Mysore
21
overcast clouds
Light
Dark

ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ದಿನಗಳು

ಆ ಮನೆಯಲ್ಲಿದ್ದುದು ಒಂದು ಬಕೆಟ್ಟು, ಒಂದೆರಡು ಪಾತ್ರೆಗಳು, ಒಂದು ಸ್ಟವ್, ಒಂದು ತಟ್ಟೆ, ಮುದ್ರಣ ಯಂತ್ರ, ಅಚ್ಚು ಮೊಳೆ, ಒಂದು ಚಾಪೆ. ಮಾತಿಲ್ಲ, ಕತೆಯಿಲ್ಲ. ಮಾತನಾಡಲು ಯಾರೂ ಇಲ್ಲ. ಯಾರಾದರೂ ಬಾಗಿಲು ಬಡಿದರೆ ನಾನು ಮಹಡಿಯಿಂದ ಇಣುಕುತ್ತಿದ್ದೆ. ಅವರಿಲ್ಲ, ಎಲ್ಲಿಗೆ ಹೋಗಿದ್ದಾರೆಂದು ಗೊತ್ತಿಲ್ಲ, ಎಷ್ಟು ಹೊತ್ತಿಗೆ ಬರುತ್ತಾರೆಂದೂ ಗೊತ್ತಿಲ್ಲ ಎಂದು ಹೇಳುತ್ತಿದ್ದೆ. ಯಾರೇ ಬಂದು ಕೇಳಿದರೂ ನನ್ನದೊಂದೇ ಉತ್ತರ. ಕೋಟಿಯವರು ಕಲಿಸಿದ ಗಿಳಿಪಾಠವನ್ನು ಒಪ್ಪಿಸುತ್ತಿದ್ದೆ. ಎಷ್ಟೋ ದಿನಗಳ ವರೆಗೆ ನನ್ನದು ಅದಷ್ಟೇ ಮಾತು.

– ಬಿ.ಆರ್.ಜೋಯಪ್ಪ, ಮಡಿಕೇರಿ

ಬನ್ನಿ, ಅಲ್ಲಿ ಕೋಟಿ ಅಂತ ಒಬ್ಬರಿದ್ದಾರೆ.ಅವರನ್ನು ನಿಮಗೆ ಪರಿಚಯಿಸುತ್ತೇನೆ. ಅವರಲ್ಲಿ ಕೆಲಸವೇನಾದರೂ ಇದ್ದರೆ ನಿಮಗೆ ಕೊಟ್ಟಾರು ಎಂದು ಎನ್.ಆರ್.ನಂಜುಂಡೇಗೌಡರು ನನ್ನನ್ನು ಕೆ.ಜಿ.ಕೊಪ್ಪಲಿನ ಮನೆಯೊಂದಕ್ಕೆ ಕರೆದುಕೊಂಡು ಹೋದರು. ಬಾಗಿಲು ಮುಚ್ಚಿತ್ತು. ಮೆಲ್ಲನೆ ತಟ್ಟಿದೆವು. ಬಾಗಿಲು ತೆರೆದು ಬನ್ನಿ ಎಂದು ಒಳಗೆ ಕರೆದರು. ಕುಳಿತುಕೊಳ್ಳಲು ಹೇಳಲಿಲ್ಲ. ಏಕೆಂದರೆ ಅಲ್ಲಿ ಕುಳಿತುಕೊಳ್ಳಲು ಯಾವೊಂದು ಆಸನದ ವ್ಯವಸ್ಥೆ ಇರಲಿಲ್ಲ.

ಕೋಟಿಯವರೇ ನಿಮ್ಮಲ್ಲೇನಾದರೂ ಕೆಲಸ ಇರಬಹುದಾಂತ ಇವರನ್ನು ಇಲ್ಲಿಗೆ ಕರೆದುಕೊಂಡು ಬಂದೆ ಅಂತ ಗೌಡರು ಹೇಳಿದರು. ಅದಕ್ಕೆ ಕೋಟಿಯವರು ದೇಶಾವರಿ ನಗು ನಕ್ಕರು. ಆ ನಗುವಿನಲ್ಲಿ ಅಪಹಾಸ್ಯವಿತ್ತೋ, ಸಂತಸವಿತ್ತೋ, ನೋವಿತ್ತೋ ನಾನು ಅರಿಯದಾದೆ. ಕೋಟಿಯವರು ನನ್ನೆಲ್ಲಾ ಕತೆಯನ್ನು ಕೇಳಿದರು. ನಾನು ಸಮಾಧಾನದಿಂದ ಹೇಳಿದೆ. ನಾಳೆಯಿಂದ ಬನ್ನಿ ಎಂದರು. ಆಯಿತು ಎಂದು ತಲೆಯಾಡಿಸಿದೆ. ಅವರ ಗಡ್ಡ, ಮೀಸೆ, ನೀಳ ತಲೆಗೂದಲು, ಅವರ ಜುಬ್ಬಾ, ಅವರ ಭಾಷೆ… ಇವರೊಡನೆ ಹೇಗಪ್ಪಾ ಎಂದು ನಾನು ಚಿಂತಿತನಾದೆ.

