ಹೇಮಂತ್ಕುಮಾರ್
ಮೂಲಸೌಕರ್ಯಗಳ ಕೊರತೆ, ಸಂಬಂಧಪಟ್ಟ ಇಲಾಖೆ ಅಭಿವೃದ್ಧಿಪಡಿಸಲು ಮುಂದಾಗಬೇಕೆಂದು ಸಾರ್ವಜನಿಕರ ಆಗ್ರಹ
ಮಂಡ್ಯ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳದೆ ನಿರ್ಲಕ್ಷ ವಹಿಸಲಾಗಿದೆ. ಪುರಾತನ ಹಾಗೂ ಐತಿಹಾಸಿಕ ತಾಣಗಳು ಸಾಕಷ್ಟಿವೆ. ಅದರಲ್ಲಿ ಪ್ರಮುಖವಾಗಿ ಕಂಡುಬರುವುದೇ ಮೇಲುಕೋಟೆಯಲ್ಲಿ ಅನ್ವೇಷಿಸದೇ ಪಾಳು ಬಿದ್ದಿರುವ ಪಾಂಡವರ ಗುಹೆಗಳು.
ಪಾಂಡವರು ವಾಸಿಸಿದ್ದರೆಂಬ ಹಿನ್ನೆಲೆಯುಳ್ಳ ಈ ತಾಣ ಹೊರನೋಟಕ್ಕೆ ಅಜಂತಾ, ಎಲ್ಲೋರಾ ಗುಹಾಂತರ ದೇವಾಲಯಗಳಂತೆ ಕಂಡುಬರುತ್ತದೆ. ಈ ಸ್ಥಳವು ಕನಿಷ್ಠ ಮಾರ್ಗಸೂಚಿ ಫಲಕವಾಗಲಿ, ಹೋಗಲು ಸೂಕ್ತವಾದ ದಾರಿಯಾಗಲಿ ಇಲ್ಲದೆ ದೂರದ ಪ್ರವಾಸಿಗರಿಗಿರಲಿ, ಮಂಡ್ಯ ಭಾಗದವರಿಗೇ ತಿಳಿಯದಿರುವುದು ಬೇಸರ ಮೂಡಿಸುತ್ತದೆ.
ಮೇಲುಕೋಟೆಗೆ ಬರುವ ಭಕ್ತಾದಿಗಳು ಹಾಗೂ ಪ್ರವಾಸಿಗರಿಗೆ ಇದೊಂದು ಅದ್ಭುತವಾದ ತಾಣವಾಗಿದೆ. ಯೋಗಾನರಸಿಂಹಸ್ವಾಮಿ ದೇವಾಲಯಕ್ಕೆ ಸಮೀಪವಿದ್ದರೂ, ಜನಸಂಚಾರವಿಲ್ಲದೆ ಪಾಳುಬಿದ್ದ ಸ್ಥಿತಿಯಲ್ಲಿದೆ. ಇಲ್ಲಿ ಬೃಹತ್ ಬಂಡೆಯಲ್ಲಿ ಎರಡು ಅಂತಸ್ತುಗಳಲ್ಲಿ ಕೆತ್ತನೆ ಮಾಡಿರುವ ಗುಹೆಗಳು ಕುತೂಹಲಕಾರಿಯಾಗಿವೆ.
ಬಾದಾಮಿ ಮತ್ತು ಇತರ ಗುಹಾಂತರ ದೇವಾಲಯಗಳಂತೆಯೇ ಮೇಲುಕೋಟೆಯಲ್ಲಿರುವ ಈ ಗುಹಾ ಮಂಟಪವು ಅಚ್ಚರಿಮೂಡಿಸುತ್ತದೆ. ಗುಹಾಮಂಟಪದಲ್ಲಿ ತಲಾ ಐದು ಮಂಟಪಗಳನ್ನು ಕೆತ್ತಲಾಗಿದ್ದು, ಅಪೂರ್ಣಗೊಂಡಿರುವಂತೆ ಕಂಡುಬರುತ್ತದೆ. ಈ ಗುಹೆಯಲ್ಲಿ ೬ ಅಡಿ ಎತ್ತರದ ವ್ಯಕ್ತಿಗಳು ನಡೆದಾಡ ಬಹುದಾಗಿದೆ. ಅನೇಕ ಕೆತ್ತನೆ ಕೆಲಸಗಳನ್ನು ಮಾಡಿರುವ ಕುರುಹುಗಳು ಇಲ್ಲಿದ್ದು ಯಾವ ಕೆಲಸವೂ ಪೂರ್ಣಗೊಂಡಂ ತಿಲ್ಲ. ಗಾಳಿ ಬೆಳಕು ಸಹಜವಾಗಿದೆ. ಎಂತಹ ಬಿರು ಬೇಸಿಗೆಯಲ್ಲೂ ತಂಪಾದ ವಾತಾವರಣ ಹೊಂದಿದೆ. ಗುಹೆಯ ಮುಂಭಾಗದಲ್ಲಿ ಸಿಹಿ ನೀರಿನ ಕೊಳವಿದ್ದು, ಎಂತಹ ಬರಗಾಲದಲ್ಲೂ ಇದು ಬತ್ತುವುದಿಲ್ಲ ಎನ್ನಲಾಗಿದೆ.
ಮೇಲುಕೋಟೆಯಲ್ಲಿರುವ ಸುಮಾರು ನೂರಾಒಂದು ಕಲ್ಯಾಣಿಗಳ ಹಿಂದೆ ಒಂದೊಂದು ಕಥೆ ಇದೆ. ಅದರಂತೆ ಈ ಗುಹಾಂತರ ಮಂಟಪಗಳನ್ನು ಯಾವುದೇ ಯಂತ್ರಗಳಿಲ್ಲದ ಆ ಕಾಲದಲ್ಲಿ ನಿರ್ಮಿಸಿರುವ ತಾಂತ್ರಿಕತೆ ಅದ್ಬುತವೆನಿಸುತ್ತದೆ. ಈ ಬಗ್ಗೆ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯವರು ಮಾಹಿತಿ ಫಲಕಗಳನ್ನು ಅಳವಡಿ ಸಿದರೆ ಸಾರ್ವಜನಿಕರ ಕುತೂಹಲ ತಣಿಸಲಿದೆ.
ಕೆಳಭಾಗದಲ್ಲಿರುವ ಗುಹೆಯಲ್ಲಿ ಕಂಬಗಳ ಕೆತ್ತನೆ ಕೆಲಸ ಅಪೂರ್ಣವಾಗಿದ್ದು, ವಿಶಾಲ ಪ್ರಾಂಗಣವನ್ನು ಹೊಂದಿದೆ. ಮೇಲ್ಭಾಗದ ಗುಹೆಯಲ್ಲಿ ಕಂಬಗಳ ಕೆತ್ತನೆ ಕೆಲಸ ಪೂರ್ಣಗೊಂಡಿದ್ದು ಎರಡು ಗರ್ಭಗುಡಿಗಳನ್ನು ಒಳಗೊಂಡಿದೆ. ಗಣೇಶ ಮತ್ತು ವಿಷ್ಣು ವಿಗ್ರಹಗಳೂ ಇವೆ. ಮೇಲಂತಸ್ತಿನ ಗುಹೆಯಲ್ಲಿ ಒಳಕಲ್ಲುಗಳು, ದೀಪ ಹಚ್ಚಲು ಎಣ್ಣೆಯ ಕುಳಿಗಳಿವೆ. ಹೀಗೆ ಜಿಲ್ಲೆಯಲ್ಲೇ ಅಪರೂಪದಲ್ಲಿ ಅಪರೂಪದ್ದಾದ ಈ ಸ್ಥಳ ಇವತ್ತಿಗೂ ಗೌಪ್ಯವಾಗಿ, ಅನಾಮಧೇಯವಾಗಿ ಪಾಳು ಬಿದ್ದಿರುವುದು ಜನಸಾಮಾನ್ಯರ ಅಸಮಾಧಾನಕ್ಕೆ ಕಾರಣವಾಗಿದೆ.
ರಾಮಾನುಜಾಚಾರ್ಯರು ಮೇಲುಕೋಟೆಗೆ ಬರುವ ಮುನ್ನವೇ ಈ ಗುಹೆಗಳು ರಚಿತವಾಗಿದ್ದವು ಎಂಬ ಮಾಹಿತಿ ಇದೆ. ಮೇಲುಕೋಟೆಯಲ್ಲಿ ವೈರಮುಡಿ ಉತ್ಸವಕ್ಕೆ ಸಹಸ್ರಾರು ಮಂದಿ ಆಗಮಿಸುತ್ತಾರೆ. ಇಲ್ಲಿರುವ ಕಲ್ಯಾಣಿ, ರಾಯಗೋಪುರ, ಧನುಷ್ಕೋಟಿ, ಅಕ್ಕ ತಂಗಿಯರ ಕೊಳ, ಚೆಲುವರಾಯಸ್ವಾಮಿ ದೇಗುಲ, ಯೋಗಾನರಸಿಂಹಸ್ವಾಮಿ ಬೆಟ್ಟಕ್ಕೆ ತಪ್ಪದೇ ಭೇಟಿ ನೀಡಿ ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿದು ಖುಷಿಪಡುತ್ತಾರೆ.
ಆದರೆ, ಕೇಂದ್ರ ಪುರಾತತ್ವ ಇಲಾಖೆಯಾಗಲಿ, ರಾಜ್ಯದ ಪ್ರವಾಸೋದ್ಯಮ ಇಲಾಖೆಯಾಗಲಿ ಇಂತಹ ಮಹತ್ವದ ಪಾಂಡವರ ಗುಹೆಯನ್ನು ಪ್ರವಾಸಿಗರಿಗೆ ಪರಿಚಯಿಸದಿರುವುದು ದೊಡ್ಡ ಲೋಪವಾಗಿದೆ. ಪರಿಣಾಮ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣವಾಗಬೇಕಿದ್ದ ಈ ಎರಡಂತಸ್ತಿನ ಮಾನವ ನಿರ್ಮಿತ ಗುಹಾಮಂಟಪಗಳು ಪಾಳು ಬಿದ್ದಿದ್ದು, ಬಹಳ ನೋವಿನ ಸಂಗತಿಯಾಗಿದೆ.
” ಮೇಲುಕೋಟೆಯಲ್ಲಿರುವ ಈ ಗುಹಾ ಮಂಟಪಗಳ ಕುರಿತಂತೆ ನಮಗೆ ಪೂರ್ಣ ಮಾಹಿತಿ ಇಲ್ಲ. ಇಂತಹ ಸ್ಥಳಗಳನ್ನು ಪ್ರವಾಸಿಗರಿಗೆ ಪರಿಚಯಿಸಿ, ಪುರಾಣ ಪ್ರಸಿದ್ಧ, ಐತಿಹಾಸಿಕ ಮಹತ್ವದ ತಾಣಗಳು ಎಲ್ಲರಿಗೂ ತಿಳಿಯುವಂತಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಈ ಗುಹಾಮಂಟಪಕ್ಕೆ ಪ್ರವಾಸಿಗರು ಸಂದರ್ಶಿಸಲು ಅನುವಾಗುವಂತೆ ಕ್ರಮವಹಿಸಲಾಗುವುದು.”
ಎಚ್.ಬಿ.ರಾಘವೇಂದ್ರ, ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಮಂಡ್ಯ





