ಮೈಸೂರು ನಗರ ಪಾಲಿಕೆಯು ಇದೇ ತಿಂಗಳ ೨೮ ರಂದು ‘ಪ್ರಜಾಸೇವಾ’ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ, ಇ – ಖಾತಾ ಅಭಿಯಾನ ಹಮ್ಮಿಕೊಂಡಿದ್ದು, ಅರ್ಜಿ ಸಲ್ಲಿಸಿದ ೭೨ ಗಂಟೆಯೊಳಗೆ ( ಮೂರು ದಿನಗಳ ಒಳಗೆ) ಇ-ಖಾತಾ ನೀಡಲಾಗುವುದೆಂದು ಸೋಮವಾರದಿಂದ ವ್ಯಾಪಕ ಪ್ರಚಾರಗೊಂಡಿದೆ.
ಪಾಲಿಕೆಯ ಈ ಕ್ರಮವನ್ನು ಸಾರ್ವಜನಿಕರು ಮುಕ್ತಕಂಠದಿಂದಲೇ ಶ್ಲಾಘಿಸಿದ್ದಾರೆ. ಸಾವಿರಾರು ರೂಪಾಯಿ ಕೊಟ್ಟು ತಿಂಗಳುಗಟ್ಟಲೆ ನಗರ ಪಾಲಿಕೆಯ ವಲಯ ಕಚೇರಿಗಳಿಗೆ ಅಲೆದು, ಚಪ್ಪಲಿ ಸವೆದರೂ ಸಿಗದ ಇ- ಖಾತಾ ಕೇವಲ ಮೂರು ದಿನಗಳ ಒಳಗೆ ಸಿಗುವುದೆಂದು ಖುಷಿಪಡುತ್ತಿದ್ದಾರೆ.
ಆದರೆ ಇಲ್ಲಿರುವ ದೊಡ್ಡ ಸಮಸ್ಯೆ ಎಂದರೆ, ಅರ್ಜಿ ಸಲ್ಲಿಸಲು, ಅರ್ಜಿ ಜೊತೆ, ಮನೆಯ ಅಥವಾ ನಿವೇಶನದ ಇಸಿಯನ್ನು,(ಎನ್ಕಂಬರೆನ್ಸ್, ಋಣಬಾರ ರಾಹಿತ್ಯ ಪತ್ರ) ಕಡ್ಡಾಯವಾಗಿ ಸಲ್ಲಿಸಲೇಬೇಕು. ಇಸಿಯನ್ನು ತೆಗೆದುಕೊಳ್ಳಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಬೇಕು, ಅಲ್ಲಿಗೆ ಹೋದರೆ ಸರ್ವರ್ ಬಿಜ಼ಿ ಇದೆ. ಸಾವಿರಾರು ಜನರು ಇ ಸಿ ಗೆ ಅರ್ಜಿ ಸಲ್ಲಿಸಿದ್ದಾರೆ. ಇ ಸಿ ಸಿಗಲು ನಿಮಗೆ ಕನಿಷ್ಠ ಒಂದು ವಾರದಿಂದ ಹದಿನೈದು ದಿನಗಳಾದರೂ ಬೇಕು ಎನ್ನುತ್ತಾರೆ.
ಹಾಗಾದರೆ ಸಾರ್ವಜನಿಕರು ೨೮ ರಂದು ಅರ್ಜಿ ಸಲ್ಲಿಸುವುದಾದರೂ ಹೇಗೆ? ನಗರ ಪಾಲಿಕೆಯ ಅಧಿಕಾರಿಗಳು ಈ ಬಗ್ಗೆ ಸಾರ್ವಜನಿಕರಿಗೆ ಕನಿಷ್ಠ ಹದಿನೈದು ದಿನಗಳ ಹಿಂದೆಯೇ ತಿಳಿಸಬೇಕಿತ್ತಲ್ಲವೇ,? ಈ ಬಗ್ಗೆ ಇವರಿಗೆ ಕನಿಷ್ಠ ತಿಳಿವಳಿಕೆಯಾದರೂ ಬೇಡವೇ, ಕೇವಲ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರಾ?, ನಗರ ಪಾಲಿಕೆಯ ಆಯುಕ್ತರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅರ್ಜಿ ಸಲ್ಲಿಸಲು ಕನಿಷ್ಠ ಮುಂದಿನ ಹದಿನೈದು ದಿನಗಳಾದರೂ ಅವಕಾಶ ನೀಡಬೇಕು.
-ಬೂಕನಕೆರೆ ವಿಜೇಂದ್ರ, ಮೈಸೂರು