ನಾವಿಬ್ಬರು ಅವರ ಮನೆಯಿಂದ ಹಿಂತಿರುಗಿದೆವು. ನಿಮಗೆ ತಿಂಗಳಿಗೆ ಅರವತ್ತು ರೂಪಾಯಿ ಸಂಬಳ ಕೊಡುತ್ತಾರಂತೆ ಅಂತ ಗೌಡರು ಹೇಳಿದರು. ಓ ಹೌದಾ… ಆ ಅಂತ ಬಾಯಿ ತೆರೆದೆ. ದಿನಕ್ಕೆ ಎರಡು ರೂಪಾಯಿಯ ಲೆಕ್ಕ! ಇಷ್ಟು ಉಪಕಾರ ಮಾಡಿದ್ರಲ್ಲಾ, ನಿಮಗೆ ತುಂಬಾ ಥ್ಯಾಂಕ್ಸ್ ಆಯ್ತಾ ಅಂತ ಹೇಳಿದೆ. ಮುಂದೆ ನಮ್ಮ ದಾರಿ ಕವಲಾಯಿತು. ಸಂಜೆಗತ್ತಲಾಗುತ್ತಿತ್ತು. ಬೀದಿ ದೀಪ ಬೇಳಗುತ್ತಿತ್ತು. ನಾವು ಕೆ.ಜಿ.ಕೊಪ್ಪಲಿನ ಬಾಡಿಗೆ ಕೊಠಡಿಯಲ್ಲಿದ್ದೆವು. ಅಕ್ಕನೊಡನೆ ಹೀಗೆ ಹೀಗೆ ಅಂತ ಹೇಳಿದೆ. ಅವಳು ವಿದ್ಯಾರ್ಥಿನಿ. ನಾನು ನಾಳೆಯಿಂದ ಉದ್ಯೋಗಿ! ಮೂವತ್ತು ದಿನಕ್ಕೆ ಅರವತ್ತು ರೂಪಾಯಿ ಸಂಬಳ ತರುವಾತ. ತಿತಿಮತಿ ಸಮೀಪದ ಕಾಟಿಬೆಟ್ಟದ ಕಾಡಿನ ಮನೆಯಲ್ಲಿ ವೃದ್ಧ ಅಪ್ಪ ಅಮ್ಮ… ಚಿಂತಿಸುತ್ತಾ ನಿದ್ದೆಗೆ ಜಾರಿದೆ.

ಮರುದಿನ ಬೆಳಿಗ್ಗೆ ೯ ಗಂಟೆಗೆ ಕೋಟಿಯವರ ಮನೆಗೆ ಹೋದೆ. ಅದು ಮಹಡಿ ಮನೆ. ಮಹಡಿಗೆ ಹತ್ತುವ ಮೆಟ್ಟಿಲಿನ ಪಕ್ಕದ ಮೂಲೆಯಲ್ಲಿ ಕಾಲಿನಿಂದ ತುಳಿದು ಮುದ್ರಣ ಮಾಡುವ ಮುದ್ರಣ ಯಂತ್ರವಿತ್ತು. ಮಹಡಿಯ ಒಂದು ಕೊಠಡಿಯಲ್ಲಿ ಅಚ್ಚು ಮೊಳೆ ಜೋಡಿಸುವ ವ್ಯವಸ್ಥೆಯಿತ್ತು. ಇಲ್ಲಿ ನೀವು ಅಕ್ಷರಾಭ್ಯಾಸ ಮಾಡಿ. ಈ ಕೀ ತಕ್ಕೊಳ್ಳಿ. ನೀವು ಹೊರಗೆ ಹೋಗುವಾಗ ಬೀಗ ಹಾಕೊಂಡು ಹೋಗಿ. ನನ್ನ ಹತ್ರಾನೂ ಒಂದು ಕೀ ಇರುತ್ತೆ. ನಾನು ಹೊರ ಹೋಗುತ್ತೇನೆ. ಯಾರಾದ್ರೂ ಬಂದು ನನ್ನನ್ನು ಕೇಳಿಯಾರು. ಅವರಿಲ್ಲ, ಎಲ್ಲಿಗೆ ಹೋಗಿದ್ದಾರೆಂದು ಗೊತ್ತಿಲ್ಲ, ಎಷ್ಟು ಹೊತ್ತಿಗೆ ಬರುತ್ತಾರೆಂದೂ ಗೊತ್ತಿಲ್ಲ ಅಂತ ಹೇಳಿಬಿಡಿ. ನಿಮ್ಮ ಪಾಡಿಗೆ ಬಂದು ಅಭ್ಯಾಸ ಮಾಡಿ. ಸಂಜೆ ಐದು ಗಂಟೆಗೆ ಹೋಗಿ. ನನ್ನನ್ನು ಕಾಯುವುದು ಬೇಡ ಎಂದು ಹೇಳಿ ಇಡೀ ಮನೆಯ ಜವಾಬ್ದಾರಿಯನ್ನು ನನಗೆ ವಹಿಸಿದರು.

