Mysore
23
overcast clouds

Social Media

ಬುಧವಾರ, 05 ಆಗಸ್ಟ್ 2026
Light
Dark

300 ಮಕ್ಕಳ ಶಿಕ್ಷಣಕ್ಕೆ ಶೇ.96ರಷ್ಟು ಸಂಪತ್ತನ್ನು ದಾನ ಮಾಡಿದ ಟೆಕ್ಕಿ

ಪಂಜುಗಂಗೊಳ್ಳಿ ಅವರ ವಾರದ ಅಂಕಣ 

ಬಾಲಕಾರ್ಮಿಕರಿಗಾಗಿ ಏಕಲವ್ಯ ಟ್ರಸ್ಟ್ ಸ್ಥಾಪನೆ 

ಛತ್ತೀಸ್‌ಘಡದ ಭಿಲಾಯ್‌ಯ ವಿವೇಕ್ ಶಂಗಾರಿಯ ತಾಯಿ ತೀರಿಕೊಂಡಾಗ ಅವನಿಗೆ ಕೇವಲ ನಾಲ್ಕು ವರ್ಷ ಪ್ರಾಯವಾಗಿತ್ತು. ಅವನ ತಂದೆ ಒಬ್ಬ ಕುಡುಕ ಮತ್ತು ಜೂಜುಕೋರನಾಗಿದ್ದ ಕಾರಣ ವಿವೇಕ್ ಮತ್ತು ಅವನ ತಂಗಿಯನ್ನು ಸಾಕುವ ಜವಾಬ್ದಾರಿಯನ್ನು, ಮನಸ್ಸಿಲ್ಲದ ಮನಸ್ಸಿನಲ್ಲಿ, ಅವನ ಮಾವನು ಹೊರಬೇಕಾಗಿ ಬಂದಿತು.

ವಿವೇಕ್ ಕಲಿಕೆಯಲ್ಲಿ ದಡ್ಡನಾಗಿದ್ದನು. ಆದರೂ ಹೇಗೋ ಮಾಡಿ ಕಾಲೇಜು ಹಂತವನ್ನು ತಲುಪಿದನು. ಆದರೆ, ಅವನು ಕಾಲೇಜಿಗೆ ಸೇರಿದ ಮೊದಲ ವರ್ಷ ಅವನ ಮಾವ ಅವನ ಶಿಕ್ಷಣದ ಜವಾಬ್ದಾರಿಯನ್ನು ಮುಂದುವರಿಸಲು ನಿರಾಕರಿಸಿದನಲ್ಲದೆ, ಅವನನ್ನು ಮನೆಯಿಂದ ಹೊರ ಹಾಕಿದನು. ವಿವೇಕ್ ಸಾಮಾನ್ಯ ಕಲಿಕೆಯಲ್ಲಿ ಹಿಂದುಳಿದಿದ್ದರೂ ಕಂಪ್ಯೂಟರ್ ಪ್ರೋಗ್ರಾಮಿಂಗ್‌ನಲ್ಲಿ ಬಹಳ ಚುರುಕಾಗಿದ್ದನು. ಆಗ ಭಿಲಾಯ್‌ಯಲ್ಲಿ ಕೆಲವರು ಕಂಪ್ಯೂಟರ್ ಗಳನ್ನು ಬಾಡಿಗೆಗೆ ಕೊಡುತ್ತಿದ್ದರು. ಗಂಟೆಗೆ ೧೦ ರುಪಾಯಿ ಬಾಡಿಗೆ. ವಿವೇಕ್‌ನ ಅಜ್ಜಿ ಅವನಿಗೆ ಹಣದ ಮೌಲ್ಯವನ್ನು ಮನದಟ್ಟು ಮಾಡುವ ಸಲುವಾಗಿ ಒಂದು ‘ಪಿಗ್ಗಿ ಬ್ಯಾಂಕ್’ ಡಬ್ಬಿ ಕೊಟ್ಟು, ಚಿಲ್ಲರೆ ಕಾಸುಗಳನ್ನು ಕೂಡಿಡುವ ಅಭ್ಯಾಸ ಮಾಡಿಸಿದ್ದರು. ವಿವೇಕ್ ಹಾಗೆ ಉಳಿಸಿಟ್ಟ ಹಣವನ್ನು ಬಳಸಿ ಕಂಪ್ಯೂಟರ್ ನಡೆಸುವುದನ್ನು ಅದಾಗಲೇ ಕಲಿತು ಕೊಂಡಿದ್ದನು.

ಅವನು ಭಿಲಾಯ್‌ಯ ಒಂದು ಕಂಪ್ಯೂಟರ್ ಸಂಸ್ಥೆಗೆ ಹೋಗಿ ಕೆಲಸ ಕೇಳಿದನು. ಆ ಕಂಪ್ಯೂಟರ್ ಸಂಸ್ಥೆಯ ಮಾಲೀಕ ಕೊಟ್ಟ ಒಂದು ಕೋಡಿಂಗ್ ಕೆಲಸವನ್ನು ನೀಟಾಗಿ ನಿರ್ವಹಿಸಿದಾಗ ಅವನು ವಿವೇಕ್‌ಗೆ ಅರೆಕಾಲಿಕ ಕಂಪ್ಯೂಟರ್ ಶಿಕ್ಷಕ ಮತ್ತು ಲ್ಯಾಬ್ ಸಹಾಯಕ ಕೆಲಸವನ್ನು ಕೊಟ್ಟನು. ಆ ಕಂಪ್ಯೂಟರ್ ಸಂಸ್ಥೆಯಲ್ಲಿ ೨೦ ಕಂಪ್ಯೂಟರ್‌ಗಳು ಮತ್ತು ಕಂಪ್ಯೂಟರ್ ವಿಜನ, ಗಣಿತ ಹಾಗೂ ಭೌತಶಾಸಕ್ಕೆ ಸಂಬಂಧಿಸಿದ ನೂರಾರು ಪುಸ್ತಕಗಳಿದ್ದವು. ಶಾಲಾ ಕಲಿಕೆಯಲ್ಲಿ ಹಿಂದುಳಿದಿದ್ದ ವಿವೇಕ್ ಆ ಕಂಪ್ಯೂಟರ್ ಸಂಸ್ಥೆಯಲ್ಲಿ ಪುಸ್ತಕಗಳನ್ನು ನೋಡಿದ ಮೇಲೆ, ಆಶ್ಚರ್ಯವೆಂಬಂತೆ, ಅವೆಲ್ಲವನ್ನು ಓದಿ ಮನನ ಮಾಡಿ ಕೊಂಡು, ಗಣಿತ ಮತ್ತು ಭೌತಶಾಸ್ತ್ರದಲ್ಲಿ ವಿಶೇಷವೆಂಬಂತಹ ತಿಳಿವಳಿಕೆ ಪಡೆದನು.

೧೯೯೦ರ ದಶಕದ ಕೊನೆಯ ಭಾಗದಲ್ಲಿ ಭಾರತದಲ್ಲಿ ಐಟಿ ಕ್ರಾಂತಿ ವೇಗ ಪಡೆದುಕೊಳ್ಳುತ್ತಿತ್ತು. ೧೯೯೮ರ ಅಕ್ಟೋಬರ್ ತಿಂಗಳಲ್ಲಿ, ಬೆಂಗಳೂರಲ್ಲಿದ್ದ ಒಬ್ಬ ಸ್ನೇಹಿತ ಹಿಂತಿರುಗಿ ಬಂದಾಗ ಅವನು ವಿವೇಕ್ ಶಂಗಾರಿಗೆ ಕೆಲವು ಪುಸ್ತಕಗಳ ಒಂದು ಪ್ಯಾಕೆಟನ್ನು ಕೊಟ್ಟನು. ಆ ಪುಸ್ತಕಗಳು ಬೆಂಗಳೂರಿನ ಒಂದು ದಿನಪತ್ರಿಕೆಯಲ್ಲಿ ಪ್ಯಾಕ್ ಮಾಡಲ್ಪಟ್ಟಿದ್ದವು. ವಿವೇಕ್ ಆ ಪೇಪರನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಬೆಂಗಳೂರಿನ ಒಂದು ಐಟಿ ಕಂಪೆನಿ ‘ಸಿ’ ಮತ್ತು ‘ಸಿ ಡಬಲ್ ಪ್ಲಸ್’ಲ್ಲಿ ಪ್ರೋಗ್ರಾಮ್ ಮಾಡಲು ಗೊತ್ತಿರುವ ಹೊಸಬರು ಬೇಕೆಂದು ಕೊಟ್ಟ ಒಂದು ಜಹೀರಾತು ಕಾಣಿಸಿತು. ವಿವೇಕ್ ಅವೆರಡರಲ್ಲೂ ತಜ್ಞನಾಗಿದ್ದನು. ತಕ್ಷಣವೇ ಅವನು ಯಾರೋ ಒಬ್ಬರ ಬಳಿ ಹಣ ಸಾಲ ಪಡೆದು, ರೈಲಲ್ಲಿ ಬೆಂಗಳೂರಿಗೆ ಹೋಗಿ, ಸಂದರ್ಶನದ ಪರೀಕ್ಷೆ ಬರೆದು ಭಿಲಾಯ್‌ಗೆ ವಾಪಸಾಗಿ, ಫಲಿತಾಂಶಕ್ಕೆ ಕಾದನು.

