Mysore
27
scattered clouds

Social Media

ಶುಕ್ರವಾರ, 21 ಆಗಸ್ಟ್ 2026
Light
Dark

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ; 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ

ಮೊದಲಬಾರಿಗೆ ರಾಷ್ಟ್ರರಾಜಧಾನಿಯಿಂದ ಹೊರಗೆ ಆಯೋಜನೆ

 

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಮೊದಲ ಬಾರಿಗೆ ನವದೆಹಲಿಯಿಂದ ಹೊರಗೆ, ಗುಜರಾತ್‌ನ ನಡಿಯಾದ್ ನಗರದಲ್ಲಿ ಸೆಪ್ಟೆಂಬರ್ ೨೨ ರಂದು ನಡೆಯಲಿದೆ. ಇದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮಸ್ಥಳ. ಈಗಾಗಲೇ ಪ್ರಶಸ್ತಿ ವಿಜೇತರಿಗೆ ಈ ಕುರಿತು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಅಧಿಕೃತ ಪತ್ರವ್ಯವಹಾರ ನಡೆಯುತ್ತಿದೆ ಎನ್ನುತ್ತಿವೆ ಮೂಲಗಳು.

೧೯೫೪ರಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಆರಂಭವಾದಾಗಿನಿಂದಲೂ, ಪ್ರಶಸ್ತಿ ಪ್ರದಾನ ಸಮಾರಂಭವು ಯಾವಾಗಲೂ ನವದೆಹಲಿಯ ವಿಜ್ಞಾನ ಭವನದಲ್ಲಿಯೇ ನಡೆಯುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಈ ಸಂಪ್ರದಾಯವನ್ನು ಮುರಿದು, ದೆಹಲಿಯಿಂದ ಹೊರಗೆ ಗುಜರಾತ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಗುಜರಾತಿನಲ್ಲಿ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದರ ಕುರಿತಂತೆ, ಹಿಂದೆ ಕೇಂದ್ರ ಆಡಳಿತ ಪಕ್ಷದಲ್ಲಿದ್ದು, ಈಗ ಹೊರಬಂದಿರುವ ಅಣ್ಣಾಮಲೈ ಅವರು ಟೀಕಿಸಿದ್ದು ಈಗ ವೈರಲ್ ಆಗಿದೆ. ಕೃತಕ ಬುದ್ಧಿಮತ್ತೆಯ ಕಂಪೆನಿಗಳನ್ನು ಅಲ್ಲಿಗೆ ಆಹ್ವಾನಿಲಾಗುತ್ತಿದೆ, ೨೦೩೦ರ ಕಾಮನ್ವೆಲ್ತ ಕ್ರೀಡಾಕೂಟವನ್ನು ಅಲ್ಲಿ ಆಯೋಜಿಸಲಾಗುತ್ತದೆ. ೨೦೩೦ರ ಪೊಲೀಸ್ ಕ್ರೀಡಾಕೂಟಕ್ಕೂ ಅ ತಾಣ, ೨೦೩೬ರ ಒಲಿಂಪಿಕ್ ಕ್ರೀಡಾಕೂಟವನ್ನು ಅಹಮದಾಬಾದ್‌ನಲ್ಲಿ ಆಯೋಜಿಸಬೇಕು ಎನ್ನುವ ಕೋರಿಕೆ, ಎಲ್ಲವೂ ಗುಜರಾತ್ ಕೇಂದ್ರಿತವಾಗುತ್ತಿದೆ ಎಂದು ಅವರು ಕಟುವಾಗಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿದ್ದರು.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಪ್ರದಾನ ಸಮಾರಂಭವನ್ನು ಅಲ್ಲಿ ಆಯೋಜಿಸುವುದರ ಹಿಂದೆ ಅಲ್ಲಿನ ಚಲನಚಿತ್ರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶ ಇದೆ ಎನ್ನಲಾಗುತ್ತಿದೆ. ಗುಜರಾತ್ ಸರ್ಕಾರವು ತನ್ನ ಹೊಸ ಚಲನಚಿತ್ರ ನೀತಿಯ ಅಡಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಚಲನಚಿತ್ರ ಪ್ರಶಸ್ತಿ ಸಮಾರಂಭಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಇದರ ಮುಂದುವರಿದ ಭಾಗವಾಗಿ ದೇಶದ ಅತ್ಯುನ್ನತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭಕ್ಕೂ ಈ ಬಾರಿ ಗುಜರಾತ್ ಆತಿಥ್ಯ ವಹಿಸುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಇದಕ್ಕೆ ಗುಜರಾತಿವನರೇ ಆದ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಅವರ ಒತ್ತಾಸೆ ಕೂಡಾ ಇದೆ ಎನ್ನಿ. ಪ್ರಶಸ್ತಿಪ್ರದಾನ ಸಮಾರಂಭ ನಡೆಯುತ್ತಿರುವುದು ೨೦೨೬ರಲ್ಲಿ.

ಸರಿಯಾಗಿ ನೂರು ವರ್ಷಗಳ ಹಿಂದಿನ ಮಾತು. ಮಹಾತ್ಮಾ ಗಾಂಧೀಜಿಯವರು ಸಿನಿಮಾ ಮಾಧ್ಯಮದ ವಿರುದ್ಧವಾಗಿದ್ದರು. ಅವರು ಸಿನಿಮಾವನ್ನು ‘ಪಾಪದ ತಂತ್ರಜ್ಞಾನ’ ಮತ್ತು ಯುವ ಮನಸ್ಸುಗಳನ್ನು ಹಾದಿತಪ್ಪಿಸುವ ಒಂದು ‘ಭ್ರಷ್ಟ ಪ್ರಭಾವ’ ಎಂದು ತೀವ್ರವಾಗಿ ವಿರೋಧಿಸಿದ್ದರು. ಸಿನಿಮಾ ಮಾಧ್ಯಮವು ಸಮಾಜದ ನೈತಿಕತೆಯನ್ನು ಕುಸಿಯುವಂತೆ ಮಾಡುತ್ತದೆ ಎಂಬುದು ಅವರ ದೃಢವಾದ ನಂಬಿಕೆಯಾಗಿತ್ತು

ಸಿನಿಮಾ ನೋಡುವುದು ದೇವರಿಂದ ನಮಗೆ ಸಿಕ್ಕಿರುವ ಅಮೂಲ್ಯವಾದ ಸಮಯ ಮತ್ತು ಹಣದ ಅನಗತ್ಯ ಪೋಲಾಗುತ್ತದೆ, ಚಿತ್ರಮಂದಿರಗಳಿಗೆ ಹೋಗುವುದರಿಂದ ಜನರು ಜೂಜು, ಮದ್ಯಪಾನ ಮತ್ತು ಇತರ ಕೆಟ್ಟ ಹವ್ಯಾಸಗಳಿಗೆ ಬಲಿಯಾಗುತ್ತಾರೆ. ಚಲನಚಿತ್ರಗಳು ಮನುಷ್ಯನ ಆತ್ಮಸಂಯಮ ಅಥವಾ ಬ್ರಹ್ಮಚರ್ಯದ ವ್ರತವನ್ನು ಮುರಿಯುವ ಪ್ರಚೋದನೆ ನೀಡುತ್ತವೆ ಎನ್ನುವುದು ಚಲನಚಿತ್ರಗಳನ್ನು ಅವರು ವಿರೋಽಸುವುದಕ್ಕೆ ಪ್ರಮುಖ ಕಾರಣಗಳಾಗಿದ್ದವು.

ಆದರೆ ಕಾಲ ಕಳೆದಂತೆ ಅವರ ವೀರೋಧವೂ ಬದಲಾಗುತ್ತಿತ್ತು. ೧೯೪೨ರಲ್ಲಿ ಆಸ್ಟ್ರೇಲಿಯಾದ ಪತ್ರಕರ್ತರೊಬ್ಬರು ಗಾಂಽಜಿಗೆ ‘ಸಿನಿಮಾ ಕೆಟ್ಟದ್ದೇ’ ಎಂದು ಕೇಳಿದಾಗ, ಅವರು ‘ಸಿನಿಮಾ ಎಂಬ ಮಾಧ್ಯಮವೇ ಕೆಟ್ಟದ್ದು’ ಎಂದು ಹೇಳಲಿಲ್ಲ; ‘ಸಿನಿಮಾಗಳು ಬಹಳ ಬಾರಿ ಕೆಟ್ಟವಾಗಿರುತ್ತವೆ’ ಎಂದರಂತೆ. ಸಿನಿಮಾವನ್ನು ಇಷ್ಟಪಡದ ಗಾಂಽಜಿ ೧೯೪೪ರಲ್ಲಿ ಅವರು ಮಿಶನ್ ಟು ಮಾಸ್ಕೋ ಮತ್ತು ರಾಮರಾಜ್ಯ ಈ ಎರಡು ಚಿತ್ರಗಳನ್ನು ನೋಡಿದ ದಾಖಲೆಗಳಿವೆ. ವಿಶೇಷವಾಗಿ ರಾಮರಾಜ್ಯ ನೋಡಿದ್ದು ಕುತೂಹಲಕರ-ರಾಮಾಯಣ ಅವರ ಮೆಚ್ಚಿನ ಆಧ್ಯಾತ್ಮಿಕ-ಸಾಂಸ್ಕೃತಿಕ ಪರಂಪರೆಯೊಂದಿಗಿನ ಸಂಬಂಧದ ಕಾರಣ.

೧೯೨೬ರಲ್ಲಿ ಅವರು ಯಂಗ್ ಇಂಡಿಯಾದಲ್ಲಿ ‘ಸಿನಿಮಾಕ್ಕೆ ಶೈಕ್ಷಣಿಕ ಮೌಲ್ಯ ಎಂಬ ವಾದವಿದ್ದರೂ ಅದನ್ನು ಒಪ್ಪಲು ಸಾಧ್ಯವಿಲ್ಲ, ಅದರ ಭ್ರಷ್ಟ ಪ್ರಭಾವವು ಪ್ರತಿದಿವೂ ಗೋಚರವಾಗುತ್ತದೆ’ ಎಂದಿದ್ದರು. ಮುಂದಿನ ವರ್ಷ, ಭಾರತೀಯ ಸಿನಿಮಾಟೊಗ್ರಾ- ಸಮಿತಿಯ ಪ್ರಶ್ನೆಗೆ ಉತ್ತರಿಸುತ್ತಾ. ‘ಸಿನಿಮಾ ಮಾಡಿರುವ ಮತ್ತು ಮಾಡುತ್ತಿರುವ ಕೆಡುಕು ಸ್ಪಷ್ಟವಾಗಿದೆ; ಅದು ಒಳ್ಳೆಯದೇನಾದರೂ ಮಾಡಿದ್ದರೆ, ಅದು ಇನ್ನೂ ಸಾಬೀತಾಗಬೇಕಿದೆ’ ಎಂದಿದ್ದರು. ಅಷ್ಟೇ ಅಲ್ಲ, ೧೯೨೯ರಲ್ಲಿ, ರಂಗೂನಿನಲ್ಲಿ ನಡೆದ ಕಾರ್ಮಿಕರ ಸಭೆಯಲ್ಲಿ ಗಾಂಽಜಿ ಸಿನಿಮಾ, ರಂಗಭೂಮಿ, ರೇಸ್‌ಕೋರ್ಸ್, ಮದ್ಯದಂಗಡಿ ಮತ್ತು ಅಫೀಮು ಅಡ್ಡೆಗಳನ್ನು ಒಂದೇ ಸಂದರ್ಭದಲ್ಲಿ ‘ಸಮಾಜದ ವೈರಿಗಳು’ ಎಂದು ಉಖಿಸಿದ್ದರು.

ಸ್ವಾತಂತ್ರ್ಯದ ಮುನ್ನ, ೨೭ ಮೇ ೧೯೪೭ರಂದು ಸಮಾಜವಾದಿಗಳೊಂದಿಗೆ ಮಾತನಾಡುವ ವೇಳೆ, ಗಾಂಽಜಿಯವರು, ಸಿನಿಮಾ ಮತ್ತು ರಂಗಮಂದಿರಗಳನ್ನು ಚರಕ, ಕೈಮಗ್ಗ ಮತ್ತು ಕರಕುಶಲ ಚಟುವಟಿಕೆಗಳ ಕೇಂದ್ರಗಳನ್ನಾಗಿ ಮಾಡಬೇಕೆಂದು ಹೇಳಿದರು. ಸಿನಿಮಾದ ಜಹೀರಾತುಗಳಲ್ಲಿ ನಟ-ನಟಿಯರ ಅಶ್ಲೀಲ ಭಂಗಿಯ ಸ್ಥಿರಚಿತ್ರಗಳನ್ನು ಪ್ರಕಟಿಸುವುದನ್ನೂ ಅವರು ಟೀಕಿಸಿದರು.

