ಇತ್ತೀಚೆಗೆ ಮೈಸೂರಿನ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನಗರದ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳೂ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಪರಿಚಯ ಮಾಡಿಕೊಂಡ ಆ ಕಾಲೇಜಿನ ಸ್ಪರ್ಧಾರ್ಥಿಗಳು ಯಾವ ಕಾಲೇಜಿನಿಂದ ಬಂದಿದ್ದೀರಿ ಎಂದು ನಮ್ಮನ್ನು ಕೇಳಿದರು. ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಬಂದಿದ್ದೇನೆ ಎಂದಾಗ ಅವರ ಮುಖ ಭಾವವೇ ಬೇರೆಯಾಯಿತು. ಸರ್ಕಾರಿ ಕಾಲೇಜಿನಿಂದಲೂ ಸಂಗೀತ, ಚರ್ಚೆ ಹಾಗೂ ಪ್ರಬಂಧ ಸ್ಪರ್ಧೆಗೆ ಬಂದಿದ್ದೀರಾ? ಎಂದು ಪ್ರಶ್ನಿಸಿದರು. ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ಬುದ್ಧಿವಂತರು, ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳೆಲ್ಲ ದಡ್ಡರು ಎಂಬಂತಿತ್ತು ಅವರ ಪ್ರಶ್ನೆ. ಎಲ್ಲ ವಿದ್ಯಾರ್ಥಿಗಳು ಲಕ್ಷಾಂತರ ರೂ. ನೀಡಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದುವಷ್ಟು ಶಕ್ತರಾಗಿರುವುದಿಲ್ಲ. ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ರಾಜ್ಯಮಟ್ಟದಲ್ಲಿ ಸ್ಥಾನ ಪಡೆದವರ ಪಟ್ಟಿಯಲ್ಲಿ ಸರ್ಕಾರಿ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳೂ ಅಗ್ರ ಸ್ಥಾನದಲ್ಲಿರುತ್ತಾರೆ ಎಂಬುದು ಆ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅರಿವಿಗೆ ಬಂದಂತಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಎಂದು ಭೇದ ಭಾವ ಮಾಡದೇ ಎಲ್ಲರೂ ಒಂದೇ ಎಂಬ ಮನೋ ಭಾವನೆಯನ್ನು ಮೂಡಿಸಬೇಕು.
– ಮಧುಮಿತ, ಮೈಸೂರು



