ಮೈಸೂರಿನ ಹೃದಯಭಾಗದಲ್ಲಿ ಇರುವ ಮಹಾರಾಜ ಕಾಲೇಜು ಮೈದಾನ ಲಕ್ಷಾಂತರ ಜನರು ಸೇರುವ ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಸೂಕ್ತವಲ್ಲ. ಗುರುವಾರ ನಡೆದ ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಹೆಜ್ಜೆ-ಸಮಾನತೆಯೆಡೆಗೆ ಸಂವಿಧಾನ ನಡಿಗೆ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಆದರೆ ಕಾರ್ಯಕ್ರಮಕ್ಕೆ ಜನರನ್ನು ಕರೆತಂದ ಬಸ್ಸುಗಳಿಂದ ಟ್ರಾಫಿಕ್ ಸಮಸ್ಯೆ ತಲೆದೋರಿ ಮೈಸೂರಿನ ಹೃದಯಭಾಗದ ಬಹುತೇಕ ಎಲ್ಲ ರಸ್ತೆಗಳು ಜಮ್ ಆಗಿ ಕಿರಿಕಿರಿ ಅನುಭವಿಸಿ ಪ್ರಾಯಸಪಟ್ಟವರು ಸಾರ್ವಜನಿಕರು. ಇಂತಹ ಜನಸೇರಿಸುವ ಸಮಾರಂಭಗಳನ್ನು ನಗರದ ಹೊರಗಡೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಭಾವನೆ ಹಲವರಲ್ಲಿ ಮೂಡಿದ್ದರೆ ಅಚ್ಚರಿಯೇನಿಲ್ಲ. ಈ ಹಿಂದೆ ಯುವ ದಸರಾ ಕಾರ್ಯಕ್ರಮ ಇದೇ ಮೈದಾನದಲ್ಲಿ ನಡೆಯುತ್ತಿದ್ದಾಗ ಟ್ರಾಫಿಕ್ ಜಮ್ ಸಮಸ್ಯೆ ತಲೆದೋರಿ ಈಗ ಉತ್ತನಹಳ್ಳಿ ಬಳಿಯ ಮೈದಾನಕ್ಕೆ ಸ್ಥಳಾಂತರಗೊಂಡಿದೆ. ಇನ್ನು ಮುಂದೆ ಬೃಹತ್ ಕಾರ್ಯಕ್ರಮಗಳನ್ನು ನಗರದ ಹೊರ ವಲಯದ ಉತ್ತನಹಳ್ಳಿ ಬಳಿಯ ಮೈದಾನದಲ್ಲಿ ಆಯೋಜಿಸುವತ್ತ ಆಯೋಜಕರು ಯೋಚಿಸಿದರೆ ಸಾರ್ವಜನಕರಿಗೆ ಉಂಟಾಗುವ ಕಿರಿಕಿರಿ ತಪ್ಪುತ್ತದೆ. ಜತೆಗೆ ಜನರ ಗೊಣಗಾಟವೂ ತಪ್ಪುತ್ತದೆ.
-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು


