ಜಿ.ಪಿ.ಬಸವರಾಜು
ಖುಷಿಯೋ, ಸಂಕಟವೊ ಒಡಲೊಳಗಿಟ್ಟುಕೊಳ್ಳುತ್ತಾರೆ ಜನಸಾಮಾನ್ಯರು
ಹತ್ತು ದಿನಗಳ ಕಾಲ ಕುಣಿದು ಕುಣಿದು ದಣಿದ ಮೈಸೂರು ದಸರಾ ಕಾಲ್ತೆಗೆದಿದೆ. ಹೋಗುವಾಗ ಮರೆಯಾದ ಮಳೆಗೆ ಜಗ ಮಾಡಿಕೊಟ್ಟಿದೆ. ಸಂಜೆಯ ಕತ್ತಲಿನೊಂದಿಗೇ ಇಳೆಗೆ ಇಳಿಯುವ ಮಳೆ ಜಿಟಿಜಿಟಿ ಶ್ರುತಿಯಲ್ಲಿಯೇ ಹಾಡುತ್ತ, ಇನ್ನೂ ಬೀದಿಗಳನ್ನು ಬೆಳಗುತ್ತಿರುವ ದೀಪ ಸಾಲುಗಳನ್ನು ನೋಡಿ ಕಣ್ಣು ಮಿಟುಕಿಸುತ್ತಿದೆ. ಮಳೆಯೊ, ಚಳಿಯೊ, ಗಾಳಿಯೊ, ಕತ್ತಲೊ, ಬೆಳಕೊ ಯಾವುದನ್ನೂ ಲೆಕ್ಕಕ್ಕೇ ಇಡದ ಮೈಸೂರಿಗರು ಸಂಜೆಯ ತಿನಿಸುಗಳನ್ನು ಹುಡುಕುತ್ತ ಹೆಜ್ಜೆ ಹಾಕುತ್ತಿದ್ದಾರೆ. ಬೀದಿ ಬದಿಯ ತಿನಿಸುಗಳಿಗೆ ಮೈಸೂರು, ದಸರಾದಷ್ಟೇ ಪ್ರಸಿದ್ಧಿ. ಜೊತೆಗೆ ಕೇಂದ್ರ ಸರ್ಕಾರ ಬೀದಿ ತಿಂಡಿಗಳಿಗಾಗಿ ಆಯ್ಕೆ ಮಾಡಿರುವ ೧೭ ನಗರಗಳಲ್ಲಿ ಮೈಸೂರೂ ಒಂದು. ಇದು ತಿಂಡಿ ಭೂಪರ ಕಿರೀಟಕ್ಕೆ ಇನ್ನಷ್ಟು ಹೊಳಪನ್ನು ತಂದಿದೆ.
ದಸರಾ ಹೇಗಿತ್ತು? ಹೇಗಿರಬಾರದಿತ್ತೊ ಹಾಗಿತ್ತು ಎಂಬ ಟೀಕೆಗಳಿವೆ. ಈ ಸಲವೂ ಹೀಗೇ ಆಯ್ತಲ್ಲ ದಸರಾ ಎಂದು ಬೇಸರಿಸುವವರಿzರೆ. ಟಿಕೆಟ್ ಇದ್ದರೂ ನಮಗೆ ಅರಮನೆಯ ಒಳಕ್ಕೆ ಬಿಡಲೇ ಇಲ್ಲ ಎಂಬ ಮಾತುಗಳಿವೆ. ಅಧಿಕಾರಿಗಳ ದರ್ಪ, ಪೊಲೀಸರ ದರ್ಬಾರು, ರಾಜಕಾರಣಿಗಳ ಮೆರೆದಾಟ ಜಸ್ತಿಯಾಯ್ತು ಎಂಬ ಮಾತುಗಳ ಜೊತೆಗೆ, ಇದು ಸಾಮಾನ್ಯ ಜನರ ದಸರಾ ಅಲ್ಲ, ಉಳ್ಳವರ ದಸರಾ, ರಾಜಕಾರಣಿಯಾಗಬೇಕು, ಇಲ್ಲವೇ ಅಧಿಕಾರಿಯಾಗಬೇಕು ಅಥವಾ ಪೊಲೀಸ್ ಇಲಾಖೆಗೆ ಸೇರಿ ದಸರಾ ನೋಡಬೇಕು ಎಂದು ಟಿಪ್ಪಣೆ ಬರೆದವರೇ ಹೆಚ್ಚು ಮಂದಿ.
ಮುಖ್ಯಮಂತ್ರಿ ಶಿವಕುಮಾರ್ ಅವರ ಪತ್ನಿ ಅಂಬಾರಿಯ ಮೇಲಿದ್ದ ಚಾಮುಂಡೇಶ್ವರಿಗೆ ಪತಿಯ ಜೊತೆಗೆ ನಿಂತು ಹೂವನ್ನು ಎಸೆದುದು ಕೆಲವರಿಗೆ ಸಂಪ್ರದಾಯ ಮುರಿದಂತೆ ಕಾಣಿಸುತ್ತದೆ. ಸರ್ಕಾರಕ್ಕೆ ದಸರಾವನ್ನು ನಡೆಸಲು ಬರುವುದಿಲ್ಲ, ಅರಸರಿಗೆ ಕೊಟ್ಟುಬಿಡಿ ಎಂಬ ಉಚಿತ ಸಲಹೆಯೂ ಬಂದಿದೆ. ಮೈಸೂರು ಅರಸು ಮನೆತನದ ಯದುವೀರರು, ಅವರ ತಾಯಿ, ಹೆಂಡತಿ, ಇಬ್ಬರು ಪುಟ್ಟ ಮಕ್ಕಳು ಜಂಬೂಸವಾರಿಗೆ ಬಂದದ್ದು ಹಲವರ ಮುಖಗಳನ್ನು ಅರಳಿಸಿವೆ. ಪರಂಪರಾಗತವಾಗಿ ಅರಮನೆಯವರು ನಡೆಸುತ್ತಿದ್ದ ಜಟ್ಟಿ ಕಾಳಗಕ್ಕೆ ಜಂಬೂಸವಾರಿಯ ದಿನ ಪ್ರವೇಶವೇ ಸಿಕ್ಕಲಿಲ್ಲ ಎಂಬ ಬೇಸರವೂ ಕೆಲವರಿಗೆ ಇದೆ. ಇನ್ನು ಬನ್ನಿಮಂಟಪದಲ್ಲಿ ಮುಖ್ಯಮಂತ್ರಿಗಳಿಗಾಗಿ ಬಹಳ ಹೊತ್ತು ಕಾಯಬೇಕಾದ ಕಾರಣ, ಅಲ್ಲಿಯ ಮನರಂಜನೆಯ ಕಾರ್ಯಕ್ರಮಗಳು ಶುರುವಾಗುವುದು ತಡವಾಯಿತೆಂದು ಹಲವರ ಸಿಟ್ಟು. ಹೆಚ್ಚು ಕಮ್ಮಿ ಇವೆಲ್ಲ ಪ್ರತಿವರ್ಷದ ಟೀಕೆಗಳಂತೆಯೇ ಇವೆ. ಸರ್ಕಾರ ಯಾವ ಪಕ್ಷದ್ದೇ ಇರಲಿ, ದಸರಾ ಎಂದರೆ ಹೀಗೆಯೇ ಅವ್ಯವಸ್ಥೆಯ ಆಗರವೇ. ಜಂಬೂ ಸವಾರಿ ನೋಡಲು ಹಿಂದಿನ ರಾತ್ರಿಯೇ ಬರುವವರು, ಆಯಕಟ್ಟಿನ ಜಾಗದಲ್ಲಿ ನಿಂತು ದಿನವನ್ನು ಕಳೆಯುವವರು, ಕುಡಿಯಲು ನೀರಿಲ್ಲದೆ, ಮೂತ್ರವಿಸರ್ಜನೆಗೆ ಅವಕಾಶವಿಲ್ಲದೆ ಜನ ಜತ್ರೆಯಲ್ಲಿ ನಲುಗಿದವರು, ದಸರಾ ಎಂದರೆ ಏನೆಲ್ಲ ಸಂಕಷ್ಟ. ಜಂಬೂಸವಾರಿಯ ಸುಖ ಎಂದರೆ, ಬನ್ನಿಮಂಟಪದ ಪಂಜಿನ ಕವಾಯಿತು ಎಂದರೆ ಇಂಥವೇ ಯಾತನೆಗಳ ಸರಮಾಲೆ. ಜನ ಮೌನವಾಗಿ ಎಲ್ಲವನ್ನೂ ಸಹಿಸುತ್ತಾರೆ. ಖುಷಿಯೋ, ಸಂಕಟವೊ, ಯಾತನೆಯೊ ಎಲ್ಲವನ್ನೂ ಒಡಲೊಳಗಿಟ್ಟು ವರ್ಷದ ದಸರಾಕ್ಕೆ ವಿದಾಯ ಹೇಳುತ್ತಾರೆ. ಇದು ಮೈಸೂರು ಮತ್ತು ಸುತ್ತಮುತ್ತಲಿನ ಜನಗಳ ಉದಾರತೆ; ಸರ್ಕಾರದ ಹೊಣೆಗಾರಿಕೆ ಇಲ್ಲದ ನಿರ್ಲಿಪ್ತ ಧೋರಣೆ.
ಈಗಿರುವ ದಸರಾ ಮುಂದಿನ ವರ್ಷವೂ ಹೀಗೆಯೇ ಇರುತ್ತದೆ ಎಂದು ಹೇಳಬಹುದು. ಯಾಕೆಂದರೆ ಇದರಲ್ಲಿ ಕೆಲವು ಒಳಗುಟ್ಟುಗಳಿವೆ. ಪಕ್ಷದ ಕಾರ್ಯಕರ್ತರು, ಗುತ್ತಿಗೆದಾರರು, ಹೋಟೆಲಿನವರು, ವಸತಿಯವರು, ಶಾಲು ಹಾರ, ಉಡುಗೊರೆ ಹೀಗೆ ದಸರಾ ಗೌರವಕ್ಕೆಂದು ನೂರಾರು ವಸ್ತುಗಳನ್ನು ಕೊಳ್ಳುವವರು, ದೀಪಾಲಂಕಾರದವರು, ವಸ್ತುಪ್ರದರ್ಶನದ ವ್ಯವಸ್ಥೆ ಮಾಡುವವರು-ಹೀಗೆ ನೂರಾರು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರು, ರಾಜಕಾರಣಿಗಳು, ಮರಿಪುಡಾರಿಗಳು ಎಷ್ಟೊಂದು ಜನ! ಎಷ್ಟೊಂದು ಜೇಬುಗಳು. ಅವೆಲ್ಲ ತುಂಬುವುದು ವರ್ಷಕ್ಕೊಮ್ಮೆ ಬರುವ ದಸರಾದಲ್ಲಿಯೇ.
ಬರಗಾಲವಿದೆ ಸರಳ ದಸರಾ ಮಾಡಿ ಎಂದು ಯಾರಾದರೂ ಹೇಳಿದರೆ ಯಾರಿಗೆ ಸಿಟ್ಟುಬರುವುದಿಲ್ಲ? ನಮ್ಮ ವರ್ಷದ ಕಮಾಯಿಗೆ ಕಲ್ಲುಹಾಕುತ್ತಾರಲ್ಲ ಈ ಅವಿವೇಕಿಗಳು ಎಂದು ರೇಗುವವರೇ ಜಾಸ್ತಿ. ದಸರಾ ಜೋರಾಗಿಯೇ ನಡೆಯಬೇಕು, ಆ ಸಂಪ್ರದಾಯವನ್ನು ಮುಂದುವರಿಸಬೇಕು ಎಂದು ದೊಡ್ಡ ಗಂಟಲಲ್ಲಿ ಹೇಳುತ್ತಾರೆ. ಸರ್ಕಾರ ಯಾರ ಮಾತನ್ನೂ ಕೇಳುವುದಿಲ್ಲ. ಅದಕ್ಕೆ ತನ್ನದೇ ಆದ ಕಾರಣಗಳಿವೆ. ಅದು ದಸರಾವನ್ನು, ವೈಭವದ ದಸರಾವನ್ನು ಮಾಡಿಯೇ ತೀರುತ್ತದೆ.
ಅದೆಲ್ಲ ಇರಲಿ, ಜನ ಸಾಗರವನ್ನು ತಣಿಸಿದ ಜನಪದ ಕಲಾವಿದರಿಗೆ ಶೌಚಾಲಯವಾಗಲಿ, ಸ್ನಾನಕ್ಕೆ ವ್ಯವಸ್ಥೆಯಾಗಲಿ ಸರಿಯಾಗಿತ್ತೇ? ಅವರನ್ನು ಗೌರವದಿಂದ ನಡೆಸಿಕೊಳ್ಳಲಾಯಿತೇ? ಅವರ ಗೌರವಧನ ಯಾರ ಕೈಸೇರಿತು? ಇಂಥ ಪ್ರಶ್ನೆಗಳನ್ನು ಕೇಳಬಾರದು. ಅದನ್ನೆಲ್ಲ ನೋಡಿಕೊಳ್ಳುವವರಿಲ್ಲವೇ? ಕಂಬಳ? ಮಳೆ ಇಲ್ಲ, ನೀರಿಗೆ ತತ್ವಾರ, ಕಂಬಳ ಬೇಕಾಗಿತ್ತೇ? ಮರಕಡಿದು ಕಂಬಳಕ್ಕೆ ಅಖಾಡ ಸಿದ್ಧಪಡಿಸಿದ್ದು ಸರಿಯೇ? ಪರಿಸರವಾದಿಗಳ ವಿರೋಧ ತರವೇ? ಈ ಪ್ರಶ್ನೆಗಳನ್ನಲ್ಲ ಗಂಟುಕಟ್ಟಿ ಅರಬ್ಬೀ ಸಮುದ್ರಕ್ಕೆ ಎಸೆಯಿರಿ. ಅಲ್ಲಿಂದಲೇ ನಮ್ಮ ಬಂಧುಗಳು ಕಂಬಳದ ಕೋಣಗಳನ್ನು, ಅವುಗಳ ತಿನಿಸನ್ನು ತಂದು ಮೈಸೂರಿಗೆ ಮುಟ್ಟಿಸುತ್ತಾರೆ. ಈ ಕೋಣಗಳಿಗೆ ಒಂದಿಷ್ಟೂ ನೋವಾಗದಂತೆ ವಾಹನಗಳಲ್ಲಿಯೇ ತರುತ್ತಾರೆ. ಸುಮ್ಮನೆ ಕಂಬಳವನ್ನು ಕಣ್ ತುಂಬಿಕೊಳ್ಳಿ. ಮೈಸೂರು ಅರಮನೆಯ ಮಾತೇಕೆ, ಎಲ್ಲ ಅರಮನೆಗಳೂ, ಎಲ್ಲ ರಾಜರೂ ಈಗ ಇತಿಹಾಸವಾಗಿದ್ದಾರೆ. ಜನತೆಯ ಆಳ್ವಿಕೆ, ಜನತೆಯ ಸರ್ಕಾರಗಳು ಬಂದು ದಶಕಗಳೇ ಕಳೆದಿವೆ. ಈಗಲೂ ರಾಜರ ಮಾತನಾಡುವುದು, ಸಂಪ್ರದಾಯವೆಂದರೆ ಅರಸರ ಸಂಪ್ರದಾಯವೆಂದು ಭಾವಿಸುವುದು ನಮ್ಮ ಕಣ್ಣನ್ನು ಸರಿಯಾಗಿ ಬಿಟ್ಟು ನೋಡದೆ, ಸರಿಯಾಗಿ ಚಿಂತಿಸದೆ ಇರುವಲ್ಲಿನ ದೋಷವೇ ಹೊರತು ಅದು ದಸರೆಯ ದೋಷವಲ್ಲ. ಅಂಬಾರಿಯಲ್ಲಿರುವ ದೇವತೆಗೆ ಜನಪ್ರತಿನಿಧಿಯಾಗಿರುವ ಮುಖ್ಯಮಂತ್ರಿ ಮತ್ತು ಅವರ ಪತ್ನಿ ಹೂವನ್ನು ಅರ್ಪಿಸಿದರೆ ಅದರಲ್ಲಿ ಯಾಕೆ ತಪ್ಪು ಹುಡುಕಬೇಕು? ಅಂದರೆ ನಾವು ಹೆಣ್ಣನ್ನು ನೋಡುವ, ಗಂಡಿಗೆ ಸಮಾನವಾಗಿ ಕಾಣುವ ನೋಟದ ಇನ್ನು ದೋಷವಿದೆ. ಅದನ್ನು ಸರಿಪಡಿಸಿಕೊಳ್ಳಬೇಕಾದದ್ದು ಪ್ರಜಪ್ರಭುತ್ವದ ಹೊಣೆಗಾರಿಕೆಯಾಗಿದೆ.
ಸಂಪ್ರದಾಯದಲ್ಲಿರುವ ಒಳ್ಳೆಯ ಅಂಶಗಳನ್ನು ಖಂಡಿತಾ ಯಾವ ಸರ್ಕಾರವೂ ಕೈಬಿಡಬೇಕಾಗಿಲ್ಲ. ಉದಾಹರಣೆಗೆ ಅರಮನೆಯ ವೇದಿಕೆಯಲ್ಲಿ ನಡೆದುಕೊಂಡು ಬರುತ್ತಿದ್ದ ಕಾರ್ಯಕ್ರಮಗಳಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಬಹಳ ಮಾನ್ಯತೆ ಇತ್ತು. ರಾಷ್ಟ್ರಮಟ್ಟದ ಬಹುದೊಡ್ಡ ಸಂಗೀತ ಕಲಾವಿದರು ಈ ವೇದಿಕೆಯಲ್ಲಿ ತಮ್ಮ ಸಂಗೀತವನ್ನು ಕೇಳಿಸುತ್ತಿದ್ದರು. ಈ ಕಲಾವಿದರಿಗೆ ಸರ್ಕಾರ ಕೊಡುವ ದೊಡ್ಡ ಗೌರವವೂ ಇದಾಗಿತ್ತು. ಹಾಗೆಯೇ ಸಂಗೀತಪ್ರಿಯರಿಗೆ ಒದಗಿಸುವ ದೊಡ್ಡ ಅವಕಾಶವೂ ಆಗಿತ್ತು. ಈ ಜಗವನ್ನು ಈಗ ಫ್ಯೂಷನ್, ಬ್ಯಾಂಡ್, ಜನಪದ ಮತ್ತು ಜನಪ್ರಿಯ ಸಂಗೀತಗಾರರು ಆಕ್ರಮಿಸಿದ್ದಾರೆ. ಇವರೆಲ್ಲ ಅರಮನೆ ವೇದಿಕೆಗೆ ಬರಬಾರದೇ? ಬರಬಾರದೆಂದಿಲ್ಲ. ಆದರೆ ಇವರಿಗೆ ಈಗಾಗಲೇ ಬೇರೆಯ ವೇದಿಕೆಗಳು ಇವೆ. ಯುವಜನರಿಗಾಗಿ, ಸಾವಿರ ಸಾವಿರ ಸಂಖ್ಯೆಯಲ್ಲಿ ನೆರೆಯುವವರಿಗಾಗಿಯೇ ವೇದಿಕೆಗಳನ್ನು ಹುಟ್ಟುಹಾಕಲಾಗಿದೆ. ಅಲ್ಲಿ ಇವರು ವಿಜೃಂಭಿಸಬಹುದು. ಶಾಸ್ತ್ರೀಯ ಸಂಗೀತ ಕಲೆಗಳನ್ನು ಹಿಂದಿನ ಅರಮನೆಗಳು ಪೋಷಿಸಿಕೊಂಡು ಬಂದಿದ್ದವು. ಆಸ್ಥಾನ ಕಲಾವಿದರು, ವಿದ್ವಾಂಸರು ಎಂಬ ಬಿರುದನ್ನು ಕೊಟ್ಟು, ಅವರಿಗೆ ಆಸರೆ ನೀಡಿ ಈ ಕಲೆಗಳು ಅಳಿಯದಂತೆ ಉಳಿಸಿಕೊಂಡು ಬಂದಿದ್ದವು. ಇದೊಂದು ಸಂಪ್ರದಾಯದಲ್ಲಿನ ಒಳ್ಳೆಯ ಗುಣ. ಅರಮನೆಗಳು ಹೋಗಿ ಜನರ ಸರ್ಕಾರಗಳು ಬಂದ ಮೇಲೆ ಈ ಮುಖ್ಯ ಕೆಲಸವನ್ನು ಈ ಸರ್ಕಾರಗಳು ಮಾಡುತ್ತ ಬಂದಿದ್ದವು. ಅದಕ್ಕೇ ಅರಮನೆಯ ವೇದಿಕೆಯಲ್ಲಿ ಶಾಸ್ತ್ರೀಯ ಸಂಗೀತ, ಕಲೆಗಳಿಗೆ ಜಗವನ್ನು ನೀಡಲಾಗಿತ್ತು. ಇದು ಏಕಾಏಕಿ ಬದಲಾಗಿ ಈ ಶಾಸ್ತ್ರೀಯ ಸಂಗೀತ ಕಲೆಗಳನ್ನು ಕಡೆಗಣಿಸಿರುವುದು ಇತ್ತೀಚಿನ ಬೆಳವಣಿಗೆ. ಜನ ಮತ್ತು ಸರ್ಕಾರ ಇದನ್ನು ಗಮನಿಸಬೇಕು.
ಹಾಗೆಯೇ ಕಲೆ, ಸಂಗೀತ, ಸಂಸ್ಕೃತಿ ಹೆಸರು ಹೇಳಿ, ಪ್ರಾದೇಶಿಕ ಪ್ರಾತಿನಿಧ್ಯದ ಮಾತನಾಡಿ ಕಳಪೆ ಕಲಾವಿದರನ್ನು ತರುವುದು, ರಾಜಕಾರಣಿಗಳ, ಅಧಿಕಾರಿಗಳ ಅನಪೇಕ್ಷಿತ ಒತ್ತಡಗಳಿಗೆ ಮಣಿಯುವುದು ನಿಲ್ಲಬೇಕು. ಗುಣಮಟ್ಟದ ಕಾರ್ಯಕ್ರಮಗಳಾಗಬೇಕೆಂದರೆ, ಪ್ರಾತಿನಿಧ್ಯವನ್ನು ಉಳಿಸಿಕೊಂಡೂ ಅತ್ಯುತ್ತಮ ಕಲಾವಿದರಿಗೆ ಮನ್ನಣೆ ದೊರೆಯುವಂತೆ ಮಾಡುವುದು ದೊಡ್ಡ ಸಂಗತಿಯಲ್ಲ. ಸರ್ಕಾರ ರಚಿಸುವ ವಿವಿಧ ಸಮಿತಿಗಳಲ್ಲಿ ಆಯಾ ಕ್ಷೇತ್ರದ ಪರಿಣತರು ಇರುವಂತೆ ನೋಡಿಕೊಂಡು, ಅವರ ಮೇಲೆ ಯಾವ ಒತ್ತಡವೂ ಇಲ್ಲದಂತೆ ಮಾಡಿ, ಉತ್ತಮರನ್ನು ಆಯ್ಕೆಮಾಡುವ ಸ್ವಾತಂತ್ರ್ಯವನ್ನು ನೀಡಬೇಕು.
ಕವಿಗೋಷ್ಠಿಗಳನ್ನು ನೋಡಿದರೆ ನಗುಬರುತ್ತದೆ. ಎಷ್ಟೊಂದು ಗೋಷ್ಠಿಗಳು. ಎಷ್ಟೊಂದು ಜನ ಕವಿಗಳು. ಅವರಲ್ಲಿ ಎಣಿಕೆ ಮಾಡಿದರೆ ಕವಿಗಳೆಂದು ಸಿಕ್ಕುವವರು ಬಹಳ ಕಡಿಮೆ. ಉಳಿದವರೆಲ್ಲ ಹೇಗೆ ಆಯ್ಕೆಯಾದರು. ಯಾರ ಒತ್ತಡ, ಯಾರ ಶಿಫಾರಸು ಎಷ್ಟಿತ್ತು? ದಸರಾ ಎಂದರೆ ಎಷ್ಟೊಂದು ಹಣ ಹರಿದುಬರುತ್ತದೆ. ಕಾವೇರಿಯಲ್ಲಿ ನೀರಿಲ್ಲದಿದ್ದರೂ ಈ ಹಣದ ಹೊಳೆ ಸಮೃದ್ಧವಾಗಿ ಮತ್ತು ರಭಸವಾಗಿ ಹರಿಯುತ್ತದೆ. ಇದು ಯಾರ ಹಣ? ಇದನ್ನೆಲ್ಲ ನೋಡಲು, ಪರಿಭಾವಿಸಲು, ಚಿಂತಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ. ಇನ್ನೇನು ಬಂದೇ ಬಿಟ್ಟಿತಾ ಚುನಾವಣೆ. ಅಲ್ಲಿ ಗೆಲ್ಲುವುದೊಂದೇ ಕಣ್ಮುಂದಿರುವ ಚಿತ್ರ.
” ದಸರಾ ಎಂದರೆ ಎಷ್ಟೊಂದು ಹಣ ಹರಿದು ಬರುತ್ತದೆ. ಕಾವೇರಿಯಲ್ಲಿ ನೀರಿಲ್ಲದಿದ್ದರೂ ಈ ಹಣದ ಹೊಳೆ ಸಮೃದ್ಧವಾಗಿ ಮತ್ತು ರಭಸವಾಗಿ ಹರಿಯುತ್ತದೆ. ಇದು ಯಾರ ಹಣ?”



