Mysore
23
overcast clouds

Social Media

ಭಾನುವಾರ, 30 ಆಗಸ್ಟ್ 2026
Light
Dark

ಅಸಂಗತ ಜಾತ್ರೆಯಲ್ಲಿ ಅಪರೂಪದ ಯಾತ್ರಿಕ

ರಾಮನಾಥ ಎಸ್.

ಹೆಚ್.ಕೆ.ದ್ವಾರಕಾನಾಥ್, ಕರ್ನಾಟಕ ರಂಗಭೂಮಿಗೆ ರಂಗಭೀಷ್ಮ ಬಿ.ವಿ.ಕಾರಂತರಿತ್ತ ಕೊಡುಗೆ.

ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿಯಲ್ಲಿ ಓದುತ್ತಾ, ಬದುಕಿಗಾಗಿ ಬವಣೆಪಡುತ್ತಾ, ಕುಂಚ ಹಿಡಿದು ಮುಂದಿನ ಹಾದಿಯ ಹುಡುಕಾಟದಲ್ಲಿದ್ದ ಹುಡುಗನಿಗೆ ಬೆನ್ನು ತಟ್ಟಿ ಕೈಹಿಡಿದು ರಂಗಾಯಣಕ್ಕೆ ಕರೆತಂದು, ಕರ್ನಾಟಕ ರಂಗಭೂಮಿಯಲ್ಲಿ ನೆಲೆ ನಿಲ್ಲಿಸಿದವರು ಬಿ.ವಿ.ಕಾರಂತರು. ಇವರ ತುಂಬು ಹುಡುಗ ದ್ವಾರಕಿ.

ದ್ವಾರಕಾನಾಥ್ ಸಾಮಾನ್ಯವಾಗಿ ಎಲ್ಲ ಚಿತ್ರಕಲಾವಿದರಂತೆ ಒಂಟಿಯಾಗಿ, ಒಬ್ಬಂಟಿಯಾಗಿ ಬದುಕುವವರಲ್ಲ. ಅವರ ಸೃಜನಶೀಲ ಬದುಕು ಒಂದು ರಂಗ ಸಮುದಾಯದೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ ಈ ಚಿತ್ರಕಾರನ ವಿನ್ಯಾಸದ ಹಂಬಲದ ಬದುಕಿಗೆ ಒಂದು ಹೊಸ ಆಯಾಮ ದಕ್ಕಿದೆ. ದ್ವಾರಕಾನಾಥ್ ಅವರ ಮೂಲ ಪ್ರವೃತ್ತಿ ಚಿತ್ರಕಲೆಯಾದರೂ ಅವರು ರಂಗಭೂಮಿಗೆ ಒಲಿದವರು. ಆ ಮೂಲಕ ಬದುಕನ್ನು ನೋಡುತ್ತಾ ತಮ್ಮೊಳಗನ್ನು ತಾವೇ ಕಂಡುಕೊಳ್ಳುತ್ತಿರುವವರು. ರಂಗಭೂಮಿ ಒಂದು ಸಂಯುಕ್ತ ಕಲೆ. ಅದಕ್ಕೆ ಸಾಹಿತ್ಯ, ಸಂಗೀತ, ಚಿತ್ರಕಲೆ, ಅಭಿನಯ… ಎಲ್ಲವೂ ಬೇಕು. ಅಂತೆಯೇ ದ್ವಾರಕಾನಾಥ್ ಹೇಳುತ್ತಾರೆ ‘ಚಿತ್ರಕಲೆಯೂ ಒಂದು ರೀತಿಯಲ್ಲಿ ಸಂಯುಕ್ತ ಕಲೆಯೇ. ಲೈನ್, ಫಾರಂ, ಟೆಕ್ಸ  ರ್, ಸ್ಪೇಸ್… ವಿನ್ಯಾಸವೆಂದರೆ ಕೂಡಿಸುತ್ತಾ ಹೋಗುವುದಲ್ಲ. ಕಳೆಯುತ್ತಾ ಹೋಗುವುದು. ಬೇಡದ್ದನ್ನು ತೆಗೆಯುತ್ತಾ ಹೋಗುವುದು.’

