ಮೈಸೂರು: ರಾಜಶೇಖರ ಕೋಟಿ ಎಷ್ಟೇ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದರೂ ಸತ್ಯ ಹೇಳುವುದರಲ್ಲಿ ಎಂದಿಗೂ ರಾಜೀ ಮಾಡಿಕೊಂಡವರಲ್ಲ. ಕೊನೆಯ ತನಕವೂ ಅದೇ ದಾರಿಯಲ್ಲಿ ಕೆಲಸ ಮಾಡಿಕೊಂಡು ಬಂದವರು. ಅವರ ಆದರ್ಶದಂತೆ ‘ಆಂದೋಲನ’ ಪತ್ರಿಕೆ ಮುಂದುವರಿಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಘಟಿಕೋತ್ಸವ ಭವನದಲ್ಲಿ ‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮದಲ್ಲಿ ರಾಜಶೇಖರ ಕೋಟಿ ಅವರ ‘ಇದ್ದದ್ದು ಇದ್ಹಾಂಗ’ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಆಂದೋಲನ’ ೫೦ ವರ್ಷ ಪೂರೈಸಿರುವುದು ಬಹಳ ಸಂತೋಷದ ಸಂಗತಿ. ಯಾವುದೇ ಪತ್ರಿಕೆ ೫೦ ವರ್ಷ ದಾಟುವುದು ದೊಡ್ಡ ಮೈಲಿಗಲ್ಲು. ಒಂದು ಪತ್ರಿಕೆ ಹುಟ್ಟಿ ಬಾಳಿ ಬದುಕಿ ಸಾಗಿ ಅದರಲ್ಲಿ ಸಫಲತೆ ಕಾಣುವುದು ಸಂತಸವಾಗಿದೆ. ರಾಜಶೇಖರ ಕೋಟಿ ನಮ್ಮ ಜತೆ ಇಲ್ಲ. ಪತ್ರಿಕೆ ಈ ಮಟ್ಟಕ್ಕೆ ಬೆಳೆಯಬೇಕಾದರೆ ಅವರ ಶ್ರಮ ಬಹಳ ದೊಡ್ಡದು. ಹಲವು ಕಷ್ಟ ಕಾರ್ಪಣ್ಯ ಅನುಭವಿಸಿ ಕೆಲವು ಸ್ನೇಹಿತರ ಸಹಕಾರದಿಂದ ಪತ್ರಿಕೆಯನ್ನು ಕಟ್ಟಿ ಬೆಳೆಸಿದರು ಎಂದು ನುಡಿದರು.
ಕೋಟಿ ಪರಿಚಯವಾಗಿದ್ದು ನನಗೆ ಕೆ.ಆರ್.ಸರ್ಕಲ್‌ನಲ್ಲಿ, ೧೯೭೨-೧೯೭೩ರಲ್ಲಿ ನನಗೆ ಪ.ಮಲ್ಲೇಶ್ ಅವರು ಪರಿಚಯ ಮಾಡಿಸಿದರು. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಓದುಗರಿಗೆ ಸತ್ಯವನ್ನು ತಿಳಿಸುವ ಕೆಲಸ ಮಾಡಿದ್ದರು. ಎಡಪಂ ಥೀಯರಾದರೂ ಪತ್ರಿಕಾ ವೃತ್ತಿಯಲ್ಲಿ ರಾಜಿ ಮಾಡಿಕೊಂಡವರಲ್ಲ. ಆರ್ಥಿಕ ಶಕ್ತಿ ಬರಬೇಕಾದರೆ ಮಾಜಿ ಶಾಸಕರಾದ ವೇದಾಂತ ಹೆಮ್ಮಿಗೆ ಅವರು ಮುಖ್ಯಮಂತ್ರಿಯಾಗಿದ್ದ ಎಸ್.ಆರ್. ಬೊಮ್ಮಾಯಿ ಅವರ ಮೂಲಕ ಜಾಹೀರಾತು ಕೊಡಿಸುವ ಕೆಲಸ ಮಾಡಿದರು. ಆಮೇಲೆ ಜಾಹೀರಾತು ಬರಲು ಶುರುವಾಗಿ ಆರ್ಥಿಕವಾಗಿ ಸಬಲತೆ ಕಾಣಲು ಸಾಧ್ಯವಾಯಿತು ಎಂದರು.
ನಾನು ಮೊದಲು ಓದುತ್ತಿದ್ದದ್ದು ‘ಆಂದೋಲನ’. ಆಮೇಲೆ ಬೇರೆ ಪತ್ರಿಕೆಗಳನ್ನು ಓದುತ್ತಿದ್ದೆ. ಕೋಟಿ ಧ್ವನಿ ಇಲ್ಲದವರಿಗೆ ಧ್ವನಿ ಕೊಡಿಸುವ ಕೆಲಸ ಮಾಡಿದ್ದರು. ಶೋಷಿತರು, ವಂಚಿತರು, ದಮನಿತರ ಪರವಾಗಿ ಕೆಲಸ ಮಾಡಬೇಕು. ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಪತ್ರಿಕೆಗಳು ಕೆಲಸ ಮಾಡಿದ್ದವು. ಪತ್ರಿಕೆಗಳು ಹೋರಾಟದ ಭಾಗವಾಗಿ ಕೆಲಸ ಮಾಡಿದ್ದವು. ರೈತ ಚಳವಳಿ, ದಲಿತ ಚಳವಳಿ, ಗೋಕಾಕ್ ಚಳವಳಿ ಸೇರಿ ಇನ್ನಿತರ ಚಳವಳಿಗಳ ಭಾಗವಾಗಿ ‘ಆಂದೋಲನ’ ಕೆಲಸ ಮಾಡುತ್ತಿದ್ದನ್ನು ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.
ಹೋರಾಟದ ಕಿಚ್ಚು, ಉದ್ದೇಶವನ್ನು ತಿಳಿಸುವ ಕೆಲಸವನ್ನು ‘ಆಂದೋಲನ’ ಮಾಡುತ್ತಿತ್ತು. ಕೋಟಿ ಅವರ ಮಾರ್ಗದರ್ಶನ, ದಾರಿಯನ್ನು ಉಳಿಸಿಕೊಂಡು ಬಂದಂತೆ ಈಗಲೂ ರಶ್ಮಿ ಕೋಟಿ, ರವಿ ಕೋಟಿ ಅವರು ಮುಂದುವರಿಸಿಕೊಂಡು ಕೋಟಿ ಆಶಯಕ್ಕೆ ಚ್ಯುತಿ ಬಾರದಂತೆ ಪತ್ರಿಕೆ ಮುನ್ನಡೆಸುತ್ತಿದ್ದಾರೆ. ನಾವೆಲ್ಲ ರಾಜಕಾರಣಕ್ಕೆ ಬರಲು ಪ.ಮಲ್ಲೇಶ್, ಪ್ರೊ.ಕೆ.ರಾಮದಾಸ್, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಕಾರಣ. ವಕೀಲರಾಗಿದ್ದಾಗ ಮಹಾರಾಜ ಕಾಲೇಜು ಕ್ಯಾಂಟೀನ್‌ನಲ್ಲಿ ಆಗಿಂದಾಗ್ಗೆ ಸೇರುತ್ತಿದ್ದವು. ಆಗ ಕೋಟಿ ಅವರು ಬರುತ್ತಿದ್ದರು. ಪ. ಮಲ್ಲೇಶ್‌ರಿಗೆ ಸ್ವಲ್ಪ ಮುಂಗೋಪ. ವಯಸ್ಸಾದರೂ ಕೋಪ ಹೋಗಿಲ್ಲ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.
ರಾಜಶೇಖರ ಕೋಟಿಯವರು ಮೈಸೂರಿಗೆ ಬರುವಾಗ ಒಂದು ಬ್ಯಾಗ್ ನೇತು ಹಾಕಿಕೊಂಡು ಬಂದರು. ಅಂದು ಏನು ಇರಲಿಲ್ಲ. ಅಂದಿನಿಂದ ಅವರ ಹೋರಾಟದ ಪಯಣ ಆರಂಭವಾಯಿತು. ಸಮಾಜಕ್ಕೆ ಬೇಕಾದ ಪ್ರಯತ್ನ ಮಾಡಿದ್ದಾರೆ. ಅಸಮಾನತೆ ಹೋಗದೆ ಸಮ-ಸಮಾಜ ನಿರ್ಮಾಣವಾಗಲ್ಲ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದೆ ಇರುವುದು ಬಹಳ ನೋವಿನ ಸಂಗತಿ. ಯಾವುದೇ ಪತ್ರಿಕೆಗೆ ಸಮಾಜ, ಜನರ ಸಮಸ್ಯೆ ಗೊತ್ತಿರಬೇಕು. ವಸ್ತುನಿಷ್ಠ ಸುದ್ದಿಕೊಡಬೇಕು. ಅದಕ್ಕೆ ಬೇಕಾದ ತಯಾರಿ ಮಾಡಬೇಕು. ರೋಚಕ ಸುದ್ದಿಗಳಿಗೆ ಹೆಚ್ಚು ಮಹತ್ವ ನೀಡಬಾರದು. ವೈಯಕ್ತಿಕ ಬದುಕಿನ ಸುದ್ದಿಗಳನ್ನು ಭಿತ್ತರಿಸಬಾರದು. ಮೌಢ್ಯಗಳನ್ನು ತೋರಿಸಿ ಬಿಂಬಿಸುವುದರಿಂದಸಮಾಜಕ್ಕೆ ಉಪಯೋಗವಾಗಲ್ಲ ಎಂದು ಹೇಳಿದರು.
ನನ್ನ ಕಾರಿನಲ್ಲಿ ಕಾಗೆ ಕುಳಿತುಕೊಂಡಿದ್ದೆ ದೊಡ್ಡ ಚರ್ಚೆಯಾಯಿತು. ಈ ಸಾರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲ್ಲ ಅಂತ ಕೆಲವರು ಹೇಳಿದರೆ, ಮತ್ತೆ ಕೆಲವರು ಬಜೆಟ್ ಮಂಡಿಸುತ್ತಾರೆ, ಆದರೆ ಸರ್ಕಾರ ಬಿದ್ದು ಹೋಗುತ್ತದೆ ಎಂದರು. ಅದಾದ ಬಳಿಕ ಎರಡು ವರ್ಷ ಸರ್ಕಾರ ನಡೆಸಿದೆ. ಚಾಮರಾಜನಗರಕ್ಕೆ ೧೨ ಬಾರಿ ಹೋದರೂ ೫ ವರ್ಷ ಪೂರೈಸಿದೆ. ಇದರಿಂದ ಸಿಎಂ ಹುದ್ದೆ ಹೋಗಲಿಲ್ಲ. ರೋಚಕ ಸುದ್ದಿಗಳಿಗೆ ಅವಕಾಶ ಕೊಡದೆ, ಸುಳ್ಳು ಸುದ್ದಿ ಮಾಡದೆ ‘ಆಂದೋಲನ’ ಜನರ ಧ್ವನಿಯಾಗಿ ಕೆಲಸ ಮಾಡಲಿ ಎಂದು ಆಶಿಸಿದರು