ವಿಪರ್ಯಾಸವೆಂದರೆ, ಸಿನಿಮಾವನ್ನು ಕಟುವಾಗಿ ವಿರೋಽಸಿದ ಗಾಂಽಜಿಯವರ ಜೀವನ ಮತ್ತು ಆದರ್ಶಗಳನ್ನೇ ಇಟ್ಟುಕೊಂಡು ಮುಂದೆ ಭಾರತೀಯ ಹಾಗೂ ಜಗತಿಕ ಚಿತ್ರರಂಗದಲ್ಲಿ ರಿಚರ್ಡ್ ಅಟೆನ್ಬರೋ ಅವರ ‘ಗಾಂಽ’ ಸೇರಿದಂತೆ ಹಲವಾರು ಅದ್ಭುತ ಚಿತ್ರಗಳು ಬಂದವು. ಗಾಂಽಜಿ ಕೂಡಾ ಗುಜರಾತ್‌ನವರೇ. ಗುಜರಾತ್ ಎಂದಲ್ಲ, ದೇಶದ ಬಹುತೇಕ ರಾಜ್ಯಗಳು ಚಲನಚಿತ್ರ ಪ್ರವಾಸೋದ್ಯಮಕ್ಕೆ ಗರಿಷ್ಠ ಆದ್ಯತೆ ನೀಡತೊಡಗಿವೆ. ವಿದೇಶಗಳಲ್ಲಿ ಕೂಡಾ.

ಪ್ರಶಸ್ತಿಪ್ರದಾನ ಸಮಾರಂಭ ದೇಶದ ರಾಜಧಾನಿಯ ಹೊರಗೆ ಆಗುವುದರ ಕುರಿತಂತೆ ಅಂತಹ ವಿರೋಧ ಇರಲಾರದು. ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ೨೦೦೪ರ ವರೆಗೆ ನಡೆಯುತ್ತಿದ್ದ ರೀತಿಯೇ ಬೇರೆ. ೧೯೫೨ರಲ್ಲಿ ಮುಂಬೈಯಲ್ಲಿ ಆರಂಭವಾದ ಅಂತಾರಾಷ್ಟ್ರೀಯ ಚಿತ್ರೋತ್ಸವ ಆರಂಭದ ಕೆಲವು ವರ್ಷ ಸತತವಾಗಿ ನಡೆಯಲಿಲ್ಲ. ಅದು ಸ್ಪರ್ಧಾತ್ಮಕ ಆದ ನಂತರ ಎರಡು ವರ್ಷಗಳಿಗೊಮ್ಮೆ, ದೆಹಲಿಯಲ್ಲಿ, ಚಿತ್ರೋತ್ಸವ ಹೆಸರಿನಲ್ಲಿ, ಪರ್ಯಾಯ ವರ್ಷಗಳಲ್ಲಿ ಫಿಲ್ಮೋತ್ಸವ ಹೆಸರಿನಲ್ಲಿ ದೇಶದ ಇತರ ನಗರಗಳಲ್ಲಿ ನಡೆಯುತ್ತಿದ್ದವು. ಬೆಂಗಳೂರಿನಲ್ಲಿ ೧೯೮೦ ಮತ್ತು ೧೯೯೨ರಲ್ಲಿ ಫಿಲ್ಮೋತ್ಸವ ನಡೆದಿತ್ತು. ೨೦೦೪ರಿಂದ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವ ಗೋವಾದಲ್ಲಿ ನಡೆಯುತ್ತಿದೆ. ಚಿತ್ರೋತ್ಸವ ಒಂದೇ ಜಗದಲ್ಲಿ ನಡೆದಿರಲಿಲ್ಲ.

ರಾಷ್ಟ್ರಪತಿಗಳು ವಾರ್ಷಿಕ ಪ್ರಶಸ್ತಿಯನ್ನು ರಾಷ್ಟ್ರರಾಜಧಾನಿಯ ಹೊರಗೆ ನೀಡುವುದೇ ಆದರೆ ಮೊದಲು ಮುಂಬೈಯನ್ನು ಆರಿಸಿಕೊಳ್ಳಬಹುದಿತ್ತು ಎನ್ನುವ ಮಂದಿ ಅದಕ್ಕೆ ಅವರದೇ ಆದ ಕಾರಣವನ್ನೂ ಹೇಳುತ್ತಾರೆ. ಚಲನಚಿತ್ರ ಭಾರತಕ್ಕೆ ಕಾಲಿಟ್ಟದ್ದು, ೧೮೯೬ರಲ್ಲಿ ಮೊದಲು ಪ್ರದರ್ಶನ ಕಂಡದ್ದು ಮುಂಬೈನಲ್ಲಿ. ಅದೂ ಅಲ್ಲದೆ, ತನ್ನನ್ನು ಬಾಲಿವುಡ್ ಎಂದು ಕರೆದುಕೊಳ್ಳುವ ಹಿಂದಿ ಚಿತ್ರರಂಗ ಇರುವುದೂ ಅಲ್ಲಿಯೇ! ಅಂತಾರಾಷ್ಟ್ರೀಯ ಚಿತ್ರೋತ್ಸವ ೧೯೯೪ರಲ್ಲಿ ಕೊಲ್ಕೊತ್ತಾದಲ್ಲಿ ನಡೆದು ಮುಂದಿನ ವರ್ಷ ದೆಹಲಿಯಲ್ಲಿ ನಡೆಯಬೇಕಾಗಿತ್ತು. ಆದರೆ ೧೯೯೫ – ವಿಶ್ವ ಸಿನಿಮಾಕ್ಕೆ ನೂರು ತುಂಬಿದ ವರ್ಷ. ಹಾಗಾಗಿ ೧೯೯೫ರ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಮುಂಬೈಯಲ್ಲಿ ಹಮ್ಮಿಕೊಳ್ಳಲಾಯಿತು.

ಕೊಲ್ಕೊತ್ತಾ ಕೂಡಾ ಇಂತಹದೊಂದು ಗೌರವಕ್ಕೆ ಪಾತ್ರವಾಗಬಹುದಾದ ನಗರ. ಭಾರತೀಯ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟ ನಿರ್ದೇಶಕ ಸತ್ಯಜಿತ್ ರೇ ಅವರ ಆಡುಂಬೊಲ. ಮುಂದಿನ ವರ್ಷಗಳಲ್ಲಿ ಈ ನಗರಗಳಲ್ಲಿ ಅಂತಹದೊಂದು ಕಾರ್ಯಕ್ರಮ ಹಮ್ಮಿಕೊಳ್ಳಬಾರದು ಎಂದೇನಿಲ್ಲವಲ್ಲ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯ ಹೊರಗೆ ನಡೆಸಲು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಮಾದರಿ ಆಯಿತೇ? ಇಂತಹದೊಂದು ಅನುಮಾನ ಬಂದರೆ ತಪ್ಪೇನಿಲ್ಲ. ಹಿಂದೆ ಕರ್ನಾಟಕ ರಾಜ್ಯದ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು ಅಗ ಯಾರು ಮುಖ್ಯಮಂತ್ರಿಳಾಗಿರುತ್ತಾರೋ ಅವರ ಊರಲ್ಲಿ, ಇಲ್ಲವೇ ವಾರ್ತಾ ಮತ್ತು ಪ್ರಚಾರ ಇಲಾಖೆಯ (ಈಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ) ಸಚಿವರ ಊರಲ್ಲಿ ಕೊಡಮಾಡುವುದೂ ಇತ್ತು. ಹಾಗಾಗಿ ಪ್ರಶಸ್ತಿ ಪುರಸ್ಕೃತರು ಹಾಸನ, ಶಿಮೊಗ್ಗ, ಧಾರವಾಡ, ಮಂಗಳೂರು, ಮೈಸೂರು, ಮಡಿಕೇರಿ, ಮಂಡ್ಯ ಮುಂತಾದ ನಗರಗಳಲ್ಲಿ ತಮ್ಮ ಪ್ರಶಸ್ತಿ ಪಡೆದುಕೊಂಡಿದ್ಧಾರೆ.