ಇವರ ರಂಗವಿನ್ಯಾಸವು ಈ ಪರಿಯದ್ದೆ. ರಂಗಕಲೆ ಒಂದು ಸಂಯುಕ್ತ ಕಲೆಯಾದ್ದರಿಂದಲೇ ಏನೋ ದ್ವಾರಕಾನಾಥ್ ಚಿತ್ರಕಲೆಯೊಂದಿಗೆ ರಂಗಸಮುದಾಯದೊಂದಿಗೆ ಬದುಕತ್ತಲೇ ಹಲವು ಕಲಾಪ್ರಕಾರಗಳಲ್ಲಿ ಆಸಕ್ತಿ ಬೆಳೆಸಿಕೊಂಡವರು. ನಟನೆ, ನಾಟಕ ನಿರ್ದೇಶನ, ಸಾಹಿತ್ಯ ಎಲ್ಲವೂ ಒಂದು ರೀತಿಯಲ್ಲಿ ವಿನ್ಯಾಸವೇ ಎಂದು ಭಾವಿಸಿ ಎಲ್ಲದರಲ್ಲೂ ಪ್ರಯೋಗ ಮಾಡಿದವರು. ಆ ಮೂಲಕ ತಮ್ಮ ವಿನ್ಯಾಸಕ ವ್ಯಕ್ತಿತ್ವದ ಪರಿಽಯನ್ನು ದಿನದಿಂದ ದಿನಕ್ಕೆ ವಿಸ್ತರಿಸಿಕೊಂಡವರು. ರಂಗಾಯಣದಲ್ಲಿ ಸೇವೆ ಸಲ್ಲಿಸುತ್ತಾ ರಂಗಾಯಣದ ಸರಿಸುಮಾರು ಎಲ್ಲ ನಾಟಕಗಳಿಗೂ ವಿನ್ಯಾಸಕರಾಗಿ ದುಡಿಯುತ್ತಲೇ ಪ್ರಸ್ತುತದ ೩೩ ವರ್ಷಗಳಲ್ಲಿ ಕನ್ನಡ ರಂಗಭೂಮಿ ಕಂಡ ಅಪರೂಪದ ವಿಶಿಷ್ಟ ವಿನ್ಯಾಸಕ ಹೆಚ್.ಕೆ.ದ್ವಾರಕಾನಾಥ್. ಇವರ ರಂಗವಿನ್ಯಾಸ ಈ ನೆಲದ ಶುದ್ಧ ಸಂಸ್ಕ ತಿಯ ಅನಾವರಣ ಮಾಡುವಂತಹುಗಳು. ದೇಶ ವಿದೇಶದ ನಿರ್ದೇಶಕರುಗಳಲ್ಲದೆ ಸರಿ ಸುಮಾರು ಕರ್ನಾಟಕದ ಎಲ್ಲ ಪ್ರಮುಖ ರಂಗತಂಡಗಳು, ರಂಗನಿರ್ದೇಶಕರಿಗೆ ರಂಗ ವಿನ್ಯಾಸ ರೂಪಿಸಿಕೊಟ್ಟಿರುವ ದ್ವಾರಕಾನಾಥ್ ಅವರು ವಿನ್ಯಾಸ ಮಾಡಿರುವ ನಾಟಕಗಳ ಸಂಖ್ಯೆ ಅಪಾರ ಅಸಂಖ್ಯ.

