ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು ಬಿಟ್ಟು ವಿಷಯಾಂತರವಾದರೆ ಸಮಾರಂಭದ ಗಂಭೀರತೆಗೆ ಭಂಗ ತರುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ ಈ ಕಾರ್ಯಕ್ರಮ.
ಮೊನ್ನೆ ಭಾನುವಾರ ಮೈಸೂರಿನ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ವೈದ್ಯ ಸಾಹಿತಿ ಹಾಗೂ ಹೃದ್ರೋಗ ತಜ್ಞ ಡಾ.ಎಸ್. ಪಿ. ಯೋಗಣ್ಣ ಅವರು ಬರೆದಿರುವ ‘ವೈದ್ಯನ ೧೦೮ ಕವನಗಳು’ ಮತ್ತು ‘ವೈದ್ಯನ ನುಡಿ ಮುತ್ತುಗಳು’ ಎಂಬ ಎರಡು ಕವನ ಸಂಕಲನಗಳ ಬಿಡುಗಡೆಯ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮುಕುಂದರಾಜು ಅವರು, ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ಪರಿಷ್ಕರಣಾ ಪ್ರಕ್ರಿಯೆ (ಎಸ್‌ಐಆರ್) ಬಗ್ಗೆ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದರು. ಜತೆಗೆ ಉದಾಹರಣೆಯೊಂದನ್ನು ನೀಡಿದರು.
ಉದ್ದೇಶಪೂರ್ವಕವಾಗಿ ಇಂತಹ ಕೆಲಸಗಳು ನಡೆಯುತ್ತಿವೆ ಎಂದೂ ರಾಜಕಾರಣಿಗಳ ಶೈಲಿಯಲ್ಲಿ ಮಾತನಾಡಿದ್ದು, ನೆರೆದಿದ್ದ ಸಾಹಿತ್ಯಾಸಕ್ತರಿಗೆ ಮುಜುಗರ ಉಂಟು ಮಾಡುವಂತಿತ್ತು. ಇದು ಪುಸ್ತಕ ಬಿಡುಗಡೆ ಸಮಾರಂಭದ ಪಾವಿತ್ರ್ಯತೆಯನ್ನೇ ಹಾಳುಮಾಡುವಂತಿತ್ತು ಎಂಬ ಭಾವನೆ ಅನೇಕರಲ್ಲಿ ಮೂಡಿದ್ದರೆ ಅಚ್ಚರಿಯಿಲ್ಲ. ಅದೂ ಅಲ್ಲದೆ ವಿಶೇಷ ಮತದಾರರ ಪರಿಷ್ಕರಣೆ ಇನ್ನೂ ನಡೆಯುತ್ತಿದ್ದು, ಬಿಟ್ಟು ಹೋಗಿರುವ ಅರ್ಹ ಮತದಾರರನ್ನು ಸೇರಿಸಲು ಇನ್ನೂ ಅವಕಾಶ ಇರುವುದರಿಂದ ಈಗಲೂ ಸೇರಿಸಲು ಅವಕಾಶ ಇದೆ. ಇವರಿಗೆ ಎಲ್ಲಿ ಏನು ಮಾತಾನಾಡ ಬೇಕು ಎಂಬ ಕನಿಷ್ಠ eನವೂ ಇಲ್ಲವಾಯಿತೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇನ್ನು ಮುಂದಾದರೂ ಇಂತಹ ಕಾರ್ಯಕ್ರಮಗಳಲ್ಲಿ ಆದಷ್ಟು ಕಾರ್ಯಕ್ರಮಕ್ಕೆ ಸೀಮಿತವಾದಷ್ಟು ಮಾತನಾಡಿದರೆ ಸಹ್ಯವೆನಿಸುತ್ತದೆ.
-ಬೂಕನಕೆರೆ ವಿಜೇಂದ್ರ, ಮೈಸೂರು



