Mysore
21
broken clouds

Social Media

ಸೋಮವಾರ, 13 ಜನವರಿ 2025
Light
Dark

ಪರಂಪರೆ ಜತೆ ಹೆಜ್ಜೆ ಹಾಕಿದ ಅಶ್ವಾರೋಹಿ ಪಡೆ

ಕೆ.ಬಿ.ರಮೇಶ ನಾಯಕ
ಕೆ.ಬಿ.ರಮೇಶ ನಾಯಕ

ಮೈಸೂರು ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವ ದೃಶ್ಯವೆಂದರೆ ದಸರಾ ಮೆರವಣಿಗೆ ವೈಭವ. ಅವಿಸ್ಮರಣೀಯ ನೋಟದ ಕುರುಹಾಗಿರುವ ಚಿನ್ನದ ಅಂಬಾರಿಯನ್ನು ಹೊತ್ತು ಗಾಂಭೀರ್ಯದಿಂದ ಸಾಗುವ ಗಜರಾಜ ಮತ್ತು ಅದರೊಡನೆ ಮೆರವಣಿಗೆಯಲ್ಲಿ ನಡೆಯುವ ಸಾಲಂಕೃತ ಆನೆಗಳು. ಅವುಗಳೊಡನೆ ಹೆಜ್ಜೆ ಹಾಕುವ ಅಶ್ವಾರೋಹಿ ಪಡೆ ಹಾಗೂ ವಾದ್ಯ ಪರಿಕರಗಳೊಂದಿಗೆ ಪಥ ಸಂಚಲನ ಗೀತೆಗೆ ಗಂಭೀರವಾಗಿ ಹೆಜ್ಜೆ ಹಾಕುವ ವಿವಿಧ ಸಮವಸ್ತ್ರಧಾರಿ ತುಕಡಿಗಳು.

ಮೈಸೂರಿನ ಅಶ್ವಾರೋಹಿ ಅಂಗರಕ್ಷಕ ಪಡೆ, ಅರಮನೆಯ ಬ್ಯಾಂಡ್ ಮತ್ತು ಅರಮನೆ ವಾದ್ಯಗೋಷ್ಠಿಗಳಿಗೆ ಶತಮಾನದ ಇತಿಹಾಸವಿದೆ. ಮೈಸೂರು ಅರಸರ ಸೈನಿಕ ತುಕಡಿಗಳ ಅವಶ್ಯಕತೆಯನ್ನು ಪೂರೈಸುವ ಸಲುವಾಗಿ ಈ ವಿಶೇಷ ಪಡೆ ರಚನೆಯಾಗಿತ್ತು. ಅರಸೊತ್ತಿಗೆಯ ಕಾಲ ಮುಗಿದು, ಪ್ರಜಾಪ್ರಭುತ್ವದ ಕಾಲ ಬಂದಾಗ ರಾಜ್ಯ ಪೊಲೀಸ್ ಸಂಸ್ಥೆಯ ಅಂಗಗಳಾಗಿ ಮಾರ್ಪಾಡುಗೊಂಡವು. ಆದರೆ ಈ ಪಡೆ ಮೈಸೂರಿನ ಪರಂಪರೆಯ ಭಾಗವಾಗಿ ಮುಂದುವರಿದಿರುವುದು ವಿಶೇಷ.

ಅಶ್ವಾರೋಹಿ ತಂಡ ಅಂದು -ಇಂದು

ಕರ್ನಾಟಕದ ಅಶ್ವಾರೋಹಿ ಪೊಲೀಸ್ ತುಕಡಿ ಮೈಸೂರು ಅರಸರ ಆಳ್ವಿಕೆಯಲ್ಲಿ ‘ಘನತೆವೆತ್ತ ಮೈಸೂರು ಮಹಾರಾಜರ ಅಂಗರಕ್ಷಕ ಪಡೆ’ (ಎಚ್‌ಎಚ್‌ಎಂಎಂಬಿಜಿ) ಎಂಬ ಹೆಸರಿನಿಂದ ಪ್ರಖ್ಯಾತಿ ಹೊಂದಿತ್ತು. ಆ ತಂಡ ಅಂದಿನ ಅರಸರ ಮತ್ತು ಅರಸು ಪರಿವಾರದ ರಕ್ಷಣೆಯ ಕರ್ತವ್ಯ ನಿರ್ವಹಿಸುತ್ತಿತ್ತು. ಈ ತುಕಡಿಗಳಿಗೆಂದೇ ಮೈಸೂರು ನಗರದ ಹೊರವಲಯದಲ್ಲಿದ್ದ (ಅಂದಿನ ದಿನಗಳಲ್ಲಿ) ಲಲಿತಮಹಲ್ ಹಾಗೂ ನಗರದಿಂದ ಚಾಮುಂಡಿಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ವಸತಿ ಸಹಿತ ಸೌಲಭ್ಯ ಕಲ್ಪಿಸಲಾಗಿತ್ತು.

ಅಲ್ಲಿ ಅಶ್ವಾರೋಹಿ ತಂಡದ ಆಡಳಿತ ಕಚೇರಿ, ಉಗ್ರಾಣ, ಸಾಮಾನು ಸರಂಜಾಮುಗಳ ಕೊಠಡಿ,ಕತ್ತಿ,ಭರ್ಜಿಗಳ ಕೊಠಡಿ ಹಾಗೂ ಇತರ ಅಗತ್ಯ ಸೌಲಭ್ಯಗಳ ಜೊತೆಗೆ ಕುದುರೆಗಳ ಲಾಯವನ್ನೂ ವ್ಯವಸ್ಥೆ ಮಾಡಲಾಗಿತ್ತು. ಅರಸರ ಅಶ್ವಾರೋಹಿ ಅಂಗರಕ್ಷಕ ಪಡೆ ನುರಿತ ಕುದುರೆ ಸವಾರರ ತಂಡವಾಗಿದ್ದು ತಮ್ಮ ನಿಗದಿತ ಕರ್ತವ್ಯಗಳ ಜತೆಗೆ, ಜಂಬೂಸವಾರಿ ಮೆರವಣಿಗೆಯಲ್ಲಿ ಹಾಗೂ ಬನ್ನಿಮಂಟಪದ ಪಂಜಿನ ಕವಾಯತುಗಳಲ್ಲಿ ಭಾಗವಹಿಸುತ್ತಿದ್ದರು.

ಸ್ವಾತಂತ್ರ್ಯಾನಂತರ ಈ ಅಶ್ವಾರೋಹಿ ಪಡೆ ಪೊಲೀಸ್ ತಂಡವಾಗಿ ಹೊಸ ರೂಪ ಪಡೆಯಿತು. ಕಾನೂನು ಮತ್ತು ಸುವ್ಯವಸ್ಥೆಯ ಹೊಣೆಗೆ ಪೂರಕವಾದ ಗುಂಪು ನಿಯಂತ್ರಣ, ಸಾರಿಗೆ ನಿಯಂತ್ರಣ, ಸಮೂಹ ನಿಯಂತ್ರಣ, ಶಿಷ್ಟಾಚಾರದ ಬೆಂಗಾವಲು, ಕಾವಲು ಕರ್ತವ್ಯ ಮತ್ತು ರಾತ್ರಿ ಗಸ್ತು ಮುಂತಾದ ಕರ್ತವ್ಯ ನಿರ್ವಹಣೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಾಗಿ ಬಂದಿದೆ. ಆದರೂ ಈ ಅಶ್ವಾರೋಹಿ ತಂಡಕ್ಕೆ ದಸರೆಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಕರ್ತವ್ಯ ಪ್ರಮುಖವಾಗಿದ್ದು ಇದಕ್ಕೆ ನಿಯಮಿತವಾಗಿ ತಾಲೀಮು ನಡೆಯುತ್ತದೆ.

ಆಕರ್ಷಕ ಪೋಷಾಕು
ಅಶ್ವಾರೋಹಿ ತಂಡದ ಸಿಪಾಯಿಗಳ ಪೋಷಾಕು ಅತ್ಯಾಕರ್ಷಕವಾಗಿದ್ದು, ಅವರು ಧರಿಸುವ ಶಿಷ್ಟಾಚಾರದ ಸಮವಸ್ತ್ರದ ತೊಡುಗೆಯ ಬಣ್ಣ, ಮಾದರಿ,ವಿನ್ಯಾಸ ಮತ್ತು ಅದರೊಡನೆ ಇರುವ ಅಸಂಖ್ಯ ಸಣ್ಣ ಸಣ್ಣ ಅಂಶಗಳೂ ಸೇರಿಕೊಂಡು ಈ ದಳವು ಎದ್ದು ಕಾಣುವಂತೆ ಮಾಡುತ್ತದೆ. ಅಶ್ವಾರೋಹಿ ಸಿಬ್ಬಂದಿಯವರಿಗೆ ಕಾಲ ಮತ್ತು ಸಂದರ್ಭಕ್ಕನುಗುಣವಾಗಿ ಏಳು ಮಾದರಿಯ ಪೋಷಾಕುಗಳಿವೆ. ಚಳಿಗಾಲದ ಶಿಷ್ಟಾಚಾರದ ಉಡುಗೆ, ಬೇಸಿಗೆಯ ಶಿಷ್ಟಾಚಾರದ ಉಡುಗೆ, ಅರಮನೆಯ ಕಾವಲು ಶಿಷ್ಟಾಚಾರದ ಉಡುಗೆ, ಕ್ವಾಟರ್ಸ್‌ ಗಾರ್ಡ್ ಕಾವಲು ಉಡುಗೆ, ಕಾಲಾ-ಪೀಲಾ ಶಿಷ್ಟಾಚಾರದ ಉಡುಗೆ, ಕೆ.ಎ.ಆರ್.ಪಿ ಕಾವಲು ಉಡುಗೆ ಮತ್ತು ಕುದುರೆ ಸವಾರಿ ಹಾಗೂ ಕ್ರೀಡಾ ಉಡುಗೆ ಈ ರೀತಿ ತಮ್ಮ ಯಾವುದೇ ಸಮವಸ್ತ್ರದಲ್ಲಿಯೂ ಇವರು ಆಕರ್ಷಕವಾಗಿ ಕಾಣುವಂತೆ ಮಾಡಲಾಗಿದೆ. ಅಶ್ವಾರೋಹಿ ಪಡೆ ವೈಯಕ್ತಿಕ ಸಮವಸ್ತ್ರದ ಜೊತೆಗೆ, ತಮ್ಮ ಕುದುರೆಗಳ ದೈಹಿಕ ಸಿದ್ದತೆ ಮತ್ತು ಜೀನು ಹಾಗೂ ಬಹುಪರಿಯ ಇತರ ಸಲಕರಣೆಗಳ ಬಗ್ಗೆ ಕಾಳಜಿ, ಮುತುವರ್ಜಿ ವಹಿಸುವುದು ಅನಿವಾರ್ಯ.

ಕೀರ್ತಿ ತಂದ ಮರಿಬಾಶೆಟ್ಟಿ

ರಾಜ್ಯ ಸರ್ಕಾರದ ಪೊಲೀಸ್ ಪಡೆಯಾದ ಬಳಿಕವೂ ಅಶ್ವ ಪಡೆಯು ಗಮನಸೆಳೆದಿದ್ದು ಪ್ರತೀ ವರ್ಷ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ತಮ್ಮ ಹಿರಿಮೆಯನ್ನು ಸಾರುತ್ತಲೇ ಬಂದಿದೆ.ಎಸ್.ಜಿ.ಮರಿಬಾಶೆಟ್ಟಿ ಅವರು ಅಶ್ವಪಡೆಯ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ಅಖಿಲ ಭಾರತ ಪೊಲೀಸ್ ಅಶ್ವಾರೋಹಿ ಪಂದ್ಯಾವಳಿಗಳಲ್ಲಿ ಮಾತ್ರವಲ್ಲದೇ, ಆಸ್ಟ್ರೇಲಿಯಾ, ಅಮೆರಿಕಾ, ಸ್ಪೇನ್ ಮತ್ತಿತರ ಕಡೆ ಜರುಗಿದ ವಿಶ್ವ ಪೊಲೀಸ್ ಅಶ್ವಾರೋಹಿ ಸ್ಪರ್ಧೆಗಳಲ್ಲಿ ಗೆದ್ದು ವಿಕ್ರಮ ಸ್ಥಾಪಿಸಿದ್ದರು.

ಮರಿಬಾ ಶೆಟ್ಟಿ ಅವರ ಪುತ್ರ, ಮೈಸೂರು ಅಶ್ವಪಡೆಯ ಅಂಗಳದಲ್ಲಿಯೇ ಹುಟ್ಟಿ ಬೆಳೆದ ಅರುಣ್ ಮರಿಬಾಶೆಟ್ಟಿ ತಂದೆಯ ಹಾದಿಯಲ್ಲೇ ಮುನ್ನಡೆದು ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಬ್ಬರೂ ರಾಜ್ಯಸರ್ಕಾರ ನೀಡುವ ಏಕಲವ್ಯ ಪ್ರಶಸ್ತಿ ಪಡೆದಿರುವುದು ವಿಶೇಷ.

ಅಶ್ವಾರೋಹಿ ಅಂಗರಕ್ಷಕರ ಧ್ವಜ

೧೯೧೩ರ ನವೆಂಬರ್ ೮ರಂದು, ಅಂದಿನ ವೈಸ್ ರಾಯ್ ಹಾಗೂ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಹಾರ್ಡಿಂಜ್ ಮೈಸೂರಿಗೆ ಭೇಟಿ ನೀಡಿದ್ದರು. ಆಗ ಮೈಸೂರು ಮಹಾರಾಜರ ಕೋರಿಕೆ ಮೇರೆಗೆ ಸ್ವತ: ಅವರೇ ಅಶ್ವಾರೋಹಿದಳದ ಅಧಿಕೃತ ಧ್ವಜವನ್ನು ಪ್ರದಾನ ಮಾಡಿದ್ದರು. ಕಿತ್ತಳೆ ಬಣ್ಣದ ಧ್ವಜ, ಧ್ವಜವನ್ನು ಹಾರಿಸಲು ಬಳಸಲಾಗುವ ಭರ್ಜಿಯ ಮುದ್ರಿಸಲ್ಪಟ್ಟ ಪ್ರತಿಯನ್ನು ಅಶ್ವಾರೋಹಿಪಡೆಯ ಕಚೇರಿಯಲ್ಲಿ ಈಗಲೂ ಕಾಣಬಹುದು. ಈ ಅಧಿಕೃತ ಧ್ವಜದೊಡನೆ ಮೈಸೂರು ಅರಸರ ಸೈನ್ಯದ ಅಂಗವಾಗಿದ್ದ ರಾವುತ ದಳದ ಲಾಂಛನ ಮತ್ತು ಅದರ ಕಂಚಿನ ಗಂಢಬೇರುಂಡ ಪಕ್ಷಿಯ ಪ್ರತಿಮೆಯನ್ನು ನೋಡಬಹುದು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