ಟ್ರಿಲಿಯನ್ ಲೆಕ್ಕದಲ್ಲಿ ಮಾಧ್ಯಮ ವಹಿವಾಟು : ಸಾಯಿನಾಥ್ ಆತಂಕ
ಮೈಸೂರು: ೨೦೨೪ರ ವೇಳೆಗೆ ಮಾಧ್ಯಮ ಮನೋರಂಜನಾ ಕ್ಷೇತ್ರದ ವಹಿವಾಟು ೨.೩೨ ಟ್ರಿಲಿಯನ್‌ಗೆ ಮುಟ್ಟಲಿದೆ. ಇದನ್ನು ಗಮನಿಸಿದರೆ ಮಾಧ್ಯಮ ಕ್ಷೇತ್ರ ಎತ್ತ ಹೋಗುತ್ತಿದೆ ಎನ್ನುವುದು ಗೊತ್ತಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರು ಆತಂಕ ವ್ಯಕ್ತಪಡಿಸಿದರು.
ನಗರದ ಕರಾಮುವಿ ಘಟಿಕೋತ್ಸವ ಭವನದಲ್ಲಿ ಬುಧವಾರ ನಡೆದ ‘ಆಂದೋಲನ’ ದಿನ ಪತ್ರಿಕೆಯ ೫೦ನೇ ವರ್ಷದ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪ್ರಸ್ತುತ ದಿನಮಾನದಲ್ಲಿ ಮಾಧ್ಯಮ ಹಾಗೂ ಪತ್ರಕರ್ತರ ನಡುವೆ ಅಂತರ ಹೆಚ್ಚಾಗುತ್ತಿದೆ. ಮಾಧ್ಯಮ ಈಗ ಮನೋರಂಜನಾ ಕ್ಷೇತ್ರವಾಗಿದೆ, ಕಾರ್ಪೊರೇಟ್ ಸಂಸ್ಥೆಗಳು ಮಾಧ್ಯಮ ಕ್ಷೇತ್ರವನ್ನು ನಡೆಸುವುದರಿಂದ ಲಾಭದಾಯಕತೆ ಮುಖ್ಯವಾಗಿದೆ. ಆದ್ದರಿಂದಲೇ ಈಗಾಗಲೇ ೧.೯ ಟ್ರಿಲಿಯನ್ ವಹಿವಾಟು ನಡೆಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗಂತೂ ಎರಡು ಬಗೆಯ ಪತ್ರಕರ್ತರಿದ್ದಾರೆ. ಒಬ್ಬರು ಸುದ್ದಿ ಬರೆಯುವ ಪತ್ರಕರ್ತರಾಗಿದ್ದರೆ ಇನ್ನೊಬ್ಬರು ಕೇವಲ ಲಿಪಿಕಾರರಾಗಿದ್ದಾರೆ. ಪ್ರಸ್ತುತ ಎರಡನೇ ಬಗೆಯ ಪತ್ರಕರ್ತರೇ ಹೆಚ್ಚಾಗಿ ಇರುವುದು. ಇದಕ್ಕೆ ಕಾರಣ ಬಂಡವಾಳಶಾಹಿಗಳ ಕೈಯಲ್ಲಿ ಮಾಧ್ಯಮವಿರುವುದು ಎಂದು ವಿಶ್ಲೇಷಣೆ ಮಾಡಿದರು.
ಅಂಬಾನಿ ಅವರು ಎರಡು-ಮೂರು ಮಧ್ಯಮ ಸಂಸ್ಥೆಗಳಿಗೆ ಮಾಲೀಕರಾಗಿದ್ದಾರೆ. ಅವರಿಗೆ ರೈತರ ಹೋರಾಟಗಳು ಮುಖ್ಯವಾಗುವುದಿಲ್ಲ. ಬದಲಾಗಿ ತಮ್ಮ ಉತ್ಪನ್ನಗಳನ್ನು ಪ್ರಚುರಪಡಿಸಲು ಮಾಧ್ಯಮವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಆದಾಯ ಪಂಜಾಬಿನ ಜಿಡಿಪಿಗಿಂತ ಹೆಚ್ಚಾಗಿದೆ. ಅದಾನಿ ಅವರ ಆದಾಯವೂ ಕೂಡ ಹರಿಯಾಣದ ಜಿಡಿಪಿಗಿಂತ ಹೆಚ್ಚಾಗಿದೆ. ಇಂತಹ ಬಂಡವಾಳ ಶಾಹಿಗಳ ಕೈಯಲ್ಲಿ ಮಾಧ್ಯಮಗಳು ಇರುವುದರಿಂದ ಪತ್ರಿಕಾ ಸ್ವಾತಂತ್ರ್ಯಕ್ಕೆ ಮಾನ್ಯತೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಮಾಧ್ಯಮ ಕ್ಷೇತ್ರವು ಬಂಡವಾಳಶಾಹಿಗಳ ಹಿಡಿತದಲ್ಲಿ ಇರುವುದರಿಂದಲೇ ದಿಲ್ಲಿಯಲ್ಲಿ ನಡೆದ ರೈತ ಹೋರಾಟ ಕುರಿತು ವಸ್ತುನಿಷ್ಠ ವರದಿಗಳು ಪ್ರಕಟವಾಗಲೇ ಇಲ್ಲ. ಕೆಲವೊಂದು ಪತ್ರಿಕೆಯಲ್ಲಿ ಸಂಪಾದಕೀಯಗಳು ಬಂದವು. ಅದರಲ್ಲಿ ಸರ್ಕಾರವು ರೈತರೊಂದಿಗೆ ಮಾತುಕತೆ ನಡೆಸಬೇಕು ಎಂದು ಹೇಳಿದ್ದರೂ ಕೊನೆಯ ಸಾಲಿನಲ್ಲಿ ಕೃಷಿ ಕಾಯ್ದೆಗಳು ಉತ್ತಮವಾಗಿವೆ. ಇದರಿಂದ ಬಂಡವಾಳಗಾರರಿಗೆ ಅನುಕೂಲ ಎಂದು ಬರೆದಿದ್ದವು ಎಂದು ಕಾರ್ಪೊರೇಟ್ ಮಾಧ್ಯಮಗಳಿಗೆ ತೀಕ್ಷ್ಣ ಮಾತಿನ ಚಡಿ ಏಟು ನೀಡಿದರು.
ರಾಜಕಾರಣಿಗಳು ಪತ್ರಿಕಾ ಮಾಲೀಕರು ಆಗುವುದು ಅಪಾಯಕಾರಿ: ಸಿಎಂ
ಮೈಸೂರು:ರಾಜಕಾರಣಿಗಳು ಪತ್ರಿಕೆಗಳನ್ನು ಆರಂಭಿಸಿ ಯಶಸ್ವಿಯಾದ ಉದಾಹರಣೆಗಳು ಇಲ್ಲವೇ ಇಲ್ಲ. ರಾಜಕಾರಣಿಗಳು ಚಾನಲ್‌ಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತವೆ. ಆದರೆ ಯಾರೂ ಕೂಡ ನೇರವಾಗಿ ಹೂಡಿಕೆ ಮಾಡಿ ಯಶಸ್ವಿಯಾಗಿಲ್ಲ….
ಇದು ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಭಾಷಣದಲ್ಲಿ ಪಿ.ಸಾಯಿನಾಥ್ ಅವರ ಅಭಿಪ್ರಾಯಕ್ಕೆ ನೀಡಿದ ಪ್ರತಿಕ್ರಿಯೆ. ವೀರೇಂದ್ರ ಪಾಟೀಲ ಅವರು ‘ಲೋಕಧ್ವನಿ’ ಪತ್ರಿಕೆ ಹೊರತಂದರು. ಆರ್.