ಕೆ.ಬಿ.ರಮೇಶನಾಯಕ
ಮೈಸೂರು: ೨೦೨೯ರ ಲೋಕಸಭಾ ಚುನಾವಣೆಗೂ ಮುನ್ನ ಕ್ಷೇತ್ರಗಳ ಪುನರ್ ವಿಂಗಡಣೆ, ಮಹಿಳಾ ಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದ್ದು, ಪ್ರಸ್ತುತ ಪ್ರಕಟವಾಗಿರುವ ಜಿಲ್ಲೆಯ ಕರಡು ಮತದಾರರ ಪಟ್ಟಿಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಾಗಿರುವುದು ಮುಂದೆ ಸಾಕಷ್ಟು ಬದಲಾವಣೆಯ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಸದ್ಯದ ಮತದಾರರ ಪಟ್ಟಿಯ ಅಂಕಿ ಅಂಶಗಳ ಪ್ರಕಾರ ಅತಿ ಹೆಚ್ಚು ಮಹಿಳಾ ಮತದಾರರು ಇರುವ ವಿಧಾನಸಭಾ ಕ್ಷೇತ್ರಗಳನ್ನು ಪರಿಗಣಿಸಿದರೆ, ಐದು ಕ್ಷೇತ್ರಗಳು ಮಹಿಳಾ ಮೀಸಲು ಕ್ಷೇತ್ರಗಳಾಗಿ ಬದಲಾಗುವ ಸಾಧ್ಯತೆ ಇದೆ. ಸ್ವಾತಂತ್ರ್ಯಾ ನಂತರದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯಡಿ ಅವಕಾಶ ಕಲ್ಪಿಸಿರುವುದನ್ನು ಬಿಟ್ಟರೆ ವಿಧಾನ ಸಭಾ, ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಅನ್ವಯವಾಗಿಲ್ಲ.
ರಾಜ್ಯದಲ್ಲಿ ಆಯ್ಕೆಯಾಗುತ್ತಾ ಬಂದಿರುವ ಮಹಿಳೆಯರು, ಸಾಮಾನ್ಯ ಹಾಗೂಮೀಸಲು ಕ್ಷೇತ್ರಗಳಲ್ಲಿ ಟಿಕೆಟ್ ಪಡೆದುಗೆಲ್ಲುತ್ತಾ ಬಂದಿರುವುದರ ಹೊರತಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಂತೆ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ಇಲ್ಲ. ಹಿಂದೆ ಯಶೋಧರ ದಾಸಪ್ಪ, ಕಬ್ಬಳ್ಳಿ ಎಸ್.ನಾಗರತ್ನಮ್ಮ, ಚಂದ್ರಪ್ರಭಾ ಅರಸು, ಪರಿಮಳ ನಾಗಪ್ಪ, ಮುಕ್ತರುನ್ನೀಸಾ ಬೇಗಂ, ಆಯ್ಕೆಯಾಗಿದ್ದರು. ಅವರಲ್ಲದೆ ಮೋಟಮ್ಮ, ಸುಮಾ ವಸಂತ್, ಸೌಮ್ಯ ರೆಡ್ಡಿಯು ಕೂಡ ಶಾಸಕರಾಗಿದ್ದರು. ಪ್ರಸ್ತುತದಲ್ಲಿ ಶೋಭಾ ಕರಂದ್ಲಾಜೆ, ಭಾರತಿ ಶೆಟ್ಟಿ, ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ನಯನ ಮೋಟಮ್ಮ, ಶಶಿಕಲಾ ಜೊಲ್ಲೆ ಮೊದಲಾದ ನಾಯಕಿಯರು ಆಯ್ಕೆಯಾಗಿದ್ದಾರೆ. ಈಗಲೂ ಕೆಲವು ಸಾಮಾನ್ಯ, ಮಹಿಳಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ, ಅದು ಶೇ.೩೩ರಷ್ಟು ಮೀಸಲಾತಿ ಜಾರಿಗೆ ತರಲು ಸಾಧ್ಯವಾಗಿಲ್ಲ.
ಹೀಗಾಗಿಯೇ, ಕೇಂದ್ರ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲು ಕಸರತ್ತು ನಡೆಸುತ್ತಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಕೇಂದ್ರ ಚುನಾವಣಾ ಆಯೋಗವು ನಡೆಸಿದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ಮುಗಿಸಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಮೈಸೂರು ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿರುವುದು ಗಮನಾರ್ಹವಾಗಿದೆ.
ನರಸಿಂಹರಾಜ ಕ್ಷೇತ್ರದಲ್ಲೇ ಹೆಚ್ಚು: ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರಗಳ ಪೈಕಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮತದಾರರು ಹೆಚ್ಚಾಗಿರುವ ನರಸಿಂಹರಾಜ ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಾಗಿದ್ದಾರೆ. ನಂತರದಲ್ಲಿ ಕೃಷ್ಣರಾಜ, ಚಾಮರಾಜ, ಚಾಮುಂಡೇಶ್ವರಿ ಕ್ಷೇತ್ರಗಳ ಸಿಂಹಪಾಲು ಪಡೆದುಕೊಂಡಿರುವುದರಿಂದ ಮಹಿಳಾ ಮೀಸಲಾತಿ ಜಾರಿಯಾಗುವ ವೇಳೆ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೃಹತ್ ಮೈಸೂರು ನಗರಪಾಲಿಕೆ ರಚನೆಯ ಮೇಲೂ ಪರಿಣಾಮ: ಮೈಸೂರು ನಗರ ಪಾಲಿಕೆಯನ್ನು ಬೃಹತ್ ಮೈಸೂರು ನಗರ ಪಾಲಿಕೆಯನ್ನಾಗಿ ವಿಸ್ತರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದರೂ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ೨೦೨೫ರ ಜನಗಣತಿ ಪ್ರಕಾರ ಮೈಸೂರು ನಗರದ ಜನಸಂಖ್ಯೆಯನ್ನು ನೋಡಿಕೊಂಡು ರಚನೆ ಮಾಡುವ ಕುರಿತು ಮರು ಪರಿಶೀಲಿಸುವಂತೆ ಲೋಕ ಭವನದಿಂದ ವಾಪಸ್ ಕಳುಹಿಸಲಾಗಿದೆ.
ಹೀಗಾಗಿಯೇ, ಸರ್ಕಾರ ಸಾರ್ವಜನಿಕರಿಂದ ಆಕ್ಷೇಪಣೆ ಪಡೆದು ಮೂರು ತಿಂಗಳುಗಳಾದರೂ ಅಧಿಸೂಚನೆ ಹೊರಡಿಸಲು ಸಾಧ್ಯವಾಗಲಿಲ್ಲ. ಈಗ ಕರಡು ಮತದಾರರ ಪಟ್ಟಿಯನ್ನು ನೋಡಿದರೆ ನಗರಕ್ಕೆ ಹೊಂದಿಕೊಂಡಂತೆ ಇರುವ ಚಾಮುಂಡೇಶ್ವರಿಕ್ಷೇತ್ರವನ್ನು ಸೇರಿಸಿಕೊಂಡರೂ ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಕ್ಷೇತ್ರಗಳಲ್ಲಿ ೧೦ಲಕ್ಷ ಮತದಾರರು ಇಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ೨,೮೧,೫೯೬, ಕೃಷ್ಣರಾಜದಲ್ಲಿ ೧,೭೬,೮೩೧, ಚಾಮರಾಜದಲ್ಲಿ ೧೭೮೧೯೨, ನರಸಿಂಹರಾಜದಲ್ಲಿ ೨,೨೮,೫೪೩ ಮತದಾರರು ಇದ್ದಾರೆ. ಗ್ರೇಟರ್ ಮೈಸೂರು ರಚನೆಗೆ ೧೫ ಲಕ್ಷಕ್ಕಿಂತ ಹೆಚ್ಚು ಹಾಗೂ ಬೃಹತ್ ನಗರಪಾಲಿಕೆ ರಚನೆ ಮಾಡಲು ಕನಿಷ್ಠ ೨೦ ಲಕ್ಷ ಜನಸಂಖ್ಯೆ ಹೊಂದಿರಬೇಕು. ಆದರೆ, ಪ್ರಸ್ತುತ ಕರಡುಪಟ್ಟಿಯಲ್ಲಿನ ಮತದಾರರು, ಜನಸಂಖ್ಯೆಯ ಅಂದಾಜಿನ ಪ್ರಕಾರ ಬೃಹತ್ ಪಾಲಿಕೆ ರಚನೆಯ ಮೇಲೂ ಪರಿಣಾಮ ಬೀರುವುದು ಗ್ಯಾರಂಟಿಯಾಗಿದೆ.





