ಎಸ್. ಎಲ್. ಚೆನ್ನಬಸವಣ್ಣ ,ಐಪಿಎಸ್, ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು
ಇತಿಹಾಸದಿಂದ ಪ್ರಸ್ತುತ ಪೊಲೀಸ್ ಕರ್ತವ್ಯದವರೆಗೆ
ಸಾರ್… ಎಲ್ಲ ಪಿಎಸ್‌ಐ ಪ್ರೊಬೆಷನರ್‌ಗಳನ್ನೂ ಮೈಸೂರು ದಸರಾ ಬಂದೋಬಸ್ತ್ ಡ್ಯೂಟಿಗೆ ನಿಯೋಜಿಸಿದ್ದಾರೆ… ಜೊತೆಗೆ ನಮಗೂ ಕೂಡ ಡ್ಯೂಟಿಗೆ ಹಾಕಿದ್ದಾರೆ! – ಹೀಗೆ ಕಿರಿಯ ಅಧಿಕಾರಿಯೊಬ್ಬರು ಒಂದೇ ಉಸಿರಿನಲ್ಲಿ ಹೇಳಿ ದೊಡ್ಡ ನಿಟ್ಟುಸಿರು ಬಿಟ್ಟಾಗ, ಪೊಲೀಸ್ ಇಲಾಖೆಯಲ್ಲಿ ‘ಬಂದೋಬಸ್ತ್’ ಎನ್ನುವ ಕರ್ತವ್ಯದ ತೀವ್ರತೆ ಮತ್ತೊಮ್ಮೆ ಮನದಟ್ಟಾಯಿತು. ಪೊಲೀಸ್ ಸೇವೆಯಲ್ಲಿ ಬಂದೋಬಸ್ತ್ ಎನ್ನುವುದು ಕೇವಲ ಕಾವಲು ಕಾಯುವ ಕೆಲಸವಲ್ಲ; ಅದು ಅತಿ ಕಿರಿಯ ಸಿಬ್ಬಂದಿಯಿಂದ ಹಿಡಿದು ಹಿರಿಯ ಅಧಿಕಾರಿಯವರೆಗೆ ಪ್ರತಿಯೊಬ್ಬರ ದೈಹಿಕ ಮತ್ತು ಮಾನಸಿಕ ಸದೃಢತೆಯಷ್ಟೇ ಅಲ್ಲದೆ ಅನುಭವವನ್ನು ಕೂಡ ಒರೆಗೆ ಹಚ್ಚುವ ಸವಾಲಾಗಿದೆ .
ಇಷ್ಟಕ್ಕೂ ಈ ‘ಬಂದೋಬಸ್ತ್’ ಎಂಬ ಪದ ಬಂದಿದ್ದೆಲ್ಲಿಂದ? ಇದರ ಇತಿಹಾಸವನ್ನು ಹುಡುಕುತ್ತ ಹೋದರೆ ನಾವು ತಲುಪುವುದು ಪರ್ಷಿಯನ್ ಭಾಷೆಗೆ…ಕ್ಲಾಸಿಕಲ್ ಪರ್ಷಿಯನ್ ಬಂದ್-ಓ-ಬಸ್ತ್’ ಎಂಬ ಸಂಯುಕ್ತ ಪದವೇ ಇದರ ಮೂಲ. ‘ಬಂದ್’ ಎಂದರೆ ಕಟ್ಟುವುದು ಅಥವಾ ನಿಯಂತ್ರಿಸುವುದು; ‘ಬಸ್ತ್’ ಎಂದರೆ ವ್ಯವಸ್ಥೆಗೊಳಿಸುವುದು. ಶಬ್ದಶಃ ಇದರ ಅರ್ಥ ಸುಸಜ್ಜಿತ ವ್ಯವಸ್ಥೆ ಮಾಡುವುದು ಎಂದಾಗಿದೆ. ಮಧ್ಯಕಾಲೀನ ಭಾರತದಲ್ಲಿ ಪರ್ಷಿಯನ್ ಆಡಳಿತ ಭಾಷೆಯಾಗಿದ್ದಾಗ ಈ ಪದ ನಮ್ಮ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಸೇರಿಕೊಂಡಿತು.
೧೬ನೇ ಶತಮಾನದ ಅಕ್ಬರ್ ಬಾದಶಾಹ್ ಮತ್ತು ಆತನ ಕಂದಾಯ ಮಂತ್ರಿ ರಾಜ ತೋಡರಮಲ್ ಕಾಲದಲ್ಲಿ ಜಮೀನಿನ ಅಳತೆ ಮತ್ತು ತೆರಿಗೆ ನಿಗದಿಯ ಕಂದಾಯ ವ್ಯವಸ್ಥೆಗೆ ‘ಬಂದೋಬಸ್ತ್-ಎ-ಜಮೀನ್’ (ಲ್ಯಾಂಡ್‌ಸೆಟಲ್ ಮೆಂಟ್) ಎನ್ನಲಾಗುತ್ತಿತ್ತು. ಬ್ರಿಟಿಷರ ಆಡಳಿತಾವಧಿಯಲ್ಲಿ ೧೭೯೩ರ ಲಾರ್ಡ್ ಕಾರ್ನ್ ವಾಲಿಸ್‌ನ ಶಾಶ್ವತ ಜಮೀನ್ದಾರಿ ಪದ್ಧತಿಯನ್ನು ‘ಬಂದೋಬಸ್ತ್ -ಎ-ದವಾಮಿ’ ಎಂದು ಕರೆಯಲಾಯಿತು. ಕಾಲಕ್ರಮೇಣ ಆಂಗ್ಲೋ-ಇಂಡಿಯನ್ ಇಂಗ್ಲಿಷ್‌ನಲ್ಲಿ ಭದ್ರತಾ ವ್ಯವಸ್ಥೆಗಳಿಗೆ ಈ ಪದ ಪರ್ಯಾಯವಾಗಿ ಬಳಕೆಯಾಗಿ ಪ್ರಸಿದ್ಧ ‘ಹಾಬ್ಸನ್-ಜಬ್ಸನ್’ ನಿಘಂಟಿಗೂ ಸೇರಿತು.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬಂದೋಬಸ್ತ್ ಎಂದರೆ ವಿವಿಐಪಿಗಳವರ ಭೇಟಿ ಸಂದರ್ಭದ ಭದ್ರತೆ, ಧರಣಿ-ಪ್ರತಿಭಟನೆಗಳ ನಿಯಂತ್ರಣ, ಜತ್ರೆಗಳು ಮತ್ತು ದಸರಾದಂತಹ ನಾಡಹಬ್ಬಗಳ ನಿರ್ವಹಣೆ, ಚುನಾವಣೆಗಳು ಹಾಗೂ ಸಾರ್ವಜನಿಕ ಸಭೆಗಳಂತಹ ಸಂದರ್ಭಗಳಲ್ಲಿ ಮಾಡುವ ಬಲ ನಿಯೋಜನೆ (ಫ್ಲೋರ‍್ಸ್ ಡೆಪ್ಲಾಯ್‌ಮೆಂಟ್), ಸುಗಮ ಸಂಚಾರಕ್ಕಾಗಿ ಮಾಡುವ ಮಾರ್ಗಗಳ ಬದಲಾವಣೆಯ ಸಮರ್ಪಕ ನಿರ್ವಹಣೆ (ಟ್ರಾಫಿಕ್ ಡೈವರ್ಷನ್ ಅಂಡ್ ಮ್ಯಾನೇಜ್‌ಮೆಂಟ್), ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮಾಹಿತಿಗಳ ಪರಿಶೀಲನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಡುವ ಭದ್ರತಾ ತಪಾಸಣೆಯನ್ನೊಳಗೊಂಡ ಸಮಗ್ರವಾದ ಭದ್ರತಾ ಯೋಜನೆಯಾಗಿ ಇದರ ವ್ಯಾಪ್ತಿ ವಿಸ್ತಾರಗೊಳ್ಳುತ್ತ ಹೋಗಿದೆ.
ಯಶಸ್ವಿ ಬಂದೋಬಸ್ತಿಗೆ ಅಗತ್ಯವಾದ ಮೂರು ಮುಖ್ಯ ಅಂಶಗಳೆಂದರೆ: ಯೋಜನೆ ರೂಪಿಸುವಿಕೆ, ಗುಪ್ತ ಮಾಹಿತಿ ಸಂಗ್ರಹಣೆ ಮತ್ತು ಸಮನ್ವಯ ಸಾಧಿಸುವಿಕೆ. ಬಂದೋಬಸ್ತ ರೂಪಿಸುವಾಗ ಸ್ಥಳೀಯ ಭೂಭಾಗದ(ಟೋಪೋಗ್ರಫಿ) ಅರಿವು, ಸ್ಥಳದ ಐತಿಹಾಸಿಕ ಹಿನ್ನೆಲೆ, ಈ ಹಿಂದೆ ಜರುಗಿರುವ ಅಹಿತಕರ ಘಟನೆಗಳ ಮಾಹಿತಿ ವಿಶ್ಲೇಷಣೆ ಮತ್ತು ಅಲ್ಲಿನ ಜನರ ಮನಸ್ಥಿತಿಯ ಬಗ್ಗೆ ಬಂದೋಬಸ್ತ ಯೋಜನೆ ರೂಪಿಸುವ ಅಧಿಕಾರಿಗೆ ಇರಬೇಕಾದ ಅನುಭವ ಎಷ್ಟು ಮುಖ್ಯವೋ, ಹಾಗೆಯೇ ಪ್ರತಿ ಬಂದೋಬಸ್ತಿಗೂ ಬೇಕಾದ ಅಗತ್ಯ ಸಿಬ್ಬಂದಿ ಬಲ ಮತ್ತು ಅಲ್ಲಿ ಸೇರುವ ಜನಸಂಖ್ಯೆಯ ಅನುಪಾತವನ್ನು ನಿರ್ಧರಿಸಲು ಸಂಖ್ಯಾಶಾಸ್ತ್ರದ ಅರಿವು ಇರಬೇಕಾಗಿರುವುದೂ ಕೂಡ ಅಷ್ಟೇ ಮುಖ್ಯ. ಇಲ್ಲವಾದರೆ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗಿಂತ ಪೊಲೀಸರೇ ಹೆಚ್ಚಾಗಿಬಿಡುವ ಸಂಭವ ಉಂಟಾಗುತ್ತದೆ . ಆದ್ದರಿಂದ ಮುಂಗಡವಾಗಿ ಪಡೆಯುವ ಗುಪ್ತ ಮಾಹಿತಿಯ ಆಧಾರದ ಮೇಲೆ ಯೋಜನೆ ರೂಪಿಸಬೇಕಾಗುತ್ತದೆ.
ಗುಪ್ತ ಮಾಹಿತಿ ಕೂಡ ಹಲವಾರು ವಿಷಯಗಳಿಗೆ ಸಂಬಂಧಿಸಿರುತ್ತದೆ. ಸ್ಥಳದಲ್ಲಿ ಸೇರುವ ಜನ,ಮುಖಂಡರು ಮತ್ತು ಬರುವ ಅಂದಾಜು ವಾಹನಗಳ ಸಂಖ್ಯೆಯಿಂದ ಹಿಡಿದು ಸಂಭವನೀಯ ಅಪರಾಧಗಳ ಮಾಹಿತಿವರೆಗೆ.. ಉದಾಹರಣೆಗೆ ಮೂಲ ಮರಾಠಿ ಭಾಷೆಯ ಲಕ್ಷ್ಮಣ್ ಗಾಯಕ್ವಾಡ್ ಅವರ ಉಚಲ್ಯಾ ಎಂಬ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಅವರ ಜೀವನಾಧಾರಿತ ಕೃತಿಯಲ್ಲಿ ಹೇಳುವಂತೆ, ನಿಜಮ ಸರಕಾರದ ಕಾಲದಲ್ಲಿ ಈಗಿನ ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿಗಳಲ್ಲಿ ನಡೆಯುತ್ತಿದ್ದ ದೊಡ್ಡ ಪ್ರಮಾಣದ ಸಂತೆಗಳು ಮತ್ತು ಜತ್ರೆಗಳ ಸಂಧರ್ಭಗಳಲ್ಲಿ ಅತೀ ಹೆಚ್ಚು ಜನಗಳು ಸೇರುತ್ತಾರೆಂದು ಗೊತ್ತಾದಾಗ ಕೆಲವು ಅಪರಾಧಿಕ ಹಿನ್ನೆಲೆಯುಳ್ಳ ಪುರುಷರು ಮತ್ತು ಮಹಿಳೆಯರಾದಿಯಾಗಿ ಇದರ ದುರುಪಯೋಗ ಪಡೆದುಕೊಂಡು ತಮ್ಮ ಕೈಚಳಕ ತೋರಿಸಲು ಹವಣಿಸುತ್ತಿದ್ದರಂತೆ. ಹೀಗೆ ಈಗಲೂ ಕೂಡ ಕಳ್ಳತನ,ದರೋಡೆ ಮತ್ತು ಜೂಜಟದಂತಹ ಅಕ್ರಮ ಚಟುವಟಿಕೆ ನಡೆಸಲು ವ್ಯವಸ್ಥಿತ ಗ್ಯಾಂಗ್‌ಗಳು ಇಂತಹ ಸ್ಥಳಗಳಿಗೆ ಬಂದು ತಲುಪುವ ಸಾಧ್ಯತೆಗಳಿರುತ್ತವೆ..ಬಂದೋಬಸ್ತ್ ಸಂದರ್ಭದಲ್ಲಿ ಇವನ್ನೆಲ್ಲ ನಿಗಾ ಇಡುವ ಮತ್ತು ನಿಯಂತ್ರಿಸುವ ವ್ಯವಸ್ಥೆಯೊಂದನ್ನು ಪೊಲೀಸರು ಮಾಡಬೇಕಾಗುತ್ತದೆ..
ಅದಕ್ಕೆ ಗುಪ್ತ ಮಾಹಿತಿ ಅಗತ್ಯವಿರುತ್ತದೆ. ಪೊಲೀಸ್ ಭಾಷೆಯಲ್ಲಿ ಹೇಳುವಂತೆ ಬಂದೋಬಸ್ತ್‌ನಲ್ಲಿ ‘ಸಮಸದಲ್ಲಿರುವ ಪೊಲೀಸರು ಆನೆಯ ತೋರಿಕೆಯ ದಂತಗಳಂತಿದ್ದರೆ, ಗುಪ್ತ ಮಾಹಿತಿ ಕಲೆ ಹಾಕುವ ಪೊಲೀಸರು ನಿಜವಾದ ಆಹಾರ ತಿನ್ನುವ ದಂತಗಳಂತೆ’. ಇವರು ಹೊರಗಡೆ ಸಾರ್ವಜನಿಕವಾಗಿ ಕಾಣಿಸದಿದ್ದರೂ ಬಹು ಮುಖ್ಯವಾದ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಇದೆಲ್ಲದಕ್ಕಿಂತ ಮಿಗಿಲಾಗಿ, ಬಂದೋಬಸ್ತ್‌ನಲ್ಲಿ ವಿವಿಧ ಇಲಾಖೆಗಳು ಹಾಗೂ ಪಾಲುದಾರರೊಂದಿಗೆ (ಸ್ಟೇಕ್‌ಹೋಲ್ಡರ‍್ಸ್) ಸಮನ್ವಯ ಸಾಽಸುವುದು ಅತಿ ಮುಖ್ಯ. ಬೀದರ ಜಿಲ್ಲಾಧಿಕಾರಿಯಾಗಿ ಗೋವಿಂದ ರೆಡ್ಡಿ ಅವರೊಂದಿಗೆ ನಾನು ಎಸ್‌ಪಿಯಾಗಿ ಕೆಲಸ ಮಾಡುವಾಗ, ಸಮನ್ವಯ ಸಭೆಯೊಂದರಲ್ಲಿ ಅಧೀನ ಅಧಿಕಾರಿಗಳು ಉತ್ತರಿಸುತ್ತ ‘ನಾವು ಈಗಾಗಲೇ ಸಂಬಂಧಪಟ್ಟವರಿಗೆ ಪತ್ರ ಬರೆದಿದ್ದೇವೆ ಸರ್’ ಎಂದಾಗ ಅವರು ಮಾರ್ಮಿಕವಾಗಿ ಹೇಳಿದ್ದು ‘ಎಲ್ಲ ಕೆಲಸಗಳನ್ನೂ ಪತ್ರ ವ್ಯವಹಾರದ ಮಾಡಲು ಆಗಲ್ಲ ರೀ, ಒಂದಿಷ್ಟು ದೋಸ್ತಿ’ಯಲ್ಲಿ ಮಾತನಾಡಿಕೊಂಡು ಮಾಡಬೇಕಾಗುತ್ತದೆ ಎಂದಿದ್ದರು.
ಈ ಮಾತು ಬಂದೋಬಸ್ತ್ ನಿರ್ವಹಣೆಯ ಸಂಧರ್ಭದಲ್ಲಿಯೂ ಕೂಡ ಅತ್ಯಂತ ಸೂಕ್ತ. ಸಣ್ಣ ಪುಟ್ಟ ವಿಷಯಗಳಲ್ಲಿ ಪತ್ರ ವ್ಯವಹಾರದ ಕಾಲಕಳೆಯುವುದಕ್ಕಿಂತ ಸ್ನೇಹಪೂರ್ವಕವಾಗಿ ಮಾತನಾಡಿ ಕಾರ್ಯ ಸಾಧಿಸುವುದು ತುಂಬಾ ಮುಖ್ಯ. ಅಂತೆಯೇ, ಸಮುದಾಯದೊಂದಿಗೆ ನಿರಂತರ ಸಂವಹನವೂ ಅತ್ಯಗತ್ಯ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಿದ್ದಂತೆ: ಶಾಂತಿ ಸಮಯದಲ್ಲಿ ಪೊಲೀಸರು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆ, ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ನಿಲ್ಲುತ್ತಾರೆ.
ಯಾವುದೇ ಊಹಾಪೋಹಗಳಿಗೆ ಆಸ್ಪದ ನೀಡದಂತೆ ಸಾಮಾಜಿಕ ಜಾಲತಾಣಗಳು ಹಾಗೂ ದೃಶ್ಯ ಮತ್ತು ಅಕ್ಷರ ಮಾಧ್ಯಮಗಳ ಮೂಲಕ ಸರಿಯಾದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವುದು ಪ್ರಸ್ತುತವಾಗಿ ಅತ್ಯಗತ್ಯ. ದಸರಾದಂತಹ ಮಹೋತ್ಸವಗಳಲ್ಲಿ ಸಾರ್ವಜನಿಕರು ಕೂಡ ಸ್ಥಳದಲ್ಲಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವ ಸಮಾನ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ.
ಕೊನೆಯದಾಗಿ ಮತ್ತು ಬಹುಮುಖ್ಯವಾಗಿ ಹಗಲು-ರಾತ್ರಿ ಕಷ್ಟಪಟ್ಟು ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ವಸತಿ ಮತ್ತು ಆಹಾರದ ವ್ಯವಸ್ಥೆ ಸಮರ್ಪಕವಾಗಿರುವಂತೆ ಸಂಬಂಧಪಟ್ಟ ಅಧಿಕಾರಿಗಳು ನೋಡಿಕೊಳ್ಳಬೇಕಾ ಗುವುದು ಕೂಡ ಒಂದು ದೊಡ್ಡ ಸವಾಲಿನ ಸಂಗತಿಯೇ ಆಗಿದೆ. ಸಶಸ ಪಡೆಗಳ ಬಗ್ಗೆ ಹೇಳುವ ಪ್ರಸಿದ್ಧ ಮಾತೊಂದಿದೆ: ಸಶಸ ಬಲಗಳು ಕೇವಲ ಕಾಲಿನ ಮೇಲೆ ನಡೆಯುವುದಿಲ್ಲ, ಹೊಟ್ಟೆಯ ಮೇಲೆ ನಡೆಯುತ್ತವೆ!. ಹೀಗೆ ಆಧುನಿಕ ಪೊಲೀಸಿಂಗ್‌ನಲ್ಲಿ ಪ್ರತಿಯೊಂದು ಬಂದೋಬಸ್ತ್‌ನ ಯಶಸ್ಸಿನ ಹಿಂದೆ ಸಾವಿರಾರು ಸಿಬ್ಬಂದಿಗಳ ಶ್ರಮ, ಹಿರಿಯ ಅಧಿಕಾರಿಗಳ ಅನುಭವ, ತಾಂತ್ರಿಕ ನೈಪುಣ್ಯತೆ ಮತ್ತು ಸಾರ್ವಜನಿಕರ ಸಹಕಾರದ ಸಾಂಘಿಕ ಪ್ರಯತ್ನ ಮತ್ತು ಜವಾಬ್ದಾರಿ ಅಡಗಿರುತ್ತದೆ.
” ಶಾಂತಿ ಸಮಯದಲ್ಲಿ ಪೊಲೀಸರು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆ, ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ನಿಲ್ಲುತ್ತಾರೆ.”