ದ್ವಾರಕಾನಾಥ್ ಹೇಳುವುದು ‘ಯಾವುದೇ ನಾಟಕದ ವಿನ್ಯಾಸ ಮಾಡುವವರು ನಟರು. ವಿನ್ಯಾಸಕರಲ್ಲ. ವಿನ್ಯಾಸಕ್ಕೊಂದು ಆವರಣ ಸೃಷ್ಟಿಸಿಕೊಡುವುದಷ್ಟೇ ವಿನ್ಯಾಸಕನ ಕೆಲಸ’. ಬಿ.ಎಫ್.ಎ., ಎಂ.ಎಫ್.ಎ. ಪದವಿಗಳು ಹಲವು ಹತ್ತು ಪುರಸ್ಕಾರಗಳ ಭಾರವನ್ನು ಮನೆಯ ಪೆಟ್ಟಿಗೆಯಲ್ಲಿಟ್ಟು ಮರೆತಿರುವ ದ್ವಾರಕಾನಾಥ್ ಈ ಜಗತ್ತನ್ನು, ಬದುಕುತ್ತಿರುವ ಬದುಕನ್ನು, ಆ ಬದುಕಿನೊಳಗಿರುವ ಮನುಷ್ಯರನ್ನು ಕಾಣುವುದು ರಂಗಭೂಮಿಯ ಕಣ್ಣುಗಳ ಮೂಲಕ. ಎಲ್ಲ ಮನುಷ್ಯ ಸಹಜ ಭಾವನೆಗಳನ್ನು ಅದರ ಶುದ್ಧ ರೂಪದಲ್ಲಿ ಅಭಿವ್ಯಕ್ತಿಸಬಲ್ಲ, ರಂಗದ ಬಯಲಲ್ಲಿ ಬಯಲಾಗಿ ನಿಲ್ಲುವ ನಟ ವರ್ಗದ ಮೂಲಕ. ಹೀಗಾಗಿಯೇ ಕಳೆದ ೩೫ ವರ್ಷಗಳಿಂದ ರಂಗಮಂಚವೇ ಈ ಚಿತ್ರಕಲಾವಿದನ ಕ್ಯಾನ್ವಾಸ್ ಆಗಿದೆ. ದ್ವಾರಕಾನಾಥ್ ಎಂದು ಕರೆಯಲ್ಪಡುವ ಈ ವಾಮನನೊಳಗೊಂದು ಬ್ರಹ್ಮಾಂಡವಿದೆ. ಅದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಅವರ ಸೃಜನಶೀಲ ಕಾಯಕವನ್ನು ಕಣ್ಣಿಟ್ಟು, ಮನಸ್ಸಿಟ್ಟು ಗಮನಿಸಿದವರಿಗೆ ಮಾತ್ರ ಅನುಭವ ವೇದ್ಯವಾಗುವಂತಹದ್ದು.

ಬದುಕಿನ ಅಸಂಗತಗಳನ್ನು ತಮ್ಮ ಮೌನದ ಗರ್ಭದಲ್ಲಿ ಮುಚ್ಚಿಡುತ್ತಾ, ಆಗಾಗ ಆವರಿಸಿಕೊಳ್ಳುವ ಖಾಲಿತನವನ್ನು ಆಗಾಗಲೇ ಕೊಡವಿಕೊಳ್ಳುತ್ತಾ ಅಸಂಗತ ಯಾತ್ರೆಯ ಅಪರೂಪದ ಯಾತ್ರಿಕನಾಗಿ ಕಂಡದ್ದನ್ನು, ಕೇಳಿದ್ದನ್ನು, ಅನುಭವಕ್ಕೆ ದಕ್ಕಿದ್ದನ್ನು ಯಾವ ಭಿಡೆ ಇಲ್ಲದೆ ನಿಷ್ಠುರವಾಗಿ ವ್ಯಕ್ತಪಡಿಸುತ್ತಾ… ಮಾತಿನಲ್ಲಿ ಅಭಿವ್ಯಕ್ತಿಸಲಾಗದ್ದನ್ನು ಚಿತ್ರಕಲೆಯಲ್ಲಿ ಅಭಿವ್ಯಕ್ತಿಸುತ್ತಾ ಅಪರೂಪದ ಯಾತ್ರಿಕನಾಗಿಯೇ ನಿಜ ಮನುಷ್ಯನಾಗಲು ತುಡಿಯುತ್ತಾರೆ ನಮ್ಮ ಹೆಚ್.ಕೆ.ದ್ವಾರಕಾನಾಥ್.

” ರಂಗಾಯಣದ ಸರಿಸುಮಾರು ಎಲ್ಲ ನಾಟಕಗಳಿಗೂ ವಿನ್ಯಾಸಕರಾಗಿ ದುಡಿಯುತ್ತಲೇ ಪ್ರಸ್ತುತದ ೩೩ ವರ್ಷಗಳಲ್ಲಿ ಕನ್ನಡ ರಂಗಭೂಮಿ ಕಂಡ ಅಪರೂಪದ ವಿಶಿಷ್ಟ ವಿನ್ಯಾಸಕ ಹೆಚ್.ಕೆ.ದ್ವಾರಕಾನಾಥ್”

 

 

Tags:
error: Content is protected !!