡಿ ಸಂಸ್ಥೆಯ ಆರಂಭಕ್ಕೆ ಶಂಕುಸ್ಥಾಪನೆಯಾಯಿತು ಎಂಬುದಾಗಿ ಸ್ಟ್ಯಾನ್ಲಿ- ಪರಶು ಅವರೇ ಹೇಳಿಕೊಂಡಿದ್ದಾರೆ. ಇದಲ್ಲದೆ, ಅನಾಥ ಮಕ್ಕಳ ಆಶ್ರಯತಾಣವಾದ ಆರ್‌ಎಲ್‌ಎಚ್‌ಪಿ ಸಂಸ್ಥೆಯ ಎಲ್ಲ ಚಟುವಟಿಕೆಗಳಿಗೂ ‘ಆಂದೋಲನ’ದಲ್ಲಿ ಜಾಗ ಖಾಯಂ ಆಗಿತ್ತು.

ಎಂ.ಜಿ.ರಸ್ತೆ ಮಾರುಕಟ್ಟೆಗೆ ‘ಆಂದೋಲನ’ದ ರಟ್ಟೆ

ಮೈಸೂರಿನ ಎಂ.ಜಿ.ರಸ್ತೆ (ಮಹಾತ್ಮಗಾಂಧಿ ಜೋಡಿ ರಸ್ತೆ)ಯಲ್ಲಿ ದಸರಾ ವಸ್ತುಪ್ರದರ್ಶನದ ಎದುರು ಇರುವ ಮಾರುಕಟ್ಟೆ ಅಸ್ತಿತ್ವದಲ್ಲಿ ‘ಆಂದೋಲನ’ ದಿನಪತ್ರಿಕೆಯ ಪಾತ್ರ ಮಹತ್ವದ್ದಾಗಿದೆ. ಪಾರಂಪರಿಕ ಕಟ್ಟಡ ಲ್ಯಾನ್ಸ್‌ಡೌನ್ ಬಳಿ ರಸ್ತೆಬದಿ ವ್ಯಾಪಾರ ಮಾಡುತ್ತಿದ್ದವರಿಗೆ ಪೊಲೀಸರು ಮತ್ತು ಬಡ್ಡಿ ಲೇವಾದೇವಿದಾರರ ದಬ್ಬಾಳಿಕೆ ಅತಿಯಾಗಿತ್ತು. ಒಮ್ಮೆ ಪೊಲೀಸ್ ಒಬ್ಬರು ವ್ಯಾಪಾರಸ್ಥ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದರು. ಲ್ಯಾನ್ಸ್‌ಡೌನ್ ಕಟ್ಟಡದಲ್ಲಿೆುೀಂ ದಲಿತ ಸಂಘರ್ಷ ಸಮಿತಿ ಕಚೇರಿ ಇದ್ದು, ಇದನ್ನೆಲ್ಲ ಗಮನಿಸಿತ್ತು. ವ್ಯಾಪಾರಿಗಳಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ೧೯೯೫ರಲ್ಲಿ ರಸ್ತೆಬದಿ ವ್ಯಾಪಾರಿಗಳ ದಸಂಸ ಶಾಖೆಯನ್ನು ಅಸ್ತಿತ್ವಕ್ಕೆ ತರಲಾಯಿತು. ಆಗಿನಿಂದಲೂ ವ್ಯಾಪಾರಿಗಳ ಬೆನ್ನಿಗೆ ದಸಂಸ ಶಕ್ತಿಯಾಗಿ ನಿಂತಿತು.
ಲ್ಯಾನ್ಸ್‌ಡೌನ್ ಕಟ್ಟಡಕ್ಕೆ ಕಾಯಕಲ್ಪ ನೀಡುವುದು ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಮತ್ತು ಮಹಾನಗರಪಾಲಿಕೆ ಒಟ್ಟಾಗಿ ಅಲ್ಲಿಂದ ರಸ್ತೆಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿಬಿಟ್ಟರು. ತಾತ್ಕಾಲಿಕವಾಗಿ ಕಾಡಾ ಕಚೇರಿ ಎದುರು ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ೨೦೦೦ನೇ ಇಸವಿಯಲ್ಲಿ ನಗರಪಾಲಿಕೆಯು ಅಲ್ಲಿಂದಲೂ ಸ್ಥಳಾಂತರಿಸಿ, ದಸರಾ ವಸ್ತುಪ್ರದರ್ಶನದ ಎದುರು ಇರುವ ಕೊಳಚೆ ಪ್ರದೇಶವಾಗಿದ್ದ ದೊಡ್ಡಕೆರೆ ಮೈದಾನದಲ್ಲಿ ವ್ಯಾಪಾರ ಮಾಡಿಕೊಳ್ಳುವಂತೆ ಸೂಚಿಸಿತು. ಆ ಜಾಗವನ್ನು ವ್ಯಾಪಾರಿಗಳು ದಸಂಸ ನೇತೃತ್ವದಲ್ಲಿ ‘ಆಂದೋಲನ’ ದಿನಪತ್ರಿಕೆ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ಅವರ ಬೆಂಬಲದಿಂದ ಸ್ವಚ್ಛಗೊಳಿಸಿ ಮೈದಾನವಾಗಿ ಸಿದ್ಧಪಡಿಸಿದರು.

ಅಲ್ಲಿ ಕುಡಿಯುವ ನೀರಿನ ಸೌಲಭ್ಯವೂ ಇರಲಿಲ್ಲ. ರಾಜಶೇಖರ ಕೋಟಿ ಅವರು ಸ್ವಂತ ಹಣದಿಂದ ಬೋರ್‌ವೆಲ್ ಕೊರೆಸಿದರು. ನಂತರ ರಸ್ತೆಬದಿ ವ್ಯಾಪಾರಿಗಳಿಗೆ ಈ ನೆಲೆಂನ್ನು ಖಾಯಂಗೊಳಿಸುವ ನಿಟ್ಟಿನಲ್ಲಿ ದಸಂಸ ಮತ್ತು ‘ಆಂದೋಲನ’ ಜೊತೆ ಜೊತೆಗೇ ಹೋರಾಟ ನಡೆಸಿದವು. ಮಾರುಕಟ್ಟೆ ಇರುವ ಸಾರ್ವಜನಿಕ ಜಾಗವನ್ನು ಕಬಳಿಸಲು ಭೂಮಾಫಿಯ ಷಡ್ಯಂತ್ರ ಆರಂಭಿಸಿತ್ತು. ಅದನ್ನು ಬಗ್ಗುಬಡಿಯಲು ದಸಂಸ, ಪ್ರಗತಿಪರರ ಜೊತೆ ಹೋರಾಟ ನಡೆಸಿದರು. ಆ ಎಲ್ಲ ಹೋರಾಟಗಳನ್ನೂ ‘ಆಂದೋಲನ’ ಎಳೆಎಳೆಯಾಗಿ ವರದಿ ಮಾಡುವ ಮೂಲಕ ಭೂಮಾಫಿಯಾದ ಕಾಣದ ಕೈಗಳನ್ನು ಕಟ್ಟಿಹಾಕಿತ್ತು. ಮಾರುಕಟ್ಟೆ ಜಾಗದ ಮಾಲೀಕತ್ವದ ವ್ಯಾಜ್ಯ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದು, ಈ ಸ್ಥಳ ಸರ್ಕಾರದ್ದು ಎಂದು ಆದೇಶ ನೀಡಿದೆ.

ಆದರೆ, ಭೂಮಾಫಿಯಾ ಗ್ಯಾಂಗ್ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ದಸಂಸ ಕೂಡ ಅದನ್ನು ಎದುರಿಸುತ್ತಿದೆ. ಈ ಎಲ್ಲ ಹೋರಾಟಗಳಲ್ಲೂ ‘ಆಂದೋಲನ’ ದಿನಪತ್ರಿಕೆಯು ಬಹುಮುಖ್ಯ ಪಾತ್ರವಹಿಸಿದೆ ಎಂಬುದು ದಸಂಸದ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಅವರ ಅಂತರಂಗದ ಮಾತು.
ಮಣಿವಣ್ಣನ್ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಈ ಜಾಗದಲ್ಲಿ ರೈತರ ಸಂತೆ ಆರಂಭಿಸುವ ಪ್ರಯತ್ನ ಮಾಡಿದ್ದರು. ವ್ಯಾಪಾರಿಗಳಿಗೆ ಬಿಸಿಲು, ಮಳೆಯಿಂದ ರಕ್ಷಣೆ ಸಿಗಲೆಂಬ ಉದ್ದೇಶದಿಂದ ಶೆಲ್ಟರ್‌ಗಳ ನಿರ್ಮಾಣಕ್ಕಾಗಿ ಮುಡಾದಿಂದ ೨೫ ಲಕ್ಷ ರೂ.ಗಳನ್ನೂ ಮಂಜೂರು ಮಾಡಲಾಗಿತ್ತು. ಈ ಬಗ್ಗೆ ಕೂಡ ‘ಆಂದೋಲನ’ ವಿಸ್ತ್ತ್ಯೃತ ವರದಿಗಳನ್ನು ಪ್ರಕಟಿಸಿ ಸಹಕಾರ ನೀಡಿತ್ತು. ಶೆಲ್ಟರ್‌ಗಳು ನಿರ್ಮಾಣವಾದವು.

