Light
Dark

ಆಂದೋಲನ ಪತ್ರಿಕೆಯ ಒಡನಾಡಿಗಳ ಒಡಲಾಳದ ಮಾತು – 1

ಮೈಸೂರಿನ ನೆಲಕ್ಕೆ ಬಿದ್ದ ಬೀಜ ವ್ಯರ್ಥವಾಗಲಿಲ್ಲ ; ಅರ್ಥವತ್ತಾಯಿತು. ಕೋಟಿ -ಕೋಟಿ ಅಕ್ಷರಗಳು ಬೆಳೆದುಳಿದವು. ಕಡು ಕಷ್ಟದ ಒಡಲನ್ನು ಸೀಳಿಕೊಂಡು ಹೊರಬಿದ್ದ ಮೊಳಕೆಗೀಗ ಅರ್ಧ ಶತಮಾನದ ಸಿರಿ,ಸಡಗರ-ಸಂಭ್ರಮ. ಐವತ್ತು ವರುಷಗಳ ಹಿಂದೆ ತಮ್ಮ ಬದುಕನ್ನೇ ಹರಹಿ, ಆರಂಭಿಸಿದ ಕನಸಿನ ಹುಟ್ಟುಹಬ್ಬದಲ್ಲಿ ಅವರೇ ಇಲ್ಲ. ರಾಜಶೇಖರ ಕೋಟಿಯವರು ಈ ದಿನ ಇರಬೇಕಿತ್ತು . ತಾವೇ ಮೈದಡವಿ ಬೆಳೆಸಿದ ಕೂಸು, ಐವತ್ತರ ಹಿರಿತನಕ್ಕೇರಿರುವ ಖುಷಿಗೆ ಅವರು ಸಾಕ್ಷಿಯಾಗಬೇಕಿತ್ತು. ಇದೊಂದು ಮಹಾ ಕೊರತೆಯ ನಡುವೆಯೂ ’ಆಂದೋಲನ’ದ ಒರತೆ ಅದೇ ಉತ್ಸಾಹದೊಡನೆ ಚಿಮ್ಮುತ್ತಿದೆ. ಬದುಕು ಬೇಡವೆಂದರೂ ಕಟ್ಟಿಕೊಡುವ ದುಃಖಕ್ಕೂ ಕೆಲವೊಮ್ಮೆ ಅಮೃತ ಸೇಚನವಾಗುತ್ತದೆಂಬುದಕ್ಕೆ’ ಆಂದೋಲನ – ೫೦’ ಹೆಜ್ಜೆಗಳನ್ನಿಟ್ಟಿರುವುದೇ ಹಿರಿದಾದಉದಾಹರಣೆ.ಅಸಂಖ್ಯ ಭ್ರಮೆಗಳ ನಡುವೆ ತೆವಳುತ್ತಿರುವ ಸಮಕಾಲೀನ ಮಾಧ್ಯಮ ಲೋಕದೊಳಗೆ, ತನ್ನ ಅಕ್ಷರ ತತ್ವವನ್ನು ಅಕ್ಷರಶಃ ಜಾರಿಯಲ್ಲಿಟ್ಟುಕೊಂಡು ಮುಂಬರಿಯುತ್ತಿರುವ ’ ಆಂದೋಲನ ’ತಲೆ ತಲೆಮಾರುಗಳವರೆಗೆ ನೂರಾರು ಕಾಲ ಬಾಳಲಿ. ಟಿ. ಗುರುರಾಜ್, ಹಿರಿಯ ಪತ್ರಕರ್ತ.

ಆಂದೋಲನ ೫೦ ಸಾರ್ಥಕ ಪಯಣವನ್ನು ನಮ್ಮ ಕಣ್ಣು ಮುಂದೆ ತಂದು ನಿಲ್ಲಿಸಲಾಯಿತು. ಧಾರವಾಡದಿಂದ ಪಯಣ ಆರಂಭಿಸಿ ಮೈಸೂರಿನಲ್ಲಿ ನೆಲೆ ನಿಂತದ್ದನ್ನು ನೆನಪಿಸಲಾಯಿತು. ರಾಜಶೇಖರ ಕೋಟಿ ಅವರ ನೆರವಿಗೆ ನಿಂತವರನ್ನು ಸ್ಮರಿಸಿದ್ದು ಅರ್ಥಪೂರ್ಣವಾಗಿತ್ತು. ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರ ಭಾಷಣ ಇಷ್ಟವಾಯಿತು. ಜನಪರ ಮತ್ತು ಕಾರ್ಪೊರೇಟ್ ಪತ್ರಿಕೋದ್ಯಮಗಳ ನಡುವಿನ ವ್ಯತ್ಯಾಸವನ್ನು ಬಿಡಿಸಿ ಹೇಳಿದರು. ಅವರ ಭಾಷಣ ಸಮಾರಂಭಕ್ಕೆ ಕಳೆತಂದಿತ್ತು. – ಎ.ಡಿ.ಸಿಲ್ವಾ, ಹಿರಿಯ ಪತ್ರಕರ್ತರು, ಚಾಮರಾಜನಗರ.

‘ಆಂದೋಲನ’ ೫೦ ಸಾರ್ಥಕ ಪಯಣ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರ ಭಾಷಣ ಇಂದಿನ ಮಾಧ್ಯಮ ರಂಗದ ವಿರೋಧಾಭಾಸಗಳನ್ನು ತೆರೆದಿಟ್ಟಿತ್ತು. ಮಾಧ್ಯಮ ಲೋಕ ಲಾಭಾಂಶದತ್ತ ನೋಟ ಬೀರಿರುವುದು. ಜನಪರತೆಯನ್ನು ಮರೆಯುತ್ತಿರುವುದನ್ನು ಸೂಕ್ಷ್ಮವಾಗಿ ತಿಳಿಸಿದರು. ಕೋಮುಶಕ್ತಿಗಳು ಜಾಸ್ತಿಯಾಗಿರುವ ಈ ಸಂದರ್ಭದಲ್ಲಿ ಆಂದೋಲನದ ಪತ್ರಿಕೆಯ ಬದ್ಧತೆ ಮತ್ತು ಅದು ನಡೆದು ಬಂದ ಪಯಣ ಆಶಾ ಭಾವನೆ ಹುಟ್ಟು ಹಾಕಿತು. – ಸುಭಾಷ್ ಮಾಡ್ರಹಳ್ಳಿ, ಮಾನವ ಬಂಧುತ್ವ ವೇದಿಕೆಯ ಸಂಚಾಲಕರು. ಗುಂಡ್ಲುಪೇಟೆ

ರಾಜಶೇಖರ ಕೋಟಿ ಅವರು ಕಿಡಿಯಾಗುವುದನ್ನು ಬೆಳಕಾಗಿಸಿದರು. ‘ಆಂದೋಲನ’ ದಿನಪತ್ರಿಕೆ ತುಂಬಾ ಗಂಭೀರವಾದ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಒಳಗೊಂಡಿದೆ. ಜನಪರ ಕಾಳಜಿಯನ್ನು ಹೊಂದಿದ ನಾಯಕ ರಾಜಶೇಖರ ಕೋಟಿ ಅವರ ‘ಆಂದೋಲನ’ ಯಾವ ಪತ್ರಿಕೆಗೂ ಕಡಿಮೆ ಇಲ್ಲದೆ, ಉತ್ತಮ ಓದುಗರನ್ನು ಹೊಂದಿದೆ. ಇಂದು ೫೦ರ ವಸಂತ ಪೂರೈಸಿರುವುದು ಸಂತಸದ ವಿಷಯವಾಗಿದೆ.– ಮಡ್ಡಿಕೆರೆ ಗೋಪಾಲ್, ಅಧ್ಯಕ್ಷ , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌

ಮೈಸೂರಿನ ಸಾಮಾಜಿಕ ಬದುಕಿನಲ್ಲಿ ಒಂದು ಐತಿಹಾಸಿಕ ಕಾರ್ಯಕ್ರಮ. ಸಾವಿರಾರು ಜನ ‘ಆಂದೋಲನ’ ಪತ್ರಿಕೆ ಕಾರ್ಯಕ್ರಮಕ್ಕೆ ಬಂದರು. ಮುಖ್ಯಮಂತ್ರಿಯವರು, ಮಾಜಿ ಮುಖ್ಯಮಂತ್ರಿಯವರು, ಪಿ.ಸಾಯಿನಾಥ್ ಅಂತಹ ಮೇಧಾವಿ ಪತ್ರಕರ್ತರೂ ಮಾತನಾಡಿದ್ದು, ಇದೆಲ್ಲವೂ ಮೈಸೂರಿನ ಜನರಿಗೆ ಬಹಳ ಕಾಲ ನೆನಪುಳಿಯುವಂತೆ ಮಾಡಿದೆ. ನಾನು ನಿರಂತರವಾಗಿ ೪೦ ವರ್ಷಗಳಿಂದ ‘ಆಂದೋಲನ’ ಓದಿದ್ದೇನೆ. ಅದು ನನ್ನ ಬದುಕಿನ ಭಾಗವಾಗಿದೆ. ಈ ಕಾರ್ಯಕ್ರಮ ‘ಆಂದೋಲನ’ದ ಬದುಕಿನಲ್ಲಿ ಭಾಗವಾಗುವ ಕಾರ್ಯಕ್ರಮ. ಪತ್ರಿಕೆ ಇಷ್ಟು ಜನರನ್ನು ಒಳಗೊಳ್ಳುತ್ತದೆ ಎಂಬುದೇ ರೋಮಾಂಚನಕಾರಿ ವಿಷಯ. ರಾಜಶೇಖರ ಕೋಟಿ ಅವರು ಪತ್ರಿಕೋದ್ಯಮವನ್ನು ಉದ್ಯಮ ಅಂತಲೂ ಮಾಡಲಿಲ್ಲ. ಸುದ್ದಿ ತಲುಪಿಸುವ ಸಾಧನ ಅಂತಲೂ ಮಾಡಲಿಲ್ಲ. ಅದು ಸಮುದಾಯ ಪ್ರಜ್ಞೆಯನ್ನು ಬೆಳೆಸುವ ಮತ್ತು ವಿಸ್ತರಿಸುವ ಕೆಲಸ ಎಂದು ಮಾಡಿದರು. ಇದೇ ಪ್ರಜ್ಞೆಯ ಆಧಾರದಲ್ಲಿ ಪತ್ರಿಕೆ ರವಿ ಕೋಟಿ ಅವರ ಸಾರಥ್ಯದಲ್ಲಿ ನಡೆಯುತ್ತಿದೆ. ನಾನೂ ‘ಆಂದೋಲನ’ ಪತ್ರಿಕೆ ಓದುಗ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. – ಪ್ರೊ.ಎಂ.ಕೃಷ್ಣೇಗೌಡ, ಖ್ಯಾತ ವಾಗ್ಮಿ

೫೦ ವರ್ಷದ ಹಿಂದಿನ ಮಾತದು. ೧೯೭೨ ಧಾರವಾಡದಲ್ಲಿ ಆರಂಭವಾದ ಆಂದೋಲನ ಎರಡು ವರ್ಷದ ನಂತರ ಅಂದರೆ ೧೯೭೪ರಲ್ಲಿ ಮೈಸೂರಿನಲ್ಲಿ ಕೆಂಪು ಯುಗದ ಆರಂಭಕ್ಕೆ ನಾಂದಿ ಹಾಡಿತು. ಬಡವರಿಗೆ, ಶೋಷಿತರಿಗೆ, ನೊಂದವರಿಗೆ ಧ್ವನಿಯಾಗಬೇಕೆಂಬ ದೃಢ ನಿರ್ಧಾರದೊಂದಿಗೆ ಪ್ರಾರಂಭವಾದ ಆಂದೋಲನ, ಆಡು ಮುಟ್ಟದ ಸೊಪ್ಪಿಲ್ಲ. ಆಂದೋಲನ ಮಾಡದ ಸುದ್ದಿಯಿಲ್ಲ ಎಂಬಷ್ಟರ ಮಟ್ಟಿಗೆ ಬೆಳೆದು ನಿಂತಿದ್ದು ಈಗ ಇತಿಹಾಸ. ಹುಣಸೇ ಮುಪ್ಪಾದರೆ ಹುಳಿ ಮುಪ್ಪೇ ಅನ್ನೋ ಮಾತಿನಂತೆ ೫೦ ವರ್ಷವಾದರೂ ಆಂದೋಲನದ ಜೋಶ್ ಕಡಿಮೆಯಾಗಿಲ್ಲ. ಅದೇ ಹುರುಪು, ಅದೇ ಉತ್ಸಾಹ, ಅದೇ ಕಾರ್ಯತತ್ಪರತೆಯನ್ನು ಕೋಟಿಯವರ ಧರ್ಮ ಪತ್ನಿಯ ಮಾರ್ಗದರ್ಶನದಲ್ಲಿ ಮುಂದುವರಿಸಿಕೊಂಡು ಬರಲಾಗಿದೆ. ಮುಂದೆಯೂ ಅದನ್ನು ಮುಂದುವರಿಸುವ ಮಹತ್ತರ ಜವಾಬ್ದಾರಿಗೆ ಸುವರ್ಣ ಮಹೋತ್ಸವ ಸಾಕ್ಷಿಭೂತವಾಗಿದೆ. ಆಂದೋಲನ ಪತ್ರಿಕೆಯ ಸಮಗ್ರ ಬಳಗಕ್ಕೆ ಆಲ್ ದ ಬೆಸ್ಟ್. -ರಾಮ್ ಮೈಸೂರು

ಇವತ್ತಿನ ಕಾರ್ಯಕ್ರಮ ತುಂಬಾ ಸಂತೋಷವನ್ನು ಉಂಟುಮಾಡಿತು, ರಾಜಶೇಖರ ಕೋಟಿ ಅಂಥ ಸಾಧಕರ ಹೆಸರಿನಲ್ಲಿ ಜರುಗಿದ ಆಂದೋಲನ ೫೦ ರ ಸಂಭ್ರಮ ಅದ್ಭುತವಾಗಿ ಮೂಡಿಬಂತು. ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಂದೋಲನ ನಡೆದುಬಂದ ಹಾದಿಯನ್ನು ಸ್ವಾರಸ್ಯಕರವಾಗಿ ಕಟ್ಟಿಕೊಟ್ಟರು. ಪಿ.ಸಾಯಿನಾಥ್ ಅವರ ಮಾತು, ಶಿವರಾಜ್ ಕುಮಾರ್ ಅವರ ಸೌಜನ್ಯ ಒಟ್ಟಾರೆಯಾಗಿ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ಮೂಡಿಬಂತು. -ರಘೋತ್ತಮ ಹೊ.ಬ. ಅಂಬೇಡ್ಕರ್‌ವಾದಿ ಚಿಂತಕ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