Mysore
23
overcast clouds

Social Media

ಮಂಗಳವಾರ, 24 ಜೂನ್ 2025
Light
Dark

ನನ್ನ ಪರವಾಗಿ ಪೇದೆಗೆ ತರಾಟೆ ತೆಗೆದುಕೊಂಡಿದ್ದ ಕೋಟಿ

-ಸ.ರ.ಸುದರ್ಶನ
ಕನ್ನಡಪರ ಹೋರಾಟಗಾರರು

‘ಆಂದೋಲನ’ ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿಯವರು ನನಗೆ ನಿಕಟವಾಗಿದ್ದು ಗೋಕಾಕ್ ಚಳವಳಿಯಲ್ಲಿ. ಆ ಚಳವಳಿಯಲ್ಲಿ ಒಂದು ದಿನ ಆಗಿನ ಮುಖ್ಯಮಂತ್ರಿ ಗುಂಡೂರಾವ್ ವಿರುದ್ಧ ಪ್ರದರ್ಶನಕ್ಕೆ ತೀರ್ಮಾನಿಸಲಾಗಿತ್ತು. ಮಾನಸಗಂಗೋತ್ರಿಯಲ್ಲಿ ನಡೆದ ಸಮಾರಂಭದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಸಭೆಯೊಳಗೆ ಸೇರಿದ ನಾವುಗಳು ಗುಂಡೂರಾವ್ ಬರುತ್ತಿದ್ದಂತೆ ಘೋಷಣೆ ಕೂಗಿ ಮುತ್ತಿಗೆ ಹಾಕಿದೆವು. ಆಗ ಪೊಲೀಸರು ನನ್ನನ್ನು ಎಳೆದುಕೊಂಡು ಹೋಗಿ ಒಂದು ವ್ಯಾನಿನೊಳಗೆ ದೂಡಿದರು. ನಾನು ಅದರೊಳಗಿನ ಆಸನದ ಮೇಲೆ ಕುಳಿತೆ. ಅಲ್ಲಿದ್ದ ಒಬ್ಬ ಪೇದೆ ನನ್ನನ್ನು ಕೆಳಗೆ ಕುಳಿತುಕೊಳ್ಳೋ ಎಂದು ಗದರಿಸಿದ. ಆಗ ನಾನೊಬ್ಬನೇ ವ್ಯಾನಿನೊಳಗೆ ಇದ್ದವನು. ಆ ವೇಳೆಗಾಗಲೇ ಘೋಷಣೆ ಕೂಗುತ್ತಿದ್ದಾಗ ಎತ್ತಿದ ಕೈ ಗೆ ಸೋಕಿದ ಲಾಠಿಯಿಂದ ಉರಿಯತೊಡಗಿತ್ತು. ಮತ್ತೆ ಹೊಡೆದಾನು ಎಂದು ಹೆದರಿ ಕೆಳಗೆ ಇಟ್ಟಿದ್ದ ಟೈರಿನ ಮೇಲೆ ಕುಳಿತೆ. ಆದರೆ ಅದು ನನ್ನ ಸ್ವಾಭಿಮಾನಕ್ಕೆ ಪೆಟ್ಟುಕೊಟ್ಟಿತ್ತು. ಆದರೆ ಅದೇ ಮೊದಲ ಸಲ ಪೊಲೀಸರ ಒಡನಾಟ. ಆ ಪೇದೆಯ ಮಾತು ಧಿಕ್ಕರಿಸಲು ಧೈರ್ಯ ಬರಲಿಲ್ಲ.

ಹತ್ತು ನಿಮಿಷಗಳ ನಂತರ ಘೋಷಣೆ ಕೂಗುತ್ತಿದ್ದ ಇನ್ನೊಬ್ಬ ಚಳವಳಿಗಾರನನ್ನು, ಪೊಲೀಸನೊಬ್ಬ ಕರೆತಂದು ವ್ಯಾನಿಗೆ ಹತ್ತಿಸಿದ. ಅವರೇ ರಾಜಶೇಖರ ಕೋಟಿ. ಅವರು ವ್ಯಾನಿನೊಳಗೆ ಬಂದಾಗ ನನಗೆ ನೂರು ಆನೆಬಲ ಬಂದಂತಾಯಿತು. ‘‘ನೋಡಿ ಕೋಟಿ, ಈ ಪೊಲೀಸ್ ನನ್ನನ್ನು ಆಸನದ ಮೇಲೆ ಕೂರಬೇಡ ಎನ್ನುತ್ತಾನೆ’’ ಎಂದೆ. ರೋಷಾವಿಷ್ಟರಾದ ಕೋಟಿ ಆತನನ್ನು ತರಾಟೆಗೆ ತೆಗೆದುಕೊಂಡರು. ಕೂತ್ಕೊಳ್ರಿ ಮೇಲೆ ಎಂದು ನನಗೆ ಹೇಳಿದರು.

ಸಾಮಾನ್ಯವಾಗಿ ಪತ್ರಕರ್ತರು ಹೋರಾಟದ ವರದಿಗಳನ್ನು ಮಾಡುತ್ತಾರೆ. ಆದರೆ ತಾವೇ ಭಾಗವಹಿಸುವುದಿಲ್ಲ. ಅದೇ ರೀತಿ ಕೆಲವು ದೊಡ್ಡ ಸಾಹಿತಿಗಳು ಲೇಖನ ಬರೆಯುವಲ್ಲಿ ಮಾತ್ರ ಸಕ್ರಿಯ ಹೋರಾಟಗಾರರಾಗಿದ್ದರು. ಆದರೆ ಕೋಟಿಯ ಅಂತರಾಳದ ಒಳಗಿದ್ದ ಹೋರಾಟಗಾರನೊಬ್ಬ ಅವರನ್ನು ಬೀದಿಗೆ ಎಳೆದು ತಂದಿದ್ದ. ಕೆಲವು ಹಿರಿಯ ಪತ್ರಕರ್ತರು ಅವರು ಸಕ್ರಿಯವಾಗಿ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದರು. ಆದರೆ ಕೋಟಿ ಅದಕ್ಕೆ ಸೊಪ್ಪು ಹಾಕಲಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!