
ಕೋಟಿಯವರ ಬಗ್ಗೆ ಹೇಳಲು ಶಬ್ದಗಳಿಲ್ಲ. ಅವರ ಸರಳತೆ, ಸಜ್ಜನಿಕೆ, ಜಾತ್ಯತೀತ ನಿಲುವು, ಶ್ರಮ, ಆದರ್ಶ, ಹೋರಾಟ, ಮಾನವೀಯತೆ, ಎಲ್ಲರನ್ನೂ ಪ್ರೀತಿಸುವ ಹೃದಯ… ಅವರೇ ನನ್ನ ಚೈತನ್ಯ ಹಾಗೂ ಸ್ಛೂರ್ತಿಯಾಗಿದ್ದರು. ಇಂಥ ವ್ಯಕ್ತಿತ್ವದ ಕೋಟಿಯವರನ್ನು ನನ್ನ ಬಾಳ ಸಂಗಾತಿಯನ್ನಾಗಿ ಮಾಡಿವರು ದೇವನೂರ ಮಹಾದೇವ ಹಾಗೂ ಸುಮಿತ್ರಕ್ಕ ಅವರು.
ಧಾರವಾಡದಲ್ಲಿ ಪರಿಚಯವಾದ ಕೋಟಿ ಅವರನ್ನು ತೇಜಸ್ವಿಯವರು ಮೈಸೂರಿನಲ್ಲಿ ‘ಆಂದೋಲನ’ ಪತ್ರಿಕೆ ತರಲೆಂದು ಕರೆತಂದರು. ಖಾಲಿ ಕೈಚೀಲದೊಂದಿಗೆ ಬಂದವರು… ಪ. ಮಲ್ಲೇಶ್, ಶ್ರೀರಾಮ್, ರಾಮದಾಸ್, ವೈ ಮಹೇಶ್, ನೆಲೆಮನೆ ದೇವೇಗೌಡರು, ನಂಜುಂಡಸ್ವಾಮಿ, ಆಲನಹಳ್ಳಿ ಕೃಷ್ಣ ಎಲ್ಲ ಗೆಳೆಯರ ಸಹಾಯದಿಂದ ವಾರ ಪತ್ರಿಕೆಯಾಗಿ ತಂದರು. ನಂತರ ಸಂಜೆ ದಿನ ಪತ್ರಿಕೆಯಾಯಿತು. ನನ್ನ ಮದುವೆಯ ನಂತರ ಬೆಳಗಿನ ದಿನ ಪತ್ರಿಕೆಯಾಯಿತು.
ತುಂಬಾ ಕಷ್ಟದ ದಿನಗಳವು. ಸ್ನೇಹಿತರಿಗೂ ಕಷ್ಟದ ದಿನಗಳವು. ಆದರೂ ಎಲ್ಲರ ಸಹಾಯವಿತ್ತು. ಸ್ವಲ್ಪ ದಿನಗಳಲ್ಲೇ ಎರಡೆರಡು ಬಾರಿ ಮೊಳೆಗಳು ಕಳ್ಳತನವಾದವು. ಆಗ ಪತ್ರಿಕೆ ನಡೆಸುವುದೇ ಕಷ್ಟವಾಗಿತ್ತು. ಆಗ ರಾಮಲಿಂಗಂ ಅವರು ಸಹಾಯ ಮಾಡಿದ್ದರು.
ಪತ್ರಿಕೆಯೇ ಕೋಟಿ ಅವರ ಉಸಿರಾಗಿತ್ತು. ಪತ್ರಿಕೆಯನ್ನು ಬೆಳೆಸಲು ಹಲವು ಏಳು ಬೀಳುಗಳನ್ನು ಕಂಡಿದ್ದೇವೆ. ತುಂಬಾ ಶ್ರಮ ಪಟ್ಟಿದ್ದೇವೆ. ಊಟವಿಲ್ಲದೆ, ನಿದ್ದೆಯಿಲ್ಲದೆ ಅವರು ಶ್ರಮಿಸಿದ್ದಾರೆ. ಅವರು ಪತ್ರಿಕೆಯಲ್ಲಿ ಎಷ್ಟು ಮುಳುಗಿರುತ್ತಿದ್ದರೆಂದರೆ ಪತ್ರಿಕೆ ತರಲು ಅಂಗಡಿಗೆ ಹೋಗಿ ನನ್ನನ್ನು ಅಲ್ಲೇ ಬಿಟ್ಟು ಬರುತ್ತಿದ್ದರು. ಒಮ್ಮೆ ಬೈಕ್‌ನಿಂದ ನಾನು ಬಿದ್ದರೂ ಅವರಿಗೆ ಅರಿವಿರಲಿಲ್ಲ.
ದಿನವೂ ರಾತ್ರಿಯ ವೇಳೆಯಲ್ಲಿ ಮೊಳೆಗಳನ್ನು ಜೋಡಿಸಿ ಮುದ್ರಣಕ್ಕೆಂದು ಕೊಂಡೊಯ್ಯುತ್ತಿದ್ದರು. ಒಮ್ಮೊಮ್ಮೆ ಜೋಡಿಸಿದ ಮೊಳೆಗಳ ಪ್ಲೇಟ್ ಬಿದ್ದುಬಿಡುತ್ತಿತ್ತು. ಅವನ್ನೆಲ್ಲಾ ಸೇರಿಸಿ ಮತ್ತೆ ಜೋಡಿಸಿ ಮುದ್ರಣಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಬೆಳಿಗ್ಗೆ ಪತ್ರಿಕೆ ಕೆಲಸಕ್ಕೆಂದು ಹೊರಟರೆ ರಾತ್ರಿಯಾದರೂ ಬರುತ್ತಿರಲಿಲ್ಲ. ಊಟವಿಲ್ಲ, ನಿದ್ದೆಯಿಲ್ಲ, ಮನೆಯ ಸ್ಥಿತಿಯೂ ಕಷ್ಟದಲ್ಲೇ ಇತ್ತು. ಏನಾದರೂ ಇದ್ದರೆ ಮಾಡಿ ರಾತ್ರಿಯ ವೇಳೆಯಲ್ಲಿ ಕೊಟ್ಟು ಬರುತ್ತಿದ್ದೆ. ಇಲ್ಲವಾದರೆ ಇಲ್ಲ. ಕಷ್ಟವೆಂದು ಎಂದೂ ಕಿರಿಕಿರಿ ಮಾಡಿದವರಲ್ಲ.
ಅಗ್ರಹಾರಕ್ಕೆ ಬಂದ ನಂತರ ಪತ್ರಿಕೆ ಸ್ವಲ್ಪ ಸ್ವಲ್ಪವಾಗಿ ಚೇತರಿಸಿಕೊಳ್ಳತೊಡಗಿತು. ಆ ಸಮಯದಲ್ಲಿ ಕಾಡುಗಳ್ಳ ವೀರಪ್ಪನ್ ಹಾವಳಿ ಶುರುವಾಯಿತು. ಹೇಳದೆಯೇ ಕಾಡಿಗೆ ಹೋಗಿಬಿಡುತ್ತಿದ್ದರು. ನಾನು ಜೀವ ಕೈಯಲ್ಲಿ ಹಿಡಿದು ಕಾದಿರುತ್ತಿದ್ದೆ. ಸ್ನೇಹಿತರ ಜೊತೆಯಲ್ಲಿ ತುಂಬಾ ಚಳವಳಿ ಹಾಗೂ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕಷ್ಟದ ದಿನಗಳಲ್ಲಿ ಹಲವಾರು ಪತ್ರಕರ್ತರು ಕೈ ಜೋಡಿಸಿದ್ದಾರೆ. ನೊಂದವರಿಗೆ, ನಿರಾಶ್ರಿತರಿಗೆ ತುಂಬಾ ಸಹಾಯ ಮಾಡಿದ್ದಾರೆ.
ಈಗ ಪತ್ರಿಕೆಗೆ ೫೦ ವರ್ಷಗಳು ಪೂರೈಸಿವೆ. ಅವರಿದ್ದಿದ್ದರೆ ಎಂಬ ನೋವು ಎಲ್ಲೋ ಕಾಡುತ್ತಿದೆ…
ಇಂದು ಪತ್ರಿಕೆ ಇಷ್ಟು ಬೆಳೆಯಲು ಹಾಗೂ ಉನ್ನತ ಮಟ್ಟಕ್ಕೇರಲು ಅವರ ಜೊತೆಯಲ್ಲಿ ಕೆಲಸ ಮಾಡಿದ ಎಲ್ಲರೂ ಕಾರಣರಾಗಿರುತ್ತಾರೆ. ಪತ್ರಿಕೆಯ ಧ್ಯೇಯವನ್ನು ತಮ್ಮದಾಗಿಸಿಕೊಂಡು ಕೆಲಸ ಮಾಡಿದ ಎಲ್ಲರಿಗೂ ನನ್ನ ಕೋಟಿ ನಮನಗಳು.
ಸಮಾಜವಾದಿ ಸಿದ್ಧಾಂತವನ್ನು ಆತುಕೊಂಡು ಚಳವಳಿಗಳ ಬಂಧುತ್ವದ ಬೆಸುಗೆಯೊಂದಿಗೇ ಬೆಳೆಯುತ್ತಾ, ಎಲ್ಲ ಸಮಾನ ಚಿಂತನಾ ಮನಸ್ಸುಗಳ ಸಹಕಾರದೊಂದಿಗೆ ವಿರೋಧಿಗಳು ಹುಬ್ಬೇರಿಸುವಂತೆ ‘ಆಂದೋಲನ’ ದಿನಪತ್ರಿಕೆಯನ್ನು ಅರ್ಧ ಶತಮಾನದಷ್ಟು ಸುದೀರ್ಘ ಕಾಲ ಎತ್ತರೆತ್ತರಕ್ಕೇರಿಸಿದ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರ ಬದುಕು ಆದರ್ಶಪ್ರಾಯವಾಗಿದೆ.
ಪತ್ರಿಕೆಯನ್ನು ಕಟ್ಟುವ ಹಾದಿಯಲ್ಲಿ ಸಿದ್ಧಾಂತಗಳಿಗೆ ಬೆನ್ನು ತೋರದೆ ದಿಟ್ಟ ನಡೆ ತೋರಿದ ಕೋಟಿಯವರಿಗೆ ಇಂದು (ಜುಲೈ ೬) ೭೫ನೇ ವರ್ಷದ ಹುಟ್ಟುಹಬ್ಬ. ಇದೇ ದಿನ ಪತ್ರಿಕೆಗೆ ೫೦ ವರ್ಷಗಳು ತುಂಬಿದ ಸಂಭ್ರಮದ ಆಚರಣೆಯೂ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೋಟಿ ಅವರೊಡನೆ ಕಳೆದ ಅನುಪಮ ದಿನಗಳು, ಮರೆಯಲಾಗದ ಕ್ಷಣಗಳನ್ನು, ಅವರ ಪತ್ನಿ ನಿರ್ಮಲ ಕೋಟಿ ಅವರು ಸೇರಿದಂತೆ, ಒಡನಾಡಿಗಳು, ಆತ್ಮೀಯರು, ಸ್ನೇಹಿತರು, ಬಂಧುಗಳು ಅಕ್ಷರ ರೂಪದಲ್ಲಿ ಸಾದರಪಡಿಸಿದ್ದಾರೆ.