Mysore
25
overcast clouds

Social Media

ಸೋಮವಾರ, 29 ಜೂನ್ 2026
Light
Dark

2 ವರ್ಷಗಳಿಂದ ಕಬ್ಬು ಅರೆಯದ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ

ಆನಂದ್ ಹೊಸೂರು

ಕಬ್ಬಿಗೆ ಕಾರ್ಖಾನೆಗಳಿಂದ ಬೇಡಿಕೆಯಿದ್ದರೂ ರೈತರಿಗೆ ದುಬಾರಿ ಸಾಗಣೆ ವೆಚ್ಚ ಭರಿಸುವ ಅನಿವಾರ್ಯತೆ 

ಹೊಸೂರು: ಮಾಜಿ ಶಾಸಕ ದಿವಂಗತ ಕೆಂಚೇಗೌಡರ ಪರಿಶ್ರಮದಿಂದ ೧೯೭೯ರಲ್ಲಿ ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯಲ್ಲಿ ಸ್ಥಾಪಿತವಾದ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ೨ ವರ್ಷಗಳಿಂದ ಸ್ಥಗಿತವಾಗಿದೆ. ೧೯೯೨-೯೩-೯೪ರ ಅವಧಿಯಲ್ಲಿ ಉತ್ತುಂಗ ಕ್ಕೇರಿ ನಂತರ ನಿರಂತರವಾಗಿ ನಷ್ಟದ ಹಾದಿ ಹಿಡಿದು ೨೦೦೭ರಲ್ಲಿ ಅಂಬಿಕಾ ಶುಗರ್ಸ್ ಕಂಪೆನಿಯವರಿಗೆ ಗುತ್ತಿಗೆಗೆ ನೀಡಲು ಒಪ್ಪಿ ನಂತರ ಗುತ್ತಿಗೆ ರದ್ದಾಗಿ, ಸುಮಾರು ೨೦೧೧ರಿಂದ ೨೦೨೨ ರವರೆಗೆ ಸಂಪೂರ್ಣ ಸ್ಥಗಿತಗೊಂಡಿತ್ತು. ನಂತರ ೨೦೨೩ರಲ್ಲಿ ನಿರಾಣಿ ಸಮೂಹಕ್ಕೆ ೪೦ ವರ್ಷಗಳ ಅವಧಿಗೆ ೧೨೦ ಕೋಟಿ ರೂ.ಗಳಿಗೆ ಗುತ್ತಿಗೆ ನೀಡಲಾಗಿದೆ.

೨೦೨೩-೨೪ರ ಹಂಗಾಮಿನಲ್ಲಿ ಸುಮಾರು ೨೦ ಸಾವಿರ ಟನ್ ಕಬ್ಬು ಅರೆದು ಮತ್ತೆ ಸ್ಥಗಿತಗೊಂಡಿದ್ದು ಗುತ್ತಿಗೆ ನೋಂದಣಿ ಕಾರ್ಯ ಮಾಡದ ಕಾರಣ ನೀಡಿ ಕಳೆದ ವರ್ಷ ಕಬ್ಬು ಅರೆದಿರಲಿಲ್ಲ. ಆದರೆ ಇದೀಗ ನೋಂದಣಿ ಪೂರ್ಣ ಗೊಂಡಿದ್ದರೂ ಕಬ್ಬು ಅರೆಯದೇ ಸ್ಥಗಿತಗೊಳಿಸಿದ್ದು ಆರಂಭಗೊಳ್ಳುವ ನಿರೀಕ್ಷೆ ಹುಸಿಯಾಗುತ್ತಿದೆ.

ಈ ಭಾಗದ ಕಬ್ಬನ್ನು ಬಣ್ಣಾರಿ ಅಮ್ಮನ್, ಮಂಡ್ಯ ಜಿಲ್ಲೆಯ ಐಸಿಎಲ್, ಪಾಂಡವಪುರ, ಚಾಮುಂಡೇಶ್ವರಿ, ಹಾಸನ ಜಿಲ್ಲೆಯ ಹೇಮಾವತಿ ಕಾರ್ಖಾನೆಗಳಿಗೆ ನೀಡಿ ಅರೆಸುವಂತಾಗಿದೆ. ಕಬ್ಬಿಗೆ ಬೇಡಿಕೆ ಇರುವುದರಿಂದ ಎಲ್ಲಾ ಕಾರ್ಖಾನೆಗಳು ನಾ ಮುಂದು ತಾ ಮುಂದು ಎಂದು ರೈತರಿಂದ ಕೇಳುತ್ತಿದ್ದು ಕಟಾವಿಗೆ ಸಮಸ್ಯೆಯಾಗುತ್ತಿಲ್ಲ. ಆದರೆ ದುಬಾರಿ ಸಾಗಣೆ ವೆಚ್ಚವಾಗುತ್ತಿದೆ. ಮಾಹಿತಿ ಪ್ರಕಾರ ಸುಮಾರು ೧೫ ಕೋಟಿ ರೂ.ಗಳಿಗೂ ಅಧಿಕ ಸಾಗಣೆ ವೆಚ್ಚವಾಗುತ್ತಿದ್ದು, ರೈತರಿಗೆ ಹೊರೆಯಾಗುತ್ತಿದೆ ಎಂದು ರೈತ ಮುಖಂಡ ಅಂಕನಹಳ್ಳಿ ತಿಮ್ಮಪ್ಪ ಆರೋಪಿಸುತ್ತಾರೆ.

