Mysore
24
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಕೊಡಗಿನಲ್ಲಿ1,20,874 ಮಕ್ಕಳಿಗೆ ಮಾತ್ರೆ ವಿತರಣೆ ಗುರಿ

ನವೀನ್ ಡಿಸೋಜ

ಇಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ

ಜಂತುಹುಳು ಬಾಧೆ ತಡೆಗೆ ಆರೋಗ್ಯ ಇಲಾಖೆಯ ಮಹತ್ವದ ಹೆಜ್ಜೆ

ಮಡಿಕೇರಿ: ಮಕ್ಕಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವ ಜಂತುಹುಳು ಬಾಧೆಯನ್ನು ನಿಯಂತ್ರಿಸುವ ಉದ್ದೇಶದಿಂದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆ ಸಜ್ಜಾಗಿದ್ದು, ಆ.೧೦ರಂದು ಜಿಲ್ಲೆಯಾದ್ಯಂತ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ (ಎನ್‌ಡಿಡಿ) ಆಚರಿಸಲಾಗುತ್ತಿದ್ದು, ೧ರಿಂದ ೧೯ ವರ್ಷದೊಳಗಿನ ೧,೨೦,೮೭೪ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಿಸುವ ಗುರಿ ಹೊಂದಲಾಗಿದೆ. ಆ.೧೦ರಂದು ಮಾತ್ರೆ ಸೇವಿಸಲು ಸಾಧ್ಯವಾಗದ ಮಕ್ಕಳಿಗೆ ಆ.೧೭ರಂದು ಮಾಪ್‌ಅಪ್ ದಿನದಂದು ಮಾತ್ರೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಜಂತುಹುಳು ಬಾಧೆ ಸಾಮಾನ್ಯ ಸಮಸ್ಯೆಯಾಗಿ ಕಂಡುಬಂದರೂ, ಮಕ್ಕಳ ದೈಹಿಕ ಬೆಳವಣಿಗೆ, ಪೌಷ್ಟಿಕತೆ, ರಕ್ತದ ಮಟ್ಟ ಹಾಗೂ ಕಲಿಕೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಜಂತುಹುಳು ಬಾಽತ ಮಕ್ಕಳು ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುವ ಸಾಧ್ಯತೆಯಿದ್ದು, ಇದರ ಪರಿಣಾಮವಾಗಿ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗಬಹುದು. ಶಾಲಾ ಹಾಜರಾತಿ ಮತ್ತು ಶೈಕ್ಷಣಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಮಕ್ಕಳಿಗೆ ನಿಯಮಿತವಾಗಿ ಜಂತುಹುಳು ನಿವಾರಣಾ ಔಷಽ ನೀಡುವುದು ಅಗತ್ಯವಾಗಿದೆ.

ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಡಿ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಅಲ್ಬೆಂಡಜೋಲ್ ಮಾತ್ರೆ ನೀಡಲಾಗುತ್ತದೆ. ೧ರಿಂದ ೫ ವರ್ಷದೊಳಗಿನ ಮಕ್ಕಳಿಗೆ ಅರ್ಧ ಅಲ್ಬೆಂಡಜೋಲ್ ಮಾತ್ರೆ ಹಾಗೂ ೬ರಿಂದ ೧೯ ವರ್ಷದೊಳಗಿನ ಮಕ್ಕಳಿಗೆ ಒಂದು ಅಲ್ಬೆಂಡಜೋಲ್ ಮಾತ್ರೆ ನೀಡಲಾಗುತ್ತದೆ. ೧ರಿಂದ ೫ ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳ ಮೂಲಕ ಮಾತ್ರೆ ವಿತರಿಸಲಾಗುತ್ತದೆ. ೬ರಿಂದ ೧೯ ವರ್ಷದೊಳಗಿನ ಮಕ್ಕಳಿಗೆ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು, ಕಾಲೇಜುಗಳು ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಶಾಲಾ ಹಂತದಿಂದ ಪದವಿ ಪೂರ್ವ ಹಾಗೂ ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನೂ ಕಾರ್ಯಕ್ರಮದ ವ್ಯಾಪ್ತಿಗೆ ತರಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು ಮಾತ್ರೆ ಸೇವಿಸದೆ ಉಳಿಯದಂತೆ ಆರೋಗ್ಯ ಇಲಾಖೆ ವಿಶೇಷ ಕ್ರಮ ಕೈಗೊಂಡಿದೆ. ೬ರಿಂದ ೧೯ ವರ್ಷದೊಳಗಿನ ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿಯನ್ನು ಆಶಾ ಕಾರ್ಯಕರ್ತರು ಸಿದ್ಧಪಡಿಸಿದ್ದಾರೆ. ಪಟ್ಟಿಯಲ್ಲಿರುವ ಮಕ್ಕಳಿಗೆ ಸಮೀಪದ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಅಂಗನವಾಡಿಗಳಲ್ಲಿ ನೋಂದಾಯಿತ ಮಕ್ಕಳ ಜೊತೆಗೆ ನೋಂದಣಿಯಾಗದ ಮಕ್ಕಳನ್ನೂ ಗುರುತಿಸಿ ಅವರಿಗೆ ಔಷಧಿ ನೀಡುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ. ಹೀಗಾಗಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಮಾತ್ರವಲ್ಲದೆ, ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಜಂತು ಹುಳು ನಿವಾರಣಾ ಸೇವೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ.

