Mysore
23
overcast clouds

Social Media

ಗುರುವಾರ, 06 ಆಗಸ್ಟ್ 2026
Light
Dark

ಅನಿಲ್ ಚಿಕ್ಕಮಾದುಗೆ ಕೈತಪ್ಪಿದ ಸಚಿವ ಸ್ಥಾನ; ಕ್ಷೇತ್ರದ ಜನರಿಗೆ ನಿರಾಸೆ

ಮಂಜು ಕೋಟೆ

ಕೋಟೆ: ಸಚಿವ ಸ್ಥಾನ ದೊರೆತಿದ್ದರೆ ಹಿಂದುಳಿದ ಕ್ಷೇತ್ರದ ಅಭಿವೃದ್ಧಿಯಾಗುತ್ತಿತ್ತು ಎಂಬ ನಿರೀಕ್ಷೆ

ಎಚ್.ಡಿ.ಕೋಟೆ: ಮೈಸೂರು ಪ್ರಾಂತ್ಯದ ನಾಯಕ ಸಮುದಾಯದ ಏಕೈಕ ಶಾಸಕ ಅನಿಲ್ ಚಿಕ್ಕಮಾದು, ರಾಜ್ಯದ ಗಡಿಭಾಗದ ಮತ್ತು ಹಿಂದುಳಿದ ತಾಲ್ಲೂಕಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರಕದೇ ಇರುವುದು ಕ್ಷೇತ್ರದ ಜನತೆಯಲ್ಲಿ ನಿರಾಸೆ ಮೂಡಿಸಿದೆ.

೨೫ ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಮುಖ್ಯಮಂತ್ರಿ ಆಗಿದ್ದ ಎಸ್.ಎಂ.ಕೃಷ್ಣ ಅವರ ಸಚಿವ ಸಂಪುಟದಲ್ಲಿ ಕೋಟೆ ಎಂ.ಶಿವಣ್ಣನವರಿಗೆ ಸಚಿವ ಸ್ಥಾನ ಲಭಿಸಿ, ೫ ವರ್ಷಗಳಲ್ಲಿ ಐದು ಖಾತೆಗಳನ್ನು ಪಡೆದು ದಾಖಲೆ ಮಾಡಿದ್ದರು.

ನಂತರ ಕಾಂಗ್ರೆಸ್ ಪಕ್ಷದಿಂದ ಸತತ ಎರಡನೇ ಬಾರಿ ಗೆಲುವು ಸಾಧಿಸಿದ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅನಿಲ್ ಚಿಕ್ಕಮಾದು ಅವರಿಗೆ ಮೂರು ವರ್ಷಗಳ ಹಿಂದೆಯೇ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸ್ಥಾನ ದೊರಕುತ್ತದೆ ಎಂಬ ನಂಬಿಕೆಯಿತ್ತು. ಆದರೆ, ಅರಣ್ಯ ಮತ್ತು ರೆಸಾರ್ಟ್ ನಿಗಮದ ಅಧ್ಯಕ್ಷರಾಗಿ ಅನಿಲ್ ನೇಮಕಗೊಂಡರು.

