ಪ್ರೊ. ಎಂ. ಕೃಷ್ಣೇಗೌಡ, ಮೈಸೂರು
ಘನ ಕರ್ನಾಟಕ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳು.
ನವೆಂಬರ್ ಒಂದನೇ ತಾರೀಕು ಕನ್ನಡ ಧ್ವಜವನ್ನು ಮಾತ್ರವಲ್ಲದೆ ಹಾಲು ಮೊಸರಿನ ಬೆಲೆಯನ್ನೂ ಏರಿಸಿದ್ದೀರಿ. ಇನ್ನು ಒಂದೆರಡು ದಿನಗಳಲ್ಲಿ ಬಸ್ ಟಿಕೆಟ್ಟಿನ ದರವನ್ನೂ ಏರಿಸಲಿದ್ದೀರಿ. ಒಳ್ಳೆಯ ಕೆಲಸ. ಕೇಂದ್ರ ಸರ್ಕಾರದವರು ಪೆಟ್ರೋಲ್ ಡೀಸೆಲ್ ದರವನ್ನೂ ಸಾಕಷ್ಟು ಏರಿಸಿದ್ದಾರೆ.ಆದ್ದರಿಂದ ನೀವೇನು ಕಡಿಮೆ? ಅವರಿಗೆ ಯಾವುದು ಸಾಧ್ಯವೋ ಅದರ ಬೆಲೆಯನ್ನು ಅವರು ಏರಿಸಲಿ. ನಿಮಗೆ ಯಾವುದು ಸಾಧ್ಯವೋ ಅದರ ಬೆಲೆಯನ್ನು ನೀವು ಏರಿಸಿ. ಏರಿಸ್ತಾನೇ ಇರಿ. ಬೇಜರು ಮಾಡಿಕೊಳ್ಳಬೇಡಿ.ಈ ಜನಸಾಮಾನ್ಯರು ಒಂದೆರಡು ದಿನ ಗೊಣಗ್ತಾರೆ, ಆಮೇಲೆ ಸುಮ್ಮನಾಗ್ತಾರೆ. ನೀವುಗಳು ಅವಕಾಶ ಸಿಕ್ಕಾಗ ಏರಿಸ್ತಾ ಇರಬೇಕು. ಈಗನೋಡಿ ಹೋಟೆಲ್ಗಳಲ್ಲಿ ತಿಂಡಿ ಕಾಫಿ ದರ ಕೂಡಾ ಏರುತ್ತೆ. ನೀವು ಒಂದು ಲೀಟರ್ ಹಾಲಿಗೆ ಎಂಟೋ ಹತ್ತೋ ಏರಿಸಿದರೆ ಅವರು ಒಂದು ಕಪ್ ಕಾಫಿಗೆ ಐದೋ ಹತ್ತೋ ಏರಿಸ್ತಾರೆ. ಜನಸಾಮಾನ್ಯರು ಅದನ್ನೇನೂ ಪ್ರಶ್ನೆ ಮಾಡದೆ ಒಂದು ನಾಲ್ಕು ದಿನ ಗೊಣಗಿಕೊಂಡು ಆಮೇಲೆ ಅವರೇ ಸುಮ್ಮನಾಗ್ತಾರೆ.
ಸಿಹಿ ತಿಂಡಿ ಅಂಗಡಿಯವರು ಕೆಜಿಗೆ ನೂರು ರೂಪಾಯಿ ಜಸ್ತಿ ಮಾಡ್ತಾರೆ. ಅವರೂ ಮಾಡ್ಲಿ. ಯಾರ್ಯಾರಿಗೆ ಯಾವ್ಯಾವಾಗ ಏರಿಸುವ ಅವಕಾಶ ಸಿಗುತ್ತೋ ಆಗೆ ಅವರು ಏರಿಸ್ತಾನೇ ಹೋಗ್ಬೇಕು. ಜನರಿಗೆ ನಿಮ್ಮನ್ನ ಇಳಿಸೋ ಅವಕಾಶ ಸಿಗೋದು ಐದು ವರ್ಷಕ್ಕೊಂದು ಸಲ ಮಾತ್ರ. ನಿಮ್ಮನ್ನು ಇಳಿಸಿದ್ರೆ ಇನ್ನೊಬ್ರು ಬರ್ತಾರಲ್ಲ, ಅವರು ಮಾಡೋದೂ ಏರಿಸೋ ಕೆಲಸಾನೇ ತಾನೆ? ಆದ್ದರಿಂದ ಯಾರನ್ನ ಇಳಿಸಿ ಯಾರನ್ನ ಏರಿಸಿದರೂ ಏನೂ ಬದಲಾಗಲ್ಲ. ಅದು ನಿಮಗೂ ಗೊತ್ತು, ನಮಗೂ ಗೊತ್ತು.
ಬಡಬಗ್ಗರಿಗೊಂದು ಒಳ್ಳೆಯ ಸಲಹೆ ಇದೆ. ಇಲ್ಲೀವರೆಗೆ ನೀವು ಒಂದು ಲೀಟರು ಹಾಲು ತಕ್ಕೊಳ್ಳದೇ ಇದ್ರೆ ನಿಮಗೆ ಬರೀ ಐವತ್ತು ರೂಪಾಯಿ ಉಳೀತಾ ಇತ್ತು. ಈಗ ನೀವು ಅರುವತ್ತು ರೂಪಾಯಿ ಉಳಿಸಬಹುದು. ಮೊಸರಿನಲ್ಲಂತೂ ಇನ್ನೂ ದೊಡ್ಡ ಉಳಿತಾಯ. ಒಂದು ಲೀಟರು ಮೊಸರು ಕೊಳ್ಳದೆ ಹೋದರೆ ನೆನ್ನೆ ಮೊನ್ನೆಗಿಂತ ಈಗ ಹದಿನಾರು ರೂಪಾಯಿ ಜಸ್ತಿ ಉಳಿಸಬಹುದು.
ಎಂಥಾ ಒಳ್ಳೆ ಐಡಿಯಾ ಅಲ್ವಾ? ಏರಿಸೀ ಹಾರಿಸೀ ಕನ್ನಡದ ಬಾವುಟಾ/ ಏರಿಸೀ ಹಾರಿಸೀ ಹಾಲು ಮೊಸರು ಪೆಟ್ರೋಲ್ ಡೀಸೆಲುಗಳ ರೇಟಾ/ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು… !!!




