Mysore
21
overcast clouds

Social Media

ಗುರುವಾರ, 20 ಆಗಸ್ಟ್ 2026
Light
Dark

ಧ್ವನಿಹೀನರಿಗೆ ಧ್ವನಿಯಾಗಿದ್ದ ದೇವರಾಜ ಅರಸು

The generous king who never accepted defeat

ಎಚ್.ಹಾಲಪ್ಪ

ಇಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತಿ

ದೇಶದಲ್ಲಿ ಜನಪ್ರತಿನಿಧಿಗಳ ಸಂಖ್ಯೆ ಸಾವಿರಾರು. ಆದರೆ, ಕಾಲದ ಪರೀಕ್ಷೆಯಲ್ಲಿ ಮುತ್ಸದ್ದಿ ರಾಜಕಾರಣಿ ಎಂಬ ಸ್ಥಾನವನ್ನು ಪಡೆಯುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅಧಿಕಾರದಲ್ಲಿದ್ದಾಗ ಜನರೊಂದಿಗೆ ಹೇಗೆ ನಡೆದು ಕೊಂಡರು ಎಂಬುದಕ್ಕಿಂತ, ಅಧಿಕಾರವನ್ನು ಜನರ ಬದುಕಿನ ಬದಲಾವಣೆಗೆ ಹೇಗೆ ಬಳಸಿದರು ಮತ್ತು ಸಮಾಜಕ್ಕೆ ಏನು ಕೊಡುಗೆ ನೀಡಿದರು ಎಂಬುದೇ ಅವರ ಮುತ್ಸದ್ದಿತನವನ್ನು ನಿರ್ಧರಿಸುತ್ತದೆ. ಕರ್ನಾಟಕದ ಇಂತಹ ಮುತ್ಸದ್ದಿ ರಾಜಕಾರಣಿಗಳ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಹೆಸರು ಡಿ.ದೇವರಾಜ ಅರಸು.

ಮುಖ್ಯಮಂತ್ರಿಯಾಗಿ ದೇವರಾಜ ಅರಸು ಅವರ ರಾಜಕೀಯ ಬದುಕಿನ ಅತ್ಯಂತ ಮಹತ್ವದ ಹೆಜ್ಜೆ ಭೂಸುಧಾರಣೆ. ವರ್ಷಗಳ ಕಾಲ ಭೂಮಿಯನ್ನು ಉಳುತ್ತಿದ್ದರೂ ಒಡೆತನವಿಲ್ಲದೆ ಬದುಕುತ್ತಿದ್ದ ಗೇಣಿದಾರನಿಗೆ ಭೂಮಿಯ ಹಕ್ಕು ದೊರಕುವಂತೆ ಮಾಡಿದ ಅವರು, ಗ್ರಾಮೀಣ ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಅಧಿಕಾರ ಸಂಬಂಧಗಳಲ್ಲೇ ಮಹತ್ವದ ಬದಲಾವಣೆಗೆ ಕಾರಣರಾದರು. ‘ಉಳುವವನೇ ಭೂಮಿಯ ಒಡೆಯ’ ಎಂಬ ಆಶಯವನ್ನು ಕಾರ್ಯರೂಪಕ್ಕೆ ತರುವ ಮೂಲಕ ಭೂಮಿಯ ಒಡೆತನ ಕೆಲವರಲ್ಲಿ ಕೇಂದ್ರೀಕೃತವಾಗಿದ್ದ ವ್ಯವಸ್ಥೆಯಲ್ಲಿ ದುಡಿಯುವ ವರ್ಗದ ಕೈಗೆ ಭೂಮಿಯ ಹಕ್ಕು ತಲುಪುವಂತೆ ಮಾಡಿದರು. ರೈತನಿಗೆ ನೆರವು ನೀಡುವುದಕ್ಕಿಂತ ರೈತನನ್ನೇ ಭೂಮಿಯ ಒಡೆಯನನ್ನಾಗಿ ಮಾಡುವುದು ಅವರ ಭೂ ಸುಧಾರಣೆಯ ನಿಜವಾದ ಸಾಮಾಜಿಕ ಕ್ರಾಂತಿಯಾಗಿತ್ತು.

ಭೂ ಸುಧಾರಣೆ ಕೇವಲ ಆರ್ಥಿಕ ಸುಧಾರಣೆಯಾಗಿರಲಿಲ್ಲ. ಅದು ಗ್ರಾಮೀಣ ಸಮಾಜದಲ್ಲಿದ್ದ ಜಾತಿ-ವರ್ಗ ಆಧಾರಿತ ಅಽಕಾರ ಸಂಬಂಧಗಳ ಮೇಲೆಯೂ ಪರಿಣಾಮ ಬೀರಿದ ಸಾಮಾಜಿಕ ಪರಿವರ್ತನೆಯ ಹೆಜ್ಜೆಯಾಗಿತ್ತು.

ಭೂಮಿಯ ಹಕ್ಕಿನ ನಂತರ ಅರಸು ಅವರ ದೃಷ್ಟಿ ಮನುಷ್ಯನ ಘನತೆಯ ಹಕ್ಕಿನತ್ತ ವಿಸ್ತರಿಸಿತು. ಮನುಷ್ಯ ತನ್ನ ದೇಹದಿಂದ ವಿಸರ್ಜಿಸುವ ಮಲವನ್ನು ಸಮಾಜ ಅಸಹ್ಯದಿಂದ ದೂರವಿಡುವಾಗ, ಅದನ್ನೇ ಬಾಚಿ ಬುಟ್ಟಿಯಲ್ಲಿ ತುಂಬಿಕೊಂಡು ತಲೆಯ ಮೇಲೆ ಹೊತ್ತು ಸಾಗಿಸುವ ಅಮಾನುಷ ಬದುಕಿಗೆ ಒಂದು ಸಮುದಾಯವನ್ನು ಜಾತಿ ವ್ಯವಸ್ಥೆ ತಳ್ಳಿತ್ತು. ಇಂತಹ ಅಮಾನುಷ ಪದ್ಧತಿಯ ನಿರ್ಮೂಲನೆಗಾಗಿ ಅರಸು ಅವರ ನೇತೃತ್ವದ ಸರ್ಕಾರ ಕಾನೂನು ಮತ್ತು ಆಡಳಿತಾತ್ಮಕ ಮಟ್ಟದಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಪ್ರತಿಪಾದಿಸುವ ಸಮಾನತೆ, ಸ್ವಾತಂತ್ರ್ಯ ಮತ್ತು ಮಾನವ ಘನತೆಯ ಆಶಯಗಳನ್ನು ಆಡಳಿತದಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಅರಸು ತೋರಿದ ರಾಜಕೀಯ ಇಚ್ಛಾಶಕ್ತಿ ಸ್ಮರಣೀಯ.

ಅರಸು ಅವರ ಸಾಮಾಜಿಕ ನ್ಯಾಯದ ಮುಂದಿನ ಮಹತ್ವದ ಹೆಜ್ಜೆ ಹಾವನೂರು ಆಯೋಗವನ್ನು ರಚನೆ ಮಾಡಿದ್ದು. ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ಸ್ಥಿತಿಗತಿಗಳನ್ನು ಗುರುತಿಸಿ, ಅವರಿಗೆ ನ್ಯಾಯಯುತ ಅವಕಾಶ ಮತ್ತು ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶದಿಂದ ಅರಸು ಅವರ ಸರ್ಕಾರ ಹಾವನೂರು ಆಯೋಗವನ್ನು ರಚಿಸಿತು. ಆಯೋಗವು ತನ್ನ ವರದಿಯನ್ನು ೧೯೭೫ರಲ್ಲಿ ಸಲ್ಲಿಸಿತು. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯಕ್ಕೆ ಇದು ಮಹತ್ವದ ತಿರುವು ನೀಡಿತು. ಖ್ಯಾತ ಸಾಹಿತಿ ಡಾ.ಚದುರಂಗ ಅವರೊಂದಿಗೆ ದೇವರಾಜ ಅರಸು ಅವರು ನಡೆಸಿದ ಸಂಭಾಷಣೆಯೊಂದರಲ್ಲಿ, ಹಾವನೂರು ಆಯೋಗದ ಮೂಲಕ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅವಕಾಶವಂಚಿತರಾಗಿದ್ದವರಿಗೂ ಧ್ವನಿ ಹಾಗೂ ಪ್ರಾತಿನಿಧ್ಯ ದೊರಕುವಂತೆ ಮಾಡಬೇಕೆಂಬ ತಮ್ಮ ಆಶಯವನ್ನು ಅರಸು ವ್ಯಕ್ತಪಡಿಸಿದ್ದರು ಎಂದು ಉಲ್ಲೇಖಿಸಲಾಗಿದೆ.

ಅರಸು ಅವರ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯವೆಂದರೆ ಕೇವಲ ಮೀಸಲಾತಿಯ ಪ್ರಶ್ನೆಮಾತ್ರ ಆಗಿರಲಿಲ್ಲ. ಭೂಮಿ, ಶಿಕ್ಷಣ, ಉದ್ಯೋಗ, ಆರ್ಥಿಕ ಭದ್ರತೆ, ಮಾನವ ಘನತೆ ಮತ್ತು ಸಾಮಾಜಿಕ ಹಾಗೂ ರಾಜಕೀಯ ಪ್ರಾತಿನಿಧ್ಯ- ಇವೆಲ್ಲವನ್ನೂ ಒಳಗೊಂಡ ಸಮಗ್ರ ಪರಿಕಲ್ಪನೆಯಾಗಿತ್ತು. ಆದ್ದರಿಂದಲೇ ಅವರ ಆಡಳಿತದಲ್ಲಿ ದುರ್ಬಲರು, ಹಿಂದುಳಿದ ವರ್ಗದವರು ಮತ್ತು ಅವಕಾಶವಂಚಿತರು ಕೇಂದ್ರ ಸ್ಥಾನ ಪಡೆದಿದ್ದರು. ವೃದ್ಧಾಪ್ಯ ಮತ್ತು ವಿಧವಾ ವೇತನ, ಅಂಗವಿಕಲರಿಗೆ ನೆರವು, ಜೀತಪದ್ಧತಿನಿರ್ಮೂಲನೆ, ಕೃಷಿ ಕಾರ್ಮಿಕರಿಗೆ ಕನಿಷ್ಠ ವೇತನ, ವಿದ್ಯಾರ್ಥಿನಿಲಯಗಳು, ಶಿಷ್ಯವೇತನ ಹಾಗೂ ನಿರುದ್ಯೋಗಿ ಪದವೀಧರರಿಗೆ ಸ್ಟೈಫಂಡ್ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳು ಅವರ ಆಡಳಿತದ ಸಾಮಾಜಿಕ ದೃಷ್ಟಿ ಕೋನವನ್ನು ಪ್ರತಿಬಿಂಬಿಸುತ್ತವೆ. ಸಮಾಜದಲ್ಲಿ ಯಾರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದಷ್ಟೇ ಅಲ್ಲ, ಯಾರು ಎಷ್ಟು ಅವಕಾಶಗಳನ್ನು ಪಡೆದಿದ್ದಾರೆ ಎಂಬುದನ್ನು ತಿಳಿಯುವುದೇ ಸಾಮಾಜಿಕ ನ್ಯಾಯದ ಮುಂದಿನ ಹೆಜ್ಜೆ. ಆದ್ದರಿಂದ ಸಮೀಕ್ಷೆ ಎಂದರೆ ಕೇವಲ ಜಾತಿಗಳ ಸಂಖ್ಯೆಯನ್ನು ಎಣಿಸುವುದಲ್ಲ; ಸಮಾಜದಲ್ಲಿರುವ ಅಸಮಾನತೆಯ ವಾಸ್ತವ ಚಿತ್ರವನ್ನು ಅರಿಯುವ ಸಾಧನ. ಈ ಅಂಕಿ ಅಂಶಗಳು ಶಿಕ್ಷಣ, ಉದ್ಯೋಗ, ಆರ್ಥಿಕ ಅಭಿವೃದ್ಧಿ, ಕಲ್ಯಾಣ ಯೋಜನೆಗಳು ಮತ್ತು ಪ್ರಾತಿನಿಧ್ಯಕ್ಕೆ ಸಂಬಂಽಸಿದ ನ್ಯಾಯಯುತ ನೀತಿಗಳ ರೂಪಣೆಗೆ ಆಧಾರವಾಗಬೇಕು.

