Mysore
23
overcast clouds

Social Media

ಬುಧವಾರ, 05 ಆಗಸ್ಟ್ 2026
Light
Dark

ಮನ್‌ಮುಲ್ ಅಧ್ಯಕ್ಷರಾಗಿ ಹರೀಶ್‌ಬಾಬು ಆಯ್ಕೆ ಬಹುತೇಕ ಖಚಿತ

ಬಿ.ಟಿ. ಮೋಹನ್ ಕುಮಾರ್

ಯು.ಸಿ.ಶಿವಕುಮಾರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ 

ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ಮುಲ್) ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಒಪ್ಪಂದದಂತೆ ಯು.ಸಿ.ಶಿವಕುಮಾರ್ (ಶಿವಪ್ಪ) ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಜು.೫ರ ಬುಧವಾರ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಮದ್ದೂರು ತಾಲ್ಲೂಕಿನಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಮಾರ ಸಿಂಗನಹಳ್ಳಿ ಗ್ರಾಮದ ಎಂ.ಕೆ. ಹರೀಶ್‌ಬಾಬು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

೧೨ ನಿರ್ದೇಶಕರ ಬಲದ ಮನ್‌ಮುಲ್‌ಗೆ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದುಕೊಂಡು ಮೊದಲ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಿರ್ದೇಶಕ ಯು.ಸಿ.ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದರು. ಆ ವೇಳೆಯೇ ಶಿವಪ್ಪ ಅವರಿಗೆ ಒಂದು ವರ್ಷದ ಅಧಿಕಾರ ಎಂದು ವರಿಷ್ಠರು ಹೇಳಿದ್ದರಿಂದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದ್ದ ಶಿವಪ್ಪ ಸತತ ಮೂರು ಬಾರಿ ಗೆಲುವಿನೊಂದಿಗೆ ಮನ್ ಮುಲ್ ಪ್ರವೇಶಿಸಿದ್ದ ಶಿವಪ್ಪ ಅವರ ಪಕ್ಷ ನಿಷ್ಠೆಗೆ ವರಿಷ್ಠರು ಅವಕಾಶ ಕಲ್ಪಿಸಿದ್ದರು. ಯು.ಸಿ.ಶಿವಕುಮಾರ್ ಮಂಡ್ಯ ತಾಲ್ಲೂಕಿನಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಮೂರನೇ ಅಧ್ಯಕ್ಷ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಇನ್ನು ಮಂಡ್ಯ ತಾಲ್ಲೂಕಿನಿಂದ ಕಾಂಗ್ರೆಸ್‌ನಲ್ಲಿ ಮನ್‌ಮುಲ್ ಅಧ್ಯಕ್ಷ ಸ್ಥಾನದ ಅವಕಾಶ ಸಿಕ್ಕಿ ಬರೋಬ್ಬರಿ ಎರಡೂವರೆ ದಶಕವೇ ಕಳೆದಿತ್ತು.

ಈ ಹಿಂದೆ ಅಂದರೆ ೧೯೯೪-೯೫ರಲ್ಲಿ ಕಾಂಗ್ರೆಸ್ ಜಿಲ್ಲಾ ಹಾಲು ಒಕ್ಕೂಟದ ಅಧೀಕಾರ ಹಿಡಿದಿದ್ದಾಗ ಎಸ್.ಐ.ಕೋಡಿಹಳ್ಳಿಯ ಕೆ.ಬಿ.ಪುಟ್ಟಸ್ವಾಮಿ ಅಧ್ಯಕ್ಷರಾಗಿದ್ದರು. ಇದಾದ ನಂತರ ೨೦೦೧-೦೨ನೇ ಸಾಲಿನಲ್ಲಿ ಬಿ.ಹೊಸಹಳ್ಳಿ ಎಚ್.ಜೆ.ಚಂದ್ರು ಅಧ್ಯಕ್ಷ ಗಾದಿ ಅಲಂಕರಿಸಿದ್ದರು. ಇದಾದ ಬಳಿಕ ಕಾಂಗ್ರೆಸ್ ಪಕ್ಷದಿಂದ ಯಾರಿಗೂ ಅವಕಾಶ ಒದಗಿ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಬಾರಿ ಯು.ಸಿ. ಶಿವಕುಮಾರ್‌ಗೆ ಅಧಿಕಾರ ದಕ್ಕಿತ್ತು.

ಎರಡನೇ ಅವಧಿಗೆ ಹರೀಶ್‌ಬಾಬು ಅಧ್ಯಕ್ಷರು….:  ಒಳ ಒಪ್ಪಂದದಂತೆ ಮದ್ದೂರಿನಿಂದ ಪ್ರಥಮ ಬಾರಿಗೆ ಆಯ್ಕೆಯಾಗಿರುವ ಎಂ.ಕೆ.ಹರೀಶ್ ಬಾಬು ಅವರಿಗೆ ಅಧ್ಯಕ್ಷ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ನಾಗಮಂಗಲದಿಂದ ಆಯ್ಕೆಯಾಗಿರುವ ಮಾಜಿ ಎಂಎಲ್‌ಸಿ ಅಪ್ಪಾಜಿಗೌಡ ಅವರಿಗೆ ಈಗಾಗಲೇ ಕೆಎಂಎಫ್ ನಿರ್ದೇಶಕ ಸ್ಥಾನ ದೊರೆತಿರುವುದರಿಂದ ಮತ್ತೆ ಅದೇ ತಾಲ್ಲೂಕಿಗೆ ಆದ್ಯತೆ ನೀಡಲು ಒಪ್ಪಿಲ್ಲ. ಮಳವಳ್ಳಿ ತಾಲ್ಲೂಕಿನಿಂದ ಚುನಾಯಿತರಾಗಿರುವ ಕೃಷ್ಣೇಗೌಡ ಹಾಗೂ ನಾಮನಿರ್ದೇಶನವಾಗಿರುವ ವಿಶ್ವಾಸ್ ಅವರೂ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ, ಮಂಗಳವಾರ ಬೆಂಗಳೂರಿನ ಸೆವೆನ್ ಮಿನಿಸ್ಟರ್‌ನಲ್ಲಿರುವ ಸಚಿವ ಎನ್.ಚಲುವರಾಯಸ್ವಾಮಿ ಅವರ ಗೃಹ ಕಚೇರಿಯಲ್ಲ ಸಚಿವದ್ವಯರಾದ ಎನ್.ಚಲುವರಾಯಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ, ಶಾಸಕರಾದ ಪಿ. ರವಿಕುಮಾರ್ ಗೌಡ, ಕೆ.ಎಂ. ಉದಯ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ ಹಾಗೂ ಮನ್‌ಮುಲ್‌ನ ಕಾಂಗ್ರೆಸ್ ಬೆಂಬಲಿತ ಎಲ್ಲ ನಿರ್ದೇಶಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಹರೀಶ್‌ಬಾಬು ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.

 

 

Tags:
error: Content is protected !!