ಎಚ್.ಡಿ.ಮಣಿಕಂಠ ನಾಯಕ್
ಅಂಗಡಿಗಳು, ವ್ಯಕ್ತಿಗಳ ಮೂಲಕ ಸುಲಭವಾಗಿ ಸಿಗುತ್ತಿರುವ ಲಾಟರಿಗಳು; ಬಡಜನರಿಗೆ ಸಂಕಷ್ಟ
ಯಳಂದೂರು: ತಾಲ್ಲೂಕಿನಲ್ಲಿ ಕೇರಳ ರಾಜ್ಯದ ಲಾಟರಿ ಟಿಕೆಟ್ಗಳ ಮಾರಾಟ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಕೂಲಿ ಕಾರ್ಮಿಕರು ಸೇರಿದಂತೆ ದುಡಿಯುವ ವರ್ಗದ ಜನರು ತಮ್ಮ ಕಷ್ಟದ ದುಡಿಮೆಯ ಹಣವನ್ನು ಲಾಟರಿ ಖರೀದಿಸಲು ವ್ಯಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೇರಳ ರಾಜ್ಯದಲ್ಲಿ ನಡೆಯುವ ಲಾಟರಿ ಟಿಕೆಟ್ಗಳು ಯಳಂದೂರು ತಾಲ್ಲೂಕಿನ ವಿವಿಧ ಅಂಗಡಿಗಳು ಹಾಗೂ ವ್ಯಕ್ತಿಗಳ ಮೂಲಕ ಸಾರ್ವಜನಿಕರಿಗೆ ಸುಲಭವಾಗಿ ದೊರೆಯುತ್ತಿವೆ. ಕೇರಳದ ಸುಲ್ತಾನ್ ಬತ್ತೇರಿಯಿಂದ ಕೆಲವು ಏಜೆಂಟರು ಹೆಚ್ಚಿನ ಪ್ರಮಾಣದಲ್ಲಿ ಲಾಟರಿ ಟಿಕೆಟ್ಗಳನ್ನು ತಂದು ಸ್ಥಳೀಯವಾಗಿ ಮಾರಾಟ ಮಾಡಿಸುತ್ತಿದ್ದಾರೆ. ಕೆಲವರಿಗೆ ಹೆಚ್ಚಿನ ಮೊತ್ತದ ಬಹುಮಾನ ಬಂದಿರುವುದು ಮತ್ತಷ್ಟು ಜನರನ್ನು ಲಾಟರಿ ಖರೀದಿಯತ್ತ ಆಕರ್ಷಿಸುತ್ತಿದೆ.
ದಿನವಿಡೀ ದುಡಿದು ಜೀವನ ಸಾಗಿಸುವ ಕೂಲಿ ಕಾರ್ಮಿಕರು ತಮ್ಮ ಆದಾಯದ ಒಂದು ಭಾಗವನ್ನುಲಾಟರಿ ಖರೀದಿಗೆ ಮೀಸಲಿಡುತ್ತಿದ್ದಾರೆ. ಬಹುಮಾನದ ಆಸೆಯಿಂದ ಪ್ರತಿದಿನ ಹಣ ವ್ಯಯಿಸುತ್ತಿದ್ದು, ಇದರಿಂದ ಕುಟುಂಬದ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತಿದೆ. ಲಾಟರಿ ಚಟಕ್ಕೆ ಒಳಗಾಗುತ್ತಿರುವ ಬಡ ಮತ್ತು ಮಧ್ಯಮ ವರ್ಗದ ಜನರ ಹಿತದೃಷ್ಟಿಯಿಂದ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ.
ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧವಿದ್ದರೂ ತಾಲ್ಲೂಕಿನಲ್ಲಿ ಇಷ್ಟೊಂದು ಬಹಿರಂಗವಾಗಿ ಕೇರಳ ಲಾಟರಿ ಮಾರಾಟ ನಡೆಯುತ್ತಿರುವುದು ಹೇಗೆ? ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ಈ ವಿಚಾರ ಬಂದಿಲ್ಲವೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.
” ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿ ಅಕ್ರಮ ಮಾರಾಟ ತಡೆಗಟ್ಟಬೇಕು. ಕೆಲ ಕೆಳಹಂತದ ಅಧಿಕಾರಿಗಳು ಮೇಲಧಿಕಾರಿಗಳ ಗಮನಕ್ಕೆ ಬಾರದಂತೆ ಇಂತಹ ಚಟುವಟಿಕೆಗಳಿಗೆ ಪೋಷಣೆ ನೀಡುತ್ತಿರುವ ಅನುಮಾನಗಳಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.”
-ವರದರಾಜು, ಕರ್ನಾಟಕ ಕಾವಲು ಪಡೆ ಅಧ್ಯಕ್ಷ
” ತಾಲ್ಲೂಕಿನಲ್ಲಿ ಅಕ್ರಮ ಲಾಟರಿ ಮಾರಾಟ ನಡೆಯುತ್ತಿರುವ ಬಗ್ಗೆ ದೂರು ಅಥವಾ ಮಾಹಿತಿ ಬಂದರೆ ಪರಿಶೀಲನೆ ನಡೆಸಿ, ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. ನಾನು ನೂತನವಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬೇಕು.”
-ಮಾರುತಿ, ಪಿಎಸ್ಐ





