ನಂಜನಗೂಡಿಗೆ ಪ್ರಥಮ ಬಾರಿಗೆ ರೈಲು ಮಾರ್ಗವನ್ನು ೧೮೯೧ರ ಡಿಸೆಂಬರ್ ೧ರಂದು ನಿರ್ಮಾಣವಾಯಿತು. ಅದಕ್ಕೆ ೬ ಲಕ್ಷ ರೂ. ವೆಚ್ಚವಾಗಿದೆ. ಎಫ್‌ಸಿಐ ಉಗ್ರಾಣ ಕಟ್ಟೆಗಳ ಮುಂದೆ ಹಳಿಗಳ ಪಕ್ಕದಲ್ಲಿ ರೈಲು ನಿಲ್ದಾಣ ಇತ್ತು.
ಹಾಗಾಗಿಯೇ ಗಣ್ಯರು ರೈಲಿನಲ್ಲಿ ಬಂದಾಗ ವಾಸ್ತವ್ಯಕ್ಕೆ ಅನುಕೂಲವಾಗಲಿ ಎಂಬ ಕಾರಣದಿಂದ ಪರಿವೀಕ್ಷಣ ಬಂಗಲೆಯನ್ನು ನಿಲ್ದಾಣಕ್ಕೆ ಸಮೀಪದಲ್ಲಿಯೇ ನಿರ್ಮಿಸಲಾಗಿತ್ತು.
ಈಗಿರುವ ರೈಲು ನಿಲ್ದಾಣ ೧೮೯೯ರ ಜೂನ್ ೧೨ರಂದು ಆರಂಭವಾಯಿತು. ಮೊದಲಿಗೆ ಕಲ್ಲಿದ್ದಲು ಇಂಜಿನ್‌ನ ರೈಲುಗಾಡಿ ಇತ್ತು. ನಂತರ ಡೀಸೆಲ್ ಇಂಜಿನ್ ಬಂತು. ಇದೀಗ ಈ ರೈಲು ಮಾರ್ಗವನ್ನು ವಿದ್ಯುದೀಕರಣಗೊಳಿಸಲಾಗುತ್ತಿದೆ. ಶೀಘ್ರದಲ್ಲಿ ವಿದ್ಯುತ್ ಚಾಲಿತ ರೈಲುಗಳ ಸಂಚಾರವೂ ಆರಂಭವಾಗಲಿದೆ.
ನಂಜನಗೂಡಿನಲ್ಲಿ ಮೂರು ರೈಲ್ವೆ ಗೇಟ್‌ಗಳಿದ್ದು, ಜನಸಂಖ್ಯೆ, ವಾಹನಗಳ ಸಂಖ್ಯೆ ಹೆಚ್ಚಾದಂತೆ ನಿಲ್ದಾಣದ ಸಮೀಪವೇ
ಇರುವ ರೈಲು ಗೇಟ್ ಬಳಿ ಕೆಳ ಸೇತುವೆ ನಿರ್ಮಿಸಲಾಗಿದೆ.
ಅಲ್ಲದೆ, ರೈಲು ನಿಲ್ದಾಣವನ್ನು ಕೂಡ ಮೇಲ್ದರ್ಜೆಗೇರಿಸಲಾಗಿದೆ. ಮೈಸೂರು, ಚಾಮರಾಜನಗರಗಳಿಗೆ ಪ್ರತ್ಯೇಕ ಪ್ಲಾಟ್‌ಫಾರಂಗಳನ್ನು ನಿರ್ಮಿಸಲಾಗಿದೆ. ಅಲ್ಲದೆ, ನಿಲ್ದಾಣದಲ್ಲಿ ಪ್ರಯಾಣಿಕರು ಒಂದು ಪ್ಲಾಟ್‌ಫಾರಂನಿಂದ ಇನ್ನೊಂದು ಪ್ಲಾಟ್‌ಫಾರಂಗೆ ತೆರಳಲು ಮೇಲ್ಸೇತುವೆಯನ್ನೂ ನಿರ್ಮಿಸಲಾಗಿದೆ.