Mysore
24
few clouds

Social Media

ಮಂಗಳವಾರ, 08 ಸೆಪ್ಟೆಂಬರ್ 2026
Light
Dark

ಬಿರುಕು ಬಿಟ್ಟ ಗೋಡೆಗಳು, ಉದುರಿ ಬೀಳುವ ಸಿಮೆಂಟ್ ಪದರ…

ಭೇರ್ಯ ಮಹೇಶ್

ಕೆ.ಆರ್.ನಗರ ತಾಲ್ಲೂಕು ಪಂಚಾಯಿತಿ ಕಚೇರಿ ಕಟ್ಟಡದ ದುಸ್ಥಿತಿ; ಸಾರ್ವಜನಿಕರ ಅಸಮಾಧಾನ 

ಕೆ.ಆರ್.ನಗರ: ಬಿರುಕುಬಿಟ್ಟ ಗೋಡೆಗಳು, ಉದುರಿ ಬೀಳುವ ಸಿಮೆಂಟ್ ಪದರ, ಮಾಸಿದ ಬಣ್ಣ , ಜೋರು ಮಳೆಗೆ ಸೋರುವ ಕಟ್ಟಡ, ಕಲ್ಲೆದ್ದ ರಸ್ತೆ… ಇದು ಕೆ.ಆರ್.ನಗರ ಪಟ್ಟಣದಲ್ಲಿರುವ ತಾಲ್ಲೂಕು ಪಂಚಾಯಿತಿ ಕಚೇರಿಯ ಕಟ್ಟಡದ ದುಸ್ಥಿತಿಯ ಚಿತ್ರಣ.

ಹಲವು ವರ್ಷಗಳಿಂದ ಕಚೇರಿಯ ಕಟ್ಟಡ ಶಿಥಿಲವಾಗಿದ್ದು, ಸಾಮಾನ್ಯ ಜನರು ತಮ್ಮ ನಿತ್ಯದ ಕೆಲಸ ಕಾರ್ಯಗಳಿಗೆ ಕಚೇರಿಗೆ ಬರಲು ಹಿಂದೇಟು ಹಾಕುವಂತಾಗಿದೆ. ಕಟ್ಟಡದ ಚಾವಣಿ ಅಲ್ಲಲ್ಲಿ ಕುಸಿದಿದ್ದು, ಕಚೇರಿ ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿದೆ. ಇದರಿಂದಾಗಿ ಸಿಬ್ಬಂದಿಗಳ ದಿನನಿತ್ಯ ಕೆಲಸ ಕಾರ್ಯಗಳಿಗೆ ಅಡೆತಡೆಯಾಗುತ್ತಿದೆ.

ಪಟ್ಟಣದಲ್ಲಿರುವ ತಾಪಂ ಕಚೇರಿ ಕಟ್ಟಡ ತುಂಬಾ ಹಳೆಯದಾಗಿದ್ದು, ಪಾರಂಪರಿಕ ಮಾದರಿಯಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಕಟ್ಟಡದ ಸ್ಲ್ಯಾಬ್ ಉದುರಿ ಬೀಳುತ್ತಿದೆ. ಶ್ರೀ ಕೃಷ್ಣರಾಜೇಂದ್ರಸಭಾಂಗಣ ಮಾತ್ರ ಕೆಲವು ವರ್ಷಗಳ ಹಿಂದೆ ನಿರ್ಮಿಸಿದ್ದು, ಆ ಸಭಾಂಗಣದಲ್ಲಿ ಸಭೆಗಳು, ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ.

ತಾಪಂ ಮುಖ್ಯ ಕಾರ್ಯಾಲಯದ ಮೂಲಕ ಸಭಾಭವನ ಒಳಗಡೆ ಹೋಗುವವರೆಗೂ ಚಾವಣಿಯ ಸಿಮೆಂಟ್ ಕುಸಿದು ಬೀಳುವಂತಿದ್ದು, ಯಾವ ವೇಳೆಯಲ್ಲಿ ಯಾರ ಮೇಲೆ ಬಿದ್ದು ಏನು ಅನಾಹುತ ಸಂಭವಿಸಬಹುದೋ ಎಂಬ ಆತಂಕ ಎದುರಾಗಿದೆ.

ತಾಪಂ ಕಟ್ಟಡವೇ ಸರಿಯಾಗಿಲ್ಲ. ಇನ್ನು ನಮ್ಮ ಸಮಸ್ಯೆ ಕೇಳೋರು ಯಾರು ಎಂದು ತಾಪಂ ಮಾಜಿ ಸದಸ್ಯರೊಬ್ಬರ ಬಳಿ ಸಾರ್ವಜನಿಕರು ಕಟ್ಟಡದ ದುಸ್ಥಿತಿ ಬಗ್ಗೆ ಬಹಿರಂಗವಾಗಿಯೇ ಚರ್ಚೆ ಮಾಡುತ್ತಿರುವುದು ಕಂಡುಬಂದಿತು. ತಾಪಂ ಕೇಂದ್ರದಲ್ಲಿ ಹತ್ತು ಹಲವು ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಸರಿ ಇಲ್ಲದೆ ಸಮಸ್ಯೆ ಹೇಳಿಕೊಂಡು ಬರುವ ಜನತೆಗೆ ಸಾಕಷ್ಟು ತೊಂದರೆ ಆಗುತ್ತಿದೆ. ಮುಖ್ಯ ರಸ್ತೆಯಿಂದ ಕಚೇರಿಗೆ ಬರುವ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ಈ ರಸ್ತೆಗೆ ಮಣ್ಣು ಹಾಕಲು ಹಣ ಕೂಡ ತಾಲ್ಲೂಕು ಪಂಚಾಯಿತಿಗೆ ಇಲ್ಲವೇ ಎಂದು ಸಾರ್ವಜನಿಕರು ಹಾಗೂ ರೈತ ಮುಖಂಡರು ಪ್ರಶ್ನಿಸುತ್ತಿದ್ದಾರೆ.

” ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಹಲವು ಗ್ರಾಮಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ನೈರ್ಮಲ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಈ ಬಗ್ಗೆ ಕಾಳಜಿ ತೋರಬೇಕಾದ ತಾಪಂ ಆಡಳಿತ ಕಚೇರಿಯ ಕಟ್ಟಡವೇ ಸಂಪೂರ್ಣವಾಗಿ ಶಿಥಿಲವಾಗಿದ್ದು ಅಧಿಕಾರಿಗಳು ನಿಷ್ಕಾಳಜಿ ವಹಿಸಿದ್ದಾರೆ.”

-ಗಂಧನಹಳ್ಳಿ ಜಲೇಂದ್ರ, ಮುಖಂಡರು, ಗಂಧನಹಳ್ಳಿ

” ತಾಪಂ ಕಚೇರಿ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸರ್ಕಾರಕ್ಕೆ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಮೂಲಕ ಪತ್ರ ಬರೆದು ಕಟ್ಟಡ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ತಯಾರು ಮಾಡಿ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗುತ್ತದೆ. ಅದಾದ ತಕ್ಷಣವೇ ಕಟ್ಟಡ ನಿರ್ಮಾಣ ಮಾಡಲಾಗುವುದು.”

-ವಿ.ಪಿ.ಕುಲದೀಪ್, ತಾ.ಪಂ. ಇಒ, ಕೆ.ಆರ್.ನಗರ 

” ಪಟ್ಟಣದಲ್ಲಿರುವ ತಾಪಂ ಕಟ್ಟಡದ ದುಸ್ಥಿತಿ ನೋಡಿದರೆ ಭಯ ಹುಟ್ಟಿಸುವಂತಿದೆ. ಕಟ್ಟಡದ ಚಾವಣಿ ಯಾವಾಗ ಯಾರ ಮೇಲಾದರೂ ಬೀಳಬಹುದು. ಈ ಬಗ್ಗೆ ಅಧಿಕಾರಿಗಳು ಮೌನ ವಹಿಸಿರುವುದೇಕೆ? ಸಮಸ್ಯೆಗಳನ್ನು ಬಗೆಹರಿಸಬೇಕಾದ ತಾಪಂ ಕಟ್ಟಡವೇ ಕುಸಿಯುವಂತಿರುವಾಗ ಜನರಸಮಸ್ಯೆ ಕೇಳುತ್ತಾರೆಯೇ? ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿವೆ. ತಾ.ಪಂ. ಕಾರ್ಯಾಲಯ ಐದಾರು ವರ್ಷಗಳಿಂದಚುನಾಯಿತ ಸದಸ್ಯರು ಇಲ್ಲದೆ ಬಿಕೋ ಎನ್ನುತ್ತಿದೆ.”

-ಅರ್ಜುನಹಳ್ಳಿ ರಾಮ್ ಪ್ರಸಾದ್, ಅಧ್ಯಕ್ಷರು, ತಾಲ್ಲೂಕು ಯುವ ರೈತ ವೇದಿಕೆ 

Tags:
error: Content is protected !!