ಮಂಡ್ಯ: ವೃದ್ಧ ಭೀಕ್ಷುಕಿಯೊಬ್ಬರು ತಾನು ಬೇಡಿ ಸಂಗ್ರಹಿಸಿಟ್ಟಿದ್ದ ಸಂಪತ್ತು ಇದೀಗ ಪರರ ಪಾಲಾಗಿರುವ ಸಂಗತಿ ಜನರನ್ನು ಅಚ್ಚರಿಗೊಳಿಸಿದೆ.
ಮಂಡ್ಯ ನಗರದ ಸಾದತ್ ನಗರದ ನಿವಾಸಿ ಹೂರ್ ಎಂಬ ಮುಸ್ಲಿಂ ಮಹಿಳೆ ನಗರದೆಲ್ಲಡೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ಸುಮಾರು ೭೦ ವರ್ಷದ ಈ ವೃದ್ಧೆಗೆ ತೊನ್ನು ದೇಹವಿಡೀ ಆವರಿಸಿತ್ತು. ಒಬ್ಬಂಟಿಯಾಗಿ ಮನೆಯಲ್ಲಿದ್ದ ಇವರು ಎರಡು ದಿನದಿಂದ ಮನೆಯಿಂದ ಹೊರಬಂದಿರಲಿಲ್ಲ. ಕುತೂಹಲಗೊಂಡ ಅಕ್ಕಪಕ್ಕದವರು ಬಾಗಿಲು ತೆರೆದು ನೋಡಲಾಗಿ ಆ ವೃದ್ಧ ಮಹಿಳೆ ಹೂರ್ ಮೃತಪಟ್ಟಿದ್ದು ಕಂಡುಬಂದಿದೆ. ಜೊತೆಗೇ ಮನೆಯೊಳಗೆ ಕಾಲಿರಿಸಿದವರಿಗೆ ಅಲ್ಲೆಲ್ಲ ರಾಶಿ ರಾಶಿ ಇದ್ದ ಒಂದು ಎರಡು, ಐದು, ಹತ್ತು ರೂಗಳ ಕಾಯಿನ್‌ಗಳು, ಹತ್ತು, ಇಪ್ಪತ್ತು ಐವತ್ತು ರೂ.ಗಳ ನೋಟುಗಳ ಎರಚಾಡಿದ್ದನ್ನು ಕಂಡವರು ಮೂಕವಿಸ್ಮಿತರಾದರು.
ಮತ್ತಷ್ಟು ಹುಡುಕಾಡಿದಾಗ ಅಲ್ಲಲ್ಲಿ ಚೀಲಗಳಲ್ಲೂ ನೋಟುಗಳನ್ನು ತುಂಬಿಟ್ಟಿರುವುದು ಕಂಡುಬಂದಿತು. ಕೂಡಲೇ ಸ್ಥಳೀಯರು ಮಸೀದಿ ಮುಖಂಡರಿಗೆ ತಿಳಿಸಲಾಗಿ, ಸ್ಥಳಕ್ಕಾಗಮಿಸಿದ ಮುಖಂಡರು ಶವವನ್ನು ದಫನ್ ಮಾಡಿದ ಬಳಿಕ ಹಣ ಎಣಿಕೆ ಕಾರ್ಯ ಕೈಗೊಂಡಿದ್ದಾರೆ. ಎಣಿಕೆಯಲ್ಲಿ ಸುಮಾರು ೧೫ ರಿಂದ ೨೦ ಲಕ್ಷ ಸಂಗ್ರಹವಿರಬಹುದು ಎಂದು ಅಂದಾಜಿಸಲಾಗಿದೆ. ಜೀವನ ಪೂರ್ತಿ ಭಿಕ್ಷೆ ಬೇಡಿ ಕೂಡಿಟ್ಟ ಈ ವೃದ್ಧೆಗೆ ನಾನು ಮುಂದೊಂದು ದಿನ ಸಾಯುತ್ತೇನೆಂದು ಎನಿಸಿರಲೇ ಇಲ್ಲ ಎನಿಸುತ್ತದೆ. ನಾನು ಎಂದೆಂದಿಗೂ ಇದ್ದೇ ಇರುತ್ತೇನೆಂಬ ಅದಮ್ಯ ವಿಶ್ವಾಸ ಈ ವೃದ್ಧೆಗಿದ್ದಿರಬಹುದು. ಬಹುಶಃ ಅದಕ್ಕಾಗೇ ತಾನು ಜನರಿಂದ ಬೇಡಿ ತಂದಿದ್ದನ್ನೆಲ್ಲ ಮನೆಯಲ್ಲಿ ರಾಶಿ ರಾಶಿ ಮಾಡಿ ಇರಿಸಿದ್ದು, ಆಯಮ್ಮ ಸತ್ತ ಬಳಿಕ ಸಂಪತ್ತು ಎರಚಾಡಿದೆ! ತಾನೂ ತಿನ್ನದೆ, ಪರರಿಗೂ ನೀಡದ ಈ ಮನುಷ್ಯನ ಆಸೆ ದುರಾಸೆಗೆ ಇದೊಂದು ನಿದರ್ಶನವಾಗಿದೆ.




