ಅಜಯ್ ಕುಮಾರ್ ಎಂ.ಗುಂಬಳ್ಳಿ
ದೀಪಾವಳಿ ಹಬ್ಬವನ್ನು ದೀವಳಿಗೆ ಅಂತ ಕರೆಯೋದು. ದೀಪಾವಳಿ ಹಬ್ಬದ ಮೂರು ದಿನವೂ ಒಂದೊಂದು ಗೌರಿ ಕಡ್ಡಿ ಹಚ್ಚಿ ಅಲ್ಲಾರೆ ಮಲ್ಲಾರೆ ಅಂತ ಹಾಡುತ್ತಿದ್ದರು. ‘ಗೌರಿ ಕಡ್ಡಿಯನ್ನು ಹಿಂದಿನಿಂದಲೂ ಉರಿಸ್ಕೊಂಡು ಬಂದಿರೋದು ನಮ್ಮ ಹಿರಿಯರು. ಅದನ್ನು ನಾವು ನೆಡಿಸಿಕೊಂಡು ಹೋಗ್ತಯಿದ್ದೀವಿ’ ಅಷ್ಟೇ ಅಂತ ಸಿದ್ದಯ್ಯ ಹೇಳ್ತಿದ್ದ. ‘ಗೌರಿ ಕಡ್ಡಿ ಅಂದರೆ ಯಾನ’ ಅಂತ ಅವನ ಮೊಮ್ಮಗ ಕೇಳ್ತಲೆ ‘ಅದು ಒಂಥರಾ ಪೆಂಜು ಇದ್ದಂಗ. ಕಾಡಿಂದ ನೀಲಗಿರಿ ಗಿಡದ ಕಡ್ಡಿ ತಂದು ಗೂಡದಿಂದ ಚಚ್ಚಿ ಬಿಸಿಲಿಗೆ ಒಣಗಿಸಿ ಹಬ್ಬದ ದಿನಕ್ಕೆ ಹಚ್ಚೋದು ಅಂದಾಗ, ಅವನು ಮತ್ತೆ ಯಾರಿಗೆ ಪೆಂಜು ಹಚ್ಚೋದು’ ಅಂದ. ‘ಸಿದ್ದಯ್ಯ ಹೇಳ್ತ ಮಾದೇಶ್ವರನಿಗೆ ಚಮ್ಮಾಳಿಗೆ ಮಾಡಿಕೊಡಲು ಶ್ರವಣ ದೊರೆ ಕೇಳಿದನಂತೆ. ಆಗ ಮಾದೇಶ್ವರ ಚಮ್ಮಾಳಿಗೆಯನ್ನು ಮಾಡಿಕೊಡುತ್ತಾರೆ. ಆದರೆ ಶ್ರವಣನು ಜನಪೀಡಕನು, ಹೆಣ್ಣುಬಾಕತನವನ್ನು ಮುಂದುವರಿಸಿದ ಕಾರಣಕ್ಕೆ ಮಾಯ್ಕಾರ ಮಾದೇಶ್ವರ ಶ್ರವಣನನ್ನು ನೆಲಕ್ಕೆ ತುಳಿದು ಸಂಹಾರ ಮಾಡುವನು.
ವರುಷಕ್ಕೆ ಮೂರು ದಿನ ಆದರು ನನ್ನ ಜನರನ್ನು ನೋಡಬೇಕು, ಅದಕ್ಕೆ ಅವಕಾಶ ನೀಡು ಮಾದೇಶ್ವರ ಎಂದು ಶ್ರವಣ ಕೇಳಿದಾಗ ಮಾದೇಶ್ವರ ಆಗಲಿ ಎಂದು ದೀಪಾವಳಿ ಹಬ್ಬದ ಮೂರು ದಿನಗಳು ನಿನ್ನನ್ನು ನಾನು ಮೇಲೆ ಎತ್ತುತ್ತೀನಿ. ಆಗ ನೀನು ನಿನ್ನ ಜನರ ಸಂತೋಷ ನೋಡು ಎಂದು ದೀಪಾವಳಿಗೆ ಶ್ರವಣ ದೊರೆ ಭೂಮಿಯ ಬೆಳಕನ್ನು ತನ್ನ ಜನರನ್ನು ನೋಡಿ ಸಂತಸ ಪಡುವನು’ ಅದು ಜನಪದರ ಕತೆ. ಎನ್ನುತ್ತ ನಮ್ಮ ಊರಲ್ಲಿ ಮಡಕೆ ಒಡೆಯುವ ಪದ್ಧತಿ ಇದೆ. ಮಾವ ಅಳಿಯ ಸಂಬಂಧ ಹೊಂದಿರುವವರು ಪರಸ್ಪರರ ಮನೆಗೆ ಮಡಕೆ ಒಡೆಯುತ್ತಾರೆ. ಅದೊಂತರ ಹೆಣ್ಣು ಕೇಳಿದಂತೆ. ಹೆಣ್ಣು ಸಲ್ಲಬೇಕಾಗಿರುವವನು ಹೋಗಿ ಮಡಕೆ ಒಡೆದು ‘ಮಾವ ನಿನ್ ಮಗುಳ್ ಕೊಟ್ಟಯ’ ಅಂತ ಹೇಳಿ ಬರ್ತಾನೆ. ಹೀಗೆ ನಾವು ದೀಪಾವಳಿನ ಆಚರಿಸಿಕೊಂಡು ಬಂದಿರೋದು ಅಂತ ಸಿದ್ದಯ್ಯ ಹೇಳ್ತಿರಲು ಅಲ್ಲಾರೆ ಮಲ್ಲಾರೆ ಅಂತ ಗೌರಿ ಕಡ್ಡಿ ಹಿಡ್ಕೊಂಡು ಹುಡುಗಾಟಿಕೆಯ ಹೈಕಳು ಬೆಳಕಿನ ಆಟದ ಅಣಕು ಪ್ರದರ್ಶನ ಮಾಡುತ್ತಿದ್ದರು.
” ಮಾವ ಅಳಿಯ ಸಂಬಂಧ ಹೊಂದಿರುವವರು ಪರಸ್ಪರರ ಮನೆಗೆ ಮಡಕೆ ಒಡೆಯುತ್ತಾರೆ. ಅದೊಂತರ ಹೆಣ್ಣು ಕೇಳಿದಂತೆ. ಹೆಣ್ಣು ಸಲ್ಲಬೇಕಾಗಿರುವವನು ಹೋಗಿ ಮಡಕೆ ಒಡೆದು ‘ಮಾವ ನಿನ್ ಮಗುಳ್ ಕೊಟ್ಟಯ’ ಅಂತ ಹೇಳಿ ಬರ್ತಾನೆ”





