Mysore
21
overcast clouds
Light
Dark

ಅಪ್ಪಾಜಿಗೆ ಪತ್ರಿಕೋದ್ಯಮ ಎಂದಿಗೂ ಉದ್ಯಮ ಆಗಿರಲಿಲ್ಲ : ರಶ್ಮಿ ಕೋಟಿ

ಮೈಸೂರು : ‘ಆಂದೋಲನ’ ದಿನಪತ್ರಿಕೆ ಅಪ್ಪಾಜಿಯ ಕನಸಿನ ಕೂಸು. ಅವರ ಅವಿರತ ಪರಿಶ್ರಮದ ಫಲ. ಸಮಾನ ಮನಸ್ಕ ಸಮಾಜವಾದಿ ಗೆಳೆಯರ ಒತ್ತಾಸೆಯ ಫಲಿತಾಂಶ. ಪತ್ರಿಕೆ ಮತ್ತು ಹೋರಾಟವೇ ಅವರ ಜೀವನ ಧರ್ಮವಾಗಿತ್ತು. ಪತ್ರಿಕೆಯನ್ನು ಎಂದೂ ಅವರು ಉದ್ಯಮದಂತೆ ಪರಿಗಣಿಸಿದ್ದೇ ಇಲ್ಲ . ಅದು ಹೋರಾಟದ ಮಾಧ್ಯಮವಾಗಿ, ದನಿಯಿಲ್ಲದವರ ದನಿಯಾಗಿ ಇರಬೇಕೆಂದು ಬಯಸಿದ್ದರು ಎಂದು ‘ಆಂದೋಲನ’ ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ ತಿಳಿಸಿದರು.

‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ೨೪ರ ಹರೆಯದಲ್ಲೇ ಆಂದೋಲನ ವಾರಪತ್ರಿಕೆಯನ್ನು ಪ್ರಾರಂಭ ಮಾಡುವ ಸಾಹಸವನ್ನು ಮಾಡಿದರು. ನಂತರ ಅವರ ಕನಸುಗಳ ಮೂಟೆಯನ್ನು ಹೊತ್ತುಕೊಂಡು ಮೈಸೂರಿಗೆ ಬಂದು ‘ಆಂದೋಲನ’ ದಿನಪತ್ರಿಕೆಯಾಗಿ ಈಗ ೫೦ ವರ್ಷಗಳನ್ನು ಪೂರೈಸಿದೆ. ನಿಷ್ಠುರವಾಗಿ ಬರೆಯಬೇಕಾದ ಸಂದರ್ಭದಲ್ಲಿ ಹಿಂಜರಿಯುತ್ತಿರಲಿಲ್ಲ. ಸತ್ಯ, ನಿಖರ, ನಿಷ್ಪಕ್ಷಪಾತ ಸುದ್ದಿಗಳನ್ನು ನೀಡಲು ಸದಾ ಪ್ರಾಮಾಣಿಕ ಪ್ರಯತ್ನ ಮಾಡಿ ಅನೇಕ ಬಾರಿ ಆ ಕಾರಣಕ್ಕಾಗಿ ನಷ್ಟವನ್ನು ಅನುಭವಿಸಿದ್ದಾರೆ. ಅಪ್ಪಾಜಿಯ ಗುರಿ, ಎದೆಗುಂದದೆ ಸಾಧಿಸುವ ಛಲ, ರಾಜಿ ಇಲ್ಲದ ವೃತ್ತಿಪರತೆ, ಕಠಿಣ ಪರಿಶ್ರಮ ‘ಆಂದೋಲ’ ನದ ಈ ಯಶಸ್ಸಿನ ಕಥೆಯನ್ನು ನಿರ್ಮಿ ಸಿದೆ. ಅಪ್ಪಾಜಿಯ ಸಿದ್ಧಾಂತಗಳು ಜಾಗೃತಪ್ರಜ್ಞೆಯಾಗಿ ಸದಾ ನಮ್ಮೊಂದಿಗಿವೆ ಎಂದು ನೆನೆದರು.

‘ಆಂದೋಲನ’ದ ೫೦ ವರ್ಷಗಳ ಈ ಸಾರ್ಥಕ ಪಯಣದಲ್ಲಿ ನಮ್ಮ ಓದುಗರು, ಅನೇಕ ಹೋರಾಟಗಾರರು, ಸಾಹಿತಿಗಳು, ಕಲಾವಿದರು, ಪತ್ರಕರ್ತರು ಹೆಗಲು ನೀಡಿದ್ದೀರಿ. ನಿಮ್ಮೆಲ್ಲರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕಾಲಕ್ಕೆ ತಕ್ಕಂತೆ ಪತ್ರಿಕಾ ಕ್ಷೇತ್ರದ ಬದಲಾವಣೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಾ ಹೊಸ ಸ್ವರೂಪಗಳೊಂದಿಗೆ ‘ಆಂದೋಲನ’ ಮುಂದುವರಿಯುತ್ತಿದೆ. ಮುಂದೆಯೂ ಮತ್ತಷ್ಟು ಹೊಸತನಗಳಿಗೆ ತೆರೆದುಕೊಳ್ಳಲು ಬದ್ಧವಾಗಿದೆ.

ಅಪ್ಪಾಜಿ ಆಶಯಗಳನ್ನು, ಕನಸುಗಳನ್ನು ಪತ್ರಿಕೆಯ ಮೂಲಕ ಜೀವಂತವಾಗಿಡಬೇಕೆಂಬುದೇ ಇಡೀ ‘ಆಂದೋಲನ’ ಬಳಗದ ಅಭಿಲಾಷೆಯಾಗಿದೆ ಎಂದು ಹೇಳಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