Mysore
30
clear sky

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಶತಮಾನದ ಸನಿಹದಲ್ಲಿ ಮಲ್ಟಿ ಪರ್ಪಸ್ ಶಾಲೆ

-ಮುಳ್ಳೂರು ಶಿವಪ್ರಸಾದ್ 

ಕಪಿಲಾ ನದಿ ದಡದಲ್ಲಿ ತನ್ನ ಹರಹು ವಿಸ್ತರಿಸಿಕೊಂಡಿರುವ ನಂಜನಗೂಡು, ಮೈಸೂರು ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಕೂಡ ತನ್ನದೇ ಆದ ಮುದ್ರೆಯೊತ್ತಿದೆ. ಹೆಚ್ಚು ಕಡಿಮೆ ಶತಮಾನದ ಶಾಲೆ ಇಲ್ಲಿರುವುದು ಅದಕ್ಕೊಂದು ನಿದರ್ಶನ. ಕಾಲಾನುಕ್ರಮದಲ್ಲಿ ಅದು ಪದವಿ ಪೂರ್ವ ಕಾಲೇಜು ಆಗಿ ಉನ್ನತದರ್ಜೆಗೇರಿದೆ.

ನಂಜನಗೂಡು- ಗುಂಡ್ಲುಪೇಟೆ ರಸ್ತೆಯಲ್ಲಿ ಈ ಶಾಲೆ ಇದೆ. ೧೯೨೪ರಲ್ಲಿ ಮಲ್ಟಿಪರ್ಪಸ್ (ವಿವಿಧೋದ್ದೇಶ) ಸರ್ಕಾರಿ ಪ್ರೌಢಶಾಲೆಯಾಗಿ ಸ್ಥಾಪನೆಯಾಗಿತ್ತು. ಅಂದರೆ ಇನ್ನೆರಡು ವರ್ಷಗಳು ದಾಟಿದರೆ ಈ ಶಾಲೆಗೆ ಶತಮಾನ ಪೂರ್ಣಗೊಳ್ಳುತ್ತದೆ. ನಂಜನಗೂಡು ಸುತ್ತಮುತ್ತಲಿನ ಹಲವು ಗ್ರಾಮಗಳ ಬಡ ಕುಟುಂಬದ ಹಲವಾರು ಮಕ್ಕಳ ಅಕ್ಷರ ಬಾಳಿಗೆ ಈ ಶಾಲೆ ಬೆಳಕಾಗಿದೆ. ಈ ಶಾಲೆಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಎಲ್ಲ ವರ್ಗಗಳ ಮಕ್ಕಳು ಓದಿದ್ದಾರೆ. ಅನೇಕರು ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಶಾಲೆಯ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ. ಪ್ರೌಢಶಾಲೆಯೊಂದಿಗೆ ಪದವಿ ಪೂರ್ವ ಕಾಲೇಜು ಆಗಿದ್ದು, ಸಾವಿರಾರು ವಿದ್ಯಾರ್ಥಿಗಳು (ಪ್ರೌಢಶಾಲೆಯಲ್ಲಿ ೩೦೦, ಪಿಯು ಕಾಲೇಜಿನಲ್ಲಿ ೧೭೧೦ ವಿದ್ಯಾರ್ಥಿಗಳು) ವ್ಯಾಸಂಗ ಮಾಡುತ್ತಿದ್ದಾರೆ.

ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಕೂಡ ಈ ಮಲ್ಟಿಪರ್ಪಸ್ ಶಾಲೆಯ ಹಳೆಯ ವಿದ್ಯಾರ್ಥಿ. ಈ ಶಾಲೆಯ ವಿದ್ಯಾರ್ಥಿಯಾಗಿದ್ದ ಪ್ರಕಾಶ್ ಎಂಬವರು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಾರರಲ್ಲಿ ಒಬ್ಬರಾಗಿದ್ದಾರೆ. ನಾಗೇಶ್ ಪರಾಶರ್ ಎಂಬ ಮತ್ತೊಬ್ಬ ವಿದ್ಯಾರ್ಥಿ- ಈಗ ಜಮ್ಮು ಮತ್ತು ಕಾಶ್ಮೀರ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಶಾಲೆಯಲ್ಲಿ ಓದಿದ ಕೆಲವರು ವಿದೇಶಗಳಲ್ಲಿ ಕೂಡ ನೆಲೆಸಿದ್ದಾರೆ. ಇವರಲ್ಲದೆ, ಶಾಲೆಯಲ್ಲಿ ಅಧ್ಯಯನ ಮಾಡಿರುವ ಹಲವಾರು ವಿದ್ಯಾರ್ಥಿಗಳು ವಿವಿಧ ಸರ್ಕಾರಿ ಹುದ್ದೆಗಳು, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಕೇವಲ ಬಾಲಕರೇ ಇದ್ದ ಮಲ್ಟಿಪರ್ಪಸ್ ಶಾಲೆಯು ಮೇಲ್ದರ್ಜೆಗೇರಿದ್ದು, ಪಿಯುಸಿ ತರಗತಿಗಳು ಶುರುವಾದ ನಂತರ, ಬಾಯ್ಸ್ ಗವರ್ನಮೆಂಟ್ ಜೂನಿಯರ್ ಕಾಲೇಜು ಎಂದೇ ಹೆಸರುವಾಸಿಯಾಗಿತ್ತು. ಅಂದಾಜು ೩೦ ವರ್ಷಗಳ ಹಿಂದೆ ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ವಿದ್ಯಾರ್ಥಿನಿಯರಿಗೂ ಪ್ರವೇಶಾವಕಾಶ ಕಲ್ಪಿಸಲಾಯಿತು. ಇಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಮೂರು ವಿಷಯಗಳ ಕಲಿಕೆಗೆ ಅವಕಾಶ ಇದೆ. ಪ್ರಸ್ತುತ ಈ ಕಾಲೇಜಿನಲ್ಲಿ ಪ್ರಕಾಶ್ ನವಿಲೂರು ಅವರು ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ೭೫ ವರ್ಷ ದಾಟಿರುವ ಎರಡು ಶಾಲೆಗಳು ನಂಜನಗೂಡು ಬಜಾರ್ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ದಳವಾಯಿ ಶಾಲೆ, ರಾಷ್ಟ್ರಪತಿ ರಸ್ತೆಯಲ್ಲಿರುವ ಪಕ್ಕಾ ಮಿಡಲ್ ಸ್ಕೂಲ್ ಅಥವಾ ಬಾಯ್ಸ್ ಮಿಡಲ್ ಸ್ಕೂಲ್ ೭೫ ವರ್ಷಗಳನ್ನು ದಾಟಿ ಅಸ್ತಿತ್ವ ಉಳಿಸಿಕೊಂಡು ಮುನ್ನಡೆದಿವೆ.

ಈ ಮಲ್ಟಿಪರ್ಪಸ್ ಶಾಲೆಯಲ್ಲಿ ಓದಿದ್ದು ನನಗೆ ಅಪೂರ್ವ ಅನುಭವ ಕೊಟ್ಟಿದೆ. ವಿದ್ಯೆಯ ಜೊತೆಗೆ ಆ ಶಾಲೆಯು ನನಗೆ ಜೀವನ ಅಂದರೇನು? ಮನುಷ್ಯ ಪರಿಸ್ಥಿತಿಗೆ ಹೇಗೆ ಹೊಂದಿಕೊಳ್ಳಬೇಕು ಎಂಬ ಅನುಭವದ ದೊಡ್ಡ ಪಾಠವನ್ನೇ ಕಲಿಸಿದೆ. ೭ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನೇ ಗಳಿಸಿದ್ದರೂ ನನಗೆ, ಮೈಸೂರಿನ ಮರಿಮಲ್ಲಪ್ಪ ಅಥವಾ ಸದ್ವಿದ್ಯಾ ಶಾಲೆಗೆ ಸೇರಲು ಆರ್ಥಿಕ ಮುಗ್ಗಟ್ಟು ಅಡ್ಡಿಯಾಗಿತ್ತು. ಹಾಗಾಗಿ ನಾನು ೧೯೯೯- ೨೦೦೦ನೇ ಸಾಲಿನಲ್ಲಿ ೮ನೇ ತರಗತಿಗೆ ಈ ಶಾಲೆಗೆ ಸೇರಿದೆ. ಆದರೆ, ಯಾವತ್ತೂ ನನಗೆ ತಪ್ಪು ಮಾಡಿದೆ ಅಂತ ಅನಿಸಿರಲಿಲ್ಲ. ಶಾಲೆಯಲ್ಲಿ ಆಗ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಬೆಂಚ್‌ಗಳೂ ಇರಲಿಲ್ಲ. ನೆಲದಲ್ಲೇ ಕುಳಿತು ಪಾಠ ಆಲಿಸುತ್ತಿದ್ದೆವು.

ಒಂದೆರಡು ವರ್ಷಗಳಲ್ಲೇ ಬೆಂಚ್‌ಗಳನ್ನು ತಂದರೂ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇರಲಿಲ್ಲ. ಅಲ್ಲಿ ಮೇಷ್ಟ್ರು, ಮಹಿಳಾ ಟೀಚರ್‌ಗಳು ವಿದ್ಯಾರ್ಥಿಗಳನ್ನು ಅತ್ಯಂತ ಪ್ರೀತಿ, ವಿಶ್ವಾಸದಿಂದ ನೋಡುತ್ತಿದ್ದರು ಎಂದು ಸುಮಾರು ೨೦ ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ಓದಿ, ಈಗ ನಂಜನಗೂಡಿನಲ್ಲೇ ವೈದ್ಯರಾಗಿರುವ ಡಾ.ದೀಪಕ್ ‘ಆಂದೋಲನ’ದೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕನ್ನಡ ಮೇಷ್ಟ್ರು ಎಂ.ಶಿವಣ್ಣ ಅಂತ ಇದ್ದರು. ಅವರಿಂದ ನಮಗೆ ಕನ್ನಡದ ಬಗ್ಗೆ ಆಸಕ್ತಿ ಬೆಳೆಯಿತು. ಆದರೆ, ಅನಿವಾರ್ಯ ಕಾರಣಗಳಿಂದ ಅದೇ ಕಾಲೇಜಿನಲ್ಲೇ ಇದ್ದರೂ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕಾಯಿತು. ೯ನೇ ತರಗತಿಯಲ್ಲಿದ್ದಾಗಲೇ ನಮ್ಮ ತಂಡ ಜಿಲ್ಲಾ ಮಟ್ಟದ ವಿಜ್ಞಾನ ಸಮ್ಮೇಳನದಲ್ಲಿ ಪಾಲ್ಗೊಂಡು ಪ್ರಶಸ್ತಿ ಗಳಿಸಿದ್ದೇವೆ.

ಸುಮಾರು ಮೂರು ವರ್ಷಗಳ ಸತತವಾಗಿ ಜಿಲ್ಲಾ ಮಟ್ಟದ ವಿಜ್ಞಾನ ಸಮ್ಮೇಳನದಲ್ಲಿ ಪ್ರಶಸ್ತಿ ಗಳಿಸಿದ ಹೆಮ್ಮೆ ನಮ್ಮದು ಎಂದು ಅವರು ನೆನಪುಗಳನ್ನು ತೇಲಿಬಿಟ್ಟರು.

ಈ ಕಾಲೇಜಿನಲ್ಲಿ ನಾನು ಸುಮಾರು ೨೫ ವರ್ಷಗಳಿಂದ ಭೌತಶಾಸ್ತ್ರ ಉಪನ್ಯಾಸಕನಾಗಿ ಕಾರ್ಯನಿರ್ವ ಹಿಸುತ್ತಿದ್ದೇನೆ ಎಂಬುದೇ ನನಗೆ ಹೆಮ್ಮೆ. ನನ್ನ ಅವಧಿಯಲ್ಲೇ ಹೆಚ್ಚು ಕಡಿಮೆ ೨೦ ಸಾವಿರ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಅಧ್ಯಯನ ಮಾಡಿ ಮುಂದೆ ಹೋಗಿದ್ದಾರೆ. ಅವರಲ್ಲಿ ಬಹುತೇಕರು ಇಂಜಿ ನಿಯರ್, ವೈದ್ಯಕೀಯ ಕ್ಷೇತ್ರ ಮತ್ತಿತರ ಕಡೆಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ. –ಅಶ್ವಥ್ ನಾರಾಯಣ ಗೌಡ, ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ನಂಜನಗೂಡು.

ಸುಮಾರು ೨೦ ವರ್ಷಗಳ ನಂತರವೂ ಈ ಶಾಲೆಯೊಂದಿಗೆ ನನ್ನ ಬಾಂಧವ್ಯ ಮುಂದುವರಿದಿದೆ. ಪಿಯುಸಿಯಲ್ಲಿ ನನಗೆ ಭೌತಶಾಸ್ತ್ರ ಬೋಧಿಸಿದ ಅಶ್ವಥ್ ನಾರಾಯಣಗೌಡ ಅವರೇ ಅದಕ್ಕೆ ಕಾರಣ. ಅವರು ಯಾವುದೇ ಸಂದರ್ಭದಲ್ಲಿ ಆಹ್ವಾನ ನೀಡಿದರೂ ನಾನು ತಪ್ಪದೇ ಕಾಲೇಜಿಗೆ ಹೋಗುತ್ತೇನೆ. ಇತ್ತೀಚೆಗೆ ಪಿಯು ವಿಭಾಗದ ಕಟ್ಟಡಕ್ಕೆ ಫೆನ್ಸಿಂಗ್ ಅಗತ್ಯ ಇತ್ತು. ನಾನು ಹಾಗೂ ನನ್ನ ಇತರ ೧೩ ಮಂದಿ ಗೆಳೆಯರು (ಇದೇ ಶಾಲೆಯಲ್ಲಿ ಓದಿದವರು) ಸೇರಿ ಫೆನ್ಸಿಂಗ್ ನಿರ್ಮಿಸಲು ಆರ್ಥಿಕ ನೆರವು ನೀಡಿದ್ದೇವೆ. ಕಾಲೇಜಿನಲ್ಲಿ ಶೌಚಾಲಯ ಕೂಡ ಅಗತ್ಯ ಇದೆ ಎನ್ನಲಾಗಿದೆ. ಆ ಬಗ್ಗೆ ಯಾವ ರೀತಿ ನೆರವು ನೀಡಬಹುದು ಎಂಬುದಾಗಿ ನಮ್ಮ ಗೆಳೆಯರು ಚಿಂತನೆ ನಡೆಸಿದ್ದೇವೆ. -ಡಾ.ಕೆ.ಜೆ.ದೀಪಕ್, ಹಿರಿಯ ವೈದ್ಯಾಧಿಕಾರಿ,  ಇಎಸ್‌ಐ ಡಿಸ್ಪೆನ್ಸರಿ, ನಂಜನಗೂಡು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