ಕೋಟಿಯವರು ಹೊರ ಹೋದೊಡನೆ ಬಾಗಿಲು ಮುಚ್ಚಿ ಬೋಲ್ಟ್ ಹಾಕಿ ಮಹಡಿ ಹತ್ತಿ ನಾನು ನನ್ನ ಕೆಲಸದಲ್ಲಿ ತೊಡಗುತ್ತಿದ್ದೆ. ಅಲ್ಲಿದ್ದುದು ಮರದ ಪೆಟ್ಟಿಗೆ. ಅದರಲ್ಲಿ ನೂರಾರು ಚೌಕಳಿಗಳು. ಆ ಚೌಕಳಿಯಲ್ಲಿ ಕನ್ನಡದ ಅಚ್ಚು ಮೊಳೆಗಳಿದ್ದವು. ಅಷ್ಟೂ ಚೌಕಳಿಗಳನ್ನು ಕರಗತ ಮಾಡಬೇಕು. ಯಾವ ಅಕ್ಷರ ಅಲ್ಲಿತ್ತೋ ಅದೇ ಅಕ್ಷರವನ್ನು ಅಲ್ಲಿಗೇ ಹಾಕಬೇಕು. ಅಯ್ಯಪ್ಪಾ… ನನ್ನ ಕೈಯ್ಯಲ್ಲಿ ಇದೆಲ್ಲಾ ಆದೀತಾ… ಎಂದುಕೊಳ್ಳುತ್ತಾ ಒಂದೊಂದೇ ಮೊಳೆಗಳನ್ನು ತೆಗೆದು ತೆಗೆದು ನೋಡುತ್ತಿದ್ದೆ. ಅವೆಲ್ಲವೂ ಉಲ್ಟಾ! ಕಾಗದದ ಮೇಲೆ ಒತ್ತಿ ನೋಡಿದೆ. ಆಗ ಅದು ಸರಿಯಾಗಿ ಮೂಡಿತು. ಹೀಗೆ ನಿಧಾನವಾಗಿ ಅಭ್ಯಾಸ ಮಾಡತೊಡಗಿದೆ.

ಆ ಮನೆಯಲ್ಲಿದ್ದುದು ಒಂದು ಬಕೆಟ್ಟು, ಒಂದೆರಡು ಪಾತ್ರೆಗಳು, ಒಂದು ಸ್ಟವ್, ಒಂದು ತಟ್ಟೆ, ಮುದ್ರಣ ಯಂತ್ರ, ಅಚ್ಚು ಮೊಳೆ, ಒಂದು ಚಾಪೆ. ಮಾತಿಲ್ಲ, ಕತೆಯಿಲ್ಲ. ಮಾತನಾಡಲು ಯಾರೂ ಇಲ್ಲ. ಯಾರಾದರೂ ಬಾಗಿಲು ಬಡಿದರೆ ನಾನು ಮಹಡಿಯಿಂದ ಇಣುಕುತ್ತಿದ್ದೆ. ಅವರಿಲ್ಲ, ಎಲ್ಲಿಗೆ ಹೋಗಿದ್ದಾರೆಂದು ಗೊತ್ತಿಲ್ಲ, ಎಷ್ಟು ಹೊತ್ತಿಗೆ ಬರುತ್ತಾರೆಂದೂ ಗೊತ್ತಿಲ್ಲ ಎಂದು ಹೇಳುತ್ತಿದ್ದೆ. ಯಾರೇ ಬಂದು ಕೇಳಿದರೂ ನನ್ನದೊಂದೇ ಉತ್ತರ. ಕೋಟಿಯವರು ಕಲಿಸಿದ ಗಿಳಿಪಾಠವನ್ನು ಒಪ್ಪಿಸುತ್ತಿದ್ದೆ. ಎಷ್ಟೋ ದಿನಗಳ ವರೆಗೆ ನನ್ನದು ಅದಷ್ಟೇ ಮಾತು.

ನಿಮ್ಮ ಊರು ಯಾವುದು? ಹೀಗೇಕೆ ಇದ್ದೀರಿ, ನೀವು ಎಲ್ಲಿಗೆ ಹೋಗುತ್ತೀರಿ, ಯಾಕೆ ಹೋಗುತ್ತೀರಿ ಎಂದು ಕೇಳಬೇಕೆನಿಸಿದರೂ ನಾನು ಕೋಟಿಯವರನ್ನು ಕೇಳಲಿಲ್ಲ.

ಒಂದು ದಿನ ನಾನು ನನ್ನ ಅಭ್ಯಾಸದಲ್ಲಿ ತೊಡಗಿದ್ದೆ. ಆಗ ಒಬ್ಬರು ರಸ್ತೆಯಲ್ಲಿ ನಿಂತುಕೊಂಡು ಕೋಟಿ, ಏ ಕೋಟಿ ಎಂದು ಗಟ್ಟಿ ಧ್ವನಿಯಲ್ಲಿ ಕೂಗಿದರು. ನನಗೆ ಸಿಟ್ಟು ಬಂತು. ಏನು ಹೀಗೆ ಏ ಕೋಟಿ ಅಂತ ಕರೆಯುತ್ತಾರಲ್ಲ ಎಂದು ಗೊಣಗಿಕೊಂಡು ಮಹಡಿಯಿಂದ ಇಣುಕಿದೆ. ನಾನು ಮಾಮೂಲಿಯಂತೆ ಹೇಳಿ ಅವರನ್ನು ಕಳಿಸಿದೆ. ಹೀಗೆ ದಿನಕ್ಕೆ ನಾಲ್ಕಾರು ಜನರು ಮನೆ ಮುಂದೆ ನಿಂತು ಕೂಗುತ್ತಿದ್ದರು.

ಒಮ್ಮೆ ನಾನು ಮಧ್ಯಾಹ್ನ ಬಾಗಿಲು ಎಳೆದು ಬೀಗ ಹಾಕೊಂಡು ಹೊರ ಹೋಗಿದ್ದೆ. ತಿರುಗಿ ಬಂದಾಗ ಕೋಟಿಯವರು ಬಂದಿದರು. ಸ್ಟವ್ ಹಚ್ಚಿ ಅನ್ನಕ್ಕಿಟ್ಟಿದ್ದರು. ಅನ್ನ ಕುದಿಯುತ್ತಿರಲು ಅಗಳನ್ನು ಹಿಚುಕುತ್ತಾ ಹೊಟ್ಟೆ ತುಂಬಾ ಹಸಿದು ಬಿಟ್ಟಿದೆ ಜೋಯಪ್ಪಾ… ಎಂದು ಹೇಳಿದರು. ನನ್ನದು ಊಟ ಆಗಿದೆ. ನೀವು ಊಟ ಮಾಡಿ ಎನ್ನುತ್ತಾ ಮಹಡಿ ಹತ್ತಿ ಕೆಲಸದಲ್ಲಿ ನಿರತನಾದೆ. ಉಪ್ಪು ಹಾಕಿಕೊಂಡು ಗಂಜಿಯನ್ನು ಉಂಡರೋ ಅಥವಾ ಈರುಳ್ಳಿಯನ್ನು ನೆಂಚಿಕೊಂಡು ಉಂಡರೋ ನನಗೆ ತಿಳಿಯದು. ಅದೆಷ್ಟೋ ಬಾರಿ ನನ್ನೊಡನೆ ಹಸಿವಾಗಿಬಿಟ್ಟಿದೆ ಜೋಯಪ್ಪಾ… ಅಂತ ಹೇಳಿಕೊಳ್ಳುತ್ತಿದ್ದರು. ನನಗಂತೂ ಅಯ್ಯೋ ಅಂತ ಸಂಕಟವಾಗುತ್ತಿತ್ತು.

ಕೋಟಿಯವರನ್ನು ಕೇಳಿಕೊಂಡು ಬಂದವರ ಕುರಿತು ವರದಿ ಒಪ್ಪಿಸುತ್ತಿದ್ದೆ. ಆಗ ಅವರ ಚಹರೆಯನ್ನು ಕೇಳಿ ಅವರು ಇಂಥವರು ಎಂದು ಅಂದಾಜಿಸಿ ಹೆಸರು ಹೇಳುತ್ತಿದ್ದರು. ಒಬ್ಬರು ಬೈಕ್‌ನಲ್ಲಿ ಬಂದು ಕಂಚಿಗೆ ಬಡಿದಂತೆ ಕೂಗುತ್ತಿದ್ದರು. ಎಡಗೈಯಲ್ಲಿ ಸಿಗರೇಟಿತ್ತು ಅಂತ ಹೇಳಿದೆ. ಓ ಅವರಾ? ಅವರು ಶ್ರೀ ಕೃಷ್ಣ ಆಲನ ಹಳ್ಳಿಯವರು ಅಂತ ಹೇಳಿದರು. ಇನ್ನೊಬ್ಬರು ಬೈಸಿಕಲ್‌ನಲ್ಲಿ ಬಂದವರು ಬಾಗಿಲು ಬಡಿಯುತ್ತಿದ್ದರು. ದೊಗಳೆ ಬಟ್ಟೆತೊಟ್ಟಿದ್ದರು. ಉದ್ದ ತೋಳಿನ ಶರಟಿನ ಕೈಯನ್ನು ಹೇಗೇಗೋ ಮಡಚಿದ್ದರು. ಎದೆಯ ಗುಂಡಿಯನ್ನು ಹಾಕಿರಲಿಲ್ಲ. ಲಾಚಾರಾಗಿದ್ದ ಅವರು ಬೆವರುತ್ತಿದ್ದರು ಅಂತ ಹೇಳಿದೆ. ಅವರು ದೇವನೂರು ಮಹಾದೇವ ಅಂತ ಹೇಳಿದರು.