ಕೆಲವು ದಿನಗಳಲ್ಲಿ ಅವನಿಗೆ ಆ ಕಂಪೆನಿಯಿಂದ ಕೆಲಸಕ್ಕೆ ಕರೆ ಬಂದಿತು. ತಿಂಗಳಿಗೆ ೭೦೦೦ ರೂಪಾಯಿ ಸಂಬಳ. ವಿವೇಕ್ ಬೆಂಗಳೂರಿಗೆ ಬಂದಾಗ ಮೊದಲ ದಿನವೇ ಅವನಿಗೆ ಒಂದು ಸವಾಲು ಎದುರಾಯಿತು. ಅವನ ಕೆಲಸದಲ್ಲಿ ‘ಎಎನ್‌ಎಸ್‌ಐ ಕಾಮನ್ ಲಿಸ್ಪ್’ ಮತ್ತು ‘ಕಾಲ್ಕುಲಸ್ ಪ್ರೋಗ್ರಾಮ್’ಗಳು ಸೇರಿದ್ದವು. ವಿವೇಕ್‌ಗೆ ಅವೆರಡೂ ಗೊತ್ತಿರಲಿಲ್ಲ. ಹಾಗಾಗಿ ಅವನು ಆತಂಕಕ್ಕೊಳಗಾದನು. ಆಗ ಅಮೆರಿಕಲ್ಲಿದ್ದ ಅವನ ಬಾಸ್ ಅವನಿಗೆ ಧೈರ್ಯ ಹೇಳಿ, ಅಮೆರಿಕದಿಂದ ಅವನಿಗೆ ಕೆಲವು ಪುಸ್ತಕಗಳನ್ನು ಕಳಿಸಿಕೊಟ್ಟನು. ವಿವೇಕ್ ಅವುಗಳನ್ನು ಓದಿ, ಕೆಲವೇ ದಿನಗಳಲ್ಲಿ ಆ ಎರಡೂ ಪ್ರೋಗ್ರಾಮ್‌ಗಳನ್ನು ಕಲಿತುಕೊಂಡನು. ಆಗ ಅವನ ನೆರವಿಗೆ ಬಂದುದು ಭಿಲಾಯ್‌ಯ ಕಂಪ್ಯೂಟರ್ ಸಂಸ್ಥೆಯಲ್ಲಿ ಕಲಿತ ಗಣಿತ ಮತ್ತು ಕಂಪ್ಯೂಟರ್ ವಿಜನ. ಹಿಂದೆ ಶಾಲೆಯಲ್ಲಿ ಶಿಕ್ಷಕರು ಗಣಿತದಲ್ಲಿ ವಿವೇಕ್‌ನನ್ನು ದಡ್ಡ ಎಂದು ಲೇವಡಿ ಮಾಡಿ, ನಪಾಸ್ ಮಾಡಿದ್ದರು. ಈಗ ವಿವೇಕ್ ಅದೇ ಗಣಿತವನ್ನು ತಾನು ಕಲಿತುದಲ್ಲದೆ ಬೇರೆಯವರಿಗೂ ಕಲಿಸತೊಡಗಿದನು. ತನ್ನ ಸಹೋದ್ಯೋಗಿಗಳಿಗೆ, ಹೊಸಬರಿಗೆ, ಆಫೀಸಿನ ಸೆಕ್ಯುರಿಟಿ ಗಾರ್ಡ್‌ಗಳ ಮಕ್ಕಳಿಗೆ, ಆಫೀಸಿನ ಸಹಾಯಕರ ಮಕ್ಕಳಿಗೆ ಹಾಗೂ ನೆರೆಹೊರೆಯಲ್ಲಿ ಯಾರು ಆಸಕ್ತಿ ತೋರಿಸುತ್ತಾರೋ ಅವರೆಲ್ಲರಿಗೂ ಕಲಿಸ ತೊಡಗಿದನು. ೭೦೦೦ ರೂಪಾಯಿಯ ಅವನ ಸಂಬಳ ಮುಂದಿನ ಒಂದು ವರ್ಷದಲ್ಲಿ ೪,೦೦,೦೦೦ ರೂಪಾಯಿ ಆಯಿತು. ೨೦೦೦ ದ ಸಮಯದಲ್ಲಿ ಬೆಂಗಳೂರಲ್ಲಿ ಅದು ಬಹು ದೊಡ್ಡ ಸಂಬಳ.

ನಂತರದ ಒಂದು ದಶಕದ ಅವಧಿಯಲ್ಲಿ ವಿವೇಕ್ ಶಂಗಾರಿ ತನ್ನ ಬದುಕನ್ನು ಕಟ್ಟಿಕೊಂಡ ಬಗೆ ಅನನ್ಯವಾದುದು. ೨೦೦೬ರಲ್ಲಿ ಅವರು ‘ಎಸೆಂಜೇಜ್’ ಎಂಬ ಹೆಸರಿನಲ್ಲಿ ಸ್ವಂತ ಕಂಪೆನಿಯನ್ನು ಹುಟ್ಟು ಹಾಕಿದರು. ಅದನ್ನು ಅವರು ೨೦೧೦ರಲ್ಲಿ ಮಾರಿದರು. ಅದೇ ವರ್ಷ ಅವರು ‘ವಿಚಾರ್ ಫೌಂಡೇಶನ್’ ಮತ್ತು ‘ಕೋಡ್‌ಕ್ರ್ಯಾಫ್ಟ್’ ಎಂಬ ಇನ್ನೆರಡು ಕಂಪೆನಿಗಳನ್ನು ಹುಟ್ಟು ಹಾಕಿದರು.

