ಎರಡೂವರೆ ಶತಮಾನಗಳನ್ನು ದಾಟಿರುವ ನಂಜನಗೂಡಿನ ಈ ರೈಲ್ವೆ ಸೇತುವೆ ಕಪಿಲಾ ನದಿಯಲ್ಲಿ ಪ್ರತಿವರ್ಷ ಬರುವ ನೂರಾರು ಪ್ರವಾಹಗಳನ್ನು ಕಂಡಿದೆ. ಆದರೆ ಬಗ್ಗದೆ, ಜಗ್ಗದೆ ಇಂದಿಗೂ ಗಟ್ಟಿಮುಟ್ಟಾಗಿದೆ. ಇಂಥ ಸೇತುವೆಯನ್ನು ದುರಸ್ತಿಗೊಳಿಸಿ ಪಾರಂಪರಿಕ ಸೇತುವಾಗಿ ಉಳಿಸಿಕೊಂಡರೆ ಮೈಸೂರಿನ ಪಾರಂಪರಿಕ ಸೊಬಗಿಗೆ ಮತ್ತೊಂದು ಸೇರ್ಪಡೆ.
ಆರ್.ಎಲ್.ಮಂಜುನಾಥ್
ಭಾರತದ ಮೊತ್ತ ಮೊದಲ ರೈಲ್ವೆ ಸೇತುವೆ ಮೈಸೂರು ಜಿಲ್ಲೆಯಲ್ಲಿದೆ ಎಂಬ ಸಂಗತಿ ನಿಮಗೆ ಗೊತ್ತೆ? ಹೌದು ೨೮೧ ವರ್ಷಗಳ ಹಳೆಯ ಸೇತುವೆ ಜಿಲ್ಲೆಯ ನಂಜನಗೂಡು ಸಮೀಪದ ಮಲ್ಲನಮೂಲೆ ಬಳಿ ಇದೆ. ಇದರ ಮತ್ತೊಂದು ವಿಶೇಷವೆಂದರೆ, ಈ ರೈಲ್ವೆ ಸೇತುವೆ ಪ್ರಪಂಚದ ಮೊದಲ ೧೦ ರೈಲ್ವೆ ಸೇತುವೆಗಳಲ್ಲಿ ಒಂದು.
ಒಟ್ಟು ೨೨೫ ಮೀ. ಉದ್ದದ ಈ ಸೇತುವೆಯನ್ನು ೧೭೩೫ರಲ್ಲಿ ಅಂದಿನ ಮೈಸೂರು ಸಂಸ್ಥಾನದಲ್ಲಿದ್ದ ಮಹಾಪ್ರಧಾನಿ, ದಳವಾಯಿ ಕಳಲೆ ದೇವರಾಜಯ್ಯ ಅವರು ನಿರ್ಮಿಸಿದ್ದಾರೆ. ಈ ಸೇತುವೆಯನ್ನು ಅಂದು ಸೈನಿಕರ, ಸಾರ್ವಜನಿಕರ ಓಡಾಟಕ್ಕೆ, ಎತ್ತಿನಗಾಡಿ, ಕುದುರೆಗಳ ಸಂಚಾರಕ್ಕೆ ನಿರ್ಮಿಸಲಾಗಿತ್ತು. ಆದರೆ, ನಂತರ ಬಂದ ಬ್ರಿಟಿಷರು ೧೮೯೯ರಲ್ಲಿ ಈ ಸುಸಜ್ಜಿತ ಸೇತುವೆಯನ್ನು ಕಂಡು ಇದರ ಮೇಲೆ ರೈಲ್ವೆ ಹಳಿಯನ್ನು ನಿರ್ಮಿಸಿದರು.
ಈ ಮಾರ್ಗದಲ್ಲಿ ೧೦೦ ವರ್ಷಗಳಿಗೂ ಹೆಚ್ಚು ಕಾಲ ರೈಲುಗಳು ಸಂಚರಿಸಿವೆ. ಆದರೆ, ೨೦೦೭ರಲ್ಲಿ ಬ್ರಾಡ್‌ಗೇಜ್ ಅಳವಡಿಕೆ ಮಾಡಿ, ಹೊಸ ಸೇತುವೆ ನಿರ್ಮಿಸಿದಾಗಿನಿಂದ ಮೀಟರ್‌ಗೇಜ್ ಆಗಿದ್ದ ಈ ರೈಲ್ವೆ ಸೇತುವೆ ನಿಷ್ಕ್ರಿಯವಾಗಿದೆ. ಇಂತಹ ಐತಿಹಾಸಿಕ ಹಿರಿಮೆಯನ್ನು ಹೊಂದಿರುವ ಈ ರೈಲ್ವೆ ಸೇತುವೆ ಈಗ ನಿರ್ಲಕ್ಷ್ಯಕ್ಕೆ ಒಳಗಾಗಿ, ಗಿಡ-ಗಂಟಿಗಳಿಂದ, ಜೊಂಡುಗಳಿಂದ ಆವೃತವಾಗಿದೆ. ದೇಶದ ರೈಲ್ವೆ ಇತಿಹಾಸದ ಕೊಂಡಿಯಾಗಿರುವ ಈ ಸೇತುವೆಯನ್ನು ಪಾರಂಪರಿಕ ಸೇತುವಾಗಿ ಅಭಿವೃದ್ಧಿಪಡಿಸಬೇಕೆನ್ನುವುದು ಸ್ಥಳೀಯರ ಆಗ್ರಹ.
ಕೆಲವು ವರ್ಷಗಳ ಹಿಂದೆ ರೈಲ್ವೆ ಇಲಾಖೆ ಈ ಐತಿಹಾಸಿಕ ರೈಲ್ವೆ ಸೇತುವೆಯ ಬಗ್ಗೆ ಜನರಿಗೆ ಮಾಹಿತಿ ನೀಡುವ ಸಲುವಾಗಿ ಅಲ್ಲಿ ರೈಲ್ವೆ ಬೋಗಿಯೊಂದನ್ನು ಇಟ್ಟು, ಮಾಹಿತಿ ಫಲಕ ಅಳವಡಿಸಿ ಪ್ರಚಾರ ನಡೆಸಿತ್ತು. ಸೇತುವೆ ಸುತ್ತಮುತ್ತ ಸ್ವಚ್ಛಗೊಳಿಸಿ ಅಭಿವೃದ್ಧಿಗೊಳಿಸುವ ಕಾರ‌್ಯ ನಡೆದಿತ್ತು. ಈ ಕೆಲಸ ಮತ್ತೆ ನನೆಗುದಿಗೆ ಬಿದ್ದಿದೆ.