Mysore
21
broken clouds

Social Media

ಸೋಮವಾರ, 13 ಜನವರಿ 2025
Light
Dark

ಅವರಿವರು ಕಂಡಂತೆ ಮೈಸೂರು ಅರಸರು

  ಉತ್ತನಹಳ್ಳಿ ಮಹದೇವ

ದೇಶದ ಒಟ್ಟಾರೆ ಚರಿತ್ರೆಯನ್ನು ಗಮನಿಸಿದರೆ ಮೈಸೂರು ಅರಸರ ಪೈಕಿ ಬಹುತೇಕರು ದೇಶದ ಉಳಿದ ಅರಸರಂತೆ ಯುದ್ದೋತ್ಸಾಹ ಮೆರೆದವರಲ್ಲ. ವಿಜಯನಗರದ ಸಾಮಂತ ಅರಸರಾಗಿ ದೀರ್ಘ ಕಾಲ ಆಳ್ವಿಕೆ ನಡೆಸಿದ ಒಡೆಯರು ನಂತರ ಸ್ವತಂತ್ರವಾಗಿ ಆಡಳಿತ ನಡೆಸಿದರು. ಮಧ್ಯೆ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಆಡಳಿತದಲ್ಲಿ ಬದಿಗೆ ಸರಿದರು. ಇಷ್ಟರ ನಡುವೆಯೂ ೫೫೦ ವರ್ಷಗಳ ಕಾಲ ದೀರ್ಘ ಆಳ್ವಿಕೆ ನಡೆಸಿದ್ದು ಈ ರಾಜಮನೆತನದ ಹೆಗ್ಗಳಿಕೆ. ಜನಾನುರಾಗಿಗಳಾಗಿ ಪ್ರಜೆಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಕಾರಣದಿಂದಲೇ ಈ ಅರಸೊತ್ತಿಗೆಯನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಿದ್ದಾರೆ. ಯದುವಂಶಜರ ಕುರಿತ ಕೌತುಕದ ಕಥನಗಳು ಇಲ್ಲಿವೆ.

ಭಾರತ ಇತಿಹಾಸದಲ್ಲಿ ಸುಮಾರು ೫೫೦ ವರ್ಷಗಳ ಕಾಲ ದೀರ್ಘವಾಗಿ ಆಳಿದ ವಂಶಗಳ ಪೈಕಿ ಮೈಸೂರು ಯದುವಂಶಸ್ಥರು ಅಗ್ರಗಣ್ಯರೆನಿಸಿಕೊಂಡಿದ್ದಾರೆ. ಪಾಳೇಗಾರಿಕೆ-ರಾಜತ್ವ- ಮಹಾರಾಜತ್ವ ಹೀಗೆ ಮೂರು ವಿಭಿನ್ನ ಸ್ತರದಲ್ಲಿ ಮೈಸೂರು ಸಂಸ್ಥಾನ ಬೆಳೆಯಿತು. ಸ್ವಾತಂತ್ರ್ಯ ಕಾಣುವ ತನಕವೂ ಅಧಿಕಾರ ನಡೆಸುತ್ತಿದ್ದ ಅರಸರು, ಅರಸೊತ್ತಿಗೆ ಬಿಟ್ಟು ಪ್ರಜಾಪ್ರಭುತ್ವವನ್ನು ಕಣ್ಣಾರೆ ಕಂಡು ಎದೆಗವಚಿಕೊಂಡು ಸಾಮಾನ್ಯರಲ್ಲಿ ಸಾಮಾನ್ಯರಾದ ಉದ್ಧಾಮ ಚರಿತ್ರೆಯನ್ನು ಹುಟ್ಟು ಹಾಕಿದ್ದಾರೆ.
ಭಾರತದ ಭೂಪಟದಲ್ಲಿ ಮೈಸೂರು ಇಂದಿಗೂ ಕಂಗೊಳಿಸುವುದು ಪ್ರವಾಸೋದ್ಯಮ ಕಾರಣಕ್ಕಾಗಿ, ಸ್ವಚ್ಛತೆಯ ಹಿನ್ನೆಲೆಯಲ್ಲಿ ಮತ್ತು ಸಾಂಸ್ಕೃತಿಕ ಲೇಪನದೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿರುವುದಕ್ಕಾಗಿ. ಇವೆಲ್ಲವೂ ಕಾರ್ಯಸಾಧುವಾಗಲು ಅರಸರ ಕೊಡುಗೆಯೇ ಕಾರಣ ಎನ್ನುವುದನ್ನು ಉಲ್ಲೇಖಿಸಲೇಬೇಕು. ಇಂತಹ ಊರಿನಲ್ಲಿ ಆಳಿದ ರಾಜರುಗಳ ಸಂಖ್ಯೆ ೨೫ ಆದರೂ ಅವರು ಎದುರಿಸಿದ ಸನ್ನಿವೇಶ, ಕೈಗೊಂಡ ಕೈಂಕರ್ಯ, ಮಾಡಿದ ಸಾಧನೆ ಇವೆಲ್ಲವೂ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.

ಸಂಸ್ಥಾನದ ಸ್ಥಾಪನೆ ಹಿನ್ನೆಲೆ
ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ‘ಶ್ರೀ ತತ್ವನಿಧಿ’ ಕೃತಿಯಲ್ಲಿ ಬರೆದುಕೊಂಡಿರುವ ಪ್ರಕಾರ ಯದುವಂಶದ ಮೂಲ ಮಹಾವಿಷ್ಣುವಿನಿಂದ ಆರಂಭವಾಗುತ್ತದೆ. ಶ್ರೀಕೃಷ್ಣ- ರುಕ್ಮಿಣಿಯರ ಮಗ ಪ್ರದ್ಯುಮ್ನನ ವಂಶಜ ರಾಜದೇವನಿಗೆ ಇಬ್ಬರು ಪುತ್ರರು. ಯದುರಾಯ ಮತ್ತು ಕೃಷ್ಣರಾಯ. ಈ ಯದುರಾಯನಿಂದಲೇ ಮೈಸೂರು ಸಂಸ್ಥಾನ ಸ್ಥಾಪನೆಯಾಯಿತು ಎಂದು ಹೇಳಲಾಗುತ್ತದೆ. ಕ್ರಿ.ಶ. ೧೩೭೧ರಲ್ಲಿ ಯದುರಾಯ ಜನಿಸಿ, ಪುಣ್ಯಕ್ಷೇತ್ರಕ್ಕೆಂದು ದಕ್ಷಿಣದ ಕಡೆ ಬಂದಾಗ ಮೈಸೂರು ದರ್ಶನವಾಗುತ್ತದೆ. ಮೈಸೂರಿನಲ್ಲಿ ಮಾರನಾಯಕ ಎಂಬಾತ ಹದಿನಾಡು ಪಾಳೇಗಾರಿಕೆ ಮಾಡುತ್ತಿದ್ದ ಚಾಮರಾಜ ಮತ್ತು ದೇವಾಜಮ್ಮಣ್ಣಿಯ ರಾಜಕುವರಿ ದೇವಾಜಮ್ಮಣ್ಣಿಗೆ ಕಾಟ ಕೊಡುತ್ತಿದ್ದ. ಮಾರನಾಯಕನ ಸೊಕ್ಕಡಗಿಸಿದ ಯದುರಾಯನಿಗೆ ಬಳುವಳಿಯಾಗಿ ಮೈಸೂರು ಸಂಸ್ಥಾನದ ಪಟ್ಟ ಕಟ್ಟಲಾಯಿತು ಎಂಬಲ್ಲಿಗೆ ಕಥೆಯ ಉಪಾಂತ್ಯ. ಹೀಗೆ ಎಲ್ಲ ರಾಜವಂಶಸ್ಥರ ಬಗ್ಗೆಯೂ ಒಂದಷ್ಟು ಕಥೆಗಳಿವೆ. ಕೆಲವು ಐತಿಹ್ಯವಾದರೆ ಇನ್ನು ಕೆಲವು ಇತಿಹಾಸದ ಬೆಳಕಿನಲ್ಲಿ ಕಂಡ ಸತ್ಯ.