೧.೨೦ ಲಕ್ಷಕ್ಕೂ ಅಧಿಕ ಮಕ್ಕಳ ಗುರಿ: 

ಕೊಡಗು ಜಿಲ್ಲೆಯಲ್ಲಿ ಈ ಬಾರಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಡಿ ಒಟ್ಟು ೧,೨೦,೮೭೪ ಮಕ್ಕಳನ್ನು ಗುರಿಯಾಗಿಸಲಾಗಿದೆ. ೨೩,೬೩೪ ಅಂಗನವಾಡಿ ಮಕ್ಕಳು, ೯೫೫ ಅಂಗನವಾಡಿಯಿಂದ ಹೊರ ಗುಳಿದ ಮಕ್ಕಳು, ೯೬,೨೮೫ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮಕ್ಕಳು ಪದವಿ ಪೂರ್ವ ಹಾಗೂ ಇತರೆ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಿಸುವ ಗುರಿ ಹೊಂದಲಾಗಿದೆ.

” ಆ.೧೦ರಂದು ಎಲ್ಲೆಡೆ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ(ಎನ್‌ಡಿಡಿ) ನಡೆಯಲಿದ್ದು, ಆಗಸ್ಟ್ ೧೭ ರಂದು ಮಾಪ್ ಅಪ್ ದಿನ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಲ್ಲಿ ೧-೫ ವರ್ಷದ ಒಳಗಿನ ಮಕ್ಕಳಿಗೆ ಅಂಗನವಾಡಿಯಲ್ಲಿ ಮಾತ್ರೆ ನೀಡಲಾಗುತ್ತದೆ. ೬-೧೯ ವರ್ಷದ ಮಕ್ಕಳಿಗೆ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆ ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರೆ ನೀಡಲಾಗುತ್ತದೆ. ೧ ರಿಂದ ೧೯ ವರ್ಷದ ಎಲ್ಲಾ ಮಕ್ಕಳು ಜಂತುಹುಳು ನಿವಾರಣೆ ಮಾತ್ರೆ ತೆಗೆದುಕೊಳ್ಳಬೇಕು.”

-ಡಾ.ಸತೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

” ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವು ಜಿಲ್ಲೆಯಲ್ಲಿ ಆ.೧೦ರಂದು ನಡೆಯಲಿದ್ದು, ೧ರಿಂದ ೧೯ ವರ್ಷದೊಳಗಿನ ಎಲ್ಲ ಮಕ್ಕಳು ಜಂತುಹುಳು ನಿವಾರಣೆಯ ಅಲ್ಬೆಂಡಜೋಲ್ ಮಾತ್ರೆ ವಿತರಿಸಬೇಕು. ಅರ್ಹ ಮಕ್ಕಳು ಇದರಿಂದ ಹೊರಗುಳಿಯಬಾರದು.”

-ಡಾ.ಸಹನಾ ಎಸ್. ಹಾದಿಮನಿ, ಹೆಚ್ಚುವರಿ ಜಿಲ್ಲಾಧಿಕಾರಿ

ಜಂತುಹುಳು ಬಾಧೆಯಿಂದ ಏನೆಲ್ಲಾ ಸಮಸ್ಯೆ?: 

ಜಂತುಹುಳು ಸೋಂಕು ಮಕ್ಕಳ ದೇಹದಲ್ಲಿ ಪೌಷ್ಟಿಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಯಾಗಬಹುದು. ಪರಿಣಾಮವಾಗಿ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ, ದೌರ್ಬಲ್ಯ ಹಾಗೂ ಬೆಳವಣಿಗೆಯಲ್ಲಿ ಹಿಂದುಳಿಯುವಿಕೆ ಕಂಡುಬರುವ ಸಾಧ್ಯತೆಯಿದೆ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಜೊತೆಗೆ ಕಲಿಕೆ ಮತ್ತು ಶಾಲಾ ಚಟುವಟಿಕೆಗಳಲ್ಲಿನ ಆಸಕ್ತಿ ಹಾಗೂ ಸಾಮರ್ಥ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಜಂತುಹುಳು ನಿವಾರಣೆಗೆ ಆದ್ಯತೆ ನೀಡಲಾಗಿದೆ.

 

 

Tags:
error: Content is protected !!