ತದನಂತರ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ಇದು ಕ್ಷೇತ್ರದ ಜನರಲ್ಲಿ ನಿರಾಸೆ ಮತ್ತು ಅಸಮಾಧಾನ ಮೂಡಿಸಿದೆ. ಸಚಿವ ಸ್ಥಾನ ತಾಲ್ಲೂಕಿಗೆ ಲಭಿಸಿದ್ದರೆ ಕ್ಷೇತ್ರದ ಅಭಿವೃದ್ಧಿ, ಸಮುದಾಯಕ್ಕೆ ಆದ್ಯತೆ ದೊರೆತು ಪಕ್ಷ ಮತ್ತಷ್ಟು ಬಲಿಷ್ಠವಾಗುತ್ತಿತ್ತು. ಆದರೆ ನಿರೀಕ್ಷೆ ಹುಸಿಯಾಗಿರುವುದರಿಂದ ಪಕ್ಷಕ್ಕೆ ಭಾರಿ ನಷ್ಟವಾಗುವ ಸಾಧ್ಯತೆಗಳು ಇವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅನಿಲ್ ಸಚಿವ ಸ್ಥಾನದಿಂದ ವಂಚಿತವಾಗಿರುವುದರಿಂದ ಅತ್ಯುನ್ನತ ನಿಗಮ ಮಂಡಳಿಯ ಸ್ಥಾನವನ್ನಾದರೂ ನೀಡಿ ಸಮುದಾಯಕ್ಕೆ ಮತ್ತು ತಾಲ್ಲೂಕಿಗೆ ಆದ್ಯತೆ ಕೊಡಬೇಕು ಎಂಬ ಆಲೋಚನೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕರ ಆಪ್ತರಾಗಿರುವ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಅವರು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಎಲ್ಲ ಬೆಳವಣಿಗೆಯನ್ನು ಕಾರ್ಯಕರ್ತರು, ಮುಖಂಡರು ಸಾರ್ವಜನಿಕರು ಗಮನಿಸುತ್ತಿದ್ದು, ಕುತೂಹಲ ಮೂಡಿಸಿದೆ. ಪಕ್ಷ ನೀಡುವ ಸಚಿವರ ಪದವಿಗೆ ಅವಧಿಯ ಅಂತ್ಯವಿದೆ. ಆದರೆ ಜನಾಭಿಮಾನವೇ ಶಾಶ್ವತ ಪದವಿ ಎಂದು ನಂಬಿ ಶಾಸಕರು ಇದುವರೆಗೂ ಅಭಿವೃದ್ಧಿ ಕೆಲಸ ಮಾಡುವಲ್ಲಿ ಯಾವುದೇ ಲೋಪ ವೆಸಗದೆ ಆತ್ಮಸಾಕ್ಷಿ ಮೆಚ್ಚುವಂತೆ ಜನಸೇವೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸಂಘಟನೆ ಜತೆಗೆ, ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿದ್ದರೂ ಅವರಿಗೆಸಚಿವ ಸ್ಥಾನ ದೊರೆಯದಿರುವುದು ನೋವು ತಂದಿದೆ ಎಂದು ಶಾಸಕರ ಪತ್ನಿ ಸೌಮ್ಯ ಅನಿಲ್ ಚಿಕ್ಕಮಾದು ಬೇಸರ ವ್ಯಕ್ತಪಡಿಸಿದರು.

” ಸಚಿವ ಸ್ಥಾನವೆಂದರೆ ಕೇವಲ ಒಂದು ಪಕ್ಷದಿಂದ ದೊರೆಯುವ ಹುದ್ದೆಯಲ್ಲ. ವೈಯಕ್ತಿಕ ಆಸೆಯಲ್ಲ. ಅದು ಲಕ್ಷಾಂತರ ಜನರ ಆಶಯಗಳ ಪ್ರತಿಬಿಂಬ ಮತ್ತು ನಿರೀಕ್ಷೆಗಳನ್ನು ಕಾರ್ಯರೂಪಕ್ಕೆ ತರುವಂತಹ ದೊಡ್ಡ ಜವಾಬ್ದಾರಿ ಎಂದು ನಂಬಿ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಬಡವರ ಕಲ್ಯಾಣಕ್ಕಾಗಿ ಹೊಸ ಬದಲಾವಣೆಯನ್ನು ತರುವ ಚಿಂತನೆಯನ್ನು ಹೊಂದಿದ್ದೇನೆ. ಜನ ಬಯಸುವವರೆಗೂ, ಜನಸೇವೆ ಮಾಡುತ್ತೇನೆ. ಪಕ್ಷವೇ ನನ್ನನ್ನು ಗುರುತಿಸಿ ಗೌರವಿಸುತ್ತದೆ ಎಂದು ನಂಬಿ, ತಾಲ್ಲೂಕನ್ನು ಅಭಿವೃದ್ಧಿಪಡಿಸಲು ಶಕ್ತಿಮೀರಿ ಶ್ರಮಿಸುತ್ತೇನೆ. ರಾಜ್ಯಕ್ಕೆ ತನ್ನದೇ ಕೊಡುಗೆ ನೀಡಿರುವ ನಾಯಕ ಸಮುದಾಯಕ್ಕೆ ವಿಶೇಷವಾಗಿ ಹಳೇ ಮೈಸೂರು ಭಾಗಕ್ಕೆ ಸಮರ್ಪಕ ಪ್ರಾತಿನಿಧಿತ್ವ ಸಿಗದಿರುವುದು ನೋವಿನ ಸಂಗತಿಯಾಗಿದೆ.”

-ಅನಿಲ್ ಚಿಕ್ಕಮಾದು, ಶಾಸಕರು

 

 

Tags:
error: Content is protected !!