ಅರಸು ಅವರು ಹಾವನೂರು ಆಯೋಗದ ಮೂಲಕ ಅವಕಾಶ ವಂಚಿತ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಗುರುತಿಸಿ, ಅವರಿಗೆ ನ್ಯಾಯಯುತ ಅವಕಾಶ ಮತ್ತು ಪ್ರಾತಿನಿಧ್ಯ ಕಲ್ಪಿಸುವ ನೀತಿಗೆ ಬಲ ನೀಡಿದರೆ, ಇಂದಿನ ಸಾಮಾಜಿಕ- ಆರ್ಥಿಕ- ಜಾತಿ ಸಮೀಕ್ಷೆಗಳು ಸಮಾಜದ ಅಸಮಾನತೆಗಳನ್ನು ಅಂಕಿ-ಅಂಶಗಳ ಮೂಲಕ ಗುರುತಿಸುವ ಸಾಧನವಾಗಬೇಕು. ಆ ಅಂಕಿ-ಅಂಶಗಳು ನ್ಯಾಯಯುತ ನೀತಿಯಾಗಿ, ನೀತಿ ಪರಿಣಾಮಕಾರಿ ಅನುಷ್ಠಾನವಾಗಿ ರೂಪಾಂತರಗೊಂಡಾಗ ಮಾತ್ರ ಸಾಮಾಜಿಕ ನ್ಯಾಯದ ಗುರಿ ಸಾರ್ಥಕವಾಗುತ್ತದೆ.

ಸಮಾನ ಅವಕಾಶ, ನ್ಯಾಯಯುತ ಪ್ರಾತಿನಿಧ್ಯ ಮತ್ತು ಗೌರವಯುತ ಬದುಕು ಪ್ರತಿಯೊಬ್ಬರ ಹಕ್ಕಾಗುವಂತಹ ಸಮಾಜ ನಿರ್ಮಿಸುವುದೇ ದೇವರಾಜ ಅರಸು ಅವರಿಗೆ ಸಲ್ಲಿಸುವ ನಿಜವಾದ ಗೌರವ.

(ಲೇಖಕರು, ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು)

” ಅರಸು ಅವರು ಹಾವನೂರು ಆಯೋಗದ ಮೂಲಕ ಅವಕಾಶ ವಂಚಿತ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಗುರುತಿಸಿ, ಅವರಿಗೆ ನ್ಯಾಯಯುತ ಅವಕಾಶ ಮತ್ತು ಪ್ರಾತಿನಿಧ್ಯ ಕಲ್ಪಿಸುವ ನೀತಿಗೆ ಬಲ ನೀಡಿದರೆ, ಇಂದಿನ ಸಾಮಾಜಿಕ- ಆರ್ಥಿಕ- ಜಾತಿ ಸಮೀಕ್ಷೆಗಳು ಸಮಾಜದ ಅಸಮಾನತೆಗಳನ್ನು ಅಂಕಿ-ಅಂಶಗಳ ಮೂಲಕ ಗುರುತಿಸುವ ಸಾಧನವಾಗಬೇಕು.”

 

 

Tags:
error: Content is protected !!