Light
Dark

ಕಾಕನಕೋಟೆ ಎಂಬ ವಿಸ್ಮಯ ತಾಣ

ಮನುಷ್ಯ ಮತ್ತು ಆನೆಗಳ ಸಂಬಂಧ ಇಂದು ನಿನ್ನೆಯದಲ್ಲ. ನಮ್ಮ ಪುರಾಣ, ಇತಿಹಾಸಗಳುದ್ದಕ್ಕೂ ಆನೆಗಳ ಬಗ್ಗೆ ಅನೇಕಾನೇಕ ಕಥೆಗಳಿವೆ. ಐರಾವತ, ಸುಪ್ರತೀಕ, ಅಶ್ವತ್ಥಾಮ, ಗಜೇಂದ್ರ..ಹೀಗೆ ಪುರಾಣದಲ್ಲಿ ಆನೆಗಳದ್ದೇ ನೂರಾರು ದಂತಕಥೆಗಳಿವೆ. ರಾಜರ ಆಳ್ವಿಕೆಯಲ್ಲಿ ಗಜಪಡೆಗಳ ಸಾಮರ್ಥ್ಯವೇ ಬಲಾಬಲ ನಿರ್ಣಯಿಸುತ್ತಿತ್ತು. ಆನೆಗಳನ್ನು ಹಿಡಿದು ಪಳಗಿಸುವ ವಿಶಿಷ್ಟ ಕಾರ್ಯಾಚರಣೆ ಖೆಡ್ಡಾ. ಕನ್ನಡ ಚಲನಚಿತ್ರವೊಂದಕ್ಕೆ ಶೀರ್ಷಿಕೆಯಾದ ‘ಕಾಕನ ಕೋಟೆ’ ಖೆಡ್ಡಾ ಕಾರ್ಯಾಚರಣೆಗೆ ಪ್ರಸಿದ್ದವಾದ ಸ್ಥಳವಾಗಿತ್ತು.

-ಅನಿಲ್ ಅಂತರಸಂತೆ

ಪ್ರಾಣಿಗಳಲ್ಲೇ ಅತ್ಯಂತ ಬಲಶಾಲಿಯಾದ ಆನೆಯನ್ನು ಪಳಗಿಸಿ ತನಗೆ ಅಸಾಧ್ಯವಾದ ಕೆಲಸಗಳನ್ನು ಮಾಡಿಸುತ್ತಾ ಬಂದಿರುವುದು ಮನುಷ್ಯನ ಬುದ್ದಿವಂತಿಕೆ. ಆನೆಗಳನ್ನು ಸೆರೆಹಿಡಿಯಲು ಮಾನವ ಕಂಡುಕೊಂಡ ಮಾರ್ಗವೇ ಖೆಡ್ಡಾ ಕಾರ್ಯಚರಣೆ. ಖೆಡ್ಡಾ ಎಂಬುದು ಕಾಡಾನೆಗಳನ್ನು ಸೆರೆಹಿಡಿದು ಅವುಗಳನ್ನು ಪಳಗಿಸಲೆಂದೇ ವಿಶೇಷವಾಗಿ ನಿರ್ಮಾಣ ಮಾಡಿದ ಒಂದು ಬೋನಿನ ಆಯಾಮ ಗುಂಡಿ. ಖೆಡ್ಡಾಕ್ಕೆ ಕಾಡಾನೆಗಳನ್ನು ಬೀಳಿಸಿ ನಂತರ ಅವುಗಳನ್ನು ಪಳಗಿಸುವ ಕಾರ್ಯಚರಣೆಗೆ ವಿಶೇಷ ಪರಿಣತಿ ಬೇಕು. ರಾಜ ಮಹಾರಾಜರ ಕಾಲದಲ್ಲಿ ಈ ಕಾರ್ಯಾಚರಣೆಯಲ್ಲಿ ಪಳಗಿದವರಿಗೆ ವಿಶೇಷ ಮನ್ನಣೆ, ಸ್ಥಾನಮಾನಗಳಿರುತ್ತಿತ್ತು.

ಕರ್ನಾಟಕದ ನಾನಾ ಭಾಗಗಳಲ್ಲಿ ಈ ಖೆಡ್ಡಾ ಕಾರ್ಯಚರಣೆಯ ಬಹು ಹಿಂದಿನಿಂದಲೂ ಚಾಲ್ತಿಯಲ್ಲಿದ್ದವು. ಸುಮಾರು ೩೨-೩೩ ಖೆಡ್ಡಾಗಳಲ್ಲಿ ೧೮೦೦ರಷ್ಟು ಆನೆಗಳನ್ನು ಸೆರೆಹಿಡಿಯಲಾಗಿದೆ ಎಂಬುದು ಮಾಹಿತಿ. ವಿಶೇಷವೆಂದರೆ ಇಂತಹ ಖೆಡ್ಡಾ ಕಾರ್ಯಚರಣೆಗಳು ಹೆಚ್ಚಾಗಿ ಖ್ಯಾತಿಯನ್ನು ಪಡೆದಿದ್ದು ಹಳೇ ಮೈಸೂರು ಭಾಗದಲ್ಲಿ. ಅದರಲ್ಲೂ ಎಚ್.ಡಿ.ಕೋಟೆ ತಾಲೂಕಿನ ಕಾಕನಕೋಟೆ ಅರಣ್ಯ ಪ್ರದೇಶ ಆನೆಗಳ ಖೆಡ್ಡಾ ಕಾರ್ಯಚರಣೆಗೆ ಅತಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿತ್ತು. ಇಲ್ಲಿ ಸೆರೆಯಾಗಿ ಪಳಗಿಸಿದ ಆನೆಗಳು ವಿಶ್ವದಾದ್ಯಂತ ಗಮನ ಸೆಳೆದಿವೆ.

ನಾಗರಹೊಳೆಯ ಬಳ್ಳೆ ವ್ಯಾಪ್ತಿಯ ಸಮೀಪ ಕಾಡಾನೆಗಳ ಖೆಡ್ಡಾ ನಡೆಯುತ್ತಿತ್ತು ಎಂಬುದು ಅಲ್ಲಿನ ಸ್ಥಳೀಯರು ನೀಡುವ ಮಾಹಿತಿ. ದಾಖಲೆಗಳ ಪ್ರಕಾರ ಕಾಕನಕೋಟೆಯಲ್ಲಿ ಸುಮಾರು ೨೪ ಖೆಡ್ಡಾಗಳಿದ್ದವು. ಸುಮಾರು ೧೮೯೦-೯೧ರಲ್ಲಿ ಆರಂಭವಾದ ಕಾಕನಕೋಟೆ ಖೆಡ್ಡಾ ಕಾರ್ಯಚರಣೆಯಲ್ಲಿ ೩೮೦ಕ್ಕೂ ಅಧಿಕ ಆನೆಗಳನ್ನು ಸೆರೆ ಹಿಡಿದು ಪಳಗಿಸಲಾದ ಮಾಹಿತಿ ಇದೆ. ಇದಾದ ಬಳಿಕ ವಿದೇಶದ ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಇದೇ ಹೆಗ್ಗಡದೇವನ ಕೋಟೆಯಿಂದ ಸುಮಾರು ೬೦ ಆನೆಗಳನ್ನು ಸೆರೆಹಿಡಿದು ಕಳುಹಿಸಲಾಗಿತ್ತು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

ಒಡೆಯರ ಕಾಲದಲ್ಲಿ ೧೭ನೇ ಶತಮಾನದ ಆರಂಭದಿಂದಲೂ ರಾಜರು ತಮ್ಮ ಗಜಪಡೆಯ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಎಚ್.ಡಿ.ಕೋಟೆಯ ಕಾಕನಕೋಟೆ ಅರಣ್ಯ ವ್ಯಾಪ್ತಿಯಲ್ಲಿ ಖೆಡ್ಡಾಗಳನ್ನು ನಡೆಸಿದ್ದರು. ಆರಂಭದಲ್ಲಿ ಇದರಲ್ಲಿ ಯಶಸ್ಸು ಕಾಣಲಿಲ್ಲವಾದರೂ ನಂತರ ಪಳಗಿದ ಮಾವುತರು ಸಾಕಷ್ಟು ಆನೆಗಳನ್ನು ಖೆಡ್ಡಾಕ್ಕೆ ಕೆಡವಿ ಪಳಗಿಸಿದ ಬಳಿಕ ಗಜಪಡೆಯನ್ನು ಸೇರಿಸಲು ಯಶಸ್ವಿಯಾಗಿದ್ದರು. ಇದಾದ ಬಳಿಕ ೧೯೦೬ರಲ್ಲಿ ಇಂಗ್ಲೆಂಡಿನ ರಾಜಕುಮಾರ ಕಾಕನಕೋಟೆ ವ್ಯಾಪ್ತಿಯಲ್ಲಿ ಖೆಡ್ಡಾ ಕಾರ್ಯಾಚರಣೆ ವೀಕ್ಷಣೆ ಮಾಡಿರುವ ಬಗ್ಗೆ ದಾಖಲೆಗಳಿವೆ.

೭೦ರ ದಶಕದಲ್ಲಿ ಪರಿಸರ ಕಾಳಜಿ ಮತ್ತು ವನ್ಯಜೀವಿ ಸಂರಕ್ಷಣೆ ಕಾಯಿದೆಗಳು ಜಾರಿಯಾದ ಬಳಿಕ ಕಾಡು ಮತ್ತು ಪ್ರಾಣಿಗಳನ್ನು ಉಳಿಸುವ ಹಿತದೃಷ್ಟಿಯಿಂದ ಖೆಡ್ಡಾ ಕಾರ್ಯಾಚರಣೆಗೆ ನಿರ್ಬಂಧ ಹೇರಲಾಯಿತು. ಅಂದು ಖೆಡ್ಡಾದಲ್ಲಿ ಸಿಕ್ಕಿದ ಆನೆಗಳನ್ನು ಪಳಗಿಸಿ ಸೈ ಎನಿಸಿಕೊಂಡವರ ಬಳಿ ನೂರಾರು ರೋಚಕ ಕಥೆಗಳಿವೆ.

ಇದಾದ ಬಳಿಕ ಅಂದು ಖೆಡ್ಡಾದಲ್ಲಿ ಸೆರೆಯಾಗಿದ್ದ ಆನೆಗಳನ್ನು ನೋಡಿಕೊಳ್ಳಲು ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಶಿಬಿರಗಳನ್ನು ತೆರೆಯಲಾಯಿತು. ಈಗ ಖೆಡ್ಡಾದ ಬದಲು ವೈದ್ಯರ ಮೂಲಕ ಅರಿವಳಿಕೆ ನೀಡಿ ಪುಂಡಾನೆಗಳನ್ನು ಸೆರೆ ಹಿಡಿಯಲಾಗುತ್ತಿದೆ. ಈ ಕಾರ್ಯಾಚರಣೆಗೂ ಸಾಕಾನೆಗಳನ್ನು ಬಳಸಿಕೊಳ್ಳಲಾಗುತ್ತದೆ.

ದ್ರೋಣ ಸಿಕ್ಕಿದ್ದು ಇಲ್ಲೇ..

ದಸರೆ ಎಂದಾಕ್ಷಣ ಚಿನ್ನದ ಅಂಬಾರಿ ಹೊರುವ ಆನೆ ಮತ್ತು ದಸರೆ ಮೆರವಣಿಗೆಯಲ್ಲಿ ಭಾಗವಹಿಸುವ ಸಾಲಂಕೃತ ಆನೆಗಳು ನೆನಪಿಗೆ ಬರುವುದು ಸಹಜ. ಈ ಆನೆಗಳ ಪೈಕಿ ಸಾಕಷ್ಟು ಆನೆಗಳು ಈ ಭಾಗದಿಂದಲೇ ಹೋಗಿರುವುದು ವಿಶೇಷವಾಗಿದೆ. ಸತತ ೧೮ ವರ್ಷಗಳ ಕಾಲ ಅಂಬಾರಿಯನ್ನು ಹೊತ್ತು ಹೆಜ್ಜೆ ಹಾಕಿದ್ದ ದ್ರೋಣ ಮತ್ತು ಇತ್ತೀಚೆಗೆ ನಿವೃತ್ತಿ ಹೊಂದಿದ ಅರ್ಜುನ ಇದೇ ತಾಲೂಕಿನಲ್ಲಿ ಸೆರೆ ಸಿಕ್ಕಿದ ಆನೆಗಳು ಎಂಬುದು ಹೆಮ್ಮೆಯ ವಿಚಾರ. ಸುಮಾರು ೧೦.೨೫ ಅಡಿ ಎತ್ತರವಿದ್ದ, ೬೪೦೦ ಕೆ.ಜಿ ತೂಕದ ದ್ರೋಣ ತನ್ನ ಗಾಂಭೀರ್ಯಕ್ಕೆ ಹೆಸರಾಗಿದ್ದ ಆನೆ. ಈ ಆನೆಯನ್ನು ೧೯೭೧ರಲ್ಲಿ ಕಾಕನಕೋಟೆಯಲ್ಲಿ ಕಾರ್ಯಚರಣೆ ನಡೆಸಿ ಸೆರೆಹಿಡಿಯಲಾಗಿತ್ತು. ಇದರ ಮಾವುತ ದೊಡ್ಡಪ್ಪಾಜಿ ಇಂದಿಗೂ ಬಳ್ಳೆ ಹಾಡಿಯಲ್ಲಿ ವಾಸವಿದ್ದಾರೆ. ದುರದೃಷ್ಟ ಎಂಬಂತೆ ದ್ರೋಣ ೧೯೯೮ರ ಆಸುಪಾಸಿನಲ್ಲಿ ನಾಗರಹೊಳೆಯ ಡಿ.ಬಿ.ಕುಪ್ಪೆ ವ್ಯಾಪ್ತಿಯಲ್ಲಿ ಸೊಪ್ಪು ಮೇಯುವಾಗ ಹೈಟೆನ್ಷನ್ ವಿದ್ಯುತ್ ತಗುಲಿ ಸಾವನ್ನಪ್ಪಿತ್ತು.
ಇದಾದ ಬಳಿಕ ಕಾಕನಕೋಟೆಯಿಂದ ಅಂಬಾರಿ ಹೊರಲು ತೆರಳಿದ್ದು ಅರ್ಜುನ. ದಸರೆಯ ಆಕರ್ಷಣೆಯಾಗಿದ್ದ ಈ ಆನೆಯನ್ನು ಇದೀಗ ಬಳ್ಳೆ ಆನೆ ಶಿಬಿರದಲ್ಲಿ ನೋಡಿಕೊಳ್ಳಲಾಗುತ್ತಿದೆ. ಅಂಬಾರಿ ಹೊರುವ ಕಾರ‌್ಯಭಾರವನ್ನು ಅಭಿಮನ್ಯುವಿಗೆ ವಹಿಸಿದ ಬಳಿಕವೂ ಅರ್ಜುನ ಸಕ್ರಿಯನಾಗಿದ್ದಾನೆ. ಅರಣ್ಯ ಇಲಾಖೆಯ ಕೂಂಬಿಂಗ್ ಕಾರ್ಯಾಚರಣೆಯಂತಹ ಮಹತ್ವದ ಕೆಲಸಗಳಲ್ಲಿ ಆಗಾಗ ಅರ್ಜುನನ ನೆರವನ್ನು ಪಡೆದುಕೊಳ್ಳಲಾಗುತ್ತಿದೆ.

ದ್ರೋಣ ನಮ್ಮಲ್ಲೇ ಖೆಡ್ಡಾ ವೇಳೆ ಸೆರೆಯಾಗಿದ್ದ ಆನೆ. ಅದನ್ನು ಪಳಗಿಸಿ ಸಾಕಲಾಗಿತ್ತು. ಎತ್ತರವಾದ ಆನೆ, ಅದರ ಗಾಂಭೀರ್ಯ ಮತ್ತು ಸ್ವಭಾವ ನೋಡಿ ದಸಾರದಲ್ಲಿ ಅಂಬಾರಿ ಹೊರಲು ಅವಕಾಶ ನೀಡಿದರು. ಸುಮಾರು ೧೮ ವರ್ಷ ದಸರಾದಲ್ಲಿ ಭಾಗಿಯಾಗಿತ್ತು. ಮೊದಲು ಚೆನ್ನಕೇಶವಯ್ಯ ಎಂಬವರು ಮಾವುತರಾಗಿದ್ದರು. ಅವರ ಬಳಿಕ ನಾನು ಆಗಿದ್ದೆ. ದುರದೃಷ್ಟವಶಾತ್ ದ್ರೋಣ ದುರಂತ ಅಂತ್ಯ ಕಂಡಿತು. -ಮಾವುತ ದೊಡ್ಡಪ್ಪಾಜಿ

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