ಜಿ.ಕೃಷ್ಣ ಪ್ರಸಾದ್
ತೋಟಕ್ಕೆ ರಂಗು ತುಂಬುವ ಪೀ ನಟ್ ಬಟರ್ ಹಣ್ಣಿನ ಗಿಡ ನಿಮಗೆ ಗೊತ್ತಾ? ಬ್ರೆಡ್‌ಗೆ ಸವರುವ ಪೀನಟ್ ಬಟರ್ ಗೊತ್ತು. ಅದೇ ಹೆಸರಿನ ಹಣ್ಣಿನ ಗಿಡ ಇದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ದಕ್ಷಿಣ ಅಮೆರಿಕ ಮೂಲದ ಪೀ ನಟ್ ಬಟರ್ ಸಣ್ಣ ಗಾತ್ರದ ಗಿಡ. Bunchosia glandulifera ಇದರ ಸಸ್ಯ ಶಾಸ್ತ್ರೀಯ ಹೆಸರು.
ರೇಷ್ಮೆ ಗಿಡದಂತ ಸಣ್ಣ ಕಾಂಡದ, ಚದುರಿದ ರೆಂಬೆಗಳ, ಆಳೆತ್ತರ ಬೆಳೆಯುವ ಮಧ್ಯಮ ಗಾತ್ರದ ಸಣ್ಣ ಮರ. ಹಳದಿ ಹೂಗಳು ಆಕರ್ಷಕವಾಗಿರುವುದರಿಂದ ಅಲಂಕಾರಿಕ ಗಿಡವಾಗಿ ಕೂಡ ಬೆಳೆಸಬಹುದು.
ಇದರ ಆಕರ್ಷಣೆ ಎಂದರೆ ಕೇಸರಿ ಬಣ್ಣದ ಹಣ್ಣುಗಳು, ಹಸಿರಿನ ಕಾಯಿ, ಹಳದಿ ನಂತರ ಕೇಸರಿ ಬಣ್ಣಕ್ಕೆ ತಿರುಗಿ ನೋಡುಗರ ಗಮನ ಸೆಳೆಯುತ್ತವೆ. ಹಣ್ಣಿನ ತುದಿ ಗಿಣಿ ಮೂಗಿನ ತರಹ ಕಾಣಿಸುತ್ತದೆ. ಕೇಸರಿ ಬಣ್ಣದ ಹಣ್ಣನ್ನು ಕತ್ತರಿಸಿದರೆ ಪರಂಗಿಯ ಮರಿರೂಪದ ತರಹ ಕಾಣುತ್ತದೆ. ಗಾಢ ಕೆಂಪಿನ ತಿರುಳು, ಮಧ್ಯೆ ಹಸಿರು ಕಡಲೆ ಬೀಜ! ತಿರುಳು ತಿಂದರೆ ಹಸಿ ಕಡಲೆಕಾಯಿ (ಶೇಂಗಾ) ತಿಂದಂತೆ ಅನಿಸುತ್ತದೆ. ಅದರಿಂದಾಗೇ ಇದಕ್ಕೆ ‘ಪೀ ನಟ್ ಬಟರ್’ ಎಂಬ ಹೆಸರು ಬಂದಿದೆ. ಇದರ ಬೀಜಕ್ಕೂ ಕಡಲೆ ಬೀಜದ ರುಚಿಯೇ. ಹಾಗಾಗೇ ಕನ್ನಡದಲ್ಲಿ ಇದಕ್ಕೆ ಬೆಣ್ಣೆಗಡಲೆ ಹಣ್ಣು’ ಎಂಬ ಹೆಸರು.
ಇದರ ಕೇಸರಿ ಹಣ್ಣು ಹಕ್ಕಿಗಳಿಗೆ ಬಹು ಪ್ರಿಯ. ಮನೆಯ ಪಕ್ಕ ಪೀ ನಟ್ ಬಟರ್ ಗಿಡ ಇದ್ದರೆ ಹಕ್ಕಿಗಳ ಕಲರವ. ಹಣ್ಣನ್ನು ಕೊಕ್ಕಲ್ಲಿ ಹಿಡಿದ ಹಕ್ಕಿ ಫೋಟೋ ತೆಗೆವ ಸುಲಭ ಅವಕಾಶ! ಹಕ್ಕಿ ಹಣ್ಣು ತಿಂದು ಬೀಜ ಉದುರಿಸುವುದರಿಂದ, ತೋಟದಲ್ಲೆಡೆ ಗಿಡಗಳು ಹುಟ್ಟಿಕೊಳ್ಳುತ್ತವೆ.
ಹಳದಿ ಬಣ್ಣಕ್ಕೆ ತಿರುಗಿದ ದೋರಗಾಯಿ ಕಿತ್ತಿಟ್ಟರೆ ಹಣ್ಣಾಗುತ್ತದೆ. ಹಣ್ಣಾದ ಮೇಲೆ ತೊಂಡೆ ಹಣ್ಣಿನಂತೆ ಬಹು ಮೃದು. ಜೋರಾಗಿ ಒತ್ತಿದರೆ ಕೈಗೆಲ್ಲಾ ಜಾಮ್ ತರಹ ಮೆತ್ತಿಕೊಳ್ಳುತ್ತದೆ. ಈ ಹಂತದಲ್ಲಿ ತಿನ್ನಲು, ಜಾಮ್ ಮಾಡಲು ಸೂಕ್ತ. ಹಸಿರು ಕಾಯಿಗಳಿಂದ ಸಲಾಡ್ ಕೂಡ ಮಾಡಬಹುದು.
ವಿಟಮಿನ್ ಎ, ಸಿ ಮತ್ತು ಪ್ರೊಟೀನ್‌ನಿಂದ ಸಮೃದ್ಧವಾಗಿರುವ ಪೀ ನಟ್ ಬಟರ್ ಹಣ್ಣುಗಳು ಆರೋಗ್ಯವನ್ನು ವೃದ್ಧಿಸುತ್ತವೆ. ಕೂದಲು ಮತ್ತು ಚರ್ಮದ ಕಾಂತಿ ಹೆಚ್ಚಿಸುತ್ತವೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
ರೋಗ, ಕೀಟಗಳ ಬಾಧೆಯಿಲ್ಲದ, ಹೆಚ್ಚಿನ ಆರೈಕೆ ಕೇಳದ ಪೀ ನಟ್ ಬಟರ್ ನೆಟ್ಟ ಒಂದು ವರ್ಷಕ್ಕೆಲ್ಲಾ ಹಣ್ಣು ಹೊತ್ತು ನಿಲ್ಲುತ್ತದೆ. ಮಳೆಗಾಲದಲ್ಲಿ ಹಣ್ಣಿನ ಸುಗ್ಗಿ, ವರ್ಷಪೂರ ಹಣ್ಣು ಸಿಗುತ್ತಿರುತ್ತದೆ. ಇದು ಅಪರೂಪದ ಹಣ್ಣಿನ ಗಿಡ, ಕರ್ನಾಟಕಕ್ಕೆ ಹೊಸದು. ನಾಲ್ಕಾರು ಹಣ್ಣಿನ ಗಿಡ ಇದ್ದರೆ, ಮನೆ ಮಂದಿಯೆಲ್ಲಾ ತಿಂದು ಸಂಭ್ರಮಿಸಬಹುದು. ಪೀ ನಟ್ ಬಟರ್ ಗಿಡ ಬಹುಪಾಲು ನರ್ಸರಿಗಳಲ್ಲಿ ಸಿಗುತ್ತವೆ. ಬೀಜ ಬೇಕಾದವರು ಮೈಸೂರಿನ ಸಹಜ ಸೀಡ್ಸ್-7090009911 ಸಂಪರ್ಕಿಸಬಹುದು.