ಕೇಂದ್ರ ಸರ್ಕಾರ ಪ್ರತಿ ವರ್ಷ ಮೇ ೩ರಂದು ಪ್ರಶಸ್ತಿ ಪ್ರದಾನ ಮಾಡುವ ನಿರ್ಧಾರವನ್ನು ಹಿಂದೆ ತಳೆದಿತ್ತು. ಅದು ಮೊದಲ ಭಾರತೀ ಚಿತ್ರ ‘ಸತ್ಯ ಹರಿಶ್ಚಂದ್ರ’ ಬಿಡುಗಡೆಯಾದ ದಿನ. ಭಾರತೀಯ ಚಿತ್ರರಂಗಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಈ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಕೊರೋನಾ ಮತ್ತಿತರ ಕಾರಣಗಳಿಂದ ಇದು ನಿರಂತರವಾಗಿ ಆಗಲಿಲ್ಲ. ಇದೀಗ ೨೦೨೪ರ ಸಾಲಿನ ಪ್ರಶಸ್ತಿಗಳು ಪ್ರಕಟವಾಗಿ, ಮುಂದಿನ ತಿಂಗಳು ಪ್ರದಾನವಾಗಲಿದೆ. ೨೦೨೫ರ ಸಾಲಿಗೆ ೭೩ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಾಗಿ ಚಿತ್ರಗಳನ್ನು ಕಳುಹಿಸಲು ಪ್ರಕಟಣೆ, ಆಯ್ಕೆ ಆಗುವ ವೇಳೆ ಇನ್ನೂ ನಾಲ್ಕೈದು ತಿಂಗಳಾಗಬಹುದು. ೨೦೨೬ ಮುಗಿಯುವ ಮೊದಲು ಅದನ್ನು ಪೂರೈಸಲು ಸಾಧ್ಯವಾದರೆ, ವರ್ಷ ಮುಗಿಯುತ್ತಲೇ ೭೪ನೇ ಪ್ರಶಸ್ತಿಗೂ ಅರ್ಜಿ ಕರೆಯಬಹುದು. ಮೇ ೩ರಂದು ನಿಗದಿಯಂತೆ ಪ್ರಶಸ್ತಿಪ್ರದಾನ ಮಾಡಬಹುದು.

ರಾಜ್ಯದಲ್ಲೂ ರಾಜಕುಮಾರ್ ಜನ್ಮದಿನ, ಏಪ್ರಿಲ್ ೨೪ರಂದು ಪ್ರತಿವರ್ಷ ಪ್ರಶಸ್ತಿಪ್ರದಾನ ಸಮಾರಂಭ ಎಂದು ಆದೇಶವೇನೋ ಇದೆ. ಪ್ರಸ್ತುತ ಆಯ್ಕೆಯಾದ ೨೦೨೦, ೨೦೨೧ರ ಸಾಲಿನ ಪ್ರಶಸ್ತಿಗಳನ್ನು ನೀಡಬೇಕಿದೆ. ೨೦೨೨, ೨೦೨೩, ೨೦೨೪, ೨೦೨೫ರ ಸಾಲಿನ ಪ್ರಶಸ್ತಿ ಮತ್ತು ಸಹಾಯಧನಕ್ಕಾಗಿ ಚಿತ್ರಗಳನ್ನು ಆಹ್ವಾನಿಸುವ, ಆಯ್ಕೆ ಮಾಡುವ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಾಗಿದೆ. ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ತಯಾರಾಗುವ ಚಿತ್ರಗಳ ಸಂಖ್ಯೆಯನ್ನು ಗಮನಿಸಿದರೆ, ಇನ್ನೂ ಇದಕ್ಕೆ ಸಾಕಷ್ಟು ಸಮಯ ಬೇಕಾಗಬಹುದು. ಈ ನಿಟ್ಟಿನಲ್ಲಿ ಇಲಾಖೆ ಕೆಲಸ ಆರಂಭಿಸಿದ ಸುದ್ದಿ ಇದೆ. ೨೦೨೦, ೨೦೨೧ರ ಪ್ರಶಸ್ತಿಪ್ರದಾನಕ್ಕೆ ತಡೆ ಏನೂ ಇದ್ದಂತಿಲ್ಲ. ಮುಖ್ಯಮಂತ್ರಿಗಳ ಸಮಯ ಮಾತ್ರ ಬೇಕಾಗಿದೆ.

Tags:
error: Content is protected !!