ಎಚ್.ಎಸ್.ದಿನೇಶ್‌ಕುಮಾರ್
ಅಪರಾಧ ಪ್ರಕರಣಗಳ ಪತ್ತೆಗೆ ನಗರ ಪೊಲೀಸರ ಕಾರ್ಯ ತಂತ್ರ; ಆಪ್ ವ್ಯಾಪ್ತಿಯಲ್ಲಿ ೩೦,೦೦೦ ಸಿಸಿಟಿವಿಗಳು; ಸಿಸಿಟಿವಿ ಸ್ಥಿತಿ ಬಗ್ಗೆಯೂ ಮಾಲೀಕರಿಗೆ ಮಾಹಿತಿ
ಮೈಸೂರು: ಅಪರಾಧ ಪ್ರಕರಣಗಳನ್ನು ಭೇದಿಸಲು ಸಹಾಯಕವಾಗಬಹುದಾದ ಹೊಸದೊಂದು ವಿಧಾನವನ್ನು ನಗರ ಪೊಲೀಸರು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ.
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವವರನ್ನು ಶೀಘ್ರವಾಗಿ ಪತ್ತೆ ಮಾಡುವ ಉದ್ದೇಶದಿಂದ ನಗರ ಪೊಲೀಸರು, ಸಾರ್ವಜನಿಕರು ತಮ್ಮ ಸುರಕ್ಷತೆಗೆ ಮನೆಗಳಲ್ಲಿ ಅಳವಡಿಸಿಕೊಂಡಿರುವ ಸಿಸಿಟಿವಿಗಳನ್ನು ಇಲಾಖೆಯ ಆಪ್‌ಗೆ ಸೇರ್ಪಡೆಗೊಳಿಸಿದ್ದಾರೆ. ಇದೀಗ ಪೊಲೀಸರು ನಗರದಾದ್ಯಂತ ೩೦ ಸಾವಿರ ಸಿಸಿಟಿವಿಗಳನ್ನು ಗುರುತಿಸಿದ್ದಾರೆ. ಮನೆಗಳ್ಳತನ ಹಾಗೂ ಇನ್ನಿತರ ಪ್ರಮುಖ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ನಗರ ಪೊಲೀಸ್ ಇಲಾಖೆ ಹಲವು ನೂತನ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇದರಲ್ಲಿ ಸಿಸಿಟಿವಿ ಗುರುತಿಸುವ ಕಾರ್ಯಕ್ರಮ ಕೂಡ ಒಂದು. ಸುರಕ್ಷತೆ ಎಂಬುದು ಕೇವಲ ನಗರದ ಹೃದಯ ಭಾಗಕ್ಕೆ ಸೀಮಿತವಾಗಬಾರದು ಎಂಬ ಉದ್ದೇಶ ಹೊಂದಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ಅಪರಾಧ ತಡೆಗೆ ಇಲಾಖೆಯ ಕೆಲಸ ಕಾರ್ಯಗಳಲ್ಲಿ ಜನರೂ ಕೈಜೋಡಿಸುವಂತೆ ಪ್ರೇರೇಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಇಂದು ನಗರದ ಹೃದಯಭಾಗ ಸೇರಿದಂತೆ ವಿವಿಧ ಬಡಾವಣೆಗಳ ಪ್ರಮುಖ ರಸ್ತೆಗಳಲ್ಲಿ ಕನಿಷ್ಠ ನಾಲ್ಕರಿಂದ ಐದು ಸಿಸಿಟಿವಿಗಳನ್ನು ಮನೆಗಳ ಮುಂದೆ ಕಾಣಬಹುದು. ಮನೆಗೆ ಹೋಗುವವರು ಅಥವಾ ಮನೆಯ ಮುಂದಿನ ರಸ್ತೆಯಲ್ಲಿ ಹಾದು ಹೋಗುವವರ ಚಲನವಲನಗಳ ಸಂಪೂರ್ಣ ವಿವರಗಳು ಸಿಸಿಟಿವಿಯಲ್ಲಿ ದಾಖಲಾಗುತ್ತವೆ.