ಬೋಳ ಚಾಮರಾಜ ಹೆಸರು ಬಂದಿದ್ದೇ ರೋಚಕ!
ಯದುವಂಶವನ್ನಾಳಿದ ನಾಲ್ಕನೇ ಚಾಮರಾಜ ಒಡೆಯರ್ ಅವರ ಹೆಸರಿನ ಜತೆ ಬೋಳ ಎಂದು ಸೇರಿಕೊಂಡಿತ್ತು. ಇವರು ಒಮ್ಮೆ ಚಾಮುಂಡಿ ಬೆಟ್ಟದ ಗರ್ಭಗುಡಿಯಲ್ಲಿದ್ದಾಗ ಸಿಡಿಲು ಬಡಿಯಿತಂತೆ. ಆಗ ಇವರ ತಲೆಯ ಕೂದಲು ಮಾತ್ರ ಉದುರಿತು. ಇವರ ದೇಹಕ್ಕೆ ಯಾವ ಅಪಾಯವೂ ಆಗಲಿಲ್ಲ. ತಲೆಕೂದಲು ಉದುರಿದ್ದರಿಂದ ಬೋಳ ಚಾಮರಾಜ ಒಡೆಯರ್ ಹೆಸರು ಬಂದಿತು ಎಂಬುದು ಪ್ರತೀತಿ.

 ಚಿನ್ನದ ಸಿಂಹಾಸನ ಬಂದಿದ್ದು ಯಾವಾಗ?
ಮೈಸೂರು ದಸರಾ ಮಹೋತ್ಸವದ ೯ ದಿನಗಳ ಕಾಲ ಅಂಬಾವಿಲಾಸ ದರ್ಬಾರ್ ಹಾಲ್‌ನಲ್ಲಿ ಪ್ರತಿಷ್ಠಾಪಿಸಲ್ಪಡುವ ಚಿನ್ನದ ಸಿಂಹಾಸನ ಮೂಲದಲ್ಲಿ ಅಂಜೂರದ ಮರದ್ದಾಗಿತ್ತು. ಆಗ ಇದ್ದದ್ದು ೫ ಮೆಟ್ಟಿಲುಗಳು, ಮುಮ್ಮಡಿ ಕೃಷ್ಣರಾಜ ಒಡೆಯರ್ ಬೆಳ್ಳಿ ಲೇಪನವನ್ನು ತೆಗೆಸಿ ಚಿನ್ನದ ಲೇಪ ಮಾಡಿಸಿದರು. ಚಿನ್ನದ ಛತ್ರಿಯ ಅಂಚಿನಲ್ಲಿ ಚಾಮುಂಡಿ ಭಕ್ತಿ ಹಾಗೂ ಯದು ವಂಶಾವಳಿಯನ್ನು ಕೆತ್ತಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತೆರಡು ಮೆಟ್ಟಿಲುಗಳನ್ನು ಮಾಡಿಸಿದರು.

ಬಂಗಾರದೊಡ್ಡಿ ಕಾಲುವೆ ನಿರ್ಮಾಣ ಕೌತುಕ
ಮಲ್ಲಯುದ್ಧ ಪ್ರವೀಣ ರಣಧೀರ ಕಂಠೀರವ ನರಸರಾಜ ಒಡೆಯರ್ ಅವರಿಗೆ ೧೦ ಮಂದಿ ಪತ್ನಿಯರಿದ್ದರು. ಇವರ ಪ್ರೇಯಸಿ ದೊಡ್ಡಮ್ಮಣ್ಣಿ ನೆನಪಿನಲ್ಲಿ ಬಂಗಾರದೊಡ್ಡಿ ಕಾಲುವೆ ನಿರ್ಮಿಸಿದರು. ಈ ಕಾಲುವೆ ಕೆಳಗೆ ಕಾವೇರಿ ನದಿ, ಮೇಲೆ ಮೈಸೂರು- ಬೆಂಗಳೂರು ರಸ್ತೆ ಇದೆ. ಆ ಕಾಲದಲ್ಲೇ ಇಂತಹದ್ದೊಂದು ಪ್ರಯೋಗ ನಡೆದಿದ್ದು, ಭಾರತದಲ್ಲೇ ಮೊದಲನೆಯದು.