ಗುಂಡೂರಾವ್ ಕೂಡ ಇಂಗ್ಲಿಷ್ ಪತ್ರಿಕೆ ನಡೆಸಿದರು. ಆದರೆ ಅವರಿಗೆ ಅದು ಕೂಡಿಬರಲೇ ಇಲ್ಲ. ರಾಜಕಾರಣಿಗಳು ಪತ್ರಿಕೆ ಮಾಲೀಕತ್ವ ಪಡೆದುಕೊಂಡರೆಬಹಳ ಅಪಾಯವಿದೆ. ಉದ್ಯಮಿಗಳು ರಾಜಕಾರಣಿಗಳಾಗಬಹುದು. ರಾಜಕಾರಣಿಗಳು ಉದ್ಯಮಿಗಳಾದರೆ ವ್ಯವಸ್ಥೆ ಕುಲಗೆಟ್ಟು ಹೋಗುತ್ತದೆ. ಕಾಲ ಬದಲಾದಂತೆ ಪಾತ್ರಗಳು ಕೂಡಾ ಬದಲಾವಣೆಯಾಗುತ್ತವೆ ಎಂದು ಮಾರ್ಮಿಕವಾಗಿ ನುಡಿದರು. ಬಂಡವಾಳಶಾಹಿಗಳು ಪತ್ರಿಕೆಗಳನ್ನು ನಡೆಸುವುದರಲ್ಲಿ ಯಾವ ಪ್ರಮಾದವೂ ಕಾಣುವುದಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧಿ ಅವರಿಗೂ ಹಾಗೂ ಕಾಂಗ್ರೆಸ್ ಪಕ್ಷಕ್ಕೂ ಚಮನ್‌ಲಾಲ್ ಬಜಾಜ್ ಎಂಬ ಉದ್ಯಮಿ ಆರ್ಥಿಕ ಸಹಾಯ ನೀಡಿದ್ದರು. ದೇಶ ಭಕ್ತಿ ಇರುವ ಉದ್ಯಮಿಗಳು ಇದ್ದಾರೆ. ಒಳ್ಳೇ ಧ್ಯೇಯ-ಧೋರಣೆಯನ್ನು ಹೊಂದಿರುವವರು ಇದ್ದಾರೆ. ಗೊಯಾಂಕ ಅವರು ಒಬ್ಬ ಉದ್ಯಮಿಯಾಗಿದ್ದರೂ ತುರ್ತು ಪರಿಸ್ಥಿತಿಯನ್ನು ಮೊದಲು ವಿರೋಧ ಮಾಡಿದವರು ಅವರೇ. ಆದ್ದರಿಂದ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಹಾಕಿ ತೂಕ ಮಾಡಬಾರದು. ಒಂದೇ ವರ್ಣದಲ್ಲಿ ನೋಡಬಾರದು ಎಂದರು.
ಕಾಲ ಬದಲಾವಣೆಯಾಗುತ್ತಿದೆ. ಜನರ ಆಶೋತ್ತರಗಳೂ ಬದಲಾಗುತ್ತಿವೆ. ಜಾಗತೀಕರಣ- ಉದಾರೀಕರಣ-ಖಾಸಗೀಕರಣದ ಕಾಲಘಟ್ಟದಲ್ಲಿ ಎಲ್ಲವೂ ವ್ಯಾಪಾರ ಕೇಂದ್ರಿತವಾಗುತ್ತಿವೆ. ಆದರೆ ಅಂತಃ ಕರಣ ಕಡಿಮೆಯಾಗುತ್ತಿದೆ. ಆದ್ದರಿಂದ ಅಂತಃಕರಣ ಇಟ್ಟುಕೊಂಡು ಮುಂದೆ ಹೋಗಬೇಕಾಗಿದೆ ಎಂದರು. ತಂತ್ರಜ್ಞಾನ ಬಹಳ ಬದಲಾವಣೆ ತಂದಿದೆ. ಇತ್ತೀಚಿನ ಯುವಕರು ಕ್ಷಿಪ್ರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಬಹಳ ಒತ್ತಡ ಮತ್ತು ಜವಾಬ್ದಾರಿ ಇದೆ. ಜನರೂ ಕೂಡಾ ಪತ್ರಿಕೆಗಳಲ್ಲಿ ಬರುವ ವಿಚಾರಗಳಲ್ಲಿ ಸ್ಪಷ್ಟತೆ ಇರಬೇಕು ಎಂದು ಚಿಂತನೆ ನಡೆಸುತ್ತಿದ್ದಾರೆ. ಮಾತು ಮತ್ತು ಹೇಳಿಕೆಗಳು ಮುಖ್ಯವಾಗುತ್ತಿಲ್ಲ. ಯಾರು ಹೇಳಿದರು ಎನ್ನುವುದು ಮುಖ್ಯವಾಗುತ್ತಿವೆ. ಆದ್ದರಿಂದ ಚಿಂತನೆಗಳು ವಸ್ತುನಿಷ್ಠವಾಗಿರಬೇಕು ಎಂದು ಹೇಳಿದರು