Mysore
25
overcast clouds
Light
Dark

ಆಂದೋಲನ ಪತ್ರಿಕೆಯ ಒಡನಾಡಿಗಳ ಒಡಲಾಳದ ಮಾತು – 2

ನನ್ನ ಮತ್ತು ರಾಜಶೇಖರಕೋಟಿ ಅವರ ಪರಿಚಯ ೨೫ ವರ್ಷದ್ದಾಗಿದೆ. ಅವತ್ತಿನಿಂದ ಅವರನ್ನು ನೋಡಿದ್ದೇನೆ. ಸಮಯ ಸಂದರ್ಭಕ್ಕೆ ತಕ್ಕ ಹಾಗೆ ಮಾತನಾಡದೆ, ನೇರ ನಿಷ್ಠುರವಾಗಿ ಮಾತನಾಡುತ್ತಿದ್ದರು. ಜನಕ್ಕೆ ತಕ್ಕ ಹಾಗೆ ಮಾತನಾಡುತ್ತಿರಲಿಲ್ಲ, ‘ಆಂದೋಲನ’ ಪತ್ರಿಕೆಯಲ್ಲಿ ಹಲವು ವಿಷಯಗಳನ್ನು ತುಲನೆ ಮಾಡಿ ಬರೆಯುತ್ತಿದ್ದರು. ಆಂದೋಲನ ಮೈಸೂರಿಗೆ ಕೊಡುಗೆಯಾಗಿದೆ. ಪತ್ರಿಕೆಗೆ ೫೦ ವರ್ಷ ತುಂಬಿದ್ದು ಸಂತೋಷವಾಯಿತು. – ಆರ್.ಗುರು, ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ಮಾಲೀಕರು.

ಪ್ರಾದೇಶಿಕ ಪತ್ರಿಕೆಯಾಗಿರುವ ‘ಆಂದೋಲನ’ ಪತ್ರಿಕೆ ಯಾವ ಪತ್ರಿಕೆಗೂ ಕಡಿಮೆ ಇಲ್ಲದಂತೆ ಎಲ್ಲ ರಂಗಗಳಲ್ಲೂ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ೫೦ನೇ ವರ್ಷಾಚರಣೆಗೆ ನಾವೆಲ್ಲ ಖುಷಿಪಟ್ಟಿದ್ದೇವೆ. ಈ ಪತ್ರಿಕೆ ಇನ್ನೂ ಎತ್ತರಕ್ಕೆ ಬೆಳೆಯಲಿ. ‘ಆಂದೋಲನ’ ದಿನಪತ್ರಿಕೆ ಎಲ್ಲ ವರ್ಗದವರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಹೀಗೆಯೇ ಮುಂದುವರಿಯಲಿ. -ಡಾ.ಎಸ್.ವಿದ್ಯಾಶಂಕರ್, ಕುಲಪತಿ, ಕರ್ನಾಟಕ ರಾಜ್ಯ ಮುಕ್ತ ವಿವಿ

‘ಆಂದೋಲನ’ ಪತ್ರಿಕೆಯು ಹೆಸರಿಗೆ ತಕ್ಕಂತೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ದಿಕ್ಕಿನತ್ತ ಹೋರಾಟ ಮಾಡುವ ಧ್ವನಿಯಾಗಿ ಹೊರಹೊಮ್ಮುತ್ತ ಸಾಗುತ್ತಿದೆ. ಇಂದಿಗೆ ೫೦ವರ್ಷದ ಸಂಭ್ರಮವನ್ನು ಆಚರಣೆ ಮಾಡುತ್ತಿರುವುದು ಸಂತಸದ ವಿಷಯ. ಈ ಕಾರ್ಯಕ್ರಮವನ್ನು ರಾಜಶೇಖರ ಕೋಟಿ ಅವರು ಕಣ್ತುಂಬಿ ಕೊಳ್ಳಬೇಕಿತ್ತು ಆದರೆ ಅವರ ಕೊರತೆಯನ್ನು ರವಿ ಕೋಟಿ, ರಶ್ಮಿ ಕೋಟಿ, ನಿರ್ಮಲ ಕೋಟಿ ತುಂಬಿದರು. -ಡಾ.ಡಿ ತಿಮ್ಮಯ್ಯ, ವಿಧಾನ ಪರಿಷತ್‌ನ ಸದಸ್ಯ

‘ಆಂದೋಲನ’ ದಿನಪತ್ರಿಕೆ ಕಳೆದ ೫೦ ವರ್ಷಗಳ ಅವಧಿಯಲ್ಲಿ ಸಾಗಿ ಬಂದ ದಾರಿಯನ್ನು ಕಾರ್ಯಕ್ರಮದ ಮೂಲಕ ಸೊಗಸಾಗಿ ಕಟ್ಟಿಕೊಡಲಾಯಿತು. ಸಾಕ್ಷ್ಯಾಚಿತ್ರದ ಮೂಲಕ ರಾಜಶೇಖರ ಕೋಟಿ ಅವರು ಹೇಗೆ ಬೆಳೆದು ಬಂದರು. ಪತ್ರಿಕೆಯನ್ನು ಹೇಗೆ ಕಟ್ಟಿಬೆಳೆಸಿದರು ಎಂಬ ಮಾಹಿತಿಯನ್ನು ತಿಳಿಸಿಕೊಟ್ಟಿದ್ದುದು ಅರ್ಥಪೂರ್ಣ ವಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪತ್ರಿಕೋದ್ಯಮದ ಇಂದಿನ ವಾಸ್ತವವನ್ನು ತಿಳಿಸಿಕೊಟ್ಟಿದ್ದು ಕೂಡ ಸಮೋಂಚಿತವಾಗಿತ್ತು. -ಎಂ.ಕೆ.ಸೋಮಶೇಖರ್, ಮಾಜಿ ಶಾಸಕರು. 

‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮ ತುಂಬಾ ವ್ಯವಸ್ಥಿತವಾಗಿ ಯೋಚಿಸಿ, ಯೋಜಿಸಲ್ಪಟ್ಟಿತ್ತು. ಶಿಸ್ತು ಬುದ್ದವಾಗಿತ್ತು. ಹೋರಾಟದ ಹಾದಿಯಲ್ಲಿ ಇದ್ದ ಗೆಳೆಯರೆಲ್ಲ ದೂರವಾಗಿದ್ದೆವು, ಈ ಕಾರ್ಯಕ್ರಮ ಇಂದು ಎಲ್ಲರನ್ನು ಒಟ್ಟಿಗೆ ಸೇರಿಸುವ ಅವಿಸ್ಮರಣೀಯ ಕಾರ್ಯಕ್ರಮವಾಗಿತ್ತು. ಒಂದು ಕೌಟುಂಬಿಕ ರೀತಿಯ ಕಾರ್ಯಕ್ರಮವಾಗಿತ್ತು. ನಮ್ಮ ‘ಆಂದೋಲನ’ ಪಯಣ ಯಶಸ್ವಿಯಾಗಿ ಸಾಗಲಿ. -ಪರುಶುರಾಮ, ನಿರ್ದೇಶಕರು, ಒಡನಾಡಿ

‘ಆಂದೋಲನ’ ಪತ್ರಿಕೆಯ ನಿತ್ಯದ ಸುದ್ದಿಯಲ್ಲಿ ಕಾಣುವ ಬದ್ಧತೆ, ಸರಳತೆ, ವ್ಯವಸ್ಥಿತ ಹಾಗೂ ಜನಪರ ವಿಚಾರಗಳ ರೀತಿಯಲ್ಲಿಯೇ ‘ಆಂದೋಲನ ೫೦- ಸಾರ್ಥಕ ಪಯಣ’ದ ಸಂಭ್ರಮವೂ ಅರ್ಥಪೂರ್ಣವಾಗಿತ್ತು. ರಾಜಶೇಖರ ಕೋಟಿ ಅವರ‘ಆಂದೋಲನ’-ದನಿಯಿಲ್ಲದವರ ದನಿ ಎಂಬ ಉದ್ದೇಶವನ್ನು ಧ್ಯಾನಿಸುತ್ತಾ ‘ಆಂದೋಲನ’ವನ್ನು ಮುನ್ನಡೆಸುತ್ತಿರುವ ರವಿ ಕೋಟಿ ಅವರಿಗೂ, ರಶ್ಮಿ ಕೋಟಿಯವರ ಹೆಮ್ಮೆಯ ಪ್ರಾಸ್ತಾವಿಕ ನುಡಿಗಳ ವಿನಯತೆಗೂ ಅಭಿನಂದನೆಗಳು. – ಕಿರಣ್ ಗಿರ್ಗಿ, ಯುವ ರಂಗನಿರ್ದೇಶಕರು, ಚಾ.ನಗರ

ಕಳೆದ ೫೦ ವರ್ಷಗಳಿಂದಲೂ ಶೋಷಿತರ ಧ್ವನಿಯಾಗಿರುವ ‘ಆಂದೋಲನ’ ಪತ್ರಿಕೆಯ ೫೦ರ ಸಂಭ್ರಮ ಅಚ್ಚುಕಟ್ಟಾಗಿ ಮೂಡಿಬಂತು. ದಕ್ಷಿಣ ಕರ್ನಾಟಕದಲ್ಲೇ ಅತ್ಯಂತ ಹೆಚ್ಚಿನ ರೀತಿಯಲ್ಲಿ ದಲಿತ, ರೈತ ಹಾಗೂ ಸಾಮಾಜಿಕ ಚಳವಳಿಯ ಭಾಗವಾಗಿರುವ ‘ಆಂದೋಲನ’ ಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿ ಅವರ ೭೫ನೇ ವರ್ಷದ ಸವಿನೆನಪು ಕಾರ್ಯಕ್ರಮ ನಮ್ಮನ್ನು ಚಳವಳಿಯ ದಿನಗಳಿಗೆ ಕರೆದುಕೊಂಡು ಹೋಯಿತು.  -ಸಿ.ಎಂ.ಕೃಷ್ಣಮೂರ್ತಿ, ಹೋರಾಟಗಾರರು, ಚಾ.ನಗರ.

ಆಂದೋಲನ’ ೫೦ ವರ್ಷದ ಸಂಭ್ರಮ ಅತ್ಯದ್ಭುತವಾಗಿ ಮೂಡಿಬಂತು. ಒಂದು ಪ್ರಾದೇಶಿಕ ಪತ್ರಿಕೆ ತನ್ನಯ ೫೦ ವರ್ಷದ ಸಂಭ್ರಮವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿರುವುದು ನಿಜಕ್ಕೂ ಖುಷಿಯ ಸಂಗತಿ. ಕಾರ್ಯಕ್ರಮದ ಪೂರ ಆವರಿಸಿದ್ದ ಕೆಂಪು ಬಣ್ಣದಲ್ಲಿ ರಾಜಶೇಖರ ಕೋಟಿ ಅವರೇ ಭಾಸವಾಗುತ್ತಿದ್ದರು. ಅವರ ಸಮಯ ನಿಷ್ಠೆ ಮತ್ತು ಬದ್ಧತೆಯಂತೆಯೇ ಕಾರ್ಯಕ್ರಮ ಮೂಡಿಬಂತು. -ವೆಂಕಟರಮಣಸ್ವಾಮಿ (ಪಾಪು) ದಲಿತ ಮುಖಂಡರು, ಚಾಮರಾಜನಗರ.

‘ಆಂದೋಲನ’ ೫೦ ಸಾರ್ಥಕ ಪಯಣ ಕಾರ್ಯಕ್ರಮವು ಉತ್ತಮವಾಗಿ ಮೂಡಿಬಂತು. ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರ ಭಾಷಣವೇ ಹೈಲೈಟ್ಸ್. ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ರಶ್ಮಿ ಕೋಟಿ ಅವರು ಗಂಭೀರವಾಗಿ ಮಾತನಾಡಿದರು. ಪತ್ರಿಕಾ ಬಳಗವು ಯಶಸ್ವಿಯಾಗಿ ಕಾರ್ಯಕ್ರಮ ರೂಪಿಸಿತ್ತು. -ಕೆ. ವೆಂಕಟರಾಜು, ಸಾಹಿತಿ ಹಾಗೂ ರಂಗಕರ್ಮಿ. ಚಾಮರಾಜನಗರ

‘ಆಂದೋಲನ’ ೫೦ನೇ ವರ್ಷದ ಸಾರ್ಥಕ ಪಯಣ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರ ಭಾಷಣ ಅರ್ಥಗರ್ಭಿತವಾಗಿತ್ತು. ರಾಜಶೇಖರ ಕೋಟಿ ಅವರ ಕುಟುಂಬ ಸದಸ್ಯರು ತಮ್ಮ ತಾಯಿಯನ್ನು ವೇದಿಕೆಯಲ್ಲಿ ಕೂರಿಸಿ, ಗೌರವ ನೀಡಿ ತಾವು ಕಾಣಿಸಿಕೊಳ್ಳದೆ ಕೋಟಿಯವರ ಹಾದಿಯಲ್ಲಿ ನಡೆದರು. ಸಿದ್ದರಾಮಯ್ಯ ಅವರ ಭಾಷಣ ಪ್ರಸ್ತುತವಾಗಿತ್ತು. ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಬಹಳ ಸಂತಸ ತಂದಿದೆ. -ಡಾ.ಎನ್.ಎಲ್.ಭಾರತೀಶಂಕರ್, ಮಾಜಿ ಶಾಸಕ.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