ಶ್ರೀರಾಮ ಕಾರ್ಖಾನೆಯ ವ್ಯಾಪ್ತಿಯಲ್ಲಿ ಕಾವೇರಿ ನದಿಯಿಂದ ನೀರಾವರಿ ಅನುಕೂಲಗಳು ಸಾಕಷ್ಟಿದ್ದು ಸುಮಾರು ೪೦ ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಸುಮಾರು ೧೦ ಲಕ್ಷ ಟನ್‌ಗೂ ಅಧಿಕ ಪ್ರಮಾಣದಲ್ಲಿ ಕಬ್ಬು ಬೆಳೆಯ ಬಹುದಾಗಿದೆ. ಸ್ಥಳೀಯವಾಗಿ ಕಾರ್ಖಾನೆ ಇಲ್ಲದಿದ್ದ ಕಾರಣ ಬೆಳೆಯ ಪ್ರಮಾಣ ಕೇವಲ ೧ ಲಕ್ಷ ಟನ್‌ಗೆ ಬಂದು ನಿಂತಿದ್ದು ಕೇವಲ ಭತ್ತದ ಕೃಷಿಯನ್ನೇ ರೈತರು ಅವಲಂಬಿಸು ವಂತಾಗಿದೆ. ನಿರಾಣಿ ಕಂಪೆನಿಯವರೇ ತಮಿಳುನಾಡು ಮೂಲದ ಮತ್ತು ಕರ್ನಾಟಕದ ಒಂದು ಕಂಪೆನಿಗೆ ಮರು ಗುತ್ತಿಗೆ ನೀಡಲು ಮುಂದಾಗುತ್ತಿದ್ದು, ಆ ಕಂಪೆನಿಗಳ ವ್ಯವಸ್ಥಾಪಕರುಗಳು ಈಗಾಗಲೇ ಕಾರ್ಖಾನೆಗೆ ಭೇಟಿ ನೀಡಿ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಶ್ರೀರಾಮ ಸಕ್ಕರೆ ಕಾರ್ಖಾನೆ ಹೆಸರಿಗೆ ತಕ್ಕಂತೆ ವನವಾಸದಲ್ಲೇ ಹೆಚ್ಚು ವರ್ಷ ಕಳೆದಿದ್ದು, ಈ ಬಾರಿಯಾದರೂ ಕಾರ್ಖಾನೆಯ ಪುನರಾರಂಭಕ್ಕೆ ಸಂಬಂಧಪಟ್ಟವರು ಮುಂದಾಗಬೇಕಿದೆ.

” ಶ್ರೀರಾಮ ಸಕ್ಕರೆ ಕಾರ್ಖಾನೆ ಖಾಸಗಿಯಾಗಿ ಉದ್ಧಾರ ವಾಗುತ್ತದೆ ಎಂಬ ಭರವಸೆ ಯಿಂದ ಈ ಭಾಗದ ರೈತರು ಕಾಯುತ್ತಿದ್ದು, ಕಾರ್ಖಾನೆ ಆರಂಭಕ್ಕೆ ಸರ್ಕಾರ ಮೌನ ತಾಳಿದೆ. ಮೈಷುಗರ್ ಕಾರ್ಖಾನೆಗೆ ಸರ್ಕಾರ ಪ್ರತಿ ಬಾರಿ ಹಣ ನೀಡುತ್ತಾ ಬಂದಿದ್ದು ಕನಿಷ್ಠ ನಿರಾಣಿ ಸಮೂಹಕ್ಕೆ ಒತ್ತಾಯಿಸುವ ಕೆಲಸವೂ ಆಗದಿರುವುದು ನಮ್ಮ ರೈತರಿಗೆ ಮಾಡುತ್ತಿರುವ ಅನ್ಯಾಯ.”

-ಅಂಕನಹಳ್ಳಿ ತಿಮ್ಮಪ್ಪ, ಉಪಾಧ್ಯಕ್ಷರು,

” ರಾಜ್ಯ ಕಬ್ಬು ಬೆಳೆಗಾರರ ಸಂಘ ಕ್ಷೇತ್ರದಲ್ಲಿ ಚುನಾವಣೆ ಬಂದಾಗ ಮಾತ್ರ ಕಾರ್ಖಾನೆ ಉಳಿಸುವ ಮಾತನಾಡುವವರು ಅದರ ಪುನರಾರಂಭಕ್ಕೆ ಮುಂದಾಗದಿರುವುದು ದುರದೃಷ್ಟಕರ. ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡಿದ ಮೇಲೂ ಆರಂಭಕ್ಕೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ.”

-ಸ್ವಾಮಿ, ಕಬ್ಬು ಬೆಳೆಗಾರ

 

 

Tags:
error: Content is protected !!