ಕೊನೆ ಹಂತದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಆದೇಶ ಹೊರಬಿದ್ದಿತು. ನಂತರ ಆ ವಿಚಾರ ನೆನೆಗುದಿಗೆ ಬಿತ್ತು. ಈ ಮಾರುಕಟ್ಟೆ ವ್ಯಾಪಾರಿಗಳು ಸಹಕಾರ ಸಂಘವನ್ನು ಸ್ಥಾಪನೆ ಮಾಡಿದ್ದು, ಆರಂಭಿಕ ಬಂಡವಾಳವಾಗಿ ರಾಜಶೇಖರ ಕೋಟಿ ಅವರು ೨೫,೦೦೦ ರೂ., ನಿವೃತ್ತ ಮೇಜರ್ ಜನರಲ್ ಎಸ್.ಜಿ.ಒಂಬತ್ಕೆರೆ ಅವರು ೧೦,೦೦೦ ರೂ. ನೀಡಿದ್ದರು. ಈ ಸಹಕಾರ ಸಂಘ ಈಗ ವಾರ್ಷಿಕವಾಗಿ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದೆ.

ಚಾಮುಂಡಿಬೆಟ್ಟ ಗಟ್ಟಿಗೊಳಿಸೋಣ ಅಭಿಯಾನ ‘ಪತ್ರಿಕೆ’ಯ ಪಾತ್ರ

ಮೈಸೂರಿನ ಹಿರಿಮೆಯಾದ ಚಾಮುಂಡಿಬೆಟ್ಟ ಕುಸಿಯುವ ಮೂಲಕ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಕೇವಲ ೧೫ ದಿನಗಳ ಅಂತರದಲ್ಲಿ ಮೂರು ಬಾರಿ ಕುಸಿತ ಕಂಡ ಬೆಟ್ಟವನ್ನು ಉಳಿಸುವ ಅನಿವಾರ್ಯತೆ ಅರಿತ ‘ಆಂದೋಲನ’ ದಿನಪತ್ರಿಕೆ ವತಿಯಿಂದ ಬೆಟ್ಟದಲ್ಲಿರುವ ಬಾಲಕಿಯರ ಟಿ.ಎಸ್.ಸುಬ್ಬಣ್ಣ ಪ್ರೌಢಶಾಲೆಯಲ್ಲಿ ಪರಿಸರ ತಜ್ಞರು, ಪರಿಸರವಾದಿಗಳು, ಭೂ ವಿಜ್ಞಾನಿಗಳು ಮತ್ತು ಸಾರ್ವಜನಿಕರೊಂದಿಗೆ ಸಂವಾದ ಏರ್ಪಡಿಸಿತ್ತು. ಬೆಟ್ಟದಲ್ಲಿ ರಾಜ್ಯ ಸರ್ಕಾರ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳೂ ಈ ಕುಸಿತಕ್ಕೆ ಕಾರಣ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ‘ಚಾಮುಂಡಿಬೆಟ್ಟ ಗಟ್ಟಿಗೊಳಿಸೋಣ ಬನ್ನಿ’ ಅಭಿಯಾನವನ್ನೂ ಹಮ್ಮಿಕೊಂಡು, ೧೦ ದಿನಗಳು ಅಭಿಯಾನ ನಡೆಸಿತು. ಮೈಸೂರು ಅರಸರ ಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಒಳಗೊಂಡಂತೆ ಸಹಿ ಆಂದೋಲನವನ್ನೂ ನಡೆಸಲಾಯಿತು. ಸಮರ್ಪಕ ನಿರ್ವಹಣೆ ಇಲ್ಲದ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಕೆರೆ, ಕಟ್ಟೆಗಳ ಜಲಮೂಲಕ್ಕೂ ಧಕ್ಕೆ ಉಂಟಾಗಿರುವ ಆತಂಕವನ್ನು ಇಟ್ಟುಕೊಂಡು ಈ ಎಲ್ಲ ಸುದ್ದಿಗಳನ್ನು ‘ಆಂದೋಲನ’ ವಿಸ್ತ್ತ್ಯೃತವಾಗಿ ವರದಿ ಮಾಡಿತ್ತು.