ಕೆಲವು ವರ್ಷಗಳ ನಂತರ ‘ಎ೯’ ಎಂಬ ಒಂದು ‘-ರ್ಚುನ್ ೧೦೦’ ಕಂಪೆನಿ ವಿವೇಕ್ ಶಂಗಾರಿಯ ‘ಕೋಡ್‌ಕ್ರ್ಯಾಫ್ಟ್‌’ನ್ನು ಖರೀದಿಸಿತು. ಹೀಗೆ ಕಂಪೆನಿಗಳನ್ನು ಹುಟ್ಟು ಹಾಕಿ, ಅವುಗಳನ್ನು ಮಾರಿ ಅಪಾರ ಹಣ ಸಂಪಾದಿಸಿದ ವಿವೇಕ್ ಶಂಗಾರಿ ಆಶ್ಚರ್ಯಕರವಾದ ಒಂದು ತೀರ್ಮಾನ ಕೈಗೊಂಡರು. ಅವರು ‘ಏಕಲವ್ಯ’ ಎಂಬ ಒಂದು ಟ್ರಸ್ಟನ್ನು ಹುಟ್ಟು ಹಾಕಿ, ಅದಕ್ಕೆ ತನ್ನ ಸಂಪತ್ತಿನ ಶೇ.೯೬ರಷ್ಟು ಭಾಗವನ್ನು ದಾನ ಮಾಡಿದರು! ಏಕಲವ್ಯ ಟ್ರಸ್ಟ್ ಮಹಾರಾಷ್ಟ್ರದ ಗ್ರಾಮೀಣ ಭಾಗಗಳಲ್ಲಿ ಬಾಲ ಕಾರ್ಮಿಕರನ್ನು ಹುಡುಕಿ, ಅವರ ಹೆತ್ತವರ ಮನವೊಲಿಸಿ, ಅವರಿಗೆ ತಿಳಿ ಹೇಳಿ, ಆ ಮಕ್ಕಳು ಶಾಲೆಗೆ ಹೋಗುವಂತೆ ಮಾಡುತ್ತದೆ. ಆ ಮಕ್ಕಳು ಶಾಲೆ, ಕಾಲೇಜುಗಳಲ್ಲಿ ಏನು ಕಲಿಯಬೇಕು ಎಂದು ಬಯಸುತ್ತವೋ ಅದಕ್ಕೆ ಬೇಕಾದುದನ್ನೆಲ್ಲ ಏಕಲವ್ಯ ಟ್ರಸ್ಟ್ ಪೂರೈಸುತ್ತದೆ. ಕಳೆದ ಎರಡು ವರ್ಷಗಳಲ್ಲಿ ಏಕಲವ್ಯ ಟ್ರಸ್ಟ್ ಇಂತಹ ಸುಮಾರು ೩೦೦ ಮಕ್ಕಳ ಶಿಕ್ಷಣಕ್ಕೆ ನೆರವಾಗಿದೆ. ಏಕಲವ್ಯ ಒಂದು ಮಗುವಿಗೆ ಒಂದು ವರ್ಷಕ್ಕೆ ೮೦,೦೦೦ ದಿಂದ ಒಂದು ಲಕ್ಷ ರೂಪಾಯಿ ತನಕ ಖರ್ಚು ಮಾಡುತ್ತದೆ. ಈವರೆಗೆ ಅದು ಈ ೩೦೦ ಮಕ್ಕಳ ಭವಿಷ್ಯಕ್ಕೆ ರೂ. ಎರಡೂವರೆ ಕೋಟಿಗೂ ಹೆಚ್ಚು ಖರ್ಚು ಮಾಡಿದೆ

” ಹಿಂದೆ ಶಾಲೆಯಲ್ಲಿ ಶಿಕ್ಷಕರು ಗಣಿತದಲ್ಲಿ ವಿವೇಕ್‌ನನ್ನು ದಡ್ಡ ಎಂದು ಲೇವಡಿ ಮಾಡಿ, ನಪಾಸ್ ಮಾಡಿದ್ದರು. ಈಗ ವಿವೇಕ್ ಅದೇ ಗಣಿತವನ್ನು ತಾನು ಕಲಿತುದಲ್ಲದೆ ಬೇರೆಯವರಿಗೂ ಕಲಿಸ ತೊಡಗಿದನು.”

 

 

Tags:
error: Content is protected !!