ಕೋಟಿಯವರು ಬಿಸಿಲಿನಲ್ಲಿ ದಣಿದು ಬರುತ್ತಿದ್ದರು. ಬಂದೊಡನೆ ಸ್ನಾನ ಮಾಡಿ ಬಿಳಿ ಪಂಚೆಯನ್ನು ಸುತ್ತಿಕೊಂಡು ಬರಿ ಮೈಯಲ್ಲೇ ಮಲಗಿ ಬಿಡುತ್ತಿದ್ದರು. ಪಾದ ಆಡಿಸುತ್ತಾ ಮಲಗಿ ಚಿಂತಿಸುತ್ತಿದ್ದ ಅವರು ನಿದ್ರಿಸಿದ್ದು ತುಂಬಾ ಕಡಿಮೆ. ಊಟ ತಿಂಡಿ ಎಲ್ಲೋ… ಯಾವಾಗಲೋ…
ನಾನು ಅಚ್ಚುಮೊಳೆ ಜೋಡಿಸಲು ಕಲಿತಿದ್ದೆ. ನಾನೊಬ್ಬ ‘ಕಂಪೋಸಿಟರ್ ’ ಎಂಬ ಪದನಾಮದೊಂದಿಗೆ ಬೀಗಿದೆ. ತಿಂಗಳ ಸಂಬಳ ಎಣಿಸುವ ದಿನ ಹತ್ತಿರವಾಗುತ್ತಿದೆ. ಹತ್ತಿರವೇನು? ತಿಂಗಳು ಕಳೆದು ವಾರವಾಯಿತು. ನನ್ನ ಸಂಬಳದ ಮಾತಿಲ್ಲ. ಅಲ್ಲಾ, ಒಂದೇ ಒಂದು ರೂಪಾಯಿ ಸಂಪಾದನೆ ಆಗಿಲ್ಲ. ಅಂಥದರಲ್ಲಿ ನನಗೆ ಅರವತ್ತು ರೂಪಾಯಿಯನ್ನು ಹೇಗೆ ತಾನೆ ಕೊಡಲು ಸಾಧ್ಯ? ಆ ಸ್ಥಿತಿಯಲ್ಲಿ ನಾನು ನನ್ನ ಸಂಬಳವನ್ನು ಹೇಗೆ ಕೇಳಲಿ? ಕೇಳಲು ಬಾಯಿಯೇ ಬರಲಿಲ್ಲ. ಎಷ್ಟೋ ದಿನಗಳ ಬಳಿಕ ಐದು ರೂಪಾಯಿ, ಹತ್ತು ರೂಪಾಯಿ ಅಂತ ಕೊಡುತ್ತಿದ್ದರು. ನಾನು ಬರೆದಿಡುತ್ತಿದ್ದೆ.

ಅದು ೧೯೭೫ನೇ ಇಸವಿ. ಭಾರತದ ತುರ್ತು ಪರಿಸ್ಥಿತಿ ಘೋಷಣೆಯಾದ ಕಾಲ. ದೇಶ ಆರ್ಥಿಕ ದುಃಸ್ಥಿತಿಯಲ್ಲಿತ್ತು. ತುರ್ತು ಪರಿಸ್ಥಿತಿ ಘೋಷಣೆ ಬಗ್ಗೆ ನನಗೆ ತಿಳಿದಿತ್ತು. ಆದರೆ ಅದರ ತೀವ್ರತೆಯ ಬಗ್ಗೆ ಅರಿವಿರಲಿಲ್ಲ. ಕೋಟಿಯವರು ತುರ್ತು ಪರಿಸ್ಥಿತಿಯ ಕರಾಳತೆಯ ವಿರುದ್ಧ ಸೆಟೆದು ನಿಂತವರು. ಪ್ರತಿಭಟನೆಯ ಹಾದಿ ತುಳಿದವರು. ಹಾಗಾಗಿ ಅವರ ಮುದ್ರಣ ಯಂತ್ರವನ್ನು ಮುಟ್ಟುಗೋಲು ಹಾಕಲು ಮತ್ತು ಕೋಟಿಯವರನ್ನು ಬಂಧಿಸಲು ಪೊಲೀಸರು ಹವಣಿಸುತ್ತಿದ್ದರು. ವಿಷಯ ತಿಳಿದು ನಾನು ಅವಾಕ್ಕಾದೆ.

ಕೋಟಿಯವರ ಸಂಪಾದಕತ್ವದಲ್ಲಿ ಧಾರವಾಡದಿಂದ ‘ಆಂದೋಲನ ವಾರ ಪತ್ರಿಕೆ’ ಪ್ರಕಟವಾಗುತ್ತಿತ್ತು. ಅದನ್ನು ಮೈಸೂರಿಗೆ ವರ್ಗಾಯಿಸಿದ್ದರು. ಯಾವಾಗ ‘ತುರ್ತು ಸ್ಥಿತಿ’ ಘೋಷಣೆಯಾಯಿತೋ ಪತ್ರಿಕಾ ಸ್ವಾತಂತ್ರ್ಯ ಇಲ್ಲವಾಯಿತು. ಹಾಗಾಗಿ ಪತ್ರಿಕೆಯ ಪ್ರಕಟಣೆಯೂ ನಿಂತು ಹೋಯಿತು. ಯಾರಾದರೂ ಚಂದಾದಾರರು ಚಂದಾ ಹಣ ಕಳುಹಿಸಿದರೆ ಮಾತ್ರ ಕೋಟಿಯವರಿಗೆ ದುಡ್ಡು. ಅಪ್ಪಟ ಸಮಾಜವಾದಿ ಕೋಟಿಯವರು ತನ್ನೂರು ಧಾರವಾಡಕ್ಕೆ ಹೋಗಿ ಮನೆಯವರ ಸಹಾಯವನ್ನು ಕೇಳಲಿಲ್ಲ. ಮೈಸೂರಿನ ಗೆಳೆಯರು ಸಹಾಯ ಮಾಡಿದರೆ ಉಂಟು.

