-ಅನಿಲ್ ಅಂತರಸಂತೆ
ನಾಲ್ಕು ಜಲಾಶಯಗಳನ್ನು ಹೊಂದಿದ ಹಿರಿಮೆ ಹೆಗ್ಗಡದೇವನಕೋಟೆ ತಾಲ್ಲೂಕಿನದು. ಆದರೆ ಈ ಜಲಾಶಯಗಳು ಪ್ರವಾಸೋದ್ಯಮಕ್ಕೆ ಹೆಚ್ಚು ಅನುಕೂಲವಾಗಿದೆಯೇ ಹೊರತು ತಾಲ್ಲೂಕಿನ ಪೂರ್ಣ ಭಾಗಕ್ಕೆ ನೀರಿನಾಸರೆಯಾಗಿಲ್ಲ. ತಾಲ್ಲೂಕಿನ ಬಹುಭಾಗ ಈಗಲೂ ಮಳೆ ನೀರನ್ನೇ ಆಶ್ರಯಿಸಿದೆ. ಆದರೆ ಫಲವತ್ತಾದ ಕೆಂಪು ಮತ್ತು ಕಪ್ಪು ಮಣ್ಣು ಹಿಂದಿನಿಂದಲೂ ಇಲ್ಲಿನ ಜನರ ಕೈ ಹಿಡಿದಿದೆ.
ತಾಲ್ಲೂಕಿನಲ್ಲಿ ಆಹಾರ ಬೆಳೆಗಳ ಜೊತೆಗೆ ರೈತರು ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಈ ಪೈಕಿ ಹತ್ತಿ, ಜೋಳ, ಶುಂಠಿ ಬೆಳೆಗಳು ಮಹತ್ವ ಪಡೆದುಕೊಂಡಿವೆ. ತೀರಾ ಇತ್ತೀಚಿನವರೆಗೂ ಹತ್ತಿ ಬೆಳೆಯೇ ತಾಲ್ಲೂಕಿನ ರೈತರ ಪ್ರಮುಖ ಆದಾಯ ಮೂಲವಾಗಿತ್ತು. ಹಿಂದೊಮ್ಮೆ ಹತ್ತಿ ಬಿತ್ತನೆ ಬೀಜ ಖರೀದಿ ಸಂದರ್ಭದಲ್ಲಿ ನೂಕು ನುಗ್ಗಲು ಏರ್ಪಟ್ಟು ಗೋಲಿಬಾರ್ ಕೂಡ ನಡೆದಿತ್ತು. ಈಗ ಕೇರಳ ಭಾಗದ ಜನರು ಇಲ್ಲಿನ ರೈತರ ಜಮೀನುಗಳನ್ನು ಗುತ್ತಿಗೆಗೆ ಪಡೆದು ಶುಂಠಿ ಬೆಳೆಯುತ್ತಿರುವ ಪರಿಣಾಮ ವರ್ಷದಿಂದ ವರ್ಷಕ್ಕೆ ಹತ್ತಿ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಕೃಷಿ ಇಲಾಖೆ ಮಾಹಿತಿಗಳ ಪ್ರಕಾರ ೨೦೧೭-೧೮ರ ಸಾಲಿನಲ್ಲಿ ತಾಲ್ಲೂಕಿನ ೨೯,೬೫೦ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತಿತ್ತು. ಆದರೆ ಈ ವರ್ಷ ಅದು ೭೬೧೧.೩೮ ಹೆಕ್ಟೆರ್‌ಗಳಿಗೆ ಕುಸಿದಿದೆ. ಇಷ್ಟಾದರೂ ಶುಂಠಿ ಬಿಟ್ಟು ರೈತರು ಮತ್ತೆ ಹತ್ತಿ ಬೆಳೆಗೆ ಮರಳುತ್ತಾರೆಂಬ ನಿರೀಕ್ಷೆಯೂ ಇದೆ.
ಮಳೆಯೇ ಆಧಾರ
ಮೇ ತಿಂಗಳ ಆರಂಭದಲ್ಲಿ ಹತ್ತಿ ಬೀಜದ ಬಿತ್ತನೆ ಕಾರ್ಯ ಆರಂಭಗೊಳ್ಳುವುದರಿಂದ ಮುಂಗಾರು ಮಳೆ ಹತ್ತಿ ಬೆಳೆಗೆ ಹೆಚ್ಚಿನ ಪೂರಕವಾಗಿದೆ. ಮಳೆ ಬೇಗ ಬಂದರೆ ತಾಲ್ಲೂಕಿನ ರೈತರಿಗದುವೇ ವರದಾನ. ಆದರೆ ಹತ್ತಿ ಕೈ ಸೇರಬೇಕೆಂದರೆ ಕನಿಷ್ಠ ಐದು ತಿಂಗಳು ಪೋಷಣೆ ಅಗತ್ಯ. ಹಿಂದೆ ಸಾಂಪ್ರದಾಯಿಕ ಹತ್ತಿ ತಳಿ ಬೆಳೆಯುತಿದ್ದ ರೈತರು ಈಗ ಬಿ.ಟಿ ತಳಿಯನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ವಿಶೇಷವಾಗಿ ಆರ್‌ಸಿಎಚ್ ಮತ್ತು ಡಿಸಿಎಚ್ ತಳಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಕಳೆದ ಸಾಲಿನಲ್ಲಿ ಪ್ರತಿ ಕ್ವಿಂಟಲ್ ಹತ್ತಿಗೆ ೫ರಿಂದ ೬ ಸಾವಿರ ಬೆಲೆ ಇತ್ತು. ಈ ಬಾರಿ ೮ ಸಾವಿರ ರೂ.ತನಕ ಬೆಲೆ ಇದೆ. ಮಳೆಯ ನಡುವೆಯೂ ನೀರಿನ ಅಂಶ ಹತ್ತಿಗೆ ಸೇರದಂತೆ ರೈತರು ಹತ್ತಿ ಬಿಡಿಸಿ ತಂದು ಮನೆಯಲ್ಲಿೆುೀಂ ತೇವಾಂಶ ಇಲ್ಲದಂತೆ ಒಣಗಿಸಿ ಮಾರುಕಟ್ಟೆಗೆ ಸ್ಥಳಾಂತರಿಸಿದರೆ ಪ್ರತಿ ಕ್ವಿಂಟಲ್ ಹತ್ತಿಗೆ ೮ ಸಾವಿರ ಬೆಲೆ ಇದೆ. ತೇವಾಂಶದಿಂದ ಕೂಡಿದ ಹತ್ತಿಗೆ ಬೆಲೆ ಕಡಿಮೆ. ಹೀಗಾಗಿ ಹತ್ತಿಯನ್ನು ಒಣಗಿಸುವುದು ಸವಾಲಿನ ಕೆಲಸ.
ದಲ್ಲಾಳಿಗಳದ್ದೇ ಹಾವಳಿ
ತಾಲ್ಲೂಕಿನಲ್ಲಿ ಬೆಳೆದ ಹತ್ತಿಗೆ ನೆರೆಯ ತಮಿಳುನಾಡಿನ ತಿರುಪೂರಿನಲ್ಲಿ ವಿಶೇಷ ಬೇಡಿಕೆ ಇದೆ. ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಹತ್ತಿಯಾದರೂ ತಾಲೂಕಿನಲ್ಲಿ ಈ ವರೆಗೆ ಯಾರೊಬ್ಬರೂ ರೈತರಿಗಾಗಿ ಹತ್ತಿ ಗಿರಣಿ ಅಥವಾ ಹತ್ತಿ ಮಾರುಕಟ್ಟೆ ಆರಂಭಿಸಿಲ್ಲ. ಇದರಿಂದ ಹತ್ತಿ ಮಾರುಕಟ್ಟೆ ಇಲ್ಲದೆ ರೈತರು ಬೆಳೆದ ಹತ್ತಿ ಮಧ್ಯವರ್ತಿಗಳ ಪಾಲಾಗುತ್ತಿದೆ. ಹತ್ತಿ ಮಾರಾಟಕ್ಕೆ ಸಜ್ಜಾಗುತ್ತಿದ್ದಂತೆಯೇ ಮಧ್ಯವರ್ತಿಗಳ ಹತ್ತಿ ಖರೀದಿ ತಾತ್ಕಾಲಿಕ ಅಂಗಡಿಗಳು ಎಲ್ಲೆಂದರಲ್ಲಿ ತಲೆ ಎತ್ತುತ್ತಿವೆ. ಮಧ್ಯವರ್ತಿಗಳು ಕೇಳಿದಷ್ಟು ಬೆಲೆಗೆ ರೈತರು ಹತ್ತಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ. ರೈತರ ಹತ್ತಿ ಸಾಲವಾಗಿ ಖರೀದಿಸಿದ ಅದೆಷ್ಟೊ ಮಧ್ಯವರ್ತಿಗಳು ಹತ್ತಿ ಖರೀದಿಸಿದ ನಂತರ ಹಣವನ್ನು ನೀಡದೆ ರಾತ್ರೋ ರಾತ್ರಿ ಜಾಗ ಖಾಲಿ ಮಾಡಿರುವ ನಿದರ್ಶನಗಳಿವೆ.
