ಸೌಜನ್ಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ನ್ಯಾಯಾದೀಪ’
ರಾಜ್ಯದ ಜನಮಾನಸವನ್ನು ತೀವ್ರವಾಗಿ ಕಾಡುತ್ತಿರುವ ಹಾಗೂ ಇಡೀ ವ್ಯವಸ್ಥೆಯ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತಿರುವ ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಹದಿನಾಲ್ಕು ವರ್ಷಗಳ ಸುದೀರ್ಘ ಕಾನೂನು ಹೋರಾಟ, ಸಾರ್ವಜನಿಕ ಆಕ್ರೋಶ ಹಾಗೂ ಕಣ್ಣೊರೆಸುವ ತನಿಖೆಗಳ ಸರಮಾಲೆಯ ನಂತರ ಈ ಪ್ರಕರಣಕ್ಕೆ ಮರುಜೀವ ದೊರೆತಿದೆ. ಪ್ರಕರಣದ ಮರುತನಿಖೆಗೆ ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಅತ್ಯಂತ ಗಂಭೀರ ಸ್ವರೂಪದ ಈ ಅಪರಾಧದ ಸತ್ಯಾಸತ್ಯತೆಯನ್ನು ಹೊರತರಲು ಸಂಪೂರ್ಣ ಹೊಸ ತನಿಖೆಗೆ ಆದೇಶಿಸಿದೆ.
ನ್ಯಾಯಕ್ಕಾಗಿ ಮೊರೆಹೋಗಿದ್ದ ಸಂತ್ರಸ್ತೆಯ ತಂದೆ ಚಂದಪ್ಪ ಗೌಡ ಅವರು ತೀರ್ಪಿಗೂ ಮುನ್ನವೇ ಮೃತಪಟ್ಟ ಕಾರಣ, ಅವರ ಪತ್ನಿ ಕುಸುಮಾವತಿ ಗೌಡ ಅವರು ಈ ಮೇಲ್ಮನವಿಯನ್ನು ಮುಂದುವರಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಸಚ್‌ದೇವ ಮತ್ತು ಸಂಜಯ್ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠವು, ತನಿಖಾ ಸಂಸ್ಥೆಗಳ ಗಂಭೀರ ನಿರ್ಲಕ್ಷ್ಯ ಮತ್ತು ವೈಫಲ್ಯಗಳನ್ನು ಕಟುವಾಗಿ ಟೀಕಿಸಿದೆ. ತಪ್ಪಾಗಿ ಆರೋಪ ಹೊರಿಸಲ್ಪಟ್ಟ ವ್ಯಕ್ತಿಗೆ ಪರಿಹಾರ ನೀಡಬಹುದು, ಆದರೆ ಕ್ರೂರವಾಗಿ ಅತ್ಯಾಚಾರಕ್ಕೊಳಗಾಗಿ ಹತರಾದ ಬಾಲಕಿಗೆ ನ್ಯಾಯ ಒದಗಿಸದಿದ್ದರೆ ಸಮಾಜವೇ ತನ್ನ ಕರ್ತವ್ಯದಲ್ಲಿ ಎಡವಿದಂತೆ ಎಂದು ನುಡಿದಿದೆ. ಕರ್ನಾಟಕ ಸರ್ಕಾರವು ಆಧುನಿಕ ತಂತ್ರಜ್ಞಾನ ಬಲ್ಲ ದಕ್ಷ ಹಾಗೂ ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ನೂತನ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿ ಮೂರು ತಿಂಗಳ ಒಳಗಾಗಿ ತನಿಖೆ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ತನಿಖಾ ಲೋಪಗಳ ಕುರಿತು ಸುಪ್ರೀಂ ಕೋರ್ಟ್ ಗಂಭೀರ ಅವಲೋಕನಗಳು: ತನಿಖಾ ಸಂಸ್ಥೆಗಳು ನೈಜ ಅಪರಾಧಿಗಳನ್ನು ರಕ್ಷಿಸಲು ಸಾಕ್ಷ್ಯಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಿರುವ ಸಾಧ್ಯತೆಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿಲ್ಲ. ತನಿಖೆಯಲ್ಲಿನ ಪ್ರಮುಖ ವೈಫಲ್ಯಗಳನ್ನು ನ್ಯಾಯಾಲಯ ಈ ರೀತಿ ಪಟ್ಟಿ ಮಾಡಿದೆ:
ಸುವರ್ಣಾವಧಿಯ (ಗೋಲ್ಡನ್ ಅರ್ವ) ನಿರ್ಲಕ್ಷ್ಯ ಮತ್ತು ಡಿಎನ್‌ಎ ಸಾಕ್ಷ್ಯ ನಾಶ: ಅಪರಾಧ ನಡೆದ ತಕ್ಷಣ ಅತ್ಯಂತ ವೈಜ್ಞಾನಿಕವಾಗಿ ಸಂಗ್ರಹಿಸಬೇಕಾಗಿದ್ದ ಸಾಕ್ಷ್ಯಗಳನ್ನು ಕಡೆಗಣಿಸಲಾಗಿದೆ. ಅತ್ಯಂತ ನಿರ್ಣಾಯಕವಾಗಿದ್ದ ಸಂತ್ರಸ್ತೆಯ ಯೋನಿ ಸ್ವ್ಯಾಬ್ (ವೆಜಿನಲ್ ಸ್ವ್ಯಾಬ) ಅನ್ನು ವೈದ್ಯರು ಸರಿಯಾಗಿ ಒಣಗಿಸಿ ಪ್ಯಾಕ್ ಮಾಡದ ಕಾರಣ, ಅದರಲ್ಲಿ ಶಿಲೀಂಧ್ರ ಬೆಳೆದು ಡಿಎನಎ ಪರೀಕ್ಷೆಗೆ ಸಂಪೂರ್ಣ ಅನುಪಯುಕ್ತವಾಯಿತು. ಇದು ಆರಂಭದ ಪ್ರಬಲ ಸಾಕ್ಷ್ಯವನ್ನು ಹೊಸಕಿಹಾಕಿದಂತಾಗಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಘಟನಾ ಸ್ಥಳದ ವಾಸ್ತವತೆಯ ಬಗ್ಗೆ ಅನುಮಾನ: ಘಟನೆಯ ದಿನ ಭಾರಿ ಮಳೆಯಾಗಿದ್ದರೂ, ಮೃತದೇಹದ ಬಳಿ ಸಿಕ್ಕ ಸಂತ್ರಸ್ತೆಯ ಶಾಲಾ ಬ್ಯಾಗ್ ಮತ್ತು ಅದರೊಳಗಿನ ಪುಸ್ತಕಗಳು ಒದ್ದೆಯಾಗದೆ ಒಣಗಿದ ಸ್ಥಿತಿಯ ಇದ್ದವು. ಹಿಂದಿನ ದಿನ ಗ್ರಾಮಸ್ಥರು ವ್ಯಾಪಕವಾಗಿ ಹುಡುಕಾಡಿದ ಜಗದ ಮರುದಿನ ಶವ ಪತ್ತೆಯಾಗಿದೆ. ಬಾಲಕಿಯನ್ನು ಬೇರೆಡೆಗೆ ಅಪಹರಿಸಿ, ಅತ್ಯಾಚಾರವೆಸಗಿ ನಂತರ ಶವವನ್ನು ತಂದು ಅಲ್ಲಿ ಎಸೆಯಲಾಗಿದೆ ಎಂಬ ಸ್ಪಷ್ಟ ಸುಳಿವು ಇದ್ದರೂ ತನಿಖಾಧಿಕಾರಿಗಳು ಈ ಆಯಾಮದಲ್ಲಿ ತನಿಖೆ ನಡೆಸಲಿಲ್ಲ.
ಭೌತಿಕ ಸಾಕ್ಷ್ಯಗಳ ನಾಪತ್ತೆ ಮತ್ತು ತಾಂತ್ರಿಕ ಸಾಕ್ಷ್ಯಗಳ ಮರೆ: ಸಂತ್ರಸ್ತೆಯ ಒಳಉಡುಪು, ಆಕೆ ಹಿಡಿದುಕೊಂಡಿದ್ದ ಕಪ್ಪು ಬಣ್ಣದ ಛತ್ರಿ ಹಾಗೂ ಚಪ್ಪಲಿಗಳನ್ನು ಘಟನಾ ಸ್ಥಳದಲ್ಲಿ ವಶಪಡಿಸಿಕೊಳ್ಳುವಲ್ಲಿ ತನಿಖಾ ಸಂಸ್ಥೆ ವಿಫಲವಾಗಿದೆ. ಘಟನಾ ಸ್ಥಳದ ಸಮೀಪವಿದ್ದ ಪ್ರಕೃತಿ ಚಿಕಿತ್ಸಾಲಯದ ಮುಖ್ಯದ್ವಾರದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಲಿಲ್ಲ ಹಾಗೂ ಸಂಗ್ರಹಿಸಲಾಗಿದ್ದ ಮೊಬೈಲ್ ಟವರ್ ಡಂಪ್ ವಿವರಗಳನ್ನು ಮುಂದಿನ ತನಿಖಾಧಿಕಾರಿಗೆ ಹಸ್ತಾಂತರಿಸದೆ ಮುಚ್ಚಿಡಲಾಗಿತ್ತು.
ಆರೋಪಿಯ ದೈಹಿಕ ಅಸಾಮರ್ಥ್ಯ ಕಡೆಗಣನೆ: ಬಂಧಿತನಾಗಿದ್ದ ಸಂತೋಷ್ ರಾವ್ ‘ಫಿಮೋಸಿಸ್’ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಆತನಿಗೆ ಲೈಂಗಿಕ ಕ್ರಿಯೆ ತೀವ್ರ ನೋವಿನಿಂದ ಕೂಡಿರುತ್ತಿತ್ತು ಎಂದು ವೈದ್ಯರು ಸ್ಪಷ್ಟಪಡಿಸಿದ್ದರು. ಬಾಲಕಿಯ ಮೇಲೆ ಅಷ್ಟು ತೀವ್ರವಾದ ಪ್ರತಿರೋಧದೊಡನೆ ಲೈಂಗಿಕ ದೌರ್ಜನ್ಯ ನಡೆದಿದ್ದರೂ ಆತನ ಖಾಸಗಿ ಅಂಗದ ಮೇಲೆ ಯಾವುದೇ ಗಾಯಗಳಿರಲಿಲ್ಲ. ಆತನೊಬ್ಬನೇ ಈ ಕೃತ್ಯ ಎಸಗಲು ಸಾಧ್ಯವಿಲ್ಲ ಎಂಬ ವೈದ್ಯಕೀಯ ಸತ್ಯವನ್ನು ತನಿಖಾ ಸಂಸ್ಥೆಗಳು ಸಂಪೂರ್ಣವಾಗಿ ಕಡೆಗಣಿಸಿದವು.
ಮೂವರು ಶಂಕಿತರ ವಿಚಾರಣೆಯಲ್ಲಿ ಜಾಣಕುರುಡು: ಸಂತ್ರಸ್ತೆಯ ಪೋಷಕರು, ಸಂಬಂಧಿಕರು ಹಾಗೂ ಸ್ಥಳೀಯ ಸಾರ್ವಜನಿಕರು ಮಲ್ಲಿಕ್ ಜೈನ, ಧೀರಜ್ ಜೈನ್ ಮತ್ತು ಉದಯ ಜೈನ್ ಎಂಬ ಮೂವರ ಮೇಲೆ ಆರಂಭದಿಂದಲೂ ಬಲವಾದ ಶಂಕೆ ವ್ಯಕ್ತಪಡಿಸಿದ್ದರು. ಆದರೆ, ತನಿಖಾಧಿಕಾರಿಗಳು ಈ ಶಂಕಿತರನ್ನು ಸೂಕ್ತವಾಗಿ ವಿಚಾರಣೆಗೆ ಒಳಪಡಿಸುವಲ್ಲಿ ಮತ್ತು ಅವರ ವಿರುದ್ಧದ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಚ್ಚರಿಯೆಂದರೆ, ಈ ಶಂಕಿತರ ಪೈಕಿ ಮಲ್ಲಿಕ್ ಜೈನ್ ಎಂಬಾತನೇ ಆರೋಪಿ ಸಂತೋಷ್ ರಾವ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದನು ಹಾಗೂ ಆತನ ಪಾತ್ರವನ್ನು ಕೂಲಂಕಷವಾಗಿ ತನಿಖೆ ಮಾಡುವ ಬದಲು ತನಿಖಾ ಸಂಸ್ಥೆಗಳು ಆತನನ್ನೇ ಪ್ರಾಸಿಕ್ಯೂಷನ್ ಸಾಕ್ಷಿಯನ್ನಾಗಿ ಪರಿವರ್ತಿಸಿದವು. ಈ ಮೂವರು ಶಂಕಿತರ ವಿರುದ್ಧ ಇಷ್ಟೊಂದು ಆರೋಪಗಳು ಕೇಳಿಬಂದರೂ, ತನಿಖಾಧಿಕಾರಿಗಳು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿಲ್ಲ, ಆ ಮೂವರ ಸ್ಥಳ ಪರಿಶೀಲನೆ ಮಾಡಿಲ್ಲ ಹಾಗೂ ಯಾವುದೇ ವಸ್ತುನಿಷ್ಠ ತನಿಖೆ ನಡೆಸದೆ ಅವರಿಗೆ ಮೇಲ್ನೋಟಕ್ಕೆ ಕ್ಲೀನ್ ಚಿಟ್ ನೀಡಿzರೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಕಟುವಾಗಿ ಉಲ್ಲೇಖಿಸಿದೆ.
ಸಾಕ್ಷಿಗಳ ಕಡೆಗಣನೆ: ಸುಪ್ರೀಂಕೋರ್ಟ್ ತನ್ನ ತೀರ್ಪಿನ ೪೭ನೇ ಪ್ಯಾರಾದಲ್ಲಿ ತನಿಖಾ ಸಂಸ್ಥೆಗಳ ಅಸಾಮರ್ಥ್ಯವನ್ನು ನೇರವಾಗಿ ಪ್ರಶ್ನಿಸಿದೆ. ಏಪ್ರಿಲ್ ೨೯, ೨೦೨೬ರಂದು ಅರ್ಜಿದಾರರು ಪಟ್ಟಿ ಮಾಡಿದ್ದ ೮ ಸಂಭಾವ್ಯ ಸಾಕ್ಷಿಗಳಿಗೆ ಭದ್ರತೆ ಒದಗಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿತ್ತು. ರಾಜ್ಯ ಸರ್ಕಾರವು ಕೇವಲ ೩ ವಾರಗಳಲ್ಲಿ ಈ ಸಾಕ್ಷಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಕೇವಲ ಮೂರು ವಾರಗಳಲ್ಲಿ ಈ ಸಾಕ್ಷಿಗಳನ್ನು ಪತ್ತೆಹಚ್ಚಲು ಸರ್ಕಾರಕ್ಕೆ ಸಾಧ್ಯವಾಗುವುದಾದರೆ, ಈ ಹಿಂದೆ ತನಿಖೆ ನಡೆಸಿದ ಮೂರು ಪ್ರಮುಖ ತನಿಖಾ ಸಂಸ್ಥೆಗಳು (ಸ್ಥಳೀಯ ಪೊಲೀಸ, ಸಿಐಡಿ ಮತ್ತು ಸಿಬಿಐ) ಸಕಾಲದಲ್ಲಿ ಈ ನಿರ್ಣಾಯಕ ಸುಳಿವುಗಳನ್ನು ವಿಚಾರಣೆ ನಡೆಸುವಲ್ಲಿ ಏಕೆ ವಿಫಲವಾದವು ಎಂದು ನ್ಯಾಯಾಲಯ ಗಂಭೀರವಾಗಿ ಪ್ರಶ್ನಿಸಿದೆ.
ಅಪರಿಚಿತನ ಕೂದಲು ಮತ್ತು ಡಿಎನ್‌ಎ ಮರುಪರೀಕ್ಷೆಯ ಅವಕಾಶ: ವಿಧಿವಿಜ್ಞಾನ ಪರೀಕ್ಷೆಯ ವರದಿಯ ಪ್ರಕಾರ, ಸಂತ್ರಸ್ತೆಯ ಬಟ್ಟೆಗಳಲ್ಲಿ ಮತ್ತೊಬ್ಬ ಅಪರಿಚಿತ ಪುರುಷನ ಕೂದಲು ಪತ್ತೆಯಾಗಿತ್ತು. ಶಂಕಿತರನ್ನು ಪತ್ತೆಹಚ್ಚಿ ಅವರ ರಕ್ತದ ಮಾದರಿ ಪಡೆದು ಡಿಎನಎ ಹೋಲಿಕೆ ಮಾಡುವ ಅವಕಾಶ ಇನ್ನೂ ಇದೆ ಎಂದು ತಜ್ಞರು ಹೇಳಿದ್ದರೂ, ಸಾಕ್ಷ್ಯಗಳೆಲ್ಲ ನಾಶವಾಗಿವೆ ಎಂಬ ಹೈಕೋರ್ಟ್ ನ ನಿಲುವು ದೋಷಪೂರಿತವಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಸಿಬಿಐ ವಾದ ಮತ್ತು ಸಮರ್ಥನೆಗಳು ತನ್ನ ತನಿಖೆಯ ಲೋಪಗಳನ್ನು ಸಮರ್ಥಿಸಿಕೊಳ್ಳಲು ಸಿಬಿಐ ನ್ಯಾಯಾಲಯದ ಮುಂದೆ ಹಲವು ವಾದಗಳನ್ನು ಮಂಡಿಸಿತ್ತು: ದೃಢಪಡದ ಆರೋಪಿ ಪಾತ್ರ: ಸಂತ್ರಸ್ತೆಯ ತಂದೆ ಹಾಗೂ ಸಾರ್ವಜನಿಕರು ಬಲವಾಗಿ ಶಂಕಿಸಿದ್ದ ಧೀರಜ್ ಜೈನ, ಮಲ್ಲಿಕ್ ಜೈನ್ ಮತ್ತು ಉದಯ ಜೈನ್ ಅವರನ್ನು ತನಿಖೆಗೆ ಒಳಪಡಿಸಲಾಗಿತ್ತು ಹಾಗೂ ಅವರಿಗೆ ಪಾಲಿಗ್ರಾಫ್ (ಸುಳ್ಳು ಪತ್ತೆ) ಮತ್ತು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳನ್ನು ನಡೆಸಲಾಗಿತ್ತು ಎಂದು ಸಿಬಿಐ ವಾದಿಸಿತ್ತು. ಈ ಪರೀಕ್ಷೆಗಳಲ್ಲಿ ಅವರ ಪಾತ್ರ ದೃಢಪಡದ ಕಾರಣ ಅವರಿಗೆ ಕ್ಲೀನ್ ಚಿಟ್ ನೀಡಿ, ಸ್ಥಳೀಯ ಪೊಲೀಸರು ಮತ್ತು ಸಿಐಡಿ ತನಿಖೆಯ ನಿರ್ಧಾರವನ್ನೇ ಎತ್ತಿಹಿಡಿಯಲಾಯಿತು ಎಂದು ಸಿಬಿಐ ಸಮರ್ಥಿಸಿಕೊಂಡಿತ್ತು.
ಮಾನಸಿಕ ಮೌಲ್ಯಮಾಪನ ವರದಿಯ ಮೇಲಿನ ಅವಲಂಬನೆ:
ಚೆನ್ನೈನ ಸಿಎಫ್ಎಸ್‌ಎಲ್’ ನಡೆಸಿದ್ದ ವಿಧಿವಿಜ್ಞಾನ ಮಾನಸಿಕ ಮೌಲ್ಯಮಾಪನದಲ್ಲಿ, ಸಂತೋಷ್ ರಾವ್ ಸುಳ್ಳು ಹೇಳುತ್ತಿರುವುದು ಕಂಡುಬಂದಿದ್ದು, ಆತನೇ ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂಬ ತಜ್ಞರ ವರದಿಯನ್ನು ಸಿಬಿಐ ತನ್ನ ದೋಷಾರೋಪ ಪಟ್ಟಿಗೆ ಪ್ರಮುಖ ಆಧಾರವನ್ನಾಗಿ ಮಾಡಿಕೊಂಡಿತ್ತು.
ಮರುತನಿಖೆ ನಿರರ್ಥಕ ಎಂಬ ವಾದ: ಅಪರಾಧ ನಡೆದು ದೀರ್ಘಕಾಲ ಕಳೆದಿರುವುದರಿಂದ ಮತ್ತು ’ಗೋಲ್ಡನ್ ಅರ್ವ’ನಲ್ಲಿ ಸಂಗ್ರಹಿಸಬೇಕಾಗಿದ್ದ ಪ್ರಮುಖ ವೈದ್ಯಕೀಯ ಸಾಕ್ಷ್ಯಗಳು ಈಗಾಗಲೇ ನಷ್ಟವಾಗಿರುವುದರಿಂದ, ಈಗ ಮರುತನಿಖೆಗೆ ಆದೇಶಿಸಿದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೈಕೋರ್ಟ್‌ನಲ್ಲಿ ಸಿಬಿಐ ವಾದ ಮಂಡಿಸಿತ್ತು.
ಸೌಜನ್ಯಾ ಪ್ರಕರಣದ ಹಿನ್ನೆಲೆ ಮತ್ತು ಕಾನೂನು ಹೋರಾಟ ೨೦೧೨ರ ಅಕ್ಟೋಬರ್ ೯ರಂದು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ೧೭ ವರ್ಷದ ವಿದ್ಯಾರ್ಥಿನಿ ಸೌಜನ್ಯಾ, ಎಂದಿನಂತೆ ಕಾಲೇಜು ಮುಗಿಸಿ ಮನೆಗೆ ಮರಳುವಾಗ ನಾಪತ್ತೆಯಾಗಿದ್ದರು. ಮರುದಿನ (ಅಕ್ಟೋಬರ್ ೧೦) ಮಣ್ಣಸಂಕ ಸಮೀಪದ ಪೊದೆಯೊಂದರಲ್ಲಿ ಆಕೆಯ ಮೃತದೇಹ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯ ಕೈಗಳನ್ನು ಕಾಲೇಜು ಸಮವಸದ ವೇಲ್‌ನಿಂದ ಮರಕ್ಕೆ ಕಟ್ಟಲಾಗಿತ್ತು ಹಾಗೂ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಭೀಕರ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ದೃಢಪಟ್ಟಿತ್ತು.
” ಶಂಕಿತರನ್ನು ಪತ್ತೆಹಚ್ಚಿ ಅವರ ರಕ್ತದ ಮಾದರಿ ಪಡೆದು ಡಿಎನಎ ಹೋಲಿಕೆ ಮಾಡುವ ಅವಕಾಶ ಇನ್ನೂ ಇದೆ ಎಂದು ತಜ್ಞರು ಹೇಳಿದ್ದರೂ, ಸಾಕ್ಷ್ಯಗಳೆಲ್ಲ ನಾಶವಾಗಿವೆ ಎಂಬ ಹೈಕೋರ್ಟ್‌ನ ನಿಲುವು ದೋಷಪೂರಿತವಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.”
ಸುಪ್ರೀಂ ಕೋರ್ಟ್ ನಿರ್ದೇಶನಗಳು:
ತನಿಖಾ ಸಂಸ್ಥೆಗಳ ಕಾರ್ಯವೈಖರಿಯಿಂದ ಸಮಾಜದ ಸ್ವಾಸ್ಥ್ಯ ಹಾಗೂ ನ್ಯಾಯಾಂಗದ ಮೇಲಿನ ನಂಬಿಕೆಗೆ ಧಕ್ಕೆಯಾಗಬಾರದು ಎಂದು ಎಚ್ಚರಿಸಿರುವ ಸುಪ್ರೀಂ ಕೋರ್ಟ್ , ಈ ಕೆಳಗಿನ ಸ್ಪಷ್ಟ ನಿರ್ದೇಶನಗಳೊಂದಿಗೆ ಪ್ರಕರಣವನ್ನು ಇತ್ಯರ್ಥಪಡಿಸಿದೆ:
೧ ಹೈಕೋರ್ಟ್ ನೀಡಿದ್ದ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ ಮೂಲ ಎಫ್ಐಆರ್ ಹಾಗೂ ನಂತರ ಸಿಬಿಐ ದಾಖಲಿಸಿಕೊಂಡಿದ್ದ ಪ್ರಕರಣದ ಸಂಪೂರ್ಣ ಹೊಸ ತನಿಖೆ /ಮರುತನಿಖೆಗೆ (‘ ಡಿ ನೊವೊ’) ಆದೇಶಿಸಿದೆ.
೨ ಕರ್ನಾಟಕ ಸರ್ಕಾರವು ಆಧುನಿಕ ತನಿಖಾ ತಂತ್ರeನದಲ್ಲಿ ಪರಿಣತಿ ಹೊಂದಿರುವ ದಕ್ಷ ಹಾಗೂ ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸಐಟಿ) ರಚಿಸಬೇಕು.
೩ ಈ ಹಿಂದೆ ಈ ಪ್ರಕರಣದ ತನಿಖೆ ನಡೆಸಿದ್ದ ಬೆಳ್ತಂಗಡಿ ಪೊಲೀಸ್ ಠಾಣೆ, ಸಿಐಡಿ ಅಥವಾ ಸಿಬಿಐನ ಯಾವುದೇ ಅಧಿಕಾರಿಯೂ ಈ ನೂತನ ವಿಶೇಷ ತನಿಖಾ ತಂಡದಲ್ಲಿ ಕಾರ್ಯನಿರ್ವಹಿಸುವಂತಿಲ್ಲ.
೪ ಈಗಾಗಲೇ ವಿಚಾರಣೆ ಎದುರಿಸಿ ಖುಲಾಸೆಗೊಂಡಿರುವ ಸಂತೋಷ್ ರಾವ್ ಅವರಿಗೆ ಸಂವಿಧಾನದ ೨೦(೨)ನೇ ವಿಧಿಯ ರಕ್ಷಣೆ ಇರುವುದರಿಂದ, ಅವರನ್ನು ಮತ್ತೆ ತನಿಖೆ ಅಥವಾ ವಿಚಾರಣೆಗೆ ಒಳಪಡಿಸುವಂತಿಲ್ಲ.
೫ ನೂತನ ವಿಶೇಷ ತನಿಖಾ ತಂಡವು ಮೂರು ತಿಂಗಳ ಒಳಗೆ ನಿಷ್ಪಕ್ಷಪಾತವಾಗಿ ತನ್ನ ತನಿಖೆಯನ್ನು ಪೂರ್ಣಗೊಳಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು.