ಹೀಗೆ ಹೇಗೋ ದಿನ ಕಳೆಯುತ್ತಿರಲು ಕೋಟಿಯವರ ಮನೆಗೆ ಇಬ್ಬರು ಬಂದರು. ಅವರು ಕೋಟಿಯವರ ಗೆಳೆಯರಾದ ಎಂ.ಆರ್.ಶಿವಣ್ಣ ಮತ್ತು ರಾಮದೇವ ರಾಕೆ. ಅವರಿಬ್ಬರು ಕೋಟಿಯವರ ಸಹಾಯಕರಾಗಿ ಮನೆಯಲ್ಲೇ ಉಳಿದರು.

೧೯೭೭ರ ಮಾರ್ಚ್ ತಿಂಗಳ ಒಂದು ದಿನ ಇಪ್ಪತ್ತೊಂದು ತಿಂಗಳ ಭಾರತದ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂಬ ಘೋಷಣೆ ಹೊರಬಿತ್ತು. ದಿನಕಳೆದಂತೆ ದೇಶದ ಸ್ಥಿತಿ ಸುಧಾರಿಸತೊಡಗಿತು. ಆದರೆ ಕೋಟಿಯವರ ಆರ್ಥಿಕ ಸ್ಥಿತಿ ಮಾತ್ರ ಸುಧಾರಿಸಲಿಲ್ಲ. ಹೇಗೋ ಆಂದೋಲನ ವಾರ ಪತ್ರಿಕೆಯ ಪ್ರಕಟಣೆ ಮತ್ತೆ ಶುರುವಾಯಿತು. ಕಂಪೋಸ್ ಇಲ್ಲಿ ಮಾಡುವುದು, ಎಲ್ಲೋ ಬೇರೆಡೆ ಪ್ರಿಂಟ್ ಮಾಡಿಸಲಾಗುತ್ತಿತ್ತು. ಕೆಲವು ಸಮಯದ ಬಳಿಕ ಸರಸ್ವತಿಪುರಂ ಒಂದನೇ ಮುಖ್ಯ ರಸ್ತೆಯಲ್ಲಿದ್ದ ಪೃಥ್ವಿ ಪ್ರೆಸ್ಸಿನ ಕಟ್ಟಡಕ್ಕೆ ಆಂದೋಲನ ಪ್ರೆಸ್ ಅನ್ನು ಬದಲಿಸಲಾಯಿತು. ಅಲ್ಲೂ ಹಾಗೇ. ಕಂಪೋಸ್ ಮಾಡಿದ್ದನ್ನು ಹೊತ್ತುಕೊಂಡು ಹೋಗಿ ಬೇರೆಡೆ ಪ್ರಿಂಟ್ ಮಾಡಿಸಬೇಕಿತ್ತು. ಕೊನೆಗೆ ವಾರಪತ್ರಿಕೆಯ ಪ್ರಕಟಣೆಯೇ ನಿಂತು ಹೋಯಿತು. ಕೆಲವು ಸಮಯದ ಬಳಿಕ ಆಂದೋಲನ ‘ಸಂಜೆ ಪತ್ರಿಕೆ’ ಶುರುವಾಯಿತು. ಈ ಸಂದರ್ಭದಲ್ಲಿ ಒಂದು ದಿನ ಶಾಂತಲಾ ಥಿಯೇಟರ್ ಪಕ್ಕದಲ್ಲಿರುವ ಸುಬ್ಬರಾಯನ ಕೆರೆ ಮೈದಾನದಲ್ಲಿ ಬೃಹತ್ ರಾಜಕೀಯ ಸಭೆಯೊಂದನ್ನು ಆಯೋಜಿಸಲಾಗಿತ್ತು. ಅದು ತುರ್ತು ಪರಿಸ್ಥಿತಿಯ ಕರಾಳ ದಿನಗಳ ಕುರಿತು ಏರ್ಪಡಿಸಲಾದ ಸಭೆ. ಅಂದು ಆಂದೋಲನ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಹೊರ ತಂದೆವು. ಕೋಟಿಯವರು ಫುಟ್‌ಫಾತ್‌ನಲ್ಲಿ ಕುಳಿತು ಪತ್ರಿಕೆ ಮಾರುತ್ತಿದ್ದರು. ನಾವು ಕೆಲವರು ಸಭಿಕರ ನಡುವೆ ಹೋಗಿ ವಿಶೇಷ ಸುದ್ದಿ ಬಿಸಿಬಿಸಿ ಸುದ್ದಿ ಆಂದೋಲನ, ಆಂದೋಲನ ಅಂತ ಕೂಗುತ್ತಾ ಮಾರಾಟ ಮಾಡುತ್ತಿದ್ದೆವು. ಸಭೆ ಮುಗಿಯುತ್ತಿದ್ದಂತೆ ನಾವೂ ಹಿಂತಿರುಗಿದೆವು. ಸಂಗ್ರಹವಾದ ಹಣವನ್ನು ಒಟ್ಟು ಮಾಡಿ ಕೋಟಿಯವರಿಗೆ ಕೊಟ್ಟೆವು. ಕೋಟಿಯವರ ಜುಬ್ಬಾದ ಜೇಬು ನಾಣ್ಯಗಳ ಭಾರದಿಂದ ಜಗ್ಗುತ್ತಿತ್ತು! ಎಲ್ಲರೂ ಕೊಪ್ಪಲಿನ ಮನೆಗೆ ಹೋದೆವು. ಅಂದು ಸಿಕ್ಕಿದ ಹಣವನ್ನು ಹಂಚಿದರು. ನನ್ನ ಸಂಬಳದ ಸ್ವಲ್ಪ ಹಣವನ್ನು ಸಂದಾಯ ಮಾಡಿದರು. ಮುಂದೇನು?