ಇದು ಆಯಾ ಮನೆಗೆ ಮಾತ್ರ ಸೀಮಿತವಾಗುತ್ತದೆ. ಇದನ್ನು ಅರಿತ ಪೊಲೀಸ್ ಆಯುಕ್ತರು, ಅಪರಾಧ ತಡೆಗೆ ಇವುಗಳನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಅದರಂತೆ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಷ್ಟು ಮನೆ, ಮಳಿಗೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಎಂಬುದರ ಸರ್ವೇ ನಡೆಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ವಿವಿಧ ಬಡಾವಣೆಗಳಲ್ಲಿ ಪರಿಶೀಲನಾ ಕಾರ್ಯ ಆರಂಭಿಸಿದ್ದಾರೆ. ಮನೆಯ ಮುಂದೆ ಸಿಸಿಟಿವಿ ಅಳವಡಿಸಿರುವುದನ್ನು ಗುರುತಿಸುವ ಪೊಲೀಸರು, ಮನೆಯ ಮಾಲೀಕರೊಂದಿಗೆ ಚರ್ಚಿಸಲು ಮುಂದಾಗಿದ್ದಾರೆ.ನೀವು ಅಳವಡಿಸಿರುವ ಸಿಸಿಟಿವಿ ನಿಮ್ಮ ಉಪಯೋಗಕ್ಕೆ ಮಾತ್ರ ಸೀಮಿತವಾಗಬಾರದು. ಕೆಲ ಸಂದರ್ಭದಲ್ಲಿ ಅಪರಾಽಗಳ ಚಲನವಲನ ಕಂಡು ಹಿಡಿಯಲು ನಿಮ್ಮ ಸಿಸಿಟಿವಿ ನೆರವಾಗಬಹುದು, ಹೀಗಾಗಿ ನಿಮ್ಮ ಸಿಸಿಟಿವಿಯನ್ನು ಇಲಾಖೆಯ ಆಪ್‌ಗೆ ದಾಖಲು ಮಾಡಿಕೊಳ್ಳಲಾಗುವುದು ಎಂದು ಮನವರಿಕೆ ಮಾಡಿಕೊಡುವ ಕೆಲಸದಲ್ಲಿ ನಿರತರಾಗಿದ್ದಾರೆ.ಅದರಂತೆ ನಗರದ ಹೃದಯಭಾಗ ಸೇರಿದಂತೆ ವಿವಿಧ ಬಡಾವಣೆಗಳ ವ್ಯಾಪ್ತಿಯಲ್ಲಿ ಬರೋಬ್ಬರಿ ೩೦ ಸಾವಿರ ಮನೆ ಹಾಗೂ ಮಳಿಗೆಗಳ ಮಾಲೀಕರ ಒಪ್ಪಿಗೆ ಪಡೆದು ಸಿಸಿಟಿವಿಗಳನ್ನು ಇಲಾಖೆಯ ಆಪ್‌ಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈ ಕಾರ್ಯ ಮುಂದುವರಿದಿದ್ದು, ವರ್ಷಾಂತ್ಯದ ಒಳಗೆ ೫೦ ಸಾವಿರ ಸಿಸಿಟಿವಿಗಳನ್ನು ಆಪ್‌ಗೆ ಸೇರ್ಪಡೆ ಮಾಡಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಸಿಸಿಟಿವಿಗಳು ಕೆಟ್ಟುಹೋಗಿ ದ್ದಲ್ಲಿ. ಅವುಗಳ ದುರಸ್ತಿಗೆ ಪೊಲೀಸರು ಮನೆಯ ಮಾಲೀಕರಿಗೆ ನೆರವು ನೀಡಲಿದ್ದಾರೆ. ಒಟ್ಟಾರೆ, ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಅಪರಾಧ ಪ್ರಕರಣಗಳ ತಡೆಗೆ ಪೊಲೀಸ್ ಇಲಾಖೆ ಮುಂದಾಗಿರುವುದು ಸ್ವಾಗತಾರ್ಹ ಎಂಬುದು ಸಾರ್ವಜನಿಕರ ಅಭಿಪ್ರಾಯ.
೬ ತಿಂಗಳಿಗೊಮ್ಮ ಪರಿಶೀಲನೆ: ಪೊಲೀಸ್ ಇಲಾಖೆಯ ಆಪ್‌ಗೆ ಸೇರ್ಪಡೆಗೊಂಡಿರುವ ಸಿಸಿಟಿವಿಗಳು ಸಮರ್ಪಕವಾಗಿಕೆಲಸ ಮಾಡುತ್ತಿವೆಯೇ? ಅಥವಾ ಕೆಟ್ಟಿವೆಯೇ? ಎಂಬುದರ ಬಗ್ಗೆಆಯಾ ಬೀಟ್ ಪೊಲೀಸರು ೬ ತಿಂಗಳಿಗೆ ಒಮ್ಮೆ ಪರಿಶೀಲಿಸಲಿದ್ದಾರೆ.
” ಅಪರಾಧ ಪ್ರಕರಣಗಳನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ಈ ವಿಧಾನವನ್ನು ಆರಂಭಿಸ ಲಾಗಿದೆ. ಕೇವಲ ಪೊಲೀಸರಿಂದಲೇ ಅಪರಾಧ ಪ್ರಕರಣಗಳನ್ನು ತಡೆ ಗಟ್ಟಲು ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ಈ ನಿಟ್ಟಿನಲ್ಲಿ ಜನರು ಪೊಲೀಸರೊಂದಿಗೆ ಸಹಕರಿಸಬೇಕು.”
-ಸೀಮಾ ಲಾಟ್ಕರ್, ಆಯುಕ್ತರು, ನಗರ ಪೊಲೀಸ್