ಏಳು ಬೀಳು..
ಮೈಸೂರನ್ನು ಆಳಿದ ೨೫ ಅರಸರ ಪೈಕಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಮತ್ತು ಜಯ ಚಾಮರಾಜ ಒಡೆಯರ್ ಹಲವು ಏಳು ಬೀಳುಗಳನ್ನು ಕಂಡವರು. ಬ್ರಿಟಿಷರೊಂದಿಗಿನ ಯುದ್ಧದಲ್ಲಿ ಟಿಪ್ಪು ಮಡಿದ ನಂತರ ೫ನೇ ವರ್ಷದ ಪ್ರಾಯದ ಮುಮ್ಮಡಿ ಕೃಷ್ಣರಾಜ ಒಡೆಯರ್ (೧೭೯೯) ಪಟ್ಟಕ್ಕೆ ಬಂದರು. ಆದರೆ ಬ್ರಿಟಿಷರು ಅವರ ಅಧಿಕಾರ ಕಿತ್ತುಕೊಂಡು ವರ್ಷಕ್ಕೆ ೧ ಲಕ್ಷ ರೂ. ಪಿಂಚಣಿ ನೀಡಿದರು. ನಂತರ ೧೮೫೧ರಲ್ಲಿ ಅಧಿಕಾರವನ್ನು ವಾಪಸ್ ನೀಡಿದರು. ಮುಮ್ಮಡಿಯವರು ಬ್ರಿಟಿಷರೇ ಬೆರಗಾಗುವಂತೆ ಆಡಳಿತ ನಡೆಸಿದರು.

ದೇಶ ಸ್ವಾತಂತ್ರ್ಯದ ಬೆಳಕು ಕಂಡಾಗ ಜಯ ಚಾಮರಾಜ ಒಡೆಯರ್ ತಮ್ಮ ರಾಜತ್ವ ತ್ಯಜಿಸಿ ದೇಶದಲ್ಲಿಯೇ ಪ್ರಥಮರೆನಿಸಿದರು. ಆದರೆ ಮುಂದೊಂದು ದಿನ ಅರಸು ಮನೆತನದ ಬ್ಯಾಂಕ್ ಬ್ಯಾಲೆನ್ಸ್ ೫,೦೦೦ ರೂಪಾಯಿಯೂ ಇರಲಿಲ್ಲ. ೧೯೬೯ರಲ್ಲಿ ಅಂದಿನ ಮೈಸೂರು ಪುರಸಭೆ ಅರಮನೆಯ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳಿಸಿತ್ತು. ಆಗ ನಟ ಎಂ.ಪಿ.ಶಂಕರ್ ಅವರ ಚಿತ್ರೀಕರಣ ಯೂನಿಟ್‌ನಲ್ಲಿದ್ದ ಜನರೇಟರ್ ಅನ್ನು ಅರಮನೆಗೆ ಬಾಡಿಗೆಗೆ ಪಡೆದು ವಿದ್ಯುತ್ ಪೂರೈಸಲಾಯಿತು. ಇಂದಿರಾ ಗಾಂಧಿ ರಾಜಧನ ರದ್ದುಗೊಳಿಸಿ ಕಾನೂನು ರೂಪಿಸಿದಾಗ ಅದನ್ನು ಅಕ್ಷರಶಃ ಪಾಲಿಸಿದ ಜಯಚಾಮರಾಜ ಒಡೆಯರ್ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಲೆಬಾಗಿದರು. ಮುಂದೆ ಅವರೇ ಕರ್ನಾಟಕ ಮತ್ತು ಮದ್ರಾಸ್ ರಾಜ್ಯಗಳಿಗೆ ರಾಜ್ಯಪಾಲರಾಗಿ ಕಾರ‌್ಯ ನಿರ್ವಹಿಸಿದರು.