ಸಂಜೆ ಪತ್ರಿಕೆಯನ್ನು ನಡೆಸಲಾಗದ ಸ್ಥಿತಿ ಬಂತು. ಇಷ್ಟೇ ಇಷ್ಟಗಲದ ಪತ್ರಿಕೆಗೆ ಜಾಹೀರಾತು ಕೊಡುವವರು ಯಾರು? ಲಾಟರಿ ಜಾಹೀರಾತು ಮತ್ತು ಸ್ಥಳೀಯ ಜಾಹೀರಾತು ಬಿಟ್ಟರೆ ಮತ್ತೇನೂ ಸಿಗುತ್ತಿರಲಿಲ್ಲ. ಅಷ್ಟರಿಂದ ಪತ್ರಿಕೆ ಬೆಳೆಯುವುದಿಲ್ಲ. ಒಂದು ದಿನ ಪತ್ರಿಕೆ ನಿಲ್ಲಿಸಿ ಬಿಡುವುದಾ ಜೋಯಪ್ಪಾ… ಅಂತ ಕೇಳಿದರು. ಆಗ ನಾನು, ‘‘ಬೇಡ ದುಡ್ಡುಕೊಡಲಿ, ಬಿಡಲಿ. ಈಗಿರುವ ಜಾಹೀರಾತನ್ನು ಹಾಕೋಣ. ನಾಲ್ಕು ಸುದ್ದಿಯನ್ನು ಸೇರಿಸಿ ಪ್ರಿಂಟ್ ಮಾಡೋಣ’’ ಅಂತ ಹೇಳಿದೆ. ಒಪ್ಪಿಕೊಂಡರು. ಐವತ್ತು ರೂಪಾಯಿಗೆ ಎಷ್ಟು ನ್ಯೂಸ್ ಪ್ರಿಂಟ್ ಪೇಪರ್ ಸಿಗುತ್ತೋ ಅಷ್ಟು ಪೇಪರ್ ತಂದು ಮುದ್ರಣ ಮಾಡಲಾಗುತ್ತಿತ್ತು.

‘ಕುಂಟು ಕುದುರೆಗೆ ಕಣ್ಣೊಂದು ಕುರುಡು’ ಎಂಬಂತೆ ಪ್ರೆಸ್ಸಿನಲ್ಲಿದ್ದ ಅಚ್ಚು ಮೊಳೆಗಳನ್ನು ರಾತ್ರಿ ಕಳ್ಳರು ಹೊತ್ತೊಯ್ದರು! ಮತ್ತೆ ಹೊಸ ಮೊಳೆಗಳನ್ನು ತಂದೆವು. ಅದಾಗಿ ವರ್ಷ ಕಳೆದಿಲ್ಲ. ಮತ್ತೊಮ್ಮೆ ಕಳುವಾಯಿತು. ಕೋರ್ಟಿಗೆಲ್ಲಾ ಅಲೆದಾಡಿದೆವು. ಎಷ್ಟೋ ಸಮಯದ ಬಳಿಕ ಕಳುವಾದ ವಸ್ತುಗಳೆಲ್ಲವೂ ಸಿಕ್ಕಿದವು.

ಆಂದೋಲನ ಬುಕ್ ಹೌಸ್: ಅದೇ ಪ್ರೆಸ್ಸಿನಲ್ಲಿ ಪುಸ್ತಕ ಮಾರಾಟದ ವ್ಯವಸ್ಥೆ ಮಾಡಲಾಯಿತು. ಜನರು ಬರುವುದು, ನೋಡುವುದು- ದಿನಕ್ಕೆ ಒಂದೆರಡು ಪುಸ್ತಕ ಮಾರಾಟವಾಗಿರಬಹುದು. ಒಮ್ಮೆ ಒಬ್ಬರು ಅಂಗಡಿಗೆ ಬಂದರು. ಹಿಂದೆ ಮುಂದೆ ನೋಡಿದರು. ಮನೆಗೆ ತಕ್ಕೊಂಡು ಹೋಗ್ತೇನೆ. ಓದಿ ನೋಡಿ ಚೆನ್ನಾಗಿದ್ದರೆ ಕೊಂಡುಕೊಳ್ಳುತ್ತೇನೆ ಎಂದು ಹೇಳಿದರು. ಪುಸ್ತಕ ವ್ಯಾಪಾರವೂ ಕೈ ಹಿಡಿಯದೆಂದು ತಿಳಿಯಿತು. ಅಂಗಡಿ ತೆರೆದಷ್ಟೇ ವೇಗದಲ್ಲಿ ಮುಚ್ಚಿ ಹೋಯಿತು.

ಸಂಕಷ್ಟಕ್ಕೆ ಪರಿಹಾರವೋ ಎನ್ನುವಂತೆ ನಿರ್ಮಲರೊಡನೆ ಕೋಟಿಯವರ ಮದುವೆಯಾಯಿತು. ಯಾಕೋ ಏನೋ ಮತ್ತೆ ಆರ್ಥಿಕ ಸಂಕಟ ಬಂತಲ್ಲ! ನನ್ನ ಸಂಬಳಕ್ಕೂ ತೊಂದರೆಯಾಯಿತು. ರಾತ್ರಿಗೆ ಏನೂ ಇಲ್ಲ. ಕೋಟಿಯವರ ಮನೆಗೆ ಹೋಗಿ ಏನನ್ನಾದರೂ ಕೇಳಿಕೊಂಡು ಬಾ ಅಂತ ಅಕ್ಕ ನನ್ನನ್ನು ಸಂಜೆ ಹೊತ್ತಲ್ಲಿ ಕಳುಹಿಸಿದಳು. ನಾನು ಅವರ ಮನೆಗೆ ಹೋಗಿ ಸಮಸ್ಯೆಯನ್ನು ಹೇಳಿಕೊಂಡೆ. ಆಗ ಕೋಟಿಯವರು ಅವರ ಮಡದಿಯೊಡನೆ ಅಕ್ಕಿಯೇನಾದರೂ ಇದೆಯಾ ನೋಡು ಅಂತ ಹೇಳಿದರು. ಅಕ್ಕಿ ಇರಲಿಲ್ಲ. ಇಷ್ಟು ಗೋಧಿ ಪುಡಿ ಇದೆ. ಇದನ್ನು ಎರಡು ಪಾಲು ಮಾಡುತ್ತೇನೆ ಎನ್ನುತ್ತಾ ಎರಡು ಭಾಗ ಮಾಡಿದರು. ಒಂದು ಲೋಟದಷ್ಟು ಪುಡಿಯನ್ನು ನನ್ನ ಕೈಗಿತ್ತರು. ಇನ್ನೊಂದು ಲೋಟದಷ್ಟೇ ಇದ್ದ ಪುಡಿ ಅವರಿಗಾಯಿತು. ನಂಬಲಾರದ ಸತ್ಯ. ಆದರೆ ನಂಬಲೇ ಬೇಕು.

ಹೀಗಿರಲು ಭಾರತದ ಮಹಾ ಚುನಾನಣೆ ಘೋಷಣೆಯಾಯಿತು. ಆಂದೋಲನ ಮೈ ಕೊಡವಿ ಎದ್ದು ನಿಂತಿತು. ಕೋಟಿಯವರ ಮಡದಿ ನಿರ್ಮಲ ಅವರು ಸಹಕಾರ ನೀಡಿದರು. ಗೆಳೆಯರ ದೊಡ್ಡ ಬಳಗ ಕೋಟಿಯವರ ಬೆನ್ನು ತಟ್ಟಿತು. ಸಾಕಷ್ಟು ಹೊಸ ಅಚ್ಚು ಮೊಳೆಗಳನ್ನು ತಂದೆವು. ಹೊಸ ಮುದ್ರಣ ಯಂತ್ರವನ್ನು ಕೊಂಡುಕೊಳಳಲಾಯಿತು. ನೌಕರರ ಸಂಖ್ಯೆ ಏರಿತು. ಎಲ್ಲರಿಗೂ ಬಿಡುವಿಲ್ಲದ ಕೆಲಸ. ಬೆಳಿಗ್ಗೆ ಎಂಟು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆವರೆಗೂ ಕೆಲಸ. ಸಂಜೆ ಪತ್ರಿಕೆಯ ಬದಲು ಬೆಳಗಿನ ಪತ್ರಿಕೆಯನ್ನು ಹೊರಡಿಸಲಾಯಿತು. ಜಾಹೀರಾತುಗಳು ಹರಿದು ಬಂದವು. ಆಂದೋಲನ ಪ್ರೆಸ್ಸಿನ ಮುಂದೆ ಕೋಟಿಯವರ ಮೊಟ್ಟ ಮೊದಲ ವಾಹನ ‘ಹೀರೋ’ ಬೈಸಿಕಲ್ ನಿಂತಿತು!

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