ಎಪಿಎಂಸಿ ಮಾರುಕಟ್ಟೆಗಳ ಮೂಲಕ ನೇರವಾಗಿ ಹತ್ತಿ ಖರೀದಿಸಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಆದರೆ ಎಪಿಎಂಸಿಗಳು ಹತ್ತಿ ಬೆಳೆ ಬಂದಾಗ ತೆರೆಯುವುದಿಲ್ಲ .ಬದಲಿಗೆ ಅದು ಮುಗಿಯುವ ಹಂತದಲ್ಲಿ ಮಾರುಕಟ್ಟೆಯನ್ನು ತೆರೆಯತ್ತಾರೆ. ಅಷ್ಟರಾಗಲೇ ರೈತರೆಲ್ಲ ತಮ್ಮ ಹತ್ತಿಯನ್ನು ಮಾರಾಟ ಮಾಡಿಬಿಟ್ಟಿರುತ್ತಾರೆ ಎನ್ನುತಾರೆ ರೈತರು.
ಸೂಕ್ತ ಸಮಯದಲ್ಲಿ ಎಪಿಎಂಸಿ ಮಾರುಕಟ್ಟೆ ತನ್ನ ಕಾರ್ಯವನ್ನು ಆರಂಭಿಸಿ ಸರ್ಕಾರದ ಮೂಲಕವೇ ಟೆಂಡರ್ ಕರೆದು ಸೂಕ್ತ ಬೆಲೆಗೆ ಖರೀದಿ ಮಾಡುವಂತಾಗಬೇಕು. ಇದರಿಂದ ರೈತರಿಗೂ ಉತ್ತಮ ಆದಾಯ ದೊರಕುತ್ತದೆ. ಜೊತೆಗೆ ದಲ್ಲಾಳಿಗಳ ಹಾವಳಿಯೂ ತಪ್ಪುತ್ತದೆ ಎಂಬುದು ರೈತರ ಬೇಡಿಕೆ.
ಸರ್ಕಾರವೇ ನೇರವಾಗಿ ರೈತರಿಂದ ಹತ್ತಿ ಖರೀದಿ ಮಾಡಿದರೆ ಅನುಕೂಲವಾಗಲಿದೆ. ಇದರಿಂದ ಮಧ್ಯವರ್ತಿಗಳ ಹಾವಳಿಯೂ ಸಹ ಕಡಿಮೆಯಾಗಲಿದ್ದು, ಉತ್ತಮ ಬೆಲೆಯೂ ಸಿಗುತ್ತದೆ. ಅಲ್ಲದೇ ಇಲ್ಲಿನ ಎಪಿಎಂಸಿ ಮಾರುಕಟ್ಟೆಗಳು ಸಹ ಸೂಕ್ತ ಸಮಯಲ್ಲಿ ತೆರೆದರೆ ರೈತರು ತಮ್ಮ ಬೆಳೆಗಳನ್ನು ನೇರವಾಗಿ ಎಪಿಎಂಸಿಯಲ್ಲಿ ಮಾರಾಟ ಮಾಡಬಹುದಾಗಿದೆ.
-ಪುಟ್ಟಸ್ವಾಮಿ, ರೈತ ಹತ್ತಿ ಬೆಳೆಗಾರ, ಸರಗೂರು ತಾಲ್ಲೂಕು.
ಹತ್ತಿ ಬೆಳೆಗೆ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ರೈತರ ಪರ ನಿಂತು ಸೂಕ್ತ ಬೆಲೆ ನಿಗದಿ ಮಾಡಿ ರೈತರಿಂದ ನೇರವಾಗಿ ಖರೀದಿಸಿದರೆ ರೈತರಿಗೆ ಅನುಕೂಲ. ಇದರಿಂದ ಹತ್ತಿ ಬೆಳೆಯುವವರ ಸಂಖ್ಯೆಯೂ ಸಹ ಹೆಚ್ಚಾಗಲಿದೆ.
-ಹರೀಶ್, ರೈತ, ಎಚ್.ಡಿ.ಕೋಟೆ ತಾಲ್ಲೂಕು