ಎನ್‌ಟಿಎಂ ಶಾಲೆ ಉಳಿಸಿ ಹೋರಾಟಕ್ಕೆ ಶಕ್ತಿ

ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಕನ್ನಡ ಮಾಧ್ಯಮದ ಸರ್ಕಾರಿ ಮಹಾರಾಣಿ ಮಾದರಿ (ಎನ್‌ಟಿಎಂ) ಹಿರಿಯ ಪ್ರಾಥಮಿಕ ಶಾಲೆ ಸುಮಾರು ೧೦೦ಕ್ಕೂ ಹೆಚ್ಚು ವರ್ಷಗಳಷ್ಟು ಹಿಂದಿನದ್ದಾಗಿದೆ. ಸ್ವಾಮಿ ವಿವೇಕಾನಂದರ ೧೫೦ನೇ ವರ್ಷದ ಜಯಂತಿ ಅಂಗವಾಗಿ ವಿವೇಕ ಸ್ಮಾರಕ ನಿರ್ಮಿಸಲು ರಾಮಕೃಷ್ಣ ಆಶ್ರಮಕ್ಕೆ ಎನ್‌ಟಿಎಂ ಶಾಲೆ ಸೇರಿದಂತೆ ೩೬,೦೦೦ ಚದರಡಿ ಜಾಗವನ್ನು ಹಸ್ತಾಂತರಿಸಲು ೨೦೧೩ರಲ್ಲಿ ಅಂದಿನ ಯಡಿಯೂರಪ್ಪ ಸರ್ಕಾರ ಆದೇಶ ನೀಡಿತ್ತು. ಶತಮಾನ ಕಂಡ ಕನ್ನಡ ಮಾಧ್ಯಮ ಶಾಲೆಯನ್ನು ಸಮೀಪದ ಸರ್ಕಾರಿ ಶಾಲೆಯಲ್ಲಿ ವಿಲೀನಗೊಳಿಸಲು ಕೂಡ ಸೂಚಿಸಲಾಗಿತ್ತು. ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚುವುದಕ್ಕೆ ಆದೇಶಿಸಿದ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು, ಪ್ರಗತಿಪರರು ಹೋರಾಟಕ್ಕೆ ಮುಂದಾದರು. ಅದಕ್ಕೆ ಬೆನ್ನೆಲುಬಾಗಿ ನಿಂತದ್ದು ‘ಆಂದೋಲನ’ ದಿನಪತ್ರಿಕೆ.

ಬೇರೆ ಯಾವುದೇ ಪತ್ರಿಕೆಗಳಿಗಿಂತ ನಿಖರ ಹಾಗೂ ಸವಿಸ್ತಾರವಾದ ಸುದ್ದಿಯನ್ನು ಪ್ರಕಟಿಸುವುದು ‘ಆಂದೋಲನ’ದ ಆದ್ಯತೆಯಾಗಿತ್ತು. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕಾಗಿ ಅನೇಕ ಕಾರ್ಯಕ್ರಮಗಳು, ಯೋಜನೆಗಳನ್ನು ‘ಪತ್ರಿಕೆ’ ವತಿಯಿಂದ ರೂಪಿಸಲಾಗಿದ್ದು ಗಮನಾರ್ಹ. ಎನ್‌ಟಿಎಂ ಶಾಲೆ ಉಳಿಸುವ ಹೋರಾಟ ಇಷ್ಟು ದೂರ ಸಾಗಿ ಬಂದಿರುವುದರಲ್ಲಿ ಕನ್ನಡ ಪರ ಹೋರಾಟಗಾರರ ಜೊತೆಗೆ ‘ಪತ್ರಿಕೆ’ಯ ಬಡಮಕ್ಕಳ ಪರವಾದ ಕಾಳಜಿಯೂ ಪ್ರಮುಖವಾಗಿದೆ.

ಹೆಲಿಟೂರಿಸಂ ವಿರುದ್ಧ ಜನಶಕ್ತಿ ಸಂಘಟನೆ

೨೦೨೧ರ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಮೈಸೂರಿನಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲು ಲಲಿತ ಮಹಲ್ ಹೋಟೆಲ್ ಎದುರು ಹಸಿರು ಹೊಂದಿಕೆಯಂತಿದ್ದ ಸಾವಿರಾರು ಮರಗಳ ಬುಡಕ್ಕೆ ಕೊಡಲಿ ಪೆಟ್ಟು ನೀಡಲು ಪ್ರವಾಸೋದ್ಯಮ ಇಲಾಖೆ ಸದ್ದಿಲ್ಲದೇ ಕ್ರಿಯಾೋಂಜನೆಯನ್ನು ಸಿದ್ಧಪಡಿಸಿಕೊಂಡಿತ್ತು.ಇದಕ್ಕೆ ಅರಣ್ಯ ಇಲಾಖೆಯೂ ಸಾಥ್ ನೀಡಿತ್ತು.

ಮರಗಳ ಹನನಕ್ಕೆ ಸಿದ್ಧವಾಗಿದ್ದ ಗೌಪ್ಯ ಕ್ರಿಯಾೋಂಜನೆ ಸಾರ್ವಜನಿಕರ ಮುಂದೆ ತೆರೆದುಕೊಳ್ಳುವಂತೆ ಮಾಡಿದ ಆಂದೋಲನ, ಸರಣಿ ಲೇಖನಗಳನ್ನು ಪ್ರಕಟಿಸುವ ಮೂಲಕ ಮರಗಳ ರಕ್ಷಣೆಗೆ ಮುಂದಾಗಿತ್ತು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಮೈಸೂರಿನ ಜನತೆ ಹಾಗೂ ಪರಿಸರ ಪ್ರೇಮಿಗಳು, ಪ್ರಗತಿಪರರು ಮರಗಳ ರಕ್ಷಣೆಗೆ ಮುಂದಾಗಿ ಹೋರಾಟಗಳನ್ನು ಆರಂಭಿಸಲು ‘ಆಂದೋಲನ’ ದಿನಪತ್ರಿಕೆ ವೇದಿಕೆಯಾಯಿತು.

‘ಆಂದೋಲನ’ ದಿನಪ್ರತಿಕೆಯು ಪ್ರಕಟಿಸಿದ ವರದಿಗಳನ್ನು ಗಮನಿಸಿದ ನಟ ಡಾಲಿ ಧನಂಜಯ್, ದುನಿಯಾ ವಿಜಯ್, ಸಂಸದ ಪ್ರತಾಪ್ ಸಿಂಹ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಸೇರಿದಂತೆ ಸಾಕಷ್ಟು ಗಣ್ಯರು ವಿರೋಧ ವ್ಯಕ್ತಪಡಿಸಿ ಮರಗಳ ಉಳಿವಿಗಾಗಿ ‘ಆಂದೋಲನ’ದೊಂದಿಗೆ ಕೈಜೋಡಿಸಿದರು. ಬಳಿಕ ಮರಗಳನ್ನು ಉಳಿಸುವ ವಿಚಾರವಾಗಿ ಮೈಸೂರಿನಲ್ಲಿ ಆನ್‌ಲೈನ್ ಮೂಲಕ ಸಹಿಸಂಗ್ರಹ ಅಭಿಯಾನವನ್ನೂ ಆರಂಭಿಸಿದ್ದು, ಲಕ್ಷಾಂತರ ಜನರು ಮರಗಳ ಉಳಿವಿಗೆ ಸಹಿಗಳನ್ನು ನೀಡುವ ಮೂಲಕ ಬೆಂಬಲ ಸೂಚಿಸಿದರು. ಇದರ ಫಲವಾಗಿ ಮರಗಳ ಹನನದ ವಿಚಾರವನ್ನು ಪ್ರವಾಸೋದ್ಯಮ ಇಲಾಖೆ ಕೈಬಿಡುವಂತಾಗಿದ್ದು, ನೂರಾರು ಮರಗಳು ಇಂದಿಗೂ ನಳನಳಿಸುತ್ತಿವೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