ಊರಿಗೆ ಬಂದೋದವರ ಹೆಸರೇ ಶಾಶ್ವತ
ಕಾವೇರಿ ನದಿಯಿಂದ ಮೈಸೂರು ನಗರದ ಅರಮನೆಯೊಳಗೆ ನೀರು ತರಬೇಕೆಂದು ಅಗೆದ ದಿವಾನ್ ಪೂರ್ಣಯ್ಯ ಕಾಲುವೆ ನಂತರ ಸಯ್ಯಾಜಿರಾವ್ ರಸ್ತೆಯಾಯಿತು. ಕಾಲುವೆ ಅಗೆಯುತ್ತಾ ಅಗೆಯುತ್ತಾ ೬೦ ಅಡಿ ಆಳಕ್ಕೆ ಹೋಗಿದ್ದರಿಂದ ಅರಮನೆಗೆ ನೀರು ಏರಲಿಲ್ಲ. ಬಳಿಕ ಕಾಲುವೆಯನ್ನು ಮುಚ್ಚಲಾಯಿತು. ಅದನ್ನೇ ರಸ್ತೆಯನ್ನಾಗಿಸಿ ಮೈಸೂರು ಸಂಸ್ಥಾನಕ್ಕೆ ನಿಕಟರಾಗಿದ್ದ ಬರೋಡಾ ಮಹಾರಾಜ ಸಯ್ಯಾಜಿರಾವ್ ಗಾಯಕ್ವಾಡ್ ಅವರ ಹೆಸರನ್ನು ನಾಮಕರಣ ಮಾಡಲಾಯಿತು.

  ನಾಲ್ವಡಿ ಎಂಬ ಅಜರಾಮರ ರಾಜ

ಮೈಸೂರು ಅರಸರ ಪೈಕಿ ನಾಲ್ವಡಿ ಅಭಿವೃದ್ಧಿ ದೃಷ್ಟಿಯಿಂದ ಅಗ್ರಗಣ್ಯರು. ಅವರ ಕಾಲದಲ್ಲಿ ಆದ ಅಭಿವೃದ್ಧಿ ಕೆಲಸಗಳಿಗೆ ಮನಸೋತ ಮಹಾತ್ಮ ಗಾಂಧೀಜಿ ‘ರಾಜರ್ಷಿ’ ಎಂದು ಕರೆದಿದ್ದರು. ಎಂದಿಗೂ ಯಾರನ್ನೂ ನೋಯಿಸದ ನಾಲ್ವಡಿ, ರಾಜ್ಯದ ಅಭಿವೃದ್ಧಿಗೆ ಏನೆಲ್ಲಾ ಮಾಡಬೇಕು ಎಂಬ ದೂರದೃಷ್ಟಿತ್ವ ಹೊಂದಿದ್ದರು. ದೇಶದಲ್ಲೇ ಮೊದಲ ಬಾರಿ ಪ್ರಜಾ ಪ್ರತಿನಿಧಿ ಸಭೆಗೆ ಅವಕಾಶ ನೀಡಿದ್ದಲ್ಲದೆ, ಶೋಷಿತರಿಗಾಗಿ ಮೀಸಲು ನೀಡುವ ಚಾರಿತ್ರಿಕ ನಿರ್ಧಾರ ಕೈಗೊಂಡಿದ್ದು ಇತಿಹಾಸ. ಅದೇ ರೀತಿ ಶಿಂಷಾ ನದಿಯಲ್ಲಿ ವಿದ್ಯುತ್ ಉತ್ಪಾದನೆ, ಕನ್ನಂಬಾಡಿ ಕಟ್ಟೆ ನಿರ್ಮಾಣ, ಚಿತ್ರದುರ್ಗದಲ್ಲಿ ಮಾರಿಕಣಿವೆ ಅಣೆಕಟ್ಟು ನಿರ್ಮಿಸಿದ್ದು ಇಂದಿಗೂ ಇತಿಹಾಸವಾಗಿ ಉಳಿದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