ಮೈಸೂರಿನ ವಿವೇಕಾನಂದ ನಗರದಲ್ಲಿ ನಿರ್ಮಾಣ ಆಗಿರುವ ಸ್ವಾಮಿ ವಿವೇಕಾನಂದರ ಪ್ರತಿಮೆ, ಮಂಟಪ, ವೃತ್ತ ಮೂಲವಿನ್ಯಾಸದಂತೆ ಇರದಿರುವುದು ಬೇಸರದ ಸಂಗತಿ. ಚಿತ್ರ ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ ಅವರು ರಚಿಸಿಕೊಟ್ಟಿರುವ ಮೂಲ ವಿನ್ಯಾಸ ಮತ್ತು ಪ್ರಸ್ತುತ ನಿರ್ಮಾಣ ಆಗಿರುವ ವಿನ್ಯಾಸಕ್ಕೆ ಅಜಗಜಾಂತರ ವ್ಯತ್ಯಾಸವಿರುವುದು ಎದ್ದು ಕಾಣುತ್ತಿದೆ.
ಯಾವುದೇ ಕಾಮಗಾರಿಗಳು ನಡೆಯುವ ಮೊದಲು ಮೂಲ ವಿನ್ಯಾಸವನ್ನು ಅನುಮೋದನೆ ಮಾಡಿ ಕಾಮಗಾರಿ ಪ್ರಾರಂಭಿಸಿದ ನಂತರ ಪ್ರತಿ ಹಂತದಲ್ಲಿ ಪರಿಶೀಲನೆ ಮಾಡುವುದು ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯ. ಈ ಕಾಮಗಾರಿಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇದಕ್ಕೆ ಅವರನ್ನೇ ಹೊಣೆಗಾರರಾಗಿ ಮಾಡುವುದು. ಸಾಂಸ್ಕೃತಿಕ, ಪಾರಂಪರಿಕ ನಗರ ಎಂದು ಖ್ಯಾತಿ ಪಡೆದಿರುವ ಮೈಸೂರಿನಲ್ಲಿ ಇನ್ನು ಮುಂದೆಯಾದರೂ ಇಂತಹ ಕಾಮಗಾರಿಗಳು ನಡೆಯುವಾಗ ಚಿಂತಕರು, ಸಾಹಿತಿಗಳು, ಕಲಾಸಕ್ತರು ಹಾಗೂ ಪಾರಂಪರಿಕತೆಯ ಬಗ್ಗೆ ಅರಿವು ಇರುವ ತಜ್ಞರ ಅಭಿಪ್ರಾಯ ಪಡೆದು ಮೂಲವಿನ್ಯಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಒಳಿತು.
-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು



