Mysore
22
overcast clouds

Social Media

ಬುಧವಾರ, 23 ಸೆಪ್ಟೆಂಬರ್ 2026
Light
Dark

ಒಂದು ಬಾಡಿಗೆ ಕ್ಯಾಮೆರಾ…ಒಂದು ಬಾಡಿಗೆ ದೋಣಿ…

ಪಂಜುಗಂಗೊಳ್ಳಿ ಅವರ ವಾರದ ಅಂಕಣ 

ಕಷ್ಟದ ಬದುಕನ್ನು ವರ್ಣರಂಜಿತಗೊಳಿಸಿದ ಚಿತ್ರಗಳು!

ಕೇರಳಂನ ಕೊಟ್ಟಾಯಂನ ನಂದೂ ಕೆ.ಎಸ್. ಕಲಿತದ್ದು ಎಂಜಿನಿಯರಿಂಗ್. ಆದರೆ, ಆತನ ಪ್ರಕಾರ ಆತ ಒಬ್ಬ ಹುಟ್ಟು ಫೋಟೋಗ್ರಾಫರ್. ಹಾಗಾಗಿ ಆತ ತನ್ನ ಎಂಜಿನಿಯರಿಂಗ್ ಶಿಕ್ಷಣ ಮುಗಿಸಿದ ನಂತರ ಎಂಜಿನಿಯರ್ ಆಗುವ ಬದಲು ಒಬ್ಬ ವೃತ್ತಿಪರ ಫೋಟೋಗ್ರಾಫರ್ ಆಗಲು ಬಯಸಿದ್ದರು. ಆದರೆ, ಹಾಗೆ ಮಾಡಲು ಧೈರ್ಯ ಸಾಲದೆ, ಹೆಚ್ಚಿನ ಕೇರಳಿಗರು ಮಾಡುವಂತೆ, ಉದ್ಯೋಗ ಅರಸಿಕೊಂಡು ವಿಮಾನ ಹತ್ತಿ ಕೊಲ್ಲಿ ದೇಶಕ್ಕೆ ಹೋದರು.

ನಂದೂ ಅಬುಧಾಬಿಯಲ್ಲಿ ಒಂದು ಎಲೆಕ್ಟ್ರಿಕಲ್ ಎಂಜಿನಿಯರ್ ಉದ್ಯೋಗವನ್ನು ಪಡೆಯುವಲ್ಲಿ ಯಶಸ್ವಿಯಾದರು. ಆದರೆ, ಆತ ತನ್ನನ್ನು ತಾನು ಒಬ್ಬ ಹುಟ್ಟು ಫೋಟೋಗ್ರಾಫರ್ ಅಂತ ತಿಳಿದುಕೊಂಡಿದ್ದ ಕಾರಣ ಅವರ ಧ್ಯಾನವೆಲ್ಲ ಫೋಟೋಗ್ರಫಿಯಲ್ಲಿ ಮುಳುಗಿ ಹೋಗಿತ್ತು. ಹೇಗೋ ಮಾಡಿ ಅದೇ ಉದ್ಯೋಗದಲ್ಲಿ ಎರಡು ವರ್ಷ ಕಳೆದರು. ನಂತರ ಅಬುಧಾಬಿಯಲ್ಲಿನ ಜೀವನ, ಕೆಲಸದ ಒತ್ತಡ, ಏಕತಾನತೆಯ ಬೇಸರ ಹಾಗೂ ಅವೆಲ್ಲಕ್ಕೂ ಮಿಗಿಲಾಗಿ, -ಟೋಗ್ರಫಿಯ ಸೆಳೆತದಿಂದಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕೇರಳಂಗೆ ವಾಪಸ್ ಬಂದರು.

ಕೇರಳಂಗೆ ಬಂದ ನಂದೂಗೆ ಎಲ್ಲೂ ಕೆಲಸ ಸಿಗದೆ ನಿರುದ್ಯೋಗಿಯಾಗಿರಬೇಕಾಯಿತು. ಫೋಟೋಗ್ರಫಿ ನಡೆಸಲು ಉತ್ತಮ ಗುಣಮಟ್ಟದ ವೃತ್ತಿಪರ ಕ್ಯಾಮೆರಾ ಬೇಕು. ಅದು ಲಕ್ಷಾಂತರ ರೂಪಾಯಿಯಷ್ಟು ದುಬಾರಿ. ಅಷ್ಟು ಹಣ ಅವರಲ್ಲಿಲ್ಲ. ಕೇರಳಂನಲ್ಲಿ ಬಾಡಿಗೆಗೆ ಕ್ಯಾಮೆರಾ ಕೊಡುವ ಅಂಗಡಿಗಳಿವೆ. ನಂದೂ ಅಂತಹ ಒಂದು ಅಂಗಡಿಯಲ್ಲಿ ಒಂದು ಬಾಡಿಗೆ ಕ್ಯಾಮೆರಾ ಪಡೆದು, ಊರ, ಪರವೂರ ರಸ್ತೆಗಳಲ್ಲಿ ಅಲೆದು, ಕಂಡ ಕಂಡ ಮೂಲೆಗಳಲ್ಲಿ ಹೋಗಿ ಫೋಟೋ, ವಿಡಿಯೋ ಮಾಡಿದರು. ನೂರಾರು ಮುಖಗಳನ್ನು ಸೆರೆ ಹಿಡಿದರು. ಮರ, ಗಿಡ, ಪ್ರಾಣಿ, ಪಕ್ಷಿ, ಗುಡ್ಡ ಬೆಟ್ಟ, ಹೊಳೆ ತೊರೆ ಹೀಗೆ ಅಸಂಖ್ಯ ದೃಶ್ಯಗಳನ್ನು ಚಿತ್ರೀಕರಿಸಿದರು. ಆದರೆ, ಯಾವುದರಲ್ಲೂ ಅವರಿಗೆ ವಿಶೇಷ ಅನ್ನಿಸುವಂತಹದು ಏನೂ ಗೋಚರಿಸಲಿಲ್ಲ. ಆದರೆ, ಅದೊಂದು ದಿನ ನಂದೂ ಸೆರೆ ಹಿಡಿದ ಒಂದು ದೃಶ್ಯ ಎಲ್ಲವನ್ನೂ ಬದಲಾಯಿಸಿಬಿಟ್ಟಿತು.

ಅಂದು ನಂದೂ ಮಣಿಯಾಣಿಕ್ಕಾರದ ವೆಂಬನಾಡ್ ಕೆರೆಯ ಸೇತುವೆ ಮೇಲೆ ತನ್ನ ಸ್ನೇಹಿತರೊಬ್ಬರ ವಿವಿಧ ಭಂಗಿಗಳ ಫೋಟೋ ತೆಗೆಯುತ್ತಿದ್ದರು. ಆಗ ಅವರಿಗೆ ಸೇತುವೆಯ ಕೆಳಗೆ ನದಿಯಲ್ಲಿ ದೋಣಿ ನಡೆಸುತ್ತಿದ್ದ ಒಬ್ಬ ವಯಸ್ಸಾದ ವ್ಯಕ್ತಿ ಕಾಣಿಸಿದರು. ಕೇರಳಂನಲ್ಲಿ ವಯಸ್ಸಾದವರೇನು ಹೆಂಗಸರು, ಚಿಕ್ಕ ಮಕ್ಕಳೂ ಮೊದಲಾಗಿ ಜನ ದೋಣಿ ನಡೆಸುವ ದೃಶ್ಯ ತೀರಾ ತೀರಾ ಸಾಮಾನ್ಯವಾದುದು. ಆದರೆ, ಇದು ತುಸು ಭಿನ್ನವಾಗಿತ್ತು. ಆತ ದೋಣಿ ನಡೆಸುತ್ತ ನದಿಯಲ್ಲಿದ್ದ ಪ್ಲಾಸ್ಟಿಕ್ ಬಾಟಲಿ, ಕಸವನ್ನು ಹೆಕ್ಕಿ ತೆಗೆದು ತನ್ನ ದೋಣಿಯಲ್ಲಿ ಹಾಕಿಕೊಳ್ಳುತ್ತಿದ್ದನು. ಮತ್ತು, ಸೇತುವೆ ಮೇಲಿದ್ದ ಜನ ಹೊಳೆಗೆ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯುತ್ತಿದ್ದರು! ನಂದೂ ಆ ದೃಶ್ಯದ ಹಲವು ಫೋಟೋ, ವೀಡಿಯೋಗಳನ್ನು ತೆಗೆದು, ತನ್ನ ‘ಪ್ರೋ ಮೀಡಿಯಾ ಫೇಸ್‌ಬುಕ್’ ಪುಟದಲ್ಲಿ ಹಂಚಿಕೊಂಡರು. ಅದರ ನಂತರ ನಡೆದದ್ದು ನಂದೂರವರ ಊಹೆಗೂ ಮೀರಿದ್ದು!

ದೋಣಿ ನಡೆಸುತ್ತ ನದಿಯಲ್ಲಿನ ಪ್ಲಾಸ್ಟಿಕ್ ಕಸವನ್ನು ಹೆಕ್ಕುತ್ತಿದ್ದ ಆ ೭೪ ವರ್ಷ ಪ್ರಾಯದ ಹಿರಿಯ ನಾಗರಿಕರ ಹೆಸರು ಎನ್ ಎಸ್ ರಾಜಪ್ಪನ್. ಕೇರಳಂನ ಕೊಟ್ಟಾಯಂನ ಮಣಿಯಾಣಿಕ್ಕಾರದ ಅವರನ್ನು ಅಕ್ಕಪಕ್ಕದವರು ಪ್ರೀತಿಯಿಂದ ‘ರಾಜಪ್ಪನ್ ಚೆತ್ತನ್ (ರಾಜಪ್ಪಣ್ಣ)’ ಎಂದು ಕರೆಯುತ್ತಾರೆ.

ರಾಜಪ್ಪನ್ ಐದು ವರ್ಷದವರಾಗಿದ್ದಾಗ ಪೋಲಿಯೋ ತಗಲಿ ನಡೆಯುವ ಶಕ್ತಿಯನ್ನು ಕಳೆದುಕೊಂಡಿದ್ದರು. ತನ್ನ ಅಂಗವೈಕಲ್ಯದಿಂದಾಗಿ ರಾಜಪ್ಪನ್ ಯಾವುದೇ ರೀತಿಯ ದೊಡ್ಡ ಕೆಲಸ ಸಿಗದೆ, ಸಿಕ್ಕರೂ ಮಾಡಲಾಗದೆ, ಸಣ್ಣಪುಟ್ಟ ಕೂಲಿಕೆಲಸಗಳನ್ನು ಮಾಡಿಕೊಂಡು ಬದುಕು ನಡೆಸುತ್ತಿದ್ದರು. ಆದರೆ, ವಯಸ್ಸಾಗುತ್ತ ಬಂದಂತೆ ಅದೂ ಅಸಾಧ್ಯವಾಗತೊಡಗಿತು. ಅಂಗವೈಕಲ್ಯ ವಿದ್ದರೂ ಸ್ವಾಭಿಮಾನಿಯಾದ ಅವರು ತಮ್ಮ ಕುಟುಂಬಕ್ಕೂ ತಾನು ಹೊರೆಯಾಗಬಾರದೆಂದು ಮಣಿಯಾಣಿಕ್ಕಾರ ಹಳ್ಳಿಯಲ್ಲಿ ಚಿಕ್ಕದೊಂದು ಮನೆ ಕಟ್ಟಿಕೊಂಡು ಏಕಾಂಗಿಯಾಗಿ ವಾಸ ಮಾಡುತ್ತಾರೆ. ೨೦೧೮ರ ಪ್ರವಾಹದಲ್ಲಿ ಅವರ ಮನೆ ಹಾಳಾಯಿತು. ಆಗಲೂ ಅವರು ಯಾರೊಬ್ಬರ ಸಹಾಯ ಕೇಳದೆ, ಕೆಲವು ವಾರ ಒಂದು ದೋಣಿಯಲ್ಲಿ ದಿನ ಕಳೆದು, ಮನೆಯನ್ನು ತಕ್ಕ ಮಟ್ಟಿಗೆ ದುರಸ್ತಿ ಮಾಡಿಕೊಂಡರು. ಅವರ ಮನೆಯ ಸಮೀಪದಲ್ಲಿ ಅವರ ಸಹೋದರಿಯ ಕುಟುಂಬ ವಾಸ ಮಾಡುತ್ತಿದೆ. ಆಕೆ ಪ್ರತೀದಿನ ರಾಜಪ್ಪನ್‌ಗೆ ಆಹಾರ ತಂದು ಕೊಟ್ಟು ಹೋಗುತ್ತಾರೆ.

ರಾಜಪ್ಪನ್‌ರ ಮನೆ ಪಕ್ಕದಲ್ಲೇ ಇರುವ ವೆಂಬನಾಡ್ ಕೆರೆ ಕೇರಳಂ ಮಾತ್ರವಲ್ಲದೆ, ಇಡೀ ದೇಶದಲ್ಲೇ ಅತ್ಯಂತ ದೊಡ್ಡದಾದ ಕೆರೆ. ಅದರ ದಡದಲ್ಲಿ ಹುಟ್ಟಿ ಬೆಳೆದ ರಾಜಪ್ಪನ್ ಸ್ಥಳೀಯರು, ಪ್ರವಾಸಿಗರು ಎಸೆಯುವ ಪ್ಲಾಸ್ಟಿಕ್ ಕಸದಿಂದಾಗಿ ಅದು ಕಲುಷಿತಗೊಳ್ಳುತ್ತಿರುವುದು ನೋಡಿ ವಿಷಾದಿಸುತ್ತಿದ್ದರು. ಕಾಲಿಲ್ಲದ ತಾನು ಏನು ಮಾಡಬಹುದು ಎಂದು ಆಲೋಚಿಸಿದ ಅವರು ತನಗೆ ನಡೆಯಲಾಗದಿದ್ದರೂ ದೋಣಿ ನಡೆಸುವುದು ಕಷ್ಟವಲ್ಲ ಎಂದು ಅರಿತು, ಹಲವು ವರ್ಷಗಳ ಹಿಂದೆ ವೆಂಬನಾಡ್ ನದಿಗೆ ಬಂದು ಬೀಳುವ ಪ್ಲಾಸ್ಟಿಕ್ ಬಾಟಲಿ, ಕಸವನ್ನು ಸಂಗ್ರಹಿಸಲು ಪ್ರಾರಂಭಿಸಿದರು.

ಬೆಳಿಗಿನ ನಸುಕಿನಲ್ಲಿ ರಾಜಪ್ಪನ್ ತನ್ನ ಮನೆಯಿಂದ ತೆವಳುತ್ತ ಬಂದು ದೋಣಿ ಹತ್ತುತ್ತಾರೆ. ಆ ದೋಣಿಯೂ ಅವರ ಸ್ವಂತದ್ದಲ್ಲ. ಯಾರಿಂದಲೋ ಆ ದೋಣಿಯನ್ನು ಬಾಡಿಗೆಗೆ ಪಡೆಯುತ್ತಾರೆ. ದಿನವಿಡೀ ಕೆರೆಯಲ್ಲಿ ದೋಣಿ ನಡೆಸಿ ಪ್ಲಾಸ್ಟಿಕ್ ಬಾಟಲಿ ಹೆಕ್ಕುತ್ತಾರೆ. ಸಿಕ್ಕ ಬಾಟಲಿಗಳನ್ನೆಲ್ಲ ಮನೆಗೆ ತಂದು, ತೊಳೆದು, ಒಣಗಿಸಿ ಚೀಲದಲ್ಲಿ ತುಂಬಿಟ್ಟು, ಸ್ಥಳೀಯ ಗುಜರಿ ವ್ಯಾಪಾರಿಗೆ ಮಾರುತ್ತಾರೆ. ಒಂದು ಕೆಜಿ ಪ್ಲಾಸ್ಟಿಕ್‌ಗೆ ೧೨ ರೂಪಾಯಿ ಸಿಗುತ್ತದೆ. ಒಂದುದೋಣಿ ತುಂಬಾ ಪ್ಲಾಸ್ಟಿಕ್ ಬಾಟಲಿ ಲಭಿಸಿದರೂ ಅದರಿಂದ ಬರುವ ಹಣಹೆಚ್ಚೇನಿಲ್ಲ. ಆದರೂ, ಅದರಿಂದ ತುಸುವಾದರೂ ತನ್ನ ಖರ್ಚು ಕಳೆಯುತ್ತದೆ, ಮತ್ತು ಅದರಿಂದಾಗಿ ನದಿಯೂ ಆದಷ್ಟು ಸ್ವಚ್ಛಗೊಳ್ಳುತ್ತದೆ ಎಂದು ಅವರು ಇಂದಿಗೂ ಆ ಕೆಲಸವನ್ನು ಮುಂದುವರಿಸಿದ್ದಾರೆ.

ಕಳೆದ ಒಂದು ದಶಕದಲ್ಲಿ ಒಮ್ಮೆಯೂ ತಪ್ಪಿಲ್ಲ. ನಂದೂ ರಾಜಪ್ಪನ್‌ರ ವೀಡಿಯೋ ಮತ್ತು ಫೋಟೋಗಳನ್ನು ಅವರಿಗೆ ತೋರಿಸಿದಾಗ ಅವುಗಳನ್ನು ಕಂಡು ಅವರು ಸಂತೋಷದಿಂದ ನಕ್ಕರು. ನಂತರ ನಂದೂ ಅವುಗಳನ್ನು ತನ್ನ ‘ಪ್ರೋ ಮೀಡಿಯಾ ಫೇಸ್‌ಬುಕ್’ ಪುಟದಲ್ಲಿ ಹಂಚಿಕೊಂಡಾಗ ಅವು ವೈರಲ್ ಆದವು! ಸಾವಿರಾರು ಸಂಖ್ಯೆಯ ವೀಕ್ಷಕರು ಅವುಗಳನ್ನು ನೋಡಿ ಮೆಚ್ಚಿ, ರೀಟ್ವೀಟ್ ಮಾಡಿದರು. ವಿಶ್ವಸಂಸ್ಥೆಯ ‘ಪರಿಸರ ಕಾರ್ಯಕ್ರಮ (ಯುಎನ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್)’ ದ ಆಗಿನ ಮುಖ್ಯಸ್ಥಾರಾಗಿದ್ದ ಎರಿಕ್ ಸೊಲ್ಹೇಮ್ ‘ಲೆಟ್ಸ್ ಮೇಕ್ ದಿಸ್ ಗೈ ಫೇಮಸ್’ ಎಂದು ಕಮೆಂಟ್ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ರಾಜಪ್ಪನ್‌ರ ಕಾರ್ಯವನ್ನು ಶ್ಲಾಘಿಸಿದರು.

ಇಷ್ಟೆಲ್ಲ ಶ್ಲಾಘನೆಗಳ ಜೊತೆಗೆ ರಾಜಪ್ಪನ್‌ರಿಗೆ ಸಹಾಯಗಳೂ ಹರಿದು ಬಂದವು. ಕೇರಳಂನ ಒಬ್ಬ ಉದ್ಯಮಿ ಅವರಿಗೊಂದು ಮೋಟಾರ್ ಬೋಟನ್ನು ನೀಡಿದರು. ಬೆಂಗಳೂರು ಮೂಲದ ಗಾಲಿಕುರ್ಚಿ ತಯಾರಕರೊಬ್ಬರು ಅವರಿಗೆ ಒಂದು ‘ಹೆವೀ ಡ್ಯೂಟಿ’ ಮೋಟಾರ್ ಚಾಲಿತ ಗಾಲಿಕುಚಿಯನ್ನು ದಾನ ನೀಡಿದರು. ಮತ್ತು, ನೂರಾರು ಜನರು ಅವರಿಗೆ ಧನ ಸಹಾಯ ಕಳಿಸಿಕೊಟ್ಟರು. ಅದರ ನೆರವಿನಿಂದ ಅವರಿಗೊಂದು ಹೊಸ ಮನೆಯನ್ನು ಕಟ್ಟಲೂ ಸಾಧ್ಯವಾಯಿತು.

” ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ರಾಜಪ್ಪನ್‌ರ ಕಾರ್ಯವನ್ನು ಶ್ಲಾಘಿಸಿದರು. ಇಷ್ಟೆಲ್ಲ ಶ್ಲಾಘನೆಗಳ ಜೊತೆಗೆ ರಾಜಪ್ಪನ್‌ರಿಗೆ ಸಹಾಯಗಳೂ ಹರಿದು ಬಂದವು.”

 

 

Tags:
error: Content is protected